An unconventional News Portal.

SSLC ಫಲಿತಾಂಶ ಕಂಪ್ಲೀಟ್ ಡೀಟೆಲ್ಸ್: ಗ್ರಾಮೀಣ ಮಕ್ಕಳ ಮೇಲುಗೈ; ದಾಖಲೆ ಬರೆದ ಪ್ರಥಮ ರ್ಯಾಂಕ್!

SSLC ಫಲಿತಾಂಶ ಕಂಪ್ಲೀಟ್ ಡೀಟೆಲ್ಸ್: ಗ್ರಾಮೀಣ ಮಕ್ಕಳ ಮೇಲುಗೈ; ದಾಖಲೆ ಬರೆದ ಪ್ರಥಮ ರ್ಯಾಂಕ್!

ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ  ಸೋಮವಾರ ಪ್ರಕಟಗೊಂಡಿದ್ದು ರಾಜ್ಯಾದ್ಯಂತ ಶೇ. 79.16 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಿರೀಕ್ಷೆಯಂತೆಯೇ ಇದರಲ್ಲಿ ಬಾಲಕಿಯರ ಸಂಖ್ಯೆ ಹೆಚ್ಚಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶ ಶೇ.2 ರಷ್ಟು ಕುಸಿತ ಕಂಡಿದೆ. ಅಚ್ಚರಿ ಎಂಬಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ಫಲಿತಾಂಶ ದಾಖಲಿಸಿದ ಜಿಲ್ಲೆಯಾಗಿ ಹೊರಹೊಮ್ಮಿದೆ.

ಬುದ್ದಿವಂತರ ಜಿಲ್ಲೆ ಎಂದೇ ಕರೆಯಲ್ಪಡುವ ಉಡುಪಿ ಎರಡನೆ ಸ್ಥಾನ ಪಡೆದರೆ, ಮಂಗಳೂರು ತೃತೀಯ ಸ್ಥಾನ ಪಡೆದಿದೆ. ಉತ್ತರ ಕನ್ನಡ ಜಿಲ್ಲೆ 4 ನೇ ಸ್ಥಾನದಲ್ಲಿದ್ದರೆ, ಬಳ್ಳಾರಿ ಕೊನೆಯ ಸ್ಥಾನದಲ್ಲಿದೆ.

ಪರೀಕ್ಷೆಗೆ ಹಾಜರಾದ 7,88,442 ವಿದ್ಯಾರ್ಥಿಗಳ ಪೈಕಿ 6,68,980 (ಶೇ.79.16) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸೋಮವಾರ ಬೆಂಗಳೂರಿನ ಪದವಿ ಪೂರ್ವ ಶಿಕ್ಷಣ ಮಂಡಳಿಯಲ್ಲಿ ಫಲಿತಾಂಶದ ವಿವರ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಧೃತಿಗೆಡುವುದು ಬೇಡ ಎಂದು ಮನವಿ ಮಾಡಿದರು.

ಬಾಲಕಿಯರೇ ಮೇಲುಗೈ:

ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಪ್ರತಿ ವರ್ಷದಂತೆ ಬಾಲಕಿಯರೇ ಮೇಲುಗೈ ಸಾಸಿದ್ದಾರೆ. ಶೇ.82.64ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ.75.84ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಪೂರ್ಣಪ್ರಜ್ಞ ಶಾಲೆಯ ಎ¸.ರಂಜನ್ ಎಂಬ ವಿದ್ಯಾರ್ಥಿ 625 ಅಂಕಕ್ಕೆ 625 ಅಂಕ ಗಳಿಸುವ ಮೂಲಕ, ರಾಜ್ಯದಲ್ಲೇ ಅತಿ ಹೆಚ್ಚು ಅಂಕ ಪಡೆದು ಈವರೆಗಿನ ಎಲ್ಲ ದಾಖಲೆಗಳನ್ನೂ ಮುರಿದಿದ್ದಾನೆ.

ಹಳ್ಳಿ ಮಕ್ಕಳ ಸಾಧನೆ:

ಎಂದಿನಂತೆ ಈ ಬಾರಿಯೂ ಫಲಿತಾಂಶದಲ್ಲಿ ಗ್ರಾಮೀಣ ಭಾಗದ ಮಕ್ಕಳೇ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಶೇಕಡವಾರು ಫಲಿತಾಂಶದಲ್ಲಿ ಮೇಲುಗೈ ಸಾಸಿದ್ದಾರೆ.

ಗ್ರಾಮೀಣ ಭಾಗದ ಪರೀಕ್ಷೆಗೆ ಹಾಜರಾದ 1,77,273 ಮಕ್ಕಳಲ್ಲಿ ಶೇ.77.33 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶದ 1,70,375 ವಿದ್ಯಾರ್ಥಿಗಳ ಪೈಕಿ 1,25,815 (ಶೇ.73.85) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶೂನ್ಯ ಫಲಿತಾಂಶ:

ಈ ಬಾರಿಯ ಫಲಿತಾಂಶದಲ್ಲಿ 52 ಶಾಲೆಗಳು ಸೊನ್ನೆ ಸುತ್ತಿವೆ. ಇದರಲ್ಲಿ ಮೂರು ಸರ್ಕಾರಿ ಶಾಲೆಗಳು, ಆರು ಅನುದಾನಿತ ಹಾಗೂ 43 ಅನುದಾನ ರಹಿತ ಶಾಲೆಗಳು.

“ಯಾವುದೇ ಫಲಿತಾಂಶ ಬಾರದ ಶಾಲೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವುದಾಗಿ,” ಸಚಿವರು ತಿಳಿಸಿದರು.

ಜೂನ್ನಲ್ಲಿ ಪೂರಕ ಪರೀಕ್ಷೆ:

ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳನ್ನು ಜೂ. 20ರಿಂದ 27ರ ವರೆಗೆ ರಾಜ್ಯಾದ್ಯಂತ ನಡೆಸಲಾಗುವುದು. “ಅನುತ್ತೀರ್ಣರಾದ ವಿದ್ಯಾರ್ಥಿಗಳು ಇದೇ ತಿಂಗಳ 25ರೊಳಗೆ ಸಂಬಂಧಪಟ್ಟ ಶಾಲೆಗಳಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು. ಮುಖ್ಯ ಶಿಕ್ಷಕರು ಸ್ವೀಕರಿಸಿದ ಅರ್ಜಿಗಳನ್ನು ಶುಲ್ಕದೊಂದಿಗೆ ಇದೇ ತಿಂಗಳ 28ರೊಳಗೆ ಕಳುಹಿಸಿಕೊಡಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ,” ಎಂದು ಸಚಿವರು ಸ್ಪಷ್ಟಪಡಿಸಿದರು.

ಪೂರಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಒಂದು ವಿಷಯಕ್ಕೆ 240ರೂ., ಎರಡು ವಿಷಯಕ್ಕೆ 290ರೂ., ಮೂರು ಅಥವಾ ಮೂರಕ್ಕಿಂತ ಮೇಲ್ಪಟ್ಟ ವಿಷಯಗಳಿಗೆ 390ರೂ.  ಪರೀಕ್ಷಾ ಶುಲ್ಕ ನಿಗದಿ ಪಡಿಸಲಾಗಿದೆ.

“ಎಲ್ಲ ವಿಷಯಗಳ ಮರು ಎಣಿಕೆ ಅಥವಾ ಛಾಯಾ ಪ್ರತಿಗಾಗಿ ಇದೇ ತಿಂಗಳ 26ರೊಳಗೆ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಮರು ಎಣಿಕೆ ಇಲ್ಲವೆ ಛಾಯಾಪ್ರತಿ ಯಾವುದಾದರೂ ಒಂದಕ್ಕೆ ಅರ್ಜಿ ಸಲ್ಲಿಸಬೇಕು,” ಎಂದು ಕಿಮ್ಮನೆ ಸ್ಪಷ್ಟಪಡಿಸಿದರು.

ದಾಖಲೆ ಬರೆದ ವಿದ್ಯಾರ್ಥಿ:

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಪೂರ್ಣಪ್ರಜ್ಞ ಪ್ರೌಢಶಾಲೆ ವಿದ್ಯಾರ್ಥಿ ಎ. ರಂಜನ್ ಪೂರ್ಣ ಅಂಕಗಳನ್ನು ಗಳಿಸುವ ಮೂಲಕ ಹೊಸ ಇತಿಹಾಸವನ್ನೇ ಬರೆದಿದ್ದಾನೆ. ಇನ್ನು ಬೆಂಗಳೂರಿನ ಬನಶಂಕರಿಯ ಹೋಲಿ ಚಿಲ್ಡ್ರನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಪ್ರಿತ 625 ಅಂಕಗಳಿಗೆ 624 ಅಂಕ ಪಡೆದು ರಾಜ್ಯದಲ್ಲೇ ಎರಡನೆ ಸ್ಥಾನ ಪಡೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಶ್ರೀದೇವಿ ಪ್ರೌಢಶಾಲೆಯ ಮಂಜುನಾಥ ಭಟ್ 625 ಅಂಕಕ್ಕೆ 624 ಅಂಕ ಪಡೆದಿದ್ದಾರೆ. ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆ ವಿದ್ಯಾರ್ಥಿನಿ ಈಶು ಕೂಡ ಇಷ್ಟೇ ಅಂಕ ಪಡೆದಿದ್ದಾರೆ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top