An unconventional News Portal.

ನಿರ್ವಹಣಾ ಮಂಡಳಿ ಸದ್ಯಕ್ಕಿಲ್ಲ: ರಾಜ್ಯಕ್ಕೆ ತಾತ್ಕಾಲಿಕ ನಿರಾಳತೆ

ನಿರ್ವಹಣಾ ಮಂಡಳಿ ಸದ್ಯಕ್ಕಿಲ್ಲ: ರಾಜ್ಯಕ್ಕೆ ತಾತ್ಕಾಲಿಕ ನಿರಾಳತೆ

ಕಾವೇರಿ ನೀರು ನಿರ್ವಹಣಾ ಮಂಡಳಿಯ ರಚನೆಯನ್ನು ಸುಪ್ರಿಂ ಕೋರ್ಟ್ ಸದ್ಯಕ್ಕೆ ಮುಂದೂಡಿದ್ದು ಕರ್ನಾಟಕ ತುಸು ನಿರಾಳವಾಗಿದೆ. ಇದರಿಂದ ತಮಿಳುನಾಡಿಗೆ ಹಿನ್ನಡೆಯಾದಂತಾಗಿದೆ. ಆದರೆ ಮತ್ತೆ 12 ದಿನಗಳ ಕಾಲ 24,000 ಕ್ಯೂಸೆಕ್ಸ್ ನೀರು ಹರಿಸುವಂತೆ ಸರ್ವೋಚ್ಚ ನ್ಯಾಯಾಲಯ ರಾಜ್ಯಕ್ಕೆ ಆದೇಶ ನೀಡಿದೆ.

ಇದಲ್ಲದೇ ಕೋರ್ಟ್ ತಾಂತ್ರಿಕ ಸಮಿತಿಯನ್ನೂ ನೇಮಿಸಿ ವರದಿ ಸಲ್ಲಿಸಲು ಅಕ್ಟೋಬರ್ 17ರ ಗಡುವು ವಿಧಿಸಿದ್ದು ಇಂದಿನ ಆದೇಶದ ವಿಶೇಷ.

ಮಂಗಳವಾರದ ವಿಚಾರಣೆಯಲ್ಲಿ ಸುಪ್ರಿಂ ಆದೇಶವನ್ನು ಪಾಲನೆ ಮಾಡದ ಕರ್ನಾಟಕವನ್ನು ಕೋರ್ಟ್ ತೀರ್ವ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ತನ್ನ ಆದೇಶ ಪಾಲಿಸುವಂತೆ ಎಚ್ಚರಿಕೆಯನ್ನೂ ನೀಡಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಸರಕಾರ ಸುಪ್ರಿಂ ಕೋರ್ಟ್ ಆದೇಶದಂತೆ ಕರ್ನಾಟಕ ತಮಿಳುನಾಡಿಗೆ ನೀರು ಹರಿಸಲಿದೆ. ಆದರೆ 6,000 ಕ್ಯೂಸೆಕ್ಸ್ ಬದಲಿಗೆ ಕೇವಲ 2,000 ಸಾವಿರ ಕ್ಯೂಸೆಕ್ಸ್ ಹರಿಸುವುದಾಗಿ ತಿಳಿಸಿತು. ಅದರಂತೆ ಕೋರ್ಟ್ ಮಧ್ಯಂತರ ಪರಿಹಾರವಾಗಿ ಅಕ್ಟೋಬರ್ 7 ರಿಂದ 18ರವರೆಗೆ 12 ದಿನಗಳ ಕಾಲ ದಿನಕ್ಕೆ 2,000 ಕ್ಯೂಸೆಕ್ಸಿನಂತೆ ಒಟ್ಟು 24,000 ಕ್ಯೂಸೆಕ್ಸ್ ನೀರು ಹರಿಸಲು ಸೂಚಿಸಿತು.

ಇನ್ನು ತನ್ನ ಆದೇಶದಲ್ಲಿ ಸರ್ವೋಚ್ಚ ನ್ಯಾಯಾಲಯ ಹೊಸದಾಗಿ ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸುವ ಆದೇಶ ನೀಡಿತು. ಈ ಸಮಿತಿ ಎರಡೂ ರಾಜ್ಯಗಳಿಗೆ ಭೇಟಿ ನೀಡಿ ಇದೇ ಅಕ್ಟೋಬರ್ 17ಕ್ಕೆ ಮೊದಲು ತನ್ನ ವರದಿ ನೀಡುವಂತೆ ನ್ಯಾಯಾಲಯ ಸೂಚಿಸಿತು.

ಮಂಗಳವಾರದ ವಿಚಾರಣೆಯಲ್ಲಿ ಕಾವೇರಿ ನಿರ್ವಹಣಾ ಮಂಡಳಿಯ ರಚನೆಯ ಪ್ರಸ್ತಾಪವನ್ನು ಕೋರ್ಟ್ ಸದ್ಯಕ್ಕೆ ಕೈ ಬಿಟ್ಟು, ವಿಚಾರಣೆಯನ್ನು ಅಕ್ಟೋಬರ್ 18ಕ್ಕೆ ಮುಂದೂಡಿತು. ಕೇಂದ್ರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್, ‘ಕಾವೇರಿ ಮ್ಯಾನೇಜ್ಮೆಂಟ್ ಬೋರ್ಡ್’ನ್ನು ಈ ರೀತಿ ಸ್ಥಾಪಿಸಲು ಸಾಧ್ಯವಿಲ್ಲ. ಬೋರ್ಡ್ ರಚಸಬೇಕಾದರೆ ಸಂಸತ್ತಿನ ಒಪ್ಪಿಗೆ ಬೇಕು. ನಾವು ನ್ಯಾಯ ಪ್ರಕಾರವೇ ಹೋಗಬೇಕಾಗುತ್ತದೆ,” ಎಂದು ತಿಳಿಸಿದ ನಂತರ ಸುಪ್ರಿಂ ಕೋರ್ಟ್ ಈ ತೀರ್ಮಾನ ತೆಗೆದುಕೊಂಡಿದೆ.

ಹೀಗಾಗಿ ಕರ್ನಾಟಕ ತಾತ್ಕಾಲಿಕವಾಗಿಯಾದರೂ ಗಂಡಾಂತರದಿಂದ ಪಾರಾದಂತಾಗಿದೆ.

ಚಿತ್ರ ಕೃಪೆ: ಬಿ ಫಸ್ಟ್

Top