An unconventional News Portal.

ಲೋಧಾ V/S ಬಿಸಿಸಿಐ: ಕ್ರಿಕೆಟ್ ನಿಯಂತ್ರಣ ಮಂಡಳಿ ಮೇಲೆ ಸುಪ್ರಿಂ ಗದಾ ಪ್ರಹಾರ!

ಲೋಧಾ V/S ಬಿಸಿಸಿಐ: ಕ್ರಿಕೆಟ್ ನಿಯಂತ್ರಣ ಮಂಡಳಿ ಮೇಲೆ ಸುಪ್ರಿಂ ಗದಾ ಪ್ರಹಾರ!

ಲೋಧಾ ಸಮಿತಿಯ ತೀರ್ಮಾನಗಳನ್ನು ತಳ್ಳಿ ಹಾಕಲು ಹೋದ ಬಿಸಿಸಿಐಗೆ ಸುಪ್ರಿಂ ಕೋರ್ಟ್ ಸರಿಯಾಗಿ ಚಾಟಿ ಬೀಸಿದೆ.

ಶುಕ್ರವಾರ ಮಹತ್ವದ ತೀರ್ಪು ನೀಡಿರುವ ನಾಯ್ಯಾಲಯ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಡುವಿನ ಹಣಕಾಸು ವ್ಯವಹಾರಗಳನ್ನು ತಕ್ಷಣಕ್ಕೆ ನಿಲ್ಲಿಸುವಂತೆ ಸೂಚನೆ ನೀಡಿದೆ.

‘ಲೋಧಾ ಸಮಿತಿ’ ತೀರ್ಮಾನಗಳ ಅನ್ವಯ ಸುಧಾರಣೆಗಳನ್ನು ಮೊದಲು ಜಾರಿಗೆ ತನ್ನಿ. ಅಲ್ಲಿವರೆಗೆ ಬಿಸಿಸಿಐ ಪಂದ್ಯಗಳ ಹಣ ಪಾವತಿಯ ವಿಚಾರದಲ್ಲೂ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡದಂತೆ ಕಟುವಾಗಿ ಎಚ್ಚರಿಕೆ  ನೀಡಿದೆ.

bcci-logo

ಶುಕ್ರವಾರ ನಡೆದ ವಿಚಾರಣೆಯಲ್ಲಿ ಸುಪ್ರಿಂ ಕೋರ್ಟ್ ಹಲವು ಮಹತ್ವದ ಆದೇಶಗಳನ್ನು ನೀಡಿದೆ. ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೆ ತರಲು ಎಷ್ಟು ಸಮಯ ಬೇಕು ಎಂದು ಡಿಸೆಂಬರ್ 3ರ ಒಳಗೆ ಸುಪ್ರಿಂ ಕೋರ್ಟ್ ಹಾಗೂ ಲೋಧಾ ಪ್ಯಾನಲ್ ಮುಂದೆ ಅಫಿದವಿತ್ ಸಲ್ಲಿಸಬೇಕು ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆಯವರಿಗೆ ಆದೇಶ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಮತ್ತು ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್, ಎಲ್ ನಾಗೇಶ್ವರ್ ರಾವ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.

ಸ್ವತಂತ್ರ ಲೆಕ್ಕಪರಿಶೋಧಕರನ್ನು ನೇಮಿಸಿ ಬಿಸಿಸಿಐನ ಎಲ್ಲಾ ಅಕೌಂಟ್ಗಳನ್ನು ಪರಿಶೋಧನೆ ಮಾಡಬೇಕು. ಬಿಸಿಸಿಐ ನೀಡಿದ ದೊಡ್ಡ ಮೊತ್ತದ ಟೆಂಡರ್ ಗಳನ್ನೂ ಪರಿಶೀಲನೆ ನಡೆಸಬೇಕು. ಎಷ್ಟಕ್ಕಿಂತ ಹೆಚ್ಚು ಮೊತ್ತದ ಟೆಂಡರ್ಗಳನ್ನು ಪರಿಶೀಲನೆ ಮಾಡಬೇಕು ಮತ್ತು ಸ್ವತಂತ್ರ ಲೆಕ್ಕ ಪರಿಶೋಧಕರನ್ನು ನೇಮಿಸುವ ತೀರ್ಮಾನವನ್ನು ಲೋಧಾ ಸಮಿತಿಗೆ ಬಿಟ್ಟಿದೆ. ಸಮಿತಿಯ ಕಾರ್ಯದರ್ಶಿಗೆ ಸುಪ್ರಿಂ ಕೋರ್ಟ್ ಪ್ರತಿಯನ್ನು ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರಿಗೂ ಕಳುಹಿಸುವಂತೆ ಹೇಳಿದೆ.

ಶ್ರೀಮಂತ ಕ್ರಿಕೆಟ್ ಸಂಸ್ಥೆಗೆ ಸಂಬಂಧಿಸಿದಂತೆ ಲೋಧಾ ಸಮಿತಿ ನೀಡಿದ ಶಿಫಾರಸ್ಸುಗಳ ಕುರಿತು ಸುಪ್ರಿಂ ಕೋರ್ಟ್ ಅಕ್ಟೋಬರ್ 17ರಂದೇ ವಿಚಾರಣೆ ಮುಗಿಸಿ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.

ಲೋಧಾ ಸಮಿತಿಯ ನಿರ್ದೇಶನಗಳು “ಸರಕಾರದ ಮಧ್ಯಪ್ರವೇಶಕ್ಕೆ ಸಮ,” ಎಂದು ಬಿಸಿಸಿಐಗೆ ಐಸಿಸಿ ಸಿಇಒ ಡೇವ್ ರಿಚರ್ಡ್ಸನ್ ಪತ್ರ ಬರೆದಿದ್ದಾರೆ ಎಂಬ ಗಾಳಿ ಸುದ್ದಿಗಳು ಓಡಾಡುತ್ತಿದ್ದವು. ಈ ಬಗ್ಗೆ ಗರಂ ಆದ ಸುಪ್ರಿಂ ಕೋರ್ಟ್ ಈ ಕುರಿತು ವಿವರಿಸುವಂತೆ ಅನುರಾಗ್ ಠಾಕೂರ್ ಹಾಗೂ ಬಿಸಿಸಿಐ ಜನರಲ್ ಮ್ಯಾನೇಜರ್ (ಕ್ರಿಕೆಟ್ ಆಪರೇಷನ್) ರತ್ನಾಕರ್ ಶೆಟ್ಟಿಗೆ ಕೇಳಿಕೊಂಡಿತು.

ಈ ವೇಳೆ ಬಿಸಿಸಿಐ ಪರವಾಗಿ ಮಧ್ಯಪ್ರವೇಶಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, “ಬಿಸಿಸಿಐಯನ್ನು ವಿಲನ್ ರೀತಿ ಬಿಂಬಿಸಲಾಗುತ್ತಿದೆ. ಎಲ್ಲಾ ತಪ್ಪುಗಳಿಗೂ ಬಿಸಿಸಿಐಯೇ ಕಾರಣ ಎನ್ನುವಂತೆ ಅಭಿಪ್ರಾಯ ಇದೆ,” ಎಂದರು.

anurag-thakur

ಬಿಸಿಸಿಐ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಅನುರಾಗ್ ಠಾಕೂರ್

ಇನ್ನು, ಸುಪ್ರಿಂ ಕೋರ್ಟಿಗೆ ಸಲ್ಲಿಸಿದ ಅಫಿದವಿತ್ತಿನಲ್ಲಿ ಅನುರಾಗ್ ಠಾಕೂರ್, ಐಸಿಸಿ ಸಿಇಒ ಡೇವ್ ರಿಚರ್ಡ್ಸನ್ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಅವೆಲ್ಲಾ ಆರೋಪಗಳಷ್ಟೇ ಎಂದು ಸ್ಪಷ್ಟನೆ ನೀಡಿದ್ದರು. ಇದೇ ರೀತಿ ಐಸಿಸಿ ಕೈಯಿಂದ ಯಾವುದೇ ಪತ್ರವೂ ಬಿಸಿಸಿಐಗೆ ಬಂದಿಲ್ಲ ಎಂದು ರತ್ನಾಕರ್ ಶೆಟ್ಟಿಯೂ ಅಫಿದವಿತ್ ಸಲ್ಲಿಸಿದ್ದರು.

ಸುಪ್ರಿಂ ಸ್ಪಷ್ಟ ಆದೇಶ

ಸುಪ್ರಿಂ ಕೋರ್ಟ್ ತನ್ನ ಆದೇಶದಲ್ಲಿ ಯಾವುದೇ ಹಣವನ್ನು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ವರ್ಗಾವಣೆ ಮಾಡಬಾರದು ಎಂದು ಬಿಸಿಸಿಐಗೆ ಕಠಿಣ ಪದಗಳಲ್ಲಿ ಹೇಳಿದೆ. ಒಂದೊಮ್ಮೆ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಲೋಧಾ ಸಮಿತಿಯ ಶಿಫಾರಸ್ಸುಗಳನ್ನು  ಒಪ್ಪಿಕೊಂಡು ರೆಸಲ್ಯೂಷನ್ ಪಾಸ್ ಮಾಡಿ, ನಮಗೆ ಲಿಖಿತವಾಗಿ ಪತ್ರ ನೀಡಿದರೆ ಮಾತ್ರ ಹಣ ಬಿಡುಗಡೆ ಮಾಡಬಹುದು ಎಂದು ಹೇಳಿದೆ. ಅಲ್ಲವರೆಗೆ ಈ ಹಿಂದೆ ಬಿಡುಗಡೆ ಮಾಡಿದ ಹಣವನ್ನೂ ನೀಡಬಾರದು ಎಂದು ಸುಪ್ರಿಂ ಸ್ಪಷ್ಟಪಡಿಸಿದೆ.

ಸುಪ್ರಿಂ ಕೋರ್ಟಿ ತೀರ್ಪಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್.ಎಂ ಲೋಧಾ “ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೆ ತರಲು ಸುಪ್ರಿಂ ಕೋರ್ಟ್ ತನ್ನ ಅತ್ಯುತ್ತಮ ಕೆಲಸ ಮಾಡಿದೆ,” ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆ ಅಕ್ಟೋಬರ್ 6 ರಂದೇ ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೆ ತರುವವರೆಗೆ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ನೀಡುತ್ತಿರುವ ಹಣವನ್ನು ನಿಲ್ಲಿಸುವಂತೆ ಸುಪ್ರಿಂ ಸೂಚಿಸಿತ್ತು. ಆದರೆ ಸುಪ್ರಿಂ ಕೋರ್ಟಿನ ಆದೇಶವನ್ನು ಬಿಜೆಪಿ ಸಂಸದರೂ ಆಗಿರುವ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಪಾಲಿಸಿರಲಿಲ್ಲ, ನ್ಯಾಯಾಲಯ ಹೇಳಿದಂತೆ ನಡೆದುಕೊಂಡರೆ ಕ್ರಿಕೆಟ್ಟನ್ನೇ ನಿಲ್ಲಿಬೇಕಾಗುತ್ತದೆ ಎಂದು ಹೇಳಿದ್ದರು. ಆದರೆ ಅವರ ಈ ವಾದಕ್ಕೆ ತಾಳ್ಮೆ ಕಳೆದುಕೊಂಡಿರುವ ಸುಪ್ರಿಂ ಕೋರ್ಟ್ ಈ ಆದೇಶ ನೀಡಿದೆ.

ಲೋಧಾ ಸಮಿತಿಯ ಟಾಪ್ 10 ಶಿಫಾರಸ್ಸುಗಳು ಹೀಗಿವೆ,

  • ಐಪಿಎಲ್ ಮತ್ತು ಬಿಸಿಸಿಐಗೆ ಪ್ರತ್ಯೇಕ ಆಡಳಿತ ಮಂಡಳಿಗಳನ್ನು ರಚಿಸಬೇಕು

  • ಅಧಿಕಾರಿಗಳಿಗೆ ಮೂರು ವರ್ಷದ ಅಧಿಕಾರವಧಿ ಮತ್ತು ಒಬ್ಬರಿಗೆ ಮೂರು ಅವಧಿಗೆ ಮಾತ್ರ ಅವಕಾಶ ಇರಬೇಕು.

  • ಐಪಿಎಲ್ ಗೆ ನಿಯಮಿತ ಸ್ವಾಯತ್ತತೆ ಮಾತ್ರ ನೀಡಬೇಕು.

  • ಒಂದು ರಾಜ್ಯಕ್ಕೆ ಒಂದು ಅಸೋಸಿಯೇಷನ್ ಮತ್ತು ಒಂದು ಮತದಾನದ ಹಕ್ಕು ಇರಬೇಕು.

  • ಬಿಸಿಸಿಐ ಅಧಿಕಾರಿಗಳು ಏಕಕಾಲದಲ್ಲಿ ಎರಡು ಹುದ್ದ ಅಲಂಕರಿಸರಬಾರದು.

  • ಸಮಸ್ಯೆಗಳು ತಲೆದೋರಿದರೆ ನೈತಿಕ ಅಧಿಕಾರಿ (ಮಾಜಿ ಹೈ ಕೋರ್ಟ್ ನ್ಯಾಯಾಧೀಶರು) ತೀರ್ಮಾನ ತೆಗೆದುಕೊಳ್ಳಬೇಕು.

  • ಬಿಸಿಸಿಐನ ಅಧಿಕಾರಿಗಳು, ಸರಕಾರಿ ಕೆಲಸದಲ್ಲಿರಬಾರದು, ಮಂತ್ರಿಯಾಗಿರಬಾರದು.

  • ಐಪಿಎಲ್ ಆಡಳಿತ ನಡೆಸಲು 9 ಜನರ ಉನ್ನತ ಸಮಿತಿ ರಚಿಸಬೇಕು

  • ಬೆಟ್ಟಿಂಗನ್ನು ಕಾನೂನಾತ್ಮಕಗೊಳಿಸಲು ಶಿಫಾರಸ್ಸು ನೀಡಿತ್ತು.

  • ಆಟಗಾರರ ಒಕ್ಕೂಟ ರಚಿಸಲು ಪ್ರಸ್ತಾವನೆ ಇಟ್ಟಿತ್ತು.

More on this:

ಬಿಸಿಸಿಐ vs ಲೋಧಾ: ನ್ಯೂಜಿಲ್ಯಾಂಡ್ ಸರಣಿ ಮೇಲೆ ತೂಗುಗತ್ತಿ

ಟಿ-20 ವಿಶ್ವಕಪ್: ಕ್ರಿಕೆಟ್ ಸೋತಾಗ ಗೆದ್ದಿದ್ದು ವೆಸ್ಟ್ ಇಂಡೀಸ್!

Top