An unconventional News Portal.

ಸಾವಿಗೂ ಮುನ್ನ ಡಿವೈಎಸ್ಪಿ ಗಣಪತಿ ನೀಡಿದ Exclusive ಟಿವಿ ಸಂದರ್ಶನದ ‘ಮಿಸ್ಟರಿ’ ಬಯಲು!

ಸಾವಿಗೂ ಮುನ್ನ ಡಿವೈಎಸ್ಪಿ ಗಣಪತಿ ನೀಡಿದ Exclusive ಟಿವಿ ಸಂದರ್ಶನದ ‘ಮಿಸ್ಟರಿ’ ಬಯಲು!

”ಯಾವುದಾದರೂ ಒಂದು ಒಳ್ಳೆ ಟಿವಿ ಚಾನಲ್ ಕಚೇರಿಗೆ ಕರೆದುಕೊಂಡು ಹೋಗು…”

ಇದು ಡಿವೈಎಸ್ಪಿ ಎಂ. ಕೆ. ಗಣಪತಿ ಆತ್ಮಹತ್ಯೆಗೂ ಮುನ್ನ ಮಡಿಕೇರಿಯ ವಿನಾಯಕ ಲಾಡ್ಜ್ ಮುಂಭಾಗ ಹತ್ತಿದ ಆಟೋ ಚಾಲಕನಿಗೆ ಹೇಳಿದ ಮಾತು. ಹೀಗೆ, ಗಣಪತಿ ತಮ್ಮ ‘ಡೈಯಿಂಗ್ ಡಿಕ್ಲರೇಶನ್’ ದಾಖಲಿಸಲು ಆಯ್ಕೆ ಮಾಡಿಕೊಂಡ ‘ಟಿವಿ ವನ್’ ಕಚೇರಿಗೆ ತಲುಪಿದರು.

ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಇವತ್ತಿಗೂ ಹಲವು ಪ್ರಶ್ನೆಗಳು ಉಳಿದು ಹೋಗಿವೆ. ಅವುಗಳಲ್ಲಿ ಒಂದು, ಗಣಪತಿ ಸಾವಿಗೂ ಮುನ್ನ ಸಂದರ್ಶನ ನೀಡಲು, ತಮ್ಮೊಳಗಿನ ಒತ್ತಡಗಳನ್ನು ಬಿಚ್ಚಿಡಲು ಸ್ಥಳೀಯ ವಾಹಿನಿಯನ್ನು ಯಾಕೆ ಆಯ್ಕೆ ಮಾಡಿಕೊಂಡರು ಎಂಬುದು. ಇದಕ್ಕೀಗ ಉತ್ತರ ಸಿಕ್ಕಿದ್ದು, ಸಿಐಡಿ ಅಧಿಕಾರಿಗಳೂ ಸಹ ತಮ್ಮ ವರದಿಯಲ್ಲಿ ಆಟೋ ಚಾಲಕನ ಹೇಳಿಕೆಯನ್ನು ದಾಖಲಿಸಿದ್ದಾರೆ.

ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿದ್ದ ಕೊಡಗು ಮೂಲದ ಅಧಿಕಾತರಿ ಗಣಪತಿ ತಮ್ಮ ತವರು ಜಿಲ್ಲೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದು ಜು. 7ರಂದು. ಅವತ್ತು ಬೆಳಗ್ಗೆಯೇ ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ವಿನಾಯಕ ಲಾಡ್ಜ್ ಗೆ ಬಂದ ಅವರು ರೂಮು ಪಡೆದುಕೊಳ್ಳುತ್ತಾರೆ. ನಂತರ ಸುಮಾರು 10. 30ರ ಸುಮಾರಿಗೆ ಲಾಡ್ಜ್ ನಿಂದ ಹೊರಬರುವ ಗಣಪತಿ ಆಟೋ ಹತ್ತಿದವರೇ ಯಾವುದಾದರೂ ಒಳ್ಳೆಯ ಟಿವಿ ಚಾನಲ್ ಕಚೇರಿಗೆ ಕರೆದುಕೊಂಡು ಹೋಗುವಂತೆ ಚಾಲಕನಿಗೆ ತಿಳಿಸುತ್ತಾರೆ. “ಆಗ ಆಟೋ ಚಾಲಕನಿಗೆ ನಮ್ಮ ಚಾನಲ್ ನೆನಪಾಗುತ್ತದೆ. ಯಾಕೆ ಎಂದರೆ ಕೊಡಗಿನಲ್ಲಿ ನಾವು ಫೇಮಸ್ ಇದೀವಿ. ಹೆಚ್ಚು ಜನ ನಮ್ಮ ವಾಹಿನಿ ನೋಡುತ್ತಾರೆ,” ಎನ್ನುತ್ತಾರೆ ಗಣಪತಿಯವರ ಸಂದರ್ಶನವನ್ನು ಕೊನೆಯ ಬಾರಿಗೆ ರೆಕಾರ್ಡ್ ಮಾಡಿರುವ ‘ಟಿವಿ ವನ್’ ವಾಹಿನಿಯ ಸಿಇಓ ಪ್ರಸಾದ್.

ಬಿಟಿವಿ ಎಕ್ಸ್ ಕ್ಲೂಸಿವ್?: 

ಡಿವೈಎಸ್ಪಿ ಗಣಪತಿ ಕೊನೆಯ ಬಾರಿಗೆ ಸಂದರ್ಶನ ನೀಡಿದ್ದು ಸ್ಥಳೀಯ ವಾಹಿನಿಗೆ. ಆದರೆ ರಾಜ್ಯಮಟ್ಟದಲ್ಲಿ ಬಿಟಿವಿ ಅದೇ ವೀಡಿಯೋವನ್ನು ತನ್ನ ಕೊಡಗು ಕಚೇರಿಯಲ್ಲಿ ಚಿತ್ರೀಕರಿಸಿದ್ದು ಎಂದು ಹೇಳಿಕೊಂಡಿತು. ಅದನ್ನು ಎಕ್ಸ್ ಕ್ಲೂಸಿವ್ ಎಂದೇ ಪ್ರಸಾರ ಮಾಡುತ್ತಿತ್ತು. ಹಾಗೆ ನೋಡಿದರೆ, ಮಡಿಕೇರಿಯಲ್ಲಿ ಬಿಟಿವಿಗೆ ಕಚೇರಿಯೇ ಇಲ್ಲ. ಅದು ‘ಟಿವಿ ವನ್’ ಕಚೇರಿಯಲ್ಲೇ ಕಾರ್ಯನಿರ್ವಹಿಸುತ್ತದೆ. ವಾಸ್ತವದಲ್ಲಿ ‘ಟಿವಿ ವನ್’ ಕಚೇರಿಯನ್ನೇ ಬಿಟಿವಿ ತನ್ನ ಕಚೇರಿ ಎಂದು ಹೇಳಿಕೊಂಡಿತ್ತು. “ಇಲ್ಲಿ ಬಹುತೇಕ ರಾಜ್ಯಮಟ್ಟದ ವಾಹಿನಿಗಳಿಗೆ ಪ್ರತ್ಯೇಕ ಕಚೇರಿಗಳಿಲ್ಲ. ಸ್ಥಳೀಯ ವಾಹಿನಿಗಳ ಜತೆಯಲ್ಲಿಯೇ ಅವರು ಕೆಲಸ ಮಾಡುತ್ತಾರೆ,” ಎನ್ನುತ್ತಾರೆ ಪ್ರಸಾದ್.

Coorg channels

ಕೊಡಗಿನಲ್ಲಿ ರಾಜ್ಯಮಟ್ಟದ ಹೆಚ್ಚಿನ ವಾಹಿನಿಗಳಿಗೆ ಆಫೀಸೂ ಇಲ್ಲ.  ವರದಿಗಾರರ ಬಳಿ ಕ್ಯಾಮೆರಾಮನ್ಗಳೂ ಇಲ್ಲ. ವರದಿಗಾರರೇ ಕ್ಯಾಮೆರಾಮನ್ ಆಗಿಯೂ ವರದಿಗಾರರಾಗಿಯೂ ಏಕಕಾಲಕ್ಕೆ ಕಾರ್ಯ ನಿರ್ವಹಿಸುತ್ತಾರೆ. “ಮುಖ್ಯ ಘಟನೆಗಳಾದಾಗ ಪಕ್ಕದ ಮೈಸೂರಿನಿಂದ ವರದಿಗಾರ ಮತ್ತು ಕ್ಯಾಮೆರಾಮನ್ಗಳನ್ನು ಕಳುಹಿಸುತ್ತಾರೆ. ಇಲ್ಲದಿದ್ದರೆ ನಾನೇ ಸುದ್ದಿ ಹಾಗೂ ದೃಶ್ಯಾವಳಿಗಳನ್ನು ಕೊಡಬೇಕು,” ಎನ್ನುತ್ತಾರೆ ಕನ್ನಡದ ಪ್ರಮುಖ ಚಾನಲ್ ಒಂದರ ವರದಿಗಾರರು.

ಆದರೆ ಇದಕ್ಕೆ ತದ್ವಿರುದ್ಧವಾಗಿ ಕೊಡಗಿನಲ್ಲಿ ಸ್ಥಳೀಯ ಚಾನಲ್ಗಳು ಪ್ರಭಲವಾಗಿ ನೆಲೆಯೂರಿವೆ. ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಗಣಪತಿಯವರು ಸಂದರ್ಶನ ನೀಡಿದ ‘ಟಿವಿ ವನ್’ ಕೊಡಗಿನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದೆ. “ನಮ್ಮಲ್ಲಿ ಸುಮಾರು 25 ಜನ ಕೆಲಸ ಮಾಡುತ್ತಿದ್ದಾರೆ. ಕೊಡಗಿನ ಪ್ರತೀ ಸಣ್ಣ ಸಣ್ಣ ಪಟ್ಟಣಗಳಲ್ಲೂ ವರದಿಗಾರರಿದ್ದಾರೆ. ಇದೂ ಅಲ್ಲದೆ ಪಕ್ಕದ ಮೈಸೂರು, ಮಂಗಳೂರಿನಿಂದ ಸುದ್ದಿ ತರಿಸಿಕೊಳ್ಳುವ ವ್ಯವಸ್ಥೆಯೂ ಇದೆ. ಅಲ್ಲೂ ವರದಿಗಾರರಿದ್ದಾರೆ. ಇದಕ್ಕೆ ಮೂರು ಜನ ಸೇರಿ 15 ಲಕ್ಷ ಬಂಡವಾಳ ಹೂಡಿದ್ದೇವೆ,” ಎನ್ನುತ್ತಾರೆ ಸಂಪಾದಕ ಪ್ರಸಾದ್. ‘ಚಾನಲ್ 24 ಕರ್ನಾಟಕ’, ‘ಚಾನಲ್ ಕೂರ್ಗ್’, ‘ಕೊಡಗು ಚಾನಲ್’, ‘ಚಿತ್ತಾರ’ ಮತ್ತಿತರ ಸ್ಥಳೀಯ ವಾಹಿನಿಗಳು ಇಲ್ಲಿನ ಜನರ ಬಾಯಲ್ಲಿ ಇವೆ.

ಸ್ಥಳೀಯ ವಾಹಿನಿಗಳು ಬಲಿಷ್ಠ ನೆಟ್ವರ್ಕ್ ಹೊಂದಿರುವ ಕಾರಣಕ್ಕೆ ರಾಜ್ಯ ಮಟ್ಟದ ವಾಹಿನಿಗಳಿಗೆ ಪ್ರಮುಖ ಘಟನೆಗಳಾದಾಗ ಇವೇ ‘ಫೀಡರ್’ಗಳ ರೀತಿಯಲ್ಲಿ ಕೆಲಸ ಮಾಡುತ್ತವೆ. ಇವತ್ತು ಕೊಡಗಿನಲ್ಲಿ ನೂರಾರು ಜ್ವಲಂತ ಸಮಸ್ಯೆಗಳಿವೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡ ಜಿಲ್ಲೆಯಲ್ಲಿ ಟೂರಿಸಂಗೆ ಸಂಬಂಧಪಟ್ಟ ಸಮಸ್ಯೆಗಳೇ ಬೆಟ್ಟದಷ್ಟಿವೆ. ಆದರೆ ವರದಿಗಾರರ ಸಮಸ್ಯೆ, ಸೌಲಭ್ಯಗಳ ಕೊರತೆಯಿಂದಾಗಿ ರಾಜ್ಯ ಮಟ್ಟದ ಸುದ್ದಿವಾಹಿನಿಗಳಿಂದ ಕೊಡಗಿನ ಅಂತರಾಳವನ್ನು ನಿರೀಕ್ಷಿಸುವುದು ಕಷ್ಟವಿದೆ. ಎಲ್ಲೋ ಗಣಪತಿ ಆತ್ಮಹತ್ಯೆ ಪ್ರಕರಣದಂತಹ ಘಟನೆಗಳು ನಡೆದಾಗ ಮಾತ್ರ ರಾಜ್ಯದ ಮುಖ್ಯವಾಹಿನಿಯಲ್ಲಿ ಕೊಡಗು ಸುದ್ದಿಕೇಂದ್ರಕ್ಕೆ ಬರುತ್ತದೆ. ಉಳಿದ ಸಮಯದಲ್ಲಿ ಹಿಂದಕ್ಕೆ ಹೋಗುತ್ತದೆ. “ಸುದ್ದಿ ವಾಹಿನಿಗಳು ಬೆಂಗಳೂರು ಕೇಂದ್ರಿತವಾಗಿರುವ ಕಾರಣಕ್ಕೆನೇ ಜಿಲ್ಲಾ ಮಟ್ಟದ ಕೇಬಲ್ ಚಾನಲ್ಗಳು ಬೆಳವಣಿಗೆ ಕಾಣುತ್ತಿವೆ,” ಎನ್ನುತ್ತಾರೆ ಕೊಡಗಿನ ಹಿರಿಯ ವರದಿಗಾರರೊಬ್ಬರು.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top