An unconventional News Portal.

ಪಾಕಿಸ್ತಾನದ ಪಾಲಿನ ‘ಕಾಶ್ಮೀರ’: ಆಝಾದಿ ಘೋಷಣೆ ಮೊಳಗಿಸುತ್ತಿರುವ ಬಲೂಚಿಸ್ತಾನ ನಿಜಕ್ಕೂ ಏನು?

ಪಾಕಿಸ್ತಾನದ ಪಾಲಿನ ‘ಕಾಶ್ಮೀರ’: ಆಝಾದಿ ಘೋಷಣೆ ಮೊಳಗಿಸುತ್ತಿರುವ ಬಲೂಚಿಸ್ತಾನ ನಿಜಕ್ಕೂ ಏನು?

ಭಾರತಕ್ಕೆ ಕಾಶ್ಮೀರದ ತಲೆನೋವಾದರೆ ಪಾಕಿಸ್ತಾನಕ್ಕೆ ಬಲೂಚಿಸ್ತಾನದ ಚಿಂತೆ.

ಸದ್ಯದ ಪರಿಸ್ಥಿತಿಯಲ್ಲಿ ಕಾಶ್ಮೀರ ಮತ್ತು ಬಲೂಚಿಸ್ತಾನ ಒಂದೇ ನಾಣ್ಯದ ಎರಡು ಮುಖಗಳಂತೆ ಕಾಣಿಸುತ್ತವೆ. ಬಲೂಚಿಸ್ತಾನದ ಬಂಡುಕೋರರು, ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂಬ ಭಾರತದ ಮೇಲಿನ ಆಪಾದನೆಗಳು, ಹಿಂಸಾಚಾರ, ರಕ್ತಪಾತ ಹೀಗೆ ಇಲ್ಲಿನ ಕೊರಕಲು ಬೆಟ್ಟ, ಗುಡ್ಡಗಳಲ್ಲಿ ಹುದುಗಿರುವ ಕತೆಗಳು ನೂರಾರು. ಎಲ್ಲಾ ದೇಶಗಳ ಆಂತರಿಕ ಸಂಘರ್ಷಗಳಂತೆ ಇಲ್ಲೂ ಬಲಿಯಾಗುತ್ತಿರುವವರು ಸಾಮಾನ್ಯ ಜನ. ಅವರ ನೋವು ನರಳಾಟಗಳಿಗೆ ಮಾತ್ರ ಬೆಲೆಯೇ ಇಲ್ಲ.

ಇವುಗಳ ಜತೆಗೆ, ಬಲೂಚಿಸ್ತಾನ ಮತ್ತು ಅದು ಸಾಗಿ ಬಂದ ಹಾದಿ, ಸಾಗಲಿರುವ ಹಾದಿಯ ಕುರಿತಾದ ವಿಸ್ತೃತ ಲೇಖನವಿದು.

ಇದು ಬಲೂಚಿಸ್ತಾನ: 

balochistan mapಬಲೂಚಿಸ್ತಾನ್ ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳಲ್ಲೇ ಅತೀ ದೊಡ್ಡದು. ವಿಸ್ತೀರ್ಣದಲ್ಲಿ ಭಾರತದ ಅತೀ ದೊಡ್ಡ ರಾಜ್ಯ ರಾಜಸ್ತಾನದಷ್ಟಿದೆ. ಆದರೆ ಜನಸಂಖ್ಯೆ ಕೇವಲ 1 ಕೋಟಿ 31 ಲಕ್ಷ. ಬಂಡುಕೋರರು ಪ್ರತಿಪಾದಿಸುವ ಬಲೂಚಿಸ್ತಾನ ಮಾತ್ರ ಪಕ್ಕದ ಅಫ್ಘಾನಿಸ್ತಾನ ಮತ್ತು ಇರಾನಿನ ಮ್ಯಾಪಿನೊಳಗೆಯೂ ಹರಡಿಕೊಂಡಿದೆ. ಬಲೂಚಿನ ಹೆಚ್ಚಿನ ಭಾಗ ಗುಡ್ಡಗಾಡು ಪ್ರದೇಶ. ಮತ್ತೊಂದಷ್ಟು ನೆಲ ಬರಡು ಭೂಮಿ. ತಾಳೆ ಮರಗಳು ಬಿಟ್ಟರೆ ಬೇರೆ ಕೃಷಿ ಕಾಣಸಿಗುವುದು ಅಪರೂಪ. ಗ್ವಾಡರ್ ಅಂತರಾಷ್ಟ್ರೀಯ ಬಂದರು ಇಲ್ಲಿದ್ದರೂ ಅದು ವಿದೇಶಿಯರ ಸ್ವತ್ತು; ಸ್ಥಳೀಯರಿಗೆ ಉಪಯೋಗಕ್ಕೆ ಬಂದಿದ್ದು ಕಡಿಮೆ. ರಾಜಧಾನಿ ಕ್ವೆಟ್ಟಾ ಬಿಟ್ಟರೆ ಉಳಿದೆಡೆ ಅಭಿವೃದ್ಧಿ ಹುಡುಕಲು ದುರ್ಬೀನು ಹಿಡಿಯಬೇಕು.

ಇಲ್ಲಿನ ನೆಲದಲ್ಲಿ ಹೇರಳ ಖನಿಜಗಳು ಮತ್ತು ತೈಲೋತ್ಪನ್ನಗಳ ಸಂಪತ್ತಿದೆ. ಕಬ್ಬಿಣ, ತಾಮ್ರ, ಕ್ರೋಮೈಟ್, ಸಲ್ಫರ್, ಫ್ಲೋರೈಡ್, ಚಿನ್ನ ಹಾಗೂ ವಜ್ರದ ನಿಕ್ಷೇಪಗಳು, ನೈಸರ್ಗಿಕ ಅನಿಲ, ಕಚ್ಛಾ ತೈಲ ಈ ನೆಲದಲ್ಲಿ ಸಮೃದ್ಧವಾಗಿದೆ. ಇಲ್ಲಿನ ನೆಲ ಬಗೆದು ದೋಚಿ, ಇಸ್ಲಾಮಾಬಾದಿನಲ್ಲಿ ಸುಪ್ಪತ್ತಿಗೆಯ ಮೇಲೆ ಮಲಗುತ್ತಾರೆ ಎಂಬ ಅಭಿಪ್ರಾಯ ಇಲ್ಲಿನ ಜನರಲ್ಲಿದೆ; ಅಥವಾ ಹುಟ್ಟು ಹಾಕಲಾಗಿದೆ. ಅವರ ಅಭಿಪ್ರಾಯಕ್ಕೆ ಪೂರಕವಾಗಿ, ಆರೋಗ್ಯ, ಶಿಕ್ಷಣ, ಜೀವನ ಮಟ್ಟ ಈ ಎಲ್ಲಾ ಕ್ಷೇತ್ರಗಳಲ್ಲೂ ಬಲೂಚಿಸ್ತಾನ ಪಾಕಿಸ್ತಾನದ ಉಳಿದೆಡೆಗಳಿಂದ ಹಿಂದುಳಿದಿದೆ. ಇದಕ್ಕೆ ಸರಕಾರವೇ ಕಾರಣ ಎಂಬುದು ಜನರ ಆರೋಪ. ಹಾಗಂತ ಪಾಕಿಸ್ತಾನ ನೀಡಿದ ನೆರವನ್ನೂ ಇಲ್ಲಿನ ಜನ ತಿರಸ್ಕರಿಸಿದ್ದಾರೆ. “ನಿಮ್ಮ ಉಸಾಬರಿಯೇ ನಮಗೆ ಬೇಡ. ನಮ್ಮ ಆಳ್ವಿಕೆ ನಾವೇ ಮಾಡಿಕೊಳ್ಳುತ್ತೇವೆ, ನಮಗೆ ‘ಆಝಾದಿ’ (ಸ್ವಾತಂತ್ರ್ಯ) ಕೊಡಿ,” ಎಂದು ಅಲ್ಲಿನ ಜನ ‘ಆಝಾದಿ’, ‘ಪಾಕಿಸ್ತಾನ ಮುರ್ದಾಬಾದ್’ ಮುಂತಾದ ಘೋಷಣೆಗಳನ್ನು ನಿರಂತರ ಕೂಗಿಕೊಂಡು ಬರುತ್ತಿದ್ದಾರೆ.

ಪಾಕ್ ಪಾಕಿನ ‘ಪಿಓಕೆ’!:

ರಕ್ತಪಾತ ನಡೆಸಿಯಾದರೂ ಸರಿ ಸ್ವಾತಂತ್ರ್ಯ ಧಕ್ಕಿಸಿಕೊಡಬೇಕು ಎಂದು ಒಂದಷ್ಟು ಬಂಡುಕೋರರ ಗುಂಪುಗಳು ಬಲೂಚಿಸ್ತಾನದಲ್ಲಿ ಹುಟ್ಟಿಕೊಂಡಿವೆ. ಅವುಗಳಲ್ಲಿ ‘ಬಲೂಚಿಸ್ತಾನ ಲಿಬರೇಷನ್ ಆರ್ಮಿ’, ‘ಲಷ್ಕರ್-ಇ-ಬಲೂಚಿಸ್ತಾನ್’, ‘ಬಲೂಚ್ ಲಿಬರೇಷನ್ ಯುನೈಟೆಡ್ ಫ್ರಂಟ್’ ಪ್ರಮುಖವಾದವು. ಸದ್ಯ ಈ ವಿಚಾರವನ್ನು ಪಕ್ಕಕ್ಕಿಡೋಣ.

ಶಸ್ತ್ರ ಸಜ್ಜಿತ ಹೋರಾಟಗಳಾಚೆಗೆ ಕಾಶ್ಮೀರದ ಜನರಂತೆ ಬೀದಿಗೆ ಬರುವುದು, ಪಾಕಿಸ್ತಾನ ಸರಕಾರದ ಸ್ವತ್ತುಗಳು, ಪೊಲೀಸರ ಮೇಲೆ ಕಲ್ಲು ತೂರಿ ಆಕ್ರೋಶ ಹೊರ ಹಾಕುವುದನ್ನು ಇಲ್ಲಿನ ಜನ ಮಾಡುತ್ತಲೇ ಬಂದಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ ಮತ್ತದೇ ರಾಜಕಾರಣ.

ವಿವಾದದ ಮೂಲ:

ಬಲೂಚಿಸ್ತಾನದಲ್ಲಿ ಇಂಥಹದ್ದೊಂದು ಪರಿಸ್ಥಿತಿ ಸೃಷ್ಟಿಯಾಗಲು ಸಣ್ಣ ಹಿನ್ನಲೆಯೊಂದಿದೆ. ಅದು ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಬಂದ ಕಾಲಕ್ಕೆ ಸೇರಿದ್ದು. ಬ್ರಿಟೀಷರು ಭಾರತ ಮತ್ತು ಪಾಕಿಸ್ತಾನ ಎರಡನ್ನೂ ಬಿಟ್ಟು ಹೊರ ನಡೆದಾಗ ರಾಜರಿಗೆ ಎರಡರಲ್ಲೊಂದು ದೇಶ ಸೇರುವ ಅವಕಾಶ ನೀಡಿದ್ದರು. ಹೀಗೆ ಎಲ್ಲಾ ರಾಜರೂ ಸರಕಾರಗಳೊಂದಿಗೆ ಒಪ್ಪಂದ ಮಾಡಿಕೊಂಡು ತಮ್ಮ ರಾಜ್ಯಗಳನ್ನು ವಿಲೀನ ಪ್ರಕ್ರಿಯೆಗೆ ಒಳಪಡಿಸಿದರೂ, ಬಲೂಚಿಸ್ತಾನದ ‘ಖಲಾತ್’ ಭಾಗ ಭಾರತಕ್ಕೂ ಸೇರಲಿಲ್ಲ; ಪಾಕಿಸ್ತಾನದೊಂದಿಗೂ ಉಳಿಯಲಿಲ್ಲ. ಅವತ್ತಿಗೆ, ಬಲೂಚಿಸ್ತಾನದಲ್ಲಿ ಝಂಡಾ (ಬಾವುಟ) ಊರಿದ್ದ ರಾಜನ ಹೆಸರು ಮಿರ್ ಅಹಮ್ಮದ್ ಯಾರ್ ಖಾನ್. ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಬಂದು 9 ತಿಂಗಳ ನಂತರ, ಅಂದರೆ ಮಾರ್ಚ್ 1948ರಲ್ಲಿ ಆತ ಸ್ವಾಯತ್ತ ಸ್ಥಾನಮಾನದ ಬೇಡಿಕೆಯೊಂದಿಗೆ ಪಾಕಿಸ್ತಾನ ಒಕ್ಕೂಟದೊಂದಿಗೆ ವಿಲೀನವಾದ. ಇಲ್ಲಿ ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನಗಳನ್ನು ನೆನಪಿಸಿಕೊಳ್ಳಬಹುದು.

ಆದರೆ, “ನಮ್ಮ ತಂದೆಯಿಂದ ಬಲವಂತವಾಗಿ ಒಪ್ಪಂದಕ್ಕೆ ಸಹಿ ಹಾಕಿಸಲಾಯಿತು,” ಎನ್ನುತ್ತಾರೆ ಅವರ ಮಗ ಮಿರ್ ಮುಹ್ಯಿದ್ದೀನ್. ಸೇನೆಯ ಬಲವಂತದಿಂದ ಇದೆಲ್ಲಾ ನಡೆಯಿತು ಎಂಬ ಆಪಾದನೆಗಳನ್ನು ಅಲ್ಲಿನ ಸ್ಥಳೀಯ ರಾಜಕಾರಣಿಗಳೂ ಮಾಡುತ್ತಾರೆ. ಮಾತ್ರವಲ್ಲ ಜನರ ತಲೆಯಲ್ಲಿಯೂ ತುಂಬಿದ್ದಾರೆ.

ಒಪ್ಪಂದ ವಿವಾದ ಮತ್ತು ‘ಹಿಂದುಳಿದ ಪ್ರದೇಶ’ಗಳಾಚೆಗೆ, ನಾವು ಸ್ವತಂತ್ರವಾಗಿ ಬದುಕುತ್ತೇವೆ ಎನ್ನಲು ಇಲ್ಲಿನ ಜನ ಮತ್ತೊಂದು ಕಾರಣವನ್ನೂ ಮುಂದಿಡುತ್ತಾರೆ. ಅದು ಇಲ್ಲಿನ ಜನರ ಮೂಲಕ್ಕೆ ಸಂಬಂಧಿಸಿದ್ದು. ಇಲ್ಲಿನ ಹೆಚ್ಚಿನ ಜನ ಕ್ರಿಶ್ಚಿಯನ್ ದೊರೆಗಳ ಆಕ್ರಮಣದ ಸಂದರ್ಭ ಇರಾಕ್, ಸಿರಿಯಾ, ಇರಾನ್ ಆಸುಪಾಸಿನ ಪ್ರದೇಶಗಳಿಂದ ಬಲೂಚಿಸ್ತಾನಕ್ಕೆ ವಲಸೆ ಬಂದವರು ಎನ್ನುತ್ತದೆ ಇತಿಹಾಸ. “ನಾವು ಯಾಕೆ ಪಾಕಿಸ್ತಾನಕ್ಕೆ ಸೇರಬೇಕು? ಇಲ್ಲಿ ಪಾಕಿಸ್ತಾನಿಗಳೇ ಇಲ್ಲ. ಇಲ್ಲಿರುವ ಹೆಚ್ಚಿನವರು ಬಲೂಚಿಗಾಳಾದರೆ, ಉಳಿದವರ ಪಷ್ತೂ, ಪಂಜಾಬಿ, ಸಿಂಧಿಗಳು. ಹೀಗಿರುವಾಗ ನಾವು ಪಾಕಿಸ್ತಾನಿಯರಾಗಲು ಹೇಗೆ ಸಾಧ್ಯ?” ಎಂಬ ಪ್ರಶ್ನೆಯನ್ನು ಬಂಡುಕೋರರು ಎತ್ತುತ್ತಲೇ ಬಂದಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರು!: 

ಈ ಬಂಡುಕೋರರು ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಬಂದ ದಿನದಿಂದಲೇ ಹುಟ್ಟಿಕೊಂಡಿದ್ದಾರೆ. “ಬಲೂಚಿಸ್ತಾನ ಪ್ರತ್ಯೇಕ ರಾಷ್ಟ್ರವಾಗಬೇಕು. ಇಲ್ಲಿನ ನೈಸರ್ಗಿಕ ಸಂಪತ್ತಿನ ಲಾಭವನ್ನು ಸ್ಥಳೀಯರು ಪಡೆಯುವಂತಾಗಬೇಕು,” ಎಂಬ ಸ್ವಾತಂತ್ರ್ಯದ ಘೋಷಣೆಗಳೊಂದಿಗೆ ಈ ಹೋರಾಟ ಆರಂಭವಾಗಿದೆ.

ಬಲೂಚಿಸ್ತಾನ ಪ್ರಾಂತ್ಯದ ಬಂಡುಕೋರರು ಉಳಿದೆಡೆಗಳ ಬಂಡುಕೋರರಂತಲ್ಲ. ಇಲ್ಲಿನ ಪ್ರಮುಖ ಬಂಡುಕೋರ ಸಂಘಟನೆಗಳಾಚೆಗೆ ಒಟ್ಟು ಎಂಟು ಮುಖ್ಯ ಬುಡಕಟ್ಟು ಜನಾಂಗಗಳಿಗೆ ಪ್ರತ್ಯೇಕ ನಾಯಕರಿದ್ದಾರೆ. ‘ಖಾನ್’ ಎಂದು ಕರೆಸಿಕೊಳ್ಳುವ ಇವರು ಪ್ರತಿ ಬುಡಕಟ್ಟುಗಳಲ್ಲೂ ಪ್ರತ್ಯೇಕ ಬಂಡುಕೋರರ ಪಡೆಯನ್ನು ಮುನ್ನಡೆಸುತ್ತಾರೆ. ಈ ಎಲ್ಲಾ ಬಂಡುಕೋರರ ಆಶಯಗಳು ಹೆಚ್ಚು ಕಡಿಮೆ ಒಂದೇ ಆಗಿದ್ದಾರೂ, ಇವರೆಂದೂ ಒಟ್ಟಾಗಿ, ಒಂದೇ ನಾಯಕತ್ವ, ಒಬ್ಬರ ನೇತೃತ್ವದಲ್ಲಿ ಹೋರಾಟ ಮಾಡುವುದಿಲ್ಲ. ಇದಕ್ಕವರು ‘ಎಲ್.ಟಿ.ಟಿ.ಇ’ಯ ಅಧಃಪತನವನ್ನು ಉದಾಹರಣೆ ನೀಡುತ್ತಾರೆ. “ಒಂದೇ ನಾಯಕತ್ವ, ಒಟ್ಟಾಗಿದ್ದರೆ ಸರಕಾರಗಳಿಗೆ ಹೊಸಕಿ ಹಾಕುವುದು ಸುಲಭ. ಅದಕ್ಕಾಗಿ ನಾವು ಪ್ರತ್ಯೇಕವಾಗಿ ಹೋರಾಡುತ್ತೇವೆ,” ಎನ್ನುವುದು ಇವರ ಸಂಘರ್ಷದ ಸೂತ್ರಗಳಲ್ಲಿ ಒಂದು.

ಸೇನೆಯ ಮೇಲೆ ಈ ಬಂಡುಕೋರರಿಗೆ ಅತೀವ ಕೋಪವಿದೆ; ನಮ್ಮ ಕಾಶ್ಮೀರದವರಂತೆ. “ಅಮಾಯಕ ಮಹಿಳೆ ಮತ್ತು ಮಕ್ಕಳನ್ನು ಸೇನೆ ಕೊಂದು ಹಾಕುತ್ತಿದ್ದರೆ, ನಾವು ಕೈಕಟ್ಟಿ ಕೂರುವುದು ಹೇಗೆ? ನಾವು ಪ್ರತೀಕಾರ ತೆಗೆದೇ ತೆಗೆದುಕೊಳ್ಳುತ್ತೇವೆ,” ಎಂದು ಬಂಡುಕೋರರು ಉಗ್ರ ಭಾಷಣ ಬಿಗಿಯುತ್ತಾರೆ. ಸೇನೆಯ ದೌರ್ಜನ್ಯ ನಿಲ್ಲದೇ ಬಲೂಚಿಸ್ತಾನದ ಗುಡ್ಡಗಾಡುಗಳಲ್ಲಿ ಶಾಂತಿ ಎನ್ನುವುದು ಮರೀಚಿಕೆ ಎಂಬುದು ಇವರ ವಾದ.

ಸತ್ತ ಹೆಣ ಹೂಳಲು ಸಾಮೂಹಿಕ ಗುಂಡಿ ತೋಡುತ್ತಿರುವುದು

ಸತ್ತ ಹೆಣ ಹೂಳಲು ಸಾಮೂಹಿಕ ಗುಂಡಿ ತೋಡುತ್ತಿರುವುದು

ಈ ಬಂಡುಕೋರರ ಮೇಲೆ ಆಗಾಗ ಇಲ್ಲಿನ ಸೇನೆ ಮುಗಿಬೀಳುತ್ತಿರುತ್ತದೆ. ಇವರೂ ಆಗಾಗ ಬಾಂಬ್ ಸ್ಪೋಟಿಸುತ್ತಾ ತಮ್ಮ ಅಸ್ತಿತ್ವ ಕಾಯ್ದಿರಿಸಿ ಕೊಳ್ಳುತ್ತಿರುತ್ತಾರೆ. ಹಾಗೆ ಸೇನೆ ಮತ್ತು ಬಂಡುಕೋರರು ತಮ್ಮ ಪ್ರತಾಪ ತೋರಿಸಿದಾಗೆಲ್ಲಾ ರಕ್ತ ಹರಿದಿದೆ. ಸಾಮಾನ್ಯ ಜನ ಹುಳುಗಳಂತೆ ಹೆಣವಾಗಿದ್ದಾರೆ. ಸತ್ತವರಿಗಾಗಿ ಸಾಮೂಹಿಕ ಕುಣಿ ತೋಡುವ ಇಲ್ಲಿನ ದೃಶ್ಯಗಳು ಮನ ಕಲಕುತ್ತವೆ. ಬಂಡುಕೋರರನ್ನು ಹೊಡೆದು ಹಾಕುವ ಯತ್ನದಲ್ಲಿ ಬೀದಿ ಹೆಣವಾದ, ವಶಕ್ಕೆ ಪಡೆದು ನಾಪತ್ತೆಯಾದ ಬಲೂಚಿ ಯುವಕರಿಗೆ ಲೆಕ್ಕವೇ ಇಲ್ಲ. ಹೀಗೆ ಸೇನೆ ಮತ್ತು ಬಂಡುಕೋರರ ಆಕ್ರಮಣದಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತಿರುವುದರ ವಿರುದ್ಧ ಹಲವು ಅಂತರಾಷ್ಟ್ರೀಯ ಸಂಸ್ಥೆಗಳು ಧ್ವನಿ ಎತ್ತಿವೆ. ಪ್ರಮುಖವಾಗಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಲ್ಲಿಯೂ ಮಾನವ ಹಕ್ಕುಗಳ ದಮನದ ವರದಿಗಳನ್ನು ಹೊರತಂದಿದೆ. ಇವತ್ತು ಭಾರತದ ಪ್ರಧಾನಿ ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಕಡೆಯಿಂದ ಮಾನವ ಹಕ್ಕುಗಳ ದಮನ ನಡೆಯುತ್ತಿದೆ ಎಂಬ ಹೇಳಿಕೆ ಹಿಂದಿರುವುದು ಆಮ್ನೆಸ್ಟಿಯ ತಳಮಟ್ಟದ ವರದಿಗಳ ಆಧಾರ ಎಂಬುದನ್ನು ಗಮನಿಸಬೇಕಿದೆ.

ಕಾಶ್ಮೀರ ಮಾದರಿ: 

ಇಲ್ಲಿ ಹಿಂದೊಮ್ಮೆ ಶಾಂತಿ ನೆಲೆಸುವ ಸಾಧ್ಯತೆಗಳು ಕಾಣಿಸಿದ್ದವು. ಅಕ್ಬರ್ ಬಖ್ತಿ ಎಂಬ ಮಾಜಿ ಸಚಿವ ಬುಡಕಟ್ಟು ನಾಯಕನ ನೇತೃತ್ವದಲ್ಲಿ ಪರ್ವೇಜ್ ಮುಶ್ರಫ್ ಸರಕಾರವಿದ್ದಾಗ ಮಾತುಕತೆಗಳು ಚಾಲ್ತಿ ಪಡೆದುಕೊಂಡಿದ್ದವು. ಆದರೆ ಮುಶ್ರಫ್ 80ರ ಇಳಿ ವಯಸ್ಸಿನ ಭಖ್ತಿಯನ್ನು ಕೊಲೆ ಮಾಡಿಸಿದರು. ಅವತ್ತು ಬಲೂಚಿಸ್ತಾದ ಪರಿಸ್ಥಿತಿ ನೋಡಬೇಕಾಗಿತ್ತು. ಇಡೀ ಪ್ರಾಂತ್ಯಕ್ಕೆ ಪ್ರಾಂತ್ಯವೇ ಹೊತ್ತಿ ಉರಿಯುತ್ತಿತ್ತು. ಇವತ್ತು ಕಾಶ್ಮೀರದಲ್ಲಿ ನಡೆಯುತ್ತಿರುವಂತೆ ತಿಂಗಳು ಗಟ್ಟಲೆ ನಿರಂತರ ಪ್ರತಿಭಟನೆಗಳು, ಕಲ್ಲು ತೂರಾಟ ನಡೆದಿತ್ತು. ಬಖ್ತಿಯನ್ನು ಮುಗಿಸಿದರೆ ಎಲ್ಲಾ ಪ್ರತ್ಯೇಕತಾವಾದಿ ಹೋರಾಟಗಳೂ ಕೊನೆಯಾಗುತ್ತವೆ ಎಂಬ ಪಾಕ್ ಸರಕಾರದ ನಿರೀಕ್ಷೆ ಸುಳ್ಳಾಗಿತ್ತು.

ಭಾರತದತ್ತ ಆರೋಪ:

ಒಂದೆಡೆ ಇಂಥಹದ್ದೊಂದು ಹೋರಾಟ ಜಾರಿಯಲ್ಲಿದ್ದರೆ, ಬಲೂಚಿಸ್ತಾನದ ಬಗ್ಗೆ ಪಾಕಿಸ್ತಾನದ ರಾಜಕಾರಣಿಗಳು ಮತ್ತು ಸೇನೆ ಮುಂದಿಡುವ ತರ್ಕಗಳೇ ಬೇರೆ. ಅದರಲ್ಲಿ ಸತ್ಯ ಮತ್ತು ಸುಳ್ಳಿನ ವ್ಯವಸ್ಥಿತ ಕಲಬೆರಕೆ ಇದೆ. “ಬಲೂಚಿಸ್ತಾನದ ಅಭಿವೃದ್ಧಿಗೆ ಅಲ್ಲಿನ ಬಂಡುಕೋರರೇ ಅಡ್ಡಿಯಾಗಿದ್ದಾರೆ, ಇಲ್ಲಿನ ಗುಡ್ಡಗಾಡುಗಳಲ್ಲಿ ಇರುವುದು ಬೆರಳೆಣಿಕೆ ಉಗ್ರರಷ್ಟೇ. ಅವರನ್ನೆಲ್ಲಾ ಒದ್ದೋಡಿಸುತ್ತೇವೆ,” ಅಂತ ಮೊಂಡು ವಾದ ಹೂಡುತ್ತದೆ ಅಲ್ಲಿನ ಸೇನೆ. “ಸಾಮಾನ್ಯ ಜನರನ್ನು ಬಂಡುಕೋರರಿಂದ ರಕ್ಷಿಸಲು ನಾವಿಲ್ಲಿ ಹೋರಾಟ ಮಾಡಲೇಬೇಕು. ಅದಕ್ಕಾಗಿ ನಮ್ಮ 200ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದ್ದೇವೆ,” ಎನ್ನುತ್ತದೆ ಪಾಕಿಸ್ತಾನದ ಆರ್ಮಿ.

ಇದು ಒಂದು ಭಾಗವಾದರೆ, ಸೇನೆ ಮತ್ತು ಅಲ್ಲಿನ ಸರಕಾರದ ಆರೋಪಗಳು ಭಾರತದತ್ತ ತಿರುಗುತ್ತವೆ. ಇಲ್ಲಿನ ಬಂಡುಕೋರರಿಗೆ ಭಾರತ ಬೆನ್ನೆಲುಬಾಗಿ ನಿಂತಿದೆ ಎಂಬ ಆರೋಪಗಳನ್ನು ಪಾಕಿಸ್ತಾನ ಸರಕಾರ ಹಿಂದಿನಿಂದಲೂ ಮಾಡುತ್ತಾ ಬಂದಿದೆ. ಹೇಗೆ ನಾವು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಕೈವಾಡವನ್ನು ಕಾಶ್ಮೀರ ವಿಚಾರದಲ್ಲಿ ಪ್ರಸ್ತಾಪಿಸುತ್ತೇವೆಯೋ, ಸರಿ ಸುಮಾರು ಅದೇ ರೀತಿ ರಾ (RAW- ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್) ಪಾತ್ರವನ್ನೂ ಪಾಕಿಸ್ತಾನ ಬಲೂಚಿಸ್ತಾನ ವಿಚಾರದಲ್ಲಿ ಪ್ರಶ್ನಿಸುತ್ತಾ ಬಂದಿದೆ.

ಕುಲಭೂಷಣ್ ಯಾದವ್

ಕುಲಭೂಷಣ್ ಯಾದವ್

ಭಾರತಕ್ಕೂ ಬಲೂಚಿಸ್ತಾನಕ್ಕೂ ನೇರವಾದ ಗಡಿಯಿಲ್ಲ. ಹೀಗಿದ್ದೂ ಭಾರತ ಅಫ್ಘಾನಿಸ್ತಾನ ಮಾರ್ಗವಾಗಿ ಬಲೂಚಿಸ್ತಾನದ ಬಂಡುಕೋರರಿಗೆ ನೆರವು ನೀಡುತ್ತದೆ ಎನ್ನುವುದು ಪಾಕಿಸ್ತಾನದ ವಾದ. 2004ರಲ್ಲಿ ಬಂದರು ನಗರ ಗ್ವಾಡಾರ್ ಬಾಂಬ್ ಸ್ಪೋಟ ಭಾರತ ನಡೆಸಿದ ಕೃತ್ಯ ಎನ್ನುವ ವಾದದಿಂದ ಹಿಡಿದು, ಇತ್ತೀಚೆಗೆ 2016ರ ಮಾರ್ಚ್ ನಲ್ಲಿ ಬಂಧಿಸಿದ ಕುಲಭೂಷಣ್ ಯಾದವ್ ಭಾರತದ ಗೂಢಚರ ಎನ್ನುವವರೆಗೆ ಪಾಕಿಸ್ತಾನ ಹೇಳಿಕೆ ನೀಡುತ್ತದೆ. “ಕುಲಭೂಷಣ್ ಬಲೂಚಿಸ್ತಾನದಲ್ಲಿ ಬಾಂಬ್ ಇಡಲು ಬಂದವ, ಉಗ್ರ ಕೃತ್ಯಗಳಿಗೆ ನೆರವು ನೀಡುತ್ತಿದ್ದ,” ಎಂದು ಪಾಕಿಸ್ತಾನ ಹೇಳಿತ್ತು. ವಿದೇಶದ ಗುಪ್ತಚರ ಏಜೆನ್ಸಿಗಳಿಗೂ ಬಲೂಚಿಸ್ತಾನದಲ್ಲಿ ಭಾರತದ ಕೈವಾಡ ಇದೆ ಎಂಬ ಅನುಮಾನಗಳಿವೆ.

ಬ್ರಿಟನ್, ಬಲೂಚಿಸ್ತಾನದಲ್ಲಿ ಭಾರತದ ಪಾತ್ರವಿದೆ ಎಂಬುದನ್ನು ಬಲವಾಗಿ ನಂಬಿದೆ ಎಂದು ಹಿಂದೊಮ್ಮೆ ವಿಕಿಲೀಕ್ಸ್ ಬಿಡುಗಡೆ ಮಾಡಿದ ದಾಖಲೆಗಳಲ್ಲಿ ಪ್ರಸ್ತಾಪವಾಗಿತ್ತು.

ಪಾಕಿಸ್ತಾನ ತನ್ನ ಆರೋಪಗಳಿಗೆ ಬಲೂಚಿಸ್ತಾನದಲ್ಲಿ ಭಾರತ ಪರ ಕೂಗುವ ಘೋಷಣೆಗಳು, ಧ್ವಜಗಳ ಪ್ರದರ್ಶನವನ್ನೂ ಆಧಾರವಾಗಿ ನೀಡುತ್ತದೆ. ಆದರೆ ಭಾರತ ನಮಗೆ ಯಾವ ನೆರವು ನೀಡುತ್ತಿಲ್ಲ. ನೆರವು ನೀಡಿದರೆ ಸ್ವೀಕರಿಸುತ್ತೇವೆ ಎನ್ನುವ ಮಾತುಗಳನ್ನು ಇಲ್ಲಿನ ಬಂಡುಕೋರರು ದಶಕಗಳಿಂದ ಆಡುತ್ತಲೇ ಬಂದಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ ಮೋದಿ ಬಲೂಚಿಸ್ತಾನವನ್ನು ಎಳೆದು ತಂದಿದ್ದರು. ಅದರ ಮುಂದುವರಿದ ಭಾಗವಾಗಿ, ಬಲೂಚಿಸ್ತಾನದ ಸುತ್ತ ಅಂತರಾಷ್ಟ್ರೀಯ ಚರ್ಚೆಗಳು ಗರಿಗೆದರಿವೆ. ಮುಂದಿನ ದಿನಗಳಲ್ಲಿ ಬಲೂಚಿಸ್ತಾನದಲ್ಲಿ ನಡೆಯುವ ಆಂತರಿಕ ಬೆಳವಣಿಗೆಗಳು ಎಲ್ಲರ ಗಮನ ಸೆಳೆಯುತ್ತಿವೆ.

 

Leave a comment

Top