An unconventional News Portal.

ಭಾರತೀಯ ಸೇನೆ ವಿರುದ್ಧ ಸಿಬಿಐ ತನಿಖೆ: ಮಣಿಪುರಿಗಳ ಮನವಿಗೆ ಸ್ಪಂದಿಸಿದ ಸುಪ್ರಿಂ ಕೋರ್ಟ್

ಭಾರತೀಯ ಸೇನೆ ವಿರುದ್ಧ ಸಿಬಿಐ ತನಿಖೆ: ಮಣಿಪುರಿಗಳ ಮನವಿಗೆ ಸ್ಪಂದಿಸಿದ ಸುಪ್ರಿಂ ಕೋರ್ಟ್

ಮಣಿಪುರದಲ್ಲಿ ಭಾರತೀಯ ಸೇನೆಯಿಂದ ನಡೆದ ಕಾನೂನುಬಾಹಿರ ಹತ್ಯೆಗಳ ಕುರಿತು ಸುಪ್ರಿಂ ಕೋರ್ಟ್‌ ಸಿಬಿಐ ತನಿಖೆಗೆ ಶುಕ್ರವಾರ ಆದೇಶ ನೀಡಿದೆ.

ನ್ಯಾ. ಎಂ. ಬಿ. ಲಾಕೂರ್ ಹಾಗೂ ನ್ಯಾ. ಯು. ಯು. ಲಲಿತ್ ಅವರಿದ್ದ ಪೀಠದ ಮುಂದೆ ಸೇನೆಯಿಂದ ನಡೆದ ನಕಲಿ ಎನ್‌ಕೌಂಟರ್‌ಗಳ ಕುರಿತು ತನಿಖೆಗೆ ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠ ಅಸ್ಸಾಂ ರೈಫಲ್ಸ್ ಮತ್ತು ಮಣಿಪುರ ಪೊಲೀಸರಿಂದ ನಡೆದ ಕಾನೂನು ಬಾಹಿರ ಹತ್ಯೆಗಳ ಕುರಿತು ಸಿಬಿಐ ತನಿಖೆಗೆ ಆದೇಶ ನೀಡಿದೆ. 2000ರಿಂದ 2012ರ ನಡುವೆ ಈಶಾನ್ಯ ಭಾರತದ ಪುಟ್ಟ ರಾಜ್ಯ ಮಣಿಪುರದಲ್ಲಿ ಸೇನೆಯಿಂದ ಒಟ್ಟು 1,528 ನಕಲಿ ಎನ್‌ಕೌಂಟರ್‌ಗಳು ನಡೆಸಿವೆ ಎಂದು ಪಿಐಎಲ್‌ನಲ್ಲಿ ತಿಳಿಸಲಾಗಿತ್ತು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧಿಸಿದಂತೆ ಏ. 20ರಂದು ನಡೆದ ವಿಚಾರಣೆ ವೇಳೆ, ‘ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ – 1958 (ಎಎಫ್ಎಸ್‌ಪಿಎ) ಜಾರಿಯಲ್ಲಿರುವ ಪ್ರದೇಶಗಳಲ್ಲಿ ನಡೆಸಿದ ಸೇನಾ ಕಾರ್ಯಾಚರಣೆ ಬಗ್ಗೆ ದೂರು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಸೇನೆ ನಡೆಸಿದ ಎನ್‌ಕೌಂಟರ್‌ಗಳ ಬಗ್ಗೆ ಸ್ಥಳೀಯ ನ್ಯಾಯಾಧೀಶರಿಂದ ನಡೆದ ತನಿಖೆ ಸೇನೆ ವಿರುದ್ಧವಾಗಿತ್ತು’ ಎಂದು ಮಿಲಿಟರಿ ವಾದಿಸಿತ್ತು.

ಮಣಿಪುರದಲ್ಲಿ ನಡೆದಿರುವ ಸೇನಾಪಡೆಗಳ ಕಾನೂನು ಬಾಹಿರ ಹತ್ಯೆಗಳ ಕುರಿತು ಸಿಬಿಐ ತನಿಖೆ ನಡೆಸಿ 2018ರ ಜನವರಿ ಒಳಗೆ ವರದಿಯನ್ನು ಸಲ್ಲಿಸಬೇಕು. ಇದಕ್ಕಾಗಿ ಸಿಬಿಐ ನಿರ್ದೇಶಕರು ತನಿಖಾ ತಂಡವೊಂದನ್ನು 15 ದಿನಗಳ ಒಳಗಾಗಿ ರಚಿಸಬೇಕು. ಮುಂದಿನ ಮೂರು ತಿಂಗಳ ಒಳಗೆ ಪ್ರಕರಣಗಳ ಪಟ್ಟಿಯನ್ನು ರಚಿಸಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತನಿಖಾ ಸಂಸ್ಥೆಗೆ ಸೂಚಿಸಿದೆ. ಸಿಬಿಐ ತನಿಖೆಯು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿಯೇ ನಡೆಯಲಿದೆ.

ಯಾಕೆ ಸೇನೆ ವಿರುದ್ಧ ತನಿಖೆ:

ಪ್ರತ್ಯೇಕತಾ ಹೋರಾಟ ಜಾರಿಯಲ್ಲಿರುವ ರಾಜ್ಯಗಳಲ್ಲಿ ‘ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ – 1958 (ಎಎಫ್ಎಸ್‌ಪಿಎ) ಜಾರಿಯಲ್ಲಿದೆ. 13 ವರ್ಷಗಳ ನಂತರ ತ್ರಿಪುರದಲ್ಲಿ ಮಾತ್ರವೇ ಸೇನೆಗೆ ನೀಡಿರುವ ಈ ವಿಶೇಷಾಧಿಕಾರವನ್ನು ಹಿಂಪಡೆಯಲಾಗಿದೆ. ಮಣಿಪುರವೂ ಸೇರಿದಂತೆ ಕಾಶ್ಮೀರಾ ಹಾಗೂ ಇತರೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ಈ ಕಾಯ್ದೆ ವಿರುದ್ಧ ಹೋರಾಟ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಸೇನೆ ತನಗೆ ನೀಡಿರುವ ವಿಶೇಷ ಕಾಯ್ದೆಯನ್ನು ಬಳಸಿಕೊಂಡು ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂಬುದು ಸದ್ಯ ಇರುವ ಆರೋಪ. ಈ ಹಿಂದೆ ಮಣಿಪುರದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ, ಅಲ್ಲಿನ ಅಸ್ಸಾಂ ರೈಫಲ್ಸ್ ಕಚೇರಿ ಮುಂಭಾಗ ಮಹಿಳೆಯರು ಬೆತ್ತಲೆ ಪ್ರತಿಭಟನೆ ನಡೆಸಿದ್ದರು. ಇಲ್ಲಿ, ಸೇನೆಯಿಂದ ಹತ್ಯೆಗೆ ಒಳಗಾದ ಕುಟುಂಬಗಳು ನ್ಯಾಯಕ್ಕಾಗಿ ಸಂಘವೊಂದನ್ನು ಸ್ಥಾಪಿಸಿಕೊಂಡು ಕಾನೂನು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇರೋಂ ಶರ್ಮಿಳಾ ಕೂಡ ಈ ಕಾಯ್ದೆ ವಿರುದ್ಧ ಸುದೀರ್ಘ ಉಪವಾಸ ಸತ್ಯಾಗ್ರಹ ನಡೆಸಿದ್ದರು.

‘ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಸೇನೆಗೆ ಕೆಲವು ವಿಶೇಷ ಅಧಿಕಾರವನ್ನು ನೀಡಿದೆ. ಅನುಮಾನ ಬಂದಲ್ಲಿ, ಯಾವುದೇ ಮುನ್ಸೂಚನೆಯೂ ಇಲ್ಲದೆ ಯಾರನ್ನೂ ಬೇಕಾದರೂ ಬಂಧಿಸಬಹುದು. ಅವರನ್ನು ಅನಿರ್ದಿಷ್ಟಾವಧಿ ತಮ್ಮ ಬಂಧನದಲ್ಲಿ ಇಟ್ಟುಕೊಳ್ಳವ ಅವಕಾಶ ನೀಡಿದೆ. ಇದನ್ನು ಬಳಸಿಕೊಂಡ ಸೇನೆ ಇಲ್ಲಿನ ಶಸಸ್ತ್ರ ಪ್ರತ್ಯೇಕತಾ ಹೋರಾಟವನ್ನು ಹತ್ತಿಕ್ಕಲು ಕಾರ್ಯಾಚರಣೆ ನಡೆಸಿಕೊಂಡು ಬಂದಿದೆ. ಇಂತಹ ಕಾರ್ಯಚರಣೆ ಹೆಸರಿನಲ್ಲಿ ಮುಗ್ದ ಜನರ ಹತ್ಯೆ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ ಆರೋಪವೂ ಸೇನೆ ಮೇಲಿದೆ.

ಸೇನೆ ಮತ್ತು ಮಣಿಪುರ ಪೊಲೀಸರ ಕಾರ್ಯಾಚರಣೆಯಲ್ಲಿ ಕಾನೂನು ಬಾಹಿರವಾಗಿ ಹತ್ಯೆಯಾದವರ ಪಟ್ಟಿಯನ್ನು ಇಲ್ಲಿನ ಮಾನವ ಹಕ್ಕು ಸಂಘಟನೆಗಳು ಸಂಗ್ರಹಿಸಿದ್ದವು. ಜತೆಗೆ, ಸ್ಥಳೀಯ ಮಟ್ಟದಲ್ಲಿ ನಡೆದ ಬಹುತೇಕ ನ್ಯಾಯಾಂಗ ತನಿಖೆಗಳಲ್ಲಿ ಸೇನೆ ಜನರ ಮೇಲೆ ದೌರ್ಜನ್ಯ ನಡೆಸಿದ್ದು ಸಾಭೀತಾಗಿತ್ತು. ಆದರೆ ಸೇನಾ ವಿಶೇಷ ಕಾಯ್ದೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸೇನೆಯ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಕುರಿತು ಹೆಚ್ಚಿನ ತನಿಖೆ ನಡೆದಿರಲಿಲ್ಲ. ಇದೀಗ ಸುಪ್ರಿಂ ಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿರುವುದು ಹತ್ಯೆಯಾದ ಕುಟುಂಬಗಳಲ್ಲಿ ನ್ಯಾಯದ ನಿರೀಕ್ಷೆಯನ್ನು ಹೆಚ್ಚುವಂತೆ ಮಾಡಿದೆ.

Top