An unconventional News Portal.

ಮಲ್ಲೇಶಪ್ಪ, ಚಾಂದನಿ ಮತ್ತು ವೀರಮಣಿ: ಬರ, ಬೇಸಿಗೆ ಹಾಗೂ ಮಧ್ಯಾಹ್ನದ ಸಮಾಚಾರ

ಮಲ್ಲೇಶಪ್ಪ, ಚಾಂದನಿ ಮತ್ತು ವೀರಮಣಿ: ಬರ, ಬೇಸಿಗೆ ಹಾಗೂ ಮಧ್ಯಾಹ್ನದ ಸಮಾಚಾರ

“ಊರಲ್ಲಿ ಸುಡು ಬಿಸಿಲು ಐತ್ರಿ. ಕೂಲಿ ಹುಡ್ಕೊಂಡು ಇಲ್ಲಿಗ್ ಬಂದ್ರ, ಇಲ್ಲೂ ಅದೇ ಪಾಡಾತು ನೋಡ್ರಿ,” ಎಂದ ಕೊಪ್ಪಳ ಮೂಲದ ಮಲ್ಲೇಶಪ್ಪ ತಲೆಗೆ ಸುತ್ತಿಕೊಂಡಿದ್ದ ಟವೆಲ್ ತೆಗೆದು ಒಮ್ಮೆ ಕೊಡವಿದರು.

ಮಲ್ಲೇಶ್ವರದ 8ನೇ ತಿರುವಿನ ಬಿಸಿಲಿನಲ್ಲಿ ಅವರ ಟವೆಲ್ನಿಂದ ಸಿಡಿದ ದೂಳ ಕಣಗಳು ಆಟ ಆಡತೊಡಗಿವು. ಹದಿನೈದು ದಿನಗಳ ಹಿಂದೆ, ಮಲ್ಲೇಶಪ್ಪ ಮತ್ತವರ ಕುಟುಂಬ ಬೆಂಗಳೂರಿಗೆ ಗುಳೇ ಬಂದಿದೆ. ಇವರಿಗೆ ಗುಳೇ ಬರುವುದು ಹೊಸತಲ್ಲವಾದರೂ, ಅವರ ತಮ್ಮನ ಒಂದು ತಿಂಗಳ ಮೊಲೆಹಾಲು ಕುಡಿಯುವ ಮಗುವಿಗೆ ಇದು ಮೊದಲ ಪ್ರಯಾಣ.

ಸದ್ಯ ಮಲ್ಲೇಶ್ವರದಲ್ಲಿ ಕಟ್ಟಡ ಕಟ್ಟುವ ಕೆಲಸದಲ್ಲಿ ಮಲ್ಲೇಶಪ್ಪ ಕುಟುಂಬ ತೊಡಗಿಕೊಂಡಿದೆ. ಇದು ಕಳೆದ ತಿಂಗಳ ಅಂತರದಲ್ಲಿ ಬೆಂಗಳೂರಿಗೆ ವಲಸೆ ಬಂದಿರುವ ಸಾವಿರಾರು ಕುಟುಂಬಗಳ ಪೈಕಿ ಒಂದಷ್ಟೆ. ಉತ್ತರ ಕರ್ನಾಟಕದ ಬರ, ಮುಖ್ಯಮಂತ್ರಿ ಪ್ರವಾಸ ಕಾರ್ಯಕ್ರಮ, ವಿಧಾನಸೌಧದ ವಿಶಾಲವಾದ ಕಿಟಿಕಿಗಳಲ್ಲಿ ಬೀಸುವ ತಣ್ಣನೆ ಗಾಳಿ, ಬಿಜೆಪಿ ಹೊಣೆಗಾರಿಕೆ ವಹಿಸಿಕೊಂಡ ಯಡಿಯೂರಪ್ಪ ಅವರ ಮುಖದಲ್ಲಿ ಮೂಡಿರುವ ಮಂದಹಾಸ, ಹೀಗೆ ಸುದ್ದಿಗಳ ಪರದೆಯನ್ನು ಕಳಚಿಕೊಳ್ಳಲು ಬೆಂಗಳೂರಿನ ಸುಡಿ ಬಿಸಿಲಿನಲ್ಲಿ ಓಡಾಡಿದರೆ, ಮಾಧ್ಯಮಗಳ ಮೂಲಕ ಆವರಿಸಿಕೊಂಡಿರುವ ವರದಿಗಳಿಗೆ ಭಿನ್ನವಾದ ಕತೆಗಳು ತೆರೆದುಕೊಳ್ಳುತ್ತವೆ.

ಮೆಜೆಸ್ಟಿಕ್ ಮಾಮ:

“ಅಯ್ಯೋ ಬಿಡ್ರಿ ನಿಮಗೇನು ಇಲ್ಲಿ ಮಾತಾಡ್ಕೊಂಡು ಎಸಿ ರೂಮಲ್ಲಿ ಹೋಗಿ ಕೂರ್ತೀರಾ. ನಮ್ಮ ಪಾಡು ಹಾಗಲ್ಲ,” ಎಂದವರು ಚಾಂದಿನಿ. ಇದು ಅವರ ನಿಜ ಹೆಸರು ಅಲ್ಲ ಎಂಬುದು ಅವರಿಗೂ ಗೊತ್ತು. ಹೀಗಿದ್ದೂ, ಬಿಸಿಲ ಬೇಗೆಯಲ್ಲಿ, ಕೈಲೊಂದು ಬಿಸ್ಲೇರಿ ಬಾಟೆಲ್ ಹಿಡಿದು, ತುಟಿಗೆ ಕೆಂಪು ಬಣ್ಣದ ಲಿಪ್ ಸ್ಟಿಕ್ ಹಾಕಿಕೊಂಡು ನಿಂತಿದ್ದವರ ಹತ್ತಿರ ಹೋದರೆ, ದೂಳಿನ ಕಣಗಳ ಜತೆ ಗಮ್ಮೆನ್ನುವ ವಾಸನೆ ಬಡಿಯುತ್ತಿತ್ತು. ಅವರ ವೃತ್ತಿಯನ್ನು ಪಕ್ಕಕ್ಕಿಟ್ಟು, “ಬೇಸಿಗೆ ಜೋರಾ,” ಎಂದರೆ, ಗೌತಮ ನಗರದ ತಮ್ಮ ಮನೆಯ ಸುತ್ತಲಿನ ವಾತಾವರಣದ ಬಗ್ಗೆ ಹೇಳತೊಡಗಿದರು. ಅಲ್ಲಿ ಕಳೆದ ಒಂದು ವಾರದಿಂದ ನೀರು ಸರಿಯಾಗಿ ಬರುತ್ತಿಲ್ಲ ಎಂದರು. “ಎರಡು ದಿನಕ್ಕೊಂದು ಸ್ನಾನ ಮಾಡಿದರೆ ಹೆಚ್ಚು. ನಾನು ಇಲ್ಲೇ ಹೋಟೆಲ್ಗಳಲ್ಲಿ ಸ್ನಾನ ಮಾಡಿಕೊಂಡು ಹೋಗುತ್ತೇನೆ. ಆದರೆ, ಮಕ್ಕಳಿಗೆ ಸರಿಯಾಗಿ ಸ್ನಾನ ಇಲ್ಲ,” ಎಂದರು.

ಬೆಂಗಳೂರಿನ ಉತ್ತರ ಭಾಗದಲ್ಲಿರುವ ಪುಟ್ಟ ಕೊಳೆಗೇರಿ ಈ ಗೌತಮಪುರ. “ಅಲ್ಲಿಗೆ ಟ್ಯಾಂಕರ್ ನೀರು ಕಳಿಸುವ ವ್ಯವಸ್ಥೆ ಮಾಡಿದ್ದೇವೆ,” ಎನ್ನುತ್ತಾರೆ ಜಲಮಂಡಳಿಯ ಅಧಿಕಾರಿಗಳು.

“ಬಿಸಿಲು ಹೆಚ್ಚಾದ ಮೇಲೆ ಮೆಜೆಸ್ಟಿಕ್ ಮಾಮಗಳ ಓಡಾಟ ಕಮ್ಮಿ ಆಗಿದೆ. ಅದೊಂದೆ ಲಾಭ,” ಎಂದು ನಕ್ಕರು ಚಾಂದಿನಿ. ಅವರು ಮೆಜೆಸ್ಟಿಕ್ ಔಟ್ಪೋಸ್ಟ್ ಪೊಲೀಸರ ಬಗ್ಗೆ ಮಾತನಾಡುತ್ತಿದ್ದರು.

ಜಿರಲೆಗಳ ಸಾಮ್ರಾಜ್ಯ:

ಬೇಸಿಗೆ ಹೆಚ್ಚಾಗುತ್ತಿದ್ದಂತೆ ಜಿರಲೆಗಳ ಸಂತತಿಯೂ ಹೆಚ್ಚಾಗುತ್ತದೆ ಎಂಬುದಕ್ಕೆ ಸದ್ಯದ ಬಿಎಂಟಿಸಿಯ ಸಾಧಾರಣ ಬಸ್ ಹತ್ತಿಯೇ ನೋಡಬೇಕು. ಕೋರಮಂಗಲಕ್ಕೆ ಹೊರಟಿದ್ದ ಬಸ್ಸೊಂದರ ಕೊನೆ ಸೀಟಿನಲ್ಲಿ ತಲೆಯ ಮೇಲೆ ಪೇಪರ್ ಹೊದ್ದು ಕುಳಿದ್ದವರು ವೀರಮಣಿ. ತಮಿಳುನಾಡು ಮೂಲದ ಅವರು ಕೋರಮಂಗಲದ ಬಟ್ಟೆ ಶೋರೂಮೊಂದರಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದಾರೆ. “ಬಿಸಿಲ ಬಗ್ಗೆ ಏನು ಕೇಳ್ತೀರಾ. ಹೊರಗೆ 40 ಡಿಗ್ರಿ ಇದ್ದರೆ, ಬಸ್ ಒಳಗೆ 60 ಡಿಗ್ರಿಗೆ ಏರಿರುತ್ತೆ ನೋಡಿ. ಜತೆಗೆ, ಈ ಜಿರಲೆಗಳ ಕಾಟ ಬೇರೆ,” ಎಂದರು. ಸಾಕ್ಷಿ ಎಂಬಂತೆ ಜಿರಲೆಗಳನ್ನು ತೋರಿಸಲು ಕಾಲಡಿಯಲ್ಲಿ ಹುಡುಕತೊಡಗಿದರು. ಆದರೆ ಬಿಎಂಟಿಸಿ ಅದೃಷ್ಟಕ್ಕೆ ಜಿರಲೆಗಳು ಕಣ್ಣಿಗೆ ಬೀಳಲಿಲ್ಲ.

ಬೇಸಿಗೆ ತೀವ್ರತೆ:

ಕಳೆದ ವಾರದಲ್ಲಿ ಬೆಂಗಳೂರಿನಲ್ಲಿ ಒಂದೆರಡು ಹನಿ ಮಳೆ ಬಿದ್ದಂತಾಗಿತ್ತು. ಅದಾದ ಮೇಲೆ ಒಂದೇ ಸಮನೆ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಅತ್ತ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬರ ಕಾಣಿಸಿಕೊಂಡಿದೆ. “ಗಡ್ಡಕ್ಕೆ ಬೆಂಕಿ ಬಿದ್ದಾಗ, ಬಾವಿ ತೋಡುವ ಕೆಲಸ ನಡೆಯುತ್ತಿದೆ,” ಎನ್ನುತ್ತಾರೆ ಬಳ್ಳಾರಿ ಮೂಲದ ಪತ್ರಕರ್ತರೊಬ್ಬರು. “ಪ್ರತಿ ವರ್ಷವೂ ಇದೇ ಪಾಡು. ಈ ಬಾರಿ, ಹೀಗೆ ಮುಂದುವರಿದರೆ ಭತ್ತದ ಫಸಲು ಕಡಿಮೆಯಾಗುತ್ತದೆ. ಜತೆಗೆ ಜೋಳ, ತೊಗರಿ, ಶೇಂಗಾ ಬೆಳೆಯ ಫಸಲೂ ಕಡಿಮೆಯಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಕಾರಣವಾಗಬಹುದು,” ಎನ್ನುತ್ತಾರೆ ಅವರು.

ಬರ ಪರಿಹಾರ, ಅಧಿಕಾರಿಗಳ ಹೊಣೆಗೇಡಿತನ, ರಾಜಕಾರಣಿಗಳ ಭಾಷಣಗಳ ನಡುವೆ ರಾಜ್ಯದ ಭೂ ಭಾಗಗಳಲ್ಲಿ ಸುಡುಸುಡು ಬೇಸಿಗೆ ಮುಂದುವರಿದಿದೆ. ವಾತಾವರಣದ ತೇವಾಂಶ ಕಡಿಮೆಯಾಗಿದೆ. ಜತೆಗೆ ಬೆಳೆಗಳ ಪ್ರಮಾಣವೂ ಕುಸಿಯುತ್ತಿದೆ. ಮುಂದೆ ವಾತಾವರಣ ಬದಲಾದರೂ, ಇದರ ಪರಿಣಾಮಗಳು ಇದ್ದೇ ಇರುತ್ತವೆ.

Top