An unconventional News Portal.

‘ಸ್ನೇಹ- ಸೈದ್ಧಾಂತಿಕ ಸಂಘರ್ಷ’: ರಾಜೀವ್ ಚಂದ್ರಶೇಖರ್ ಮಾಧ್ಯಮ ಸಂಸ್ಥೆಗೆ ಸುಗತ ರಾಜೀನಾಮೆ

‘ಸ್ನೇಹ- ಸೈದ್ಧಾಂತಿಕ ಸಂಘರ್ಷ’: ರಾಜೀವ್ ಚಂದ್ರಶೇಖರ್ ಮಾಧ್ಯಮ ಸಂಸ್ಥೆಗೆ ಸುಗತ ರಾಜೀನಾಮೆ

ಕನ್ನಡ ಪತ್ರಿಕೋದ್ಯಮದಿಂದ ‘ಇಂಗ್ಲಿಷ್ ಪತ್ರಕರ್ತ’ರೊಬ್ಬರ ನಿರ್ಗಮನಕ್ಕೆ ದಿನಗಣನೆ ಆರಂಭವಾಗಿದೆ.

ಮುಂದಿನ ತಿಂಗಳು ಡಿ. 31ಕ್ಕೆ ಸುಗತ ಶ್ರೀನಿವಾಸ ರಾಜು ಏಷಿಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ. ಲಿ. (ANNPL)ನ ಸಂಪಾದಕೀಯ ನಿರ್ದೇಶಕನ ಸ್ಥಾನದಿಂದ ಕೆಳಕ್ಕಿಳಿಯಲಿದ್ದಾರೆ. ಆಗಸ್ಟ್ ತಿಂಗಳಿನಲ್ಲಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು, ಸದ್ಯ ಒಂದು ತಿಂಗಳ ಮಟ್ಟಿಗೆ ಅದೇ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಏಷಿಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ. ಲಿ., ಕನ್ನಡದಲ್ಲಿ ‘ಸುವರ್ಣ ನ್ಯೂಸ್’ ಸುದ್ದಿ ವಾಹಿನಿ ಹಾಗೂ ಕನ್ನಡ ಪ್ರಭ ದಿನಪತ್ರಿಕೆಯನ್ನು ಹೊರತರುತ್ತಿದೆ.

ಸುಗತ ಶ್ರೀನಿವಾಸರಾಜು, ಹಿರಿಯ ಸಾಹಿತಿ ಶ್ರೀನಿವಾಸರಾಜು ಅವರ ಮಗ. ಈ ಹಿಂದೆ 20 ವರ್ಷಗಳ ಕಾಲ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿದ್ದವರು. 2012ರ ಮೇ ಹೊತ್ತಿಗೆ ‘ವಿಜಯ ಕರ್ನಾಟಕ’ ದಿನ ಪತ್ರಿಕೆಯ ಸಂಪಾದಕರಾಗುವ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದ್ದರು. “ಕನ್ನಡ ನ್ಯೂಸ್ ರೂಂ ಸಹವಾಸ ಸಾಕಾಗಿದೆ. ನನ್ನದು ಮೂಲ ಇಂಗ್ಲಿಷ್ ಪತ್ರಿಕೋದ್ಯಮ. ಅಲ್ಲಿಗೇ ವಾಪಾಸ್ ಹೋಗುತ್ತೇನೆ,” ಎಂದರು ಸುಗತ. ನಿರ್ಗಮನದ ಸುದ್ದಿಯ ಕುರಿತು ಪ್ರತಿಕ್ರಿಯೆಗಾಗಿ ‘ಸಮಾಚಾರ’ ಸೋಮವಾರ ಅವರನ್ನು ಸಂಪರ್ಕಿಸಿದಾಗ, “ಆಗಸ್ಟ್ ತಿಂಗಳಿನಲ್ಲಿಯೇ ರಾಜೀನಾಮೆ ನೀಡಿದ್ದೆ. ಡಿಸೆಂಬರ್ ಅಂತ್ಯಕ್ಕೆ ಇಲ್ಲಿಂದ ತೆರಳಲಿದ್ದೇನೆ. ನಂತರ ಅಮೆರಿಕಾ ಹೋಗುತ್ತಿದ್ದೇನೆ. ಮಾರ್ಚ್ ತಿಂಗಳವರೆಗೂ ಮುಂದಿನ ತೀರ್ಮಾನದ ಕುರಿತು ಮಾತುಕತೆ ನಡೆಸುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.

ಯಾಕೀ ಬೆಳವಣಿಗೆ?:

ಸುಗತ ಶ್ರೀನಿವಾಸರಾಜು ತಮ್ಮನ್ನು ತಾವು ಲಿಬರಲ್ ಪತ್ರಕರ್ತ ಎಂದು ಕರೆದುಕೊಳ್ಳುತ್ತಾರೆ. 2012ರಲ್ಲಿ ‘ಜನಶ್ರೀ’ ಸುದ್ದಿ ವಾಹಿನಿಗೆ ಅವರು ನೀಡಿದ ಸಂದರ್ಶನದಲ್ಲಿಯೂ ಇದನ್ನು ಒತ್ತಿ ಹೇಳಿದ್ದರು. ಅದೇ ವೇಳೆ, ಪತ್ರಿಕೋದ್ಯಮದಲ್ಲಿ ತಮ್ಮ ಸಿದ್ಧಾಂತಗಳನ್ನು ಪ್ರತಿಪಾದಿಸಲು ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ನಂಬಿರುವವರು ಅವರು. ‘ವಿಜಯ ಕರ್ನಾಟಕ’ದಂತಹ ಕಾರ್ಪೊರೇಟ್ ಮೀಡಿಯಾ ಸಂಸ್ಥೆ ಹೊರತರುವ ದಿನಪತ್ರಿಕೆಗೆ ಸಂಪಾದಕರಾಗಿ ಅವರು ಬಂದಾಗಲೂ ಇದನ್ನೇ ಹೇಳುತ್ತಿದ್ದರು.

ಆಗ ‘ಮೆಟ್ರೊಪಾಲಿಟನ್ ಮೀಡಿಯಾ ಕಾರ್ಪೊರೇಶನ್ ಲಿ.’ (‘ವಿಕ’ದ ಮಾತೃಸಂಸ್ಥೆ- ಟೈಮ್ಸ್ ಸಮೂಹ ಸಂಸ್ಥೆಗಳಲ್ಲಿ ಒಂದು)ನ ಅವತ್ತಿನ  ಸಿಇಓ ಆಗಿದ್ದ ಸುನೀಲ್ ರಾಜಶೇಖರನ್ ಹಾಗೂ ಸುಗತ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಇನ್ನೂ ತಮ್ಮ ‘ಕ್ರಾಂಟ್ರಾಕ್ಟ್ ಅವಧಿ’ ಮುಗಿಯುವ ಮೊದಲೇ, ಸುಗತ ರಾಜೀನಾಮೆ ನೀಡಿ ಹೊರಬಂದಿದ್ದರು.

2015ರ ಮೇ ತಿಂಗಳಿನಲ್ಲಿ ರಾಜ್ಯಸಭಾ ಸದಸ್ಯ ಮತ್ತು ಬಿಜೆಪಿ ಜತೆ ಗುರುತಿಸಿಕೊಂಡಿರುವ ಮಹತ್ವಾಕಾಂಕ್ಷಿ ಉದ್ಯಮಿ ರಾಜೀವ್ ಚಂದ್ರಶೇಖರ್ ಒಡೆತನ ಏಷಿಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ ಲಿ., ಸೇರಿಕೊಂಡರು. ಈ ಸಮಯದಲ್ಲಿ ಹಲವರು ಸುಗತ ಮತ್ತು ರಾಜೀವ್ ಚಂದ್ರಶೇಖರ್ ನಡುವೆ ಇರುವ ಸೈದ್ಧಾಂತಕ ಭಿನ್ನ ಅಭಿಪ್ರಾಯಗಳ ಆಚೆಗೂ ಈ ನಡೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು. “ಸುಗತ ಮತ್ತು ರಾಜೀವ್ ಚಂದ್ರಶೇಖರ್ ಇಬ್ಬರೂ ಮಹತ್ವಾಕಾಂಕ್ಷಿಗಳೇ. ಹೀಗಾಗಿ, ತಮ್ಮ ಸಿದ್ಧಾಂತವನ್ನು ಬದಿಗಿಟ್ಟು ಇಬ್ಬರೂ ಕಾಮನ್ ಆಗಿರುವ ವಿಚಾರವನ್ನು ಕಂಡುಕೊಂಡಿರಬಹುದು. ಆದರೆ ಎಷ್ಟು ದಿನ ಎಂಬ ಅನುಮಾನ ಇತ್ತು. ಈಗ ನೀವು ನೀಡುತ್ತಿರುವ ಮಾಹಿತಿ ಪ್ರಕಾರ, ನಮ್ಮೆಲ್ಲರ ಅನುಮಾನ ನಿಜವಾಗಿದೆ,” ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

“ರಾಜೀವ್ ಚಂದ್ರಶೇಖರ್ ಮತ್ತು ಸುಗತ ಇಬ್ಬರದ್ದೂ ದಶಕಗಳ ಹಿಂದಿನ ಸ್ನೇಹ. ಮೊನ್ನೆ (ಶುಕ್ರವಾರ) ಸುಗತ ಜನ್ಮದಿನದಂದೂ ರಾಜೀವ್ ಕರೆ ಮಾಡಿ ವಿಶ್ ಮಾಡಿದ್ದರು. ಆದರೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಸುಗತ ಅವರೇ ರಾಜೀನಾಮೆ ನೀಡಿದ್ದಾರೆ. ಮುಂದಿನ ಅವರ ನಡೆಗಳು ಏನಿವೆ ಎಂಬುದು ಗೊತ್ತಿಲ್ಲ. ಆದರೆ, ಒಂದಂತೂ ಸ್ಪಷ್ಟ, ಸುಗತ ಸುಮ್ಮನೆ ಕೂರುವುದಿಲ್ಲ,” ಎನ್ನುತ್ತಾರೆ ಅವರ ಇವತ್ತಿನ ನಿಕಟವರ್ತಿ ಮತ್ತು ಸಹೋದ್ಯೋಗಿ ಇಬ್ಬರು.

ಆದರೆ, ಸುಗತ ಮಾತ್ರ, “ರಾಜೀನಾಮೆ ನೀಡುತ್ತಿರುವುದಕ್ಕೆ ಯಾವುದೇ ಕಾರಣ ಇಲ್ಲ. ಕನ್ನಡ ಪತ್ರಿಕೋದ್ಯಮಕ್ಕೆ ಬಂದು ಐದು ವರ್ಷ ಕಳೆಯುತ್ತಿದೆ. ಸಾಕು ಎನ್ನಿಸಿದೆ,” ಎಂದರು.

ಪ್ರಜಾವಾಣಿ ಕಡೆಗೆ?:

ಸುಗತ ಶ್ರೀನಿವಾಸರಾಜು ಮೈಸೂರು ಪ್ರಿಂಟರ್ಸ್ ಪ್ರೈ. ಲಿ., ಸೇರಿಕೊಳ್ಳಲಿದ್ದಾರೆ ಎಂಬ ಗಾಳಿಸುದ್ದಿಯೊಂದು ಕೆಲವು ತಿಂಗಳ ಹಿಂದಿನಿಂದಲೇ ಪತ್ರಿಕೋದ್ಯಮದ ಸರ್ಕಲ್ನಲ್ಲಿ ಓಡಾಡುತ್ತಿದೆ. ಸಂಸ್ಥೆ ಹೊರತರುತ್ತಿರುವ ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಪ್ರಜಾವಾಣಿ’ ದಿನ ಪತ್ರಿಕೆಗಳಿಗೆ ಸಂಪಾದಕರಾಗುತ್ತಾರೆ ಎಂಬುದು ಈ ಸುದ್ದಿಯ ಹೂರಣ. ಈ ಕುರಿತು ಸುಗತ ಅವರನ್ನೇ ಕೇಳಿದರೆ, “ನಾನು ಅಂತಹ ಯಾವುದೇ ಸಾಧ್ಯತೆಯನ್ನು ಒಪ್ಪಿಕೊಂಡಿಲ್ಲ. ಮಾರ್ಚ್ ತಿಂಗಳು ಕಳೆಯುವವರೆಗೂ ಈ ಕುರಿತು ಮಾತುಕತೆ ನಡೆಸದಿರಲು ತೀರ್ಮಾನಿದ್ದೇನೆ,” ಎಂದರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳಿಗೆ ಮಾಲೀಕರೇ ಸಂಪಾದಕರಾಗಿರುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. ಅವರ ನಂತರದ ಸ್ಥಾನದಲ್ಲಿ ಸಹಾಯಕ ಸಂಪಾದಕರನ್ನು ಎರಡೂ ಪತ್ರಿಕೆಗಳಿಗೆ ಪ್ರತ್ಯೇಕವಾಗಿ ನೇಮಿಸಲಾಗಿದೆ. ಸುಗತ ಅವರ ಆಗಮನದ ಸಾಧ್ಯತೆಗಳಿಲ್ಲ ಎಂದು ಸಂಸ್ಥೆಯ ಮೂಲಗಳು ‘ಸಮಾಚಾರ’ಕ್ಕೆ ಮಾಹಿತಿ ನೀಡಿವೆ.

ಒಟ್ಟಿನಲ್ಲಿ, ಸುಗತ ಅತ್ಯಲ್ಪ ಅವಧಿಯಲ್ಲಿಯೇ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಮಾಧ್ಯಮ ಸಂಸ್ಥೆಯಿಂದ ಹೊರಬರುತ್ತಿದ್ದಾರೆ. ಅವರೇ ನೀಡುರುವ ಮಾಹಿತಿ ಪ್ರಕಾರ, ಸುಗತ ಮುಂದಿನ ನಡೆ ಏನು ಎಂಬುದು ತಿಳಿಯಲು ಇನ್ನೂ ಮೂರು ತಿಂಗಳು ಕಾಯಬೇಕಿದೆ.

ಸದ್ಯ ಈಟಿವಿಯಿಂದ ಹೊರಗೆ ಬಂದಿರುವ ರಂಗನಾಥ್ ಭಾರಧ್ವಜ್ ಕೂಡ ಸುವರ್ಣ ವಾಹಿನಿಗೆ ಮರಳುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಸೋಮವಾರ ವಾಹಿನಿಯ ಒಳಗೆ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚೆ ನಡೆದಿದ್ದು ಅಂತಹ ಯಾವುದೇ ಸಾಧ್ಯತೆ ಇಲ್ಲ ಎಂದು ಮೂಲಗಳು ಹೇಳಿವೆ. ಇದೇ ವೇಳೆ, ಕನ್ನಡ ಪ್ರಭಕ್ಕೂ ಹೊಸ ಸಂಪಾದಕರು ಬರುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಹೊಸ ವರ್ಷದ ವೇಳೆಗೆ, ಸುವರ್ಣ ಮತ್ತು ಕನ್ನಡ ಪ್ರಭದೊಳಗೆ ಒಂದಷ್ಟು ಬದಲಾವಣೆಗಳಂತೂ ಬರುವ ಸಾಧ್ಯತೆ ನಿಚ್ಚಳವಾಗಿದೆ.

Leave a comment

Top