An unconventional News Portal.

ಸುದ್ದಿ ಮಾಡುವವರೇ ಸುದ್ದಿಯಾದ ಕತೆ: ‘ಆಂದೋಲನ’ ಮಾಡಲು ಹೋಗಿ ಮೈಮೇಲೆ ಎಳೆದುಕೊಂಡವರ ವ್ಯಥೆ!

ಸುದ್ದಿ ಮಾಡುವವರೇ ಸುದ್ದಿಯಾದ ಕತೆ: ‘ಆಂದೋಲನ’ ಮಾಡಲು ಹೋಗಿ ಮೈಮೇಲೆ ಎಳೆದುಕೊಂಡವರ ವ್ಯಥೆ!

ಸುದ್ದಿ ಮಾಡುವವರೇ ಸುದ್ದಿಕೇಂದ್ರಕ್ಕೆ ಬಂದ ವಿಚಿತ್ರ ಪ್ರಕರಣವಿದು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸ್ಥಳೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಪತ್ರಿಕೆ ‘ಸುದ್ದಿ ಬಿಡುಗಡೆ’ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಪತ್ರಿಕೆ ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವ ಭರಾಟೆಯಲ್ಲಿ, ಪರ- ವಿರೋಧದ ಮಧ್ಯದಲ್ಲಿ ಸಿಲುಕಿಕೊಂಡಿದೆ. ಸಾರ್ವಜನಿಕರಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಗುರಿಯಾಗಿದೆ.

ಏನಿದು ಘಟನೆ?:

ಸುದ್ದಿ ಬಿಡುಗಡೆ ಪತ್ರಿಕೆ ವರದಿ.

ಸುದ್ದಿ ಬಿಡುಗಡೆ ಪತ್ರಿಕೆ ವರದಿ.

ದಕ್ಷಿಣ ಕನ್ನಡದಾದ್ಯಂತ ಬಂದ್ ನಡೆಯುವುದು ಸಾಮಾನ್ಯ ಎಂಬ ಪರಿಸ್ಥಿತಿ ಇದೆ. ಸಂವಿಧಾನ ಕೊಡಮಾಡಿರುವ ಪ್ರತಿಭಟಿಸುವ ಹಕ್ಕನ್ನು ಇಲ್ಲಿನ ಜನ ವಿಪರೀಪವಾಗಿ ಬಳಸಿಕೊಳ್ಳಲು ಹೋಗಿ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ವಾದಗಳಿವೆ. ಇದನ್ನು ಕೈಗೆತ್ತಿಕೊಂಡು ‘ಸುದ್ದಿ ಬಿಡುಗಡೆ’ ಸ್ಥಳೀಯ ಮಟ್ಟದಲ್ಲಿ ‘ಬಲತ್ಕಾರದ ಬಂದ್ ವಿರುದ್ಧ ಆಂದೋಲನ’ ಎಂಬ ಹೆಸರಿನಲ್ಲಿ ಕ್ಯಾಂಪೇನ್ ಜರ್ನಲಿಸಂ ಮಾಡಲು ಮುಂದಾಯಿತು. ನಾಲ್ಕೈದು ತಿಂಗಳ ಹಿಂದೆ, ಪತ್ರಿಕೆ ಹೀಗೊಂದು ಆಂದೋಲನ ಆರಂಭಿಸಿದಾಗ ಎಲ್ಲವೂ ಸಹಜ ಸ್ಥಿತಿಯಲ್ಲಿಯೇ ಇತ್ತು.

ಆದರೆ, ನೇತ್ರಾವತಿ ಯೋಜನೆ ವಿರುದ್ಧ ದಕ್ಷಿಣ ಕನ್ನಡದಲ್ಲಿ ಕಾವು ಜೋರಾಯಿತು. ಯೋಜನೆಗೆ ವಿರೋಧ ವ್ಯಕ್ತಪಡಿಸಿ, ಸಂಘಟನೆಗಳು ಬಂದ್ ಕರೆ ನೀಡಿದವು. ಇದೇ ಸಮಯದಲ್ಲಿ ‘ಸುದ್ದಿ ಬಿಡುಗಡೆ’ ಬಲತ್ಕಾರದ ಬಂದ್ ವಿರೋಧಿ ಆಂದೋಲನ ಶುರು ಮಾಡಿತ್ತು. ಇದು ಒಂದು ಆಯಾಮದಲ್ಲಿ ಪತ್ರಿಕೆ ನೇತ್ರಾವತಿ ಯೋಜನೆ ಪರವಾಗಿದೆ ಎಂಬ ಅಭಿಪ್ರಾಯ ಮೂಡಿಸುವ ಕೆಲಸ ಮಾಡಿತು. ಆಂದೋಲನಕ್ಕೆ ಅಡ್ಡಿ ಪಡಿಸುವ ಪ್ರಯತ್ನಗಳೂ ನಡೆದವು.

ಜಾಲತಾಣಗಳ ಕೊಡುಗೆ:

‘ಸುದ್ದಿ ಬಿಡುಗಡೆ’ ಆರಂಭಿಸಿದ ಆಂದೋಲನದ ವಿರುದ್ಧ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ವಾಟ್ಸಾಪ್ಗಳಲ್ಲಿ ಸಂದೇಶಗಳು ಹರಿದಾಡತೊಡಗಿದವು. ನೇತ್ರಾವತಿ ಯೋಜನೆ ಹಿನ್ನೆಲೆಯಲ್ಲಿ ಪತ್ರಿಕೆಯ ಬಂದ್ ವಿರೋಧಿ ಮನಸ್ಥಿತಿಯ ಕುರಿತು ಟೀಕೆಗಳು ಶುರುವಾದವು. ಒಂದು ಹಂತದಲ್ಲಿ ಈ ಚಟುವಟಿಕೆಗಳನ್ನು ಪತ್ರಿಕೆ ತನ್ನ ವಿರುದ್ಧ ನಡೆಯುತ್ತಿರುವ ಪಿತೂರಿ ಎಂದು ಗ್ರಹಿಸಿತು. ತನ್ನ ಸಂಪಾದಕೀಯ ಪುಟದಲ್ಲಿ ಪತ್ರಿಕೆ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ನಿರಂತರವಾಗಿ ಬರಹಗಳನ್ನು ಪ್ರಕಟಿಸಲು ಶುರುಮಾಡಿತು. ಇಂತವರೇ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ವೈಯುಕ್ತಿಕ ಮಟ್ಟಕ್ಕೆ ಇಳಿಯಿತು.

ಅತ್ತ ಸಾಮಾಜಿಕ ಜಾಲತಾಣಗಳಲ್ಲಿ ‘ಸುದ್ದಿ ಬಿಡುಗಡೆ’ ವಿರುದ್ಧ ಟೀಕೆಗಳು ಜೋರಾಗಿಯೇ ನಡೆಯತೊಡಗಿದವು. ‘ಬಲತ್ಕಾರದ ಬಂದ್’ ವಿರುದ್ಧ ಆಂದೋಲನ ಮಾಡಲು ಹೊರಟವರು, ಈಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬೀದಿಗಿಳಿಯಬೇಕಾದ ಪರಿಸ್ಥಿತಿಯನ್ನು ನಿರ್ಮಿಸಿತು.

ಬೀದಿಯಲ್ಲಿ ರಂಪಾಟ:

ಪ್ರತಿಭಟನೆ ಕುರಿತು 'ಕರಾವಳಿ ಅಲೆ' ವರದಿ.

ಪ್ರತಿಭಟನೆ ಕುರಿತು ‘ಕರಾವಳಿ ಅಲೆ’ ವರದಿ.

ಮೊನ್ನೆ, ಶನಿವಾರ ‘ಸುದ್ದಿ ಬಿಡುಗಡೆ’ ಪತ್ರಿಕೆ ಸಿಬ್ಬಂದಿ ‘ಯುವ ಭಾರತ್’ ಎಂಬ ವಾಟ್ಸಾಪ್ ಗುಂಪು ನಡೆಸುತ್ತಿರುವವರ ಬಳಿ ತಮ್ಮ ವಿರುದ್ಧ ಅಪಪ್ರಚಾರ ನಡೆಸದಂತೆ ಕೇಳಲು ಮುಂದಾದರು. ಈ ಸಮಯದಲ್ಲಿ ಎರಡೂ ಬಣಗಳ ನಡುವೆ ಸಂಘರ್ಷ ನಡೆಯಿತು. “ಈ ವಿಚಾರದಲ್ಲಿ ಇತ್ತಂಡಗಳ ನಡುವೆ ಹೊಯೈ ಹಂತಕ್ಕೆ ತಲುಪಿತು. ಪುತ್ತೂರಿನ ಪತ್ರಿಕಾ ಭವನದ ಮುಂದೆ 100ಕ್ಕೂ ಹೆಚ್ಚು ಪತ್ರಿಕಾ ಸಿಬ್ಬಂದಿ ಜಮಾಯಿಸಿ ಯುವ ಭಾರತ್ ಸದಸ್ಯರನ್ನು ತೀವ್ರ ತರಾಟೆಗೆತ್ತಿಕೊಂಡರು. ಬೊಬ್ಬೆ ಕೇಳಿ 500ಕ್ಕೂ ಹೆಚ್ಚು ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದರು,’’ ಎಂದು ಮೇ. 16ರ ‘ಕರಾವಳಿ ಅಲೆ’ ಸುದ್ದಿ ಮಾಡಿತು.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆಗೆ ‘ಸುದ್ದಿ ಬಿಡುಗಡೆ’ ಸಂಪಾದಕರು ಲಭ್ಯರಾಗಲಿಲ್ಲ.

Top