An unconventional News Portal.

ಅಮೆರಿಕಾ ಶೂಟೌಟ್: ‘ಜನಾಂಗೀಯ ದ್ವೇಷ’ದ ಕುಲುಮೆಯಲ್ಲೂ ಮೆರೆದ ಮಾನವೀಯತೆ

ಅಮೆರಿಕಾ ಶೂಟೌಟ್: ‘ಜನಾಂಗೀಯ ದ್ವೇಷ’ದ ಕುಲುಮೆಯಲ್ಲೂ ಮೆರೆದ ಮಾನವೀಯತೆ

 

ಅಮೆರಿಕಾದಲ್ಲಿ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಳ್ವಿಕೆ ಆರಂಭಗುತ್ತಿದ್ದಂತೆ ಜನಾಂಗೀಯ ದ್ವೇಷ ಹೆಚ್ಚುತ್ತಿದೆ ಎಂಬ ವರದಿಗಳು ಬರುತ್ತಿರುವ ಬೆನ್ನಲ್ಲೇ, ಅಲ್ಲಿನ್ನೂ ಮಾನವೀಯತೆ ಸತ್ತಿಲ್ಲ ಎಂಬುದಕ್ಕೆ ನಿದರ್ಶನವೊಂದು ಲಭ್ಯವಾಗಿದೆ.

ಕನ್ಸಾಸ್ ನಗರದ ಆಸ್ಟಿನ್‌ ಬಾರ್‌ನಲ್ಲಿ ಅಮೆರಿಕಾ ಪ್ರಜೆಯ ಗುಂಡೇಟಿಗೆ ಅಸುನೀಗಿದ ಹೈದ್ರಾಬಾದ್ ಮೂಲಕ ಐಟಿ ಎಂಜಿನಿಯರ್ ಕುಟುಂಬಕ್ಕೆ ಆರ್ಥಿಕ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ‘ಗೋ ಫಂಡ್ ಮಿ’ ಎಂಬ ಅಂತರ್ಜಾಲ ತಾಣವನ್ನು ಉಪಯೋಗಿಸಿಕೊಂಡು ಕವಿಪ್ರಿಯ ಮಾತುರ್‌ಲಿಂಗಂ ಎಂಬುವವರು ಆರಂಭಿಸಿರುವ ನಿಧಿ ಸಂಗ್ರಹ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ.

ಕೊಲೆಯಾದ ಶ್ರೀನಿವಾಸ್ ಅಂತ್ಯ ಸಂಸ್ಕಾರಕ್ಕೆ ಹಾಗೂ ಕುಟುಂಬಕ್ಕೆ ನೆರವಾಗುವ ದೃಷ್ಟಿಯಿಂದ ಕವಿಪ್ರಿಯ 24 ಗಂಟೆಗಳ ಮುಂಚೆಯಷ್ಟೆ 1. 5 ಲಕ್ಷ ಡಾಲರ್ ನಿಧಿ ಸಂಗ್ರಹ ಅಭಿಯಾನ ಆರಂಭಿಸಿದ್ದರು. ಅಭಿಯಾನ ಆರಂಭಗೊಂಡ 12 ಗಂಟೆಗಳೊಳಗೆ ಕವಿಪ್ರಿಯಯ ಅವರ ನಿರೀಕ್ಷೆಯನ್ನು ದಾಟಿ ಹಣದ ಸಂಗ್ರಹವಾಗಿದೆ. ಐದು ಡಾಲರ್‌ನಿಂದ ಶುರುವಾಗಿ, 1000 ಡಾಲರ್‌ ವರೆಗೆ ಜನ ಹಣ ನೀಡುತ್ತಿದ್ದಾರೆ.

ಕೆಲವು ಗಂಟೆಗಳ ಮುಂಚೆಯಷ್ಟೆ ಕವಿಪ್ರಿಯ ಸಂದೇಶವೊಂದನ್ನು ಅಪ್‌ಡೇಟ್‌ ಮಾಡಿದ್ದಾರೆ. “ನಿರೀಕ್ಷೆ ಮೀರಿ ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು. ಇಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ಶ್ರೀನಿವಾಸ್‌ ಪತ್ನಿ ಸುಜನ್ಯಾ ಅವರ ಖಾತೆಗೆ ವರ್ಗಾಯಿಸಲಾಗಿದೆ. ಅವರ ಕುಟುಂಬ ನೋವನ್ನು ಹಣದಿಂದ ತುಂಬಲ ಸಾಧ್ಯವಿಲ್ಲ. ನಿಮ್ಮ ನೆರವನ್ನು ಮುಂದುರಿಸಿ,” ಎಂದವರು ತಿಳಿಸಿದ್ದಾರೆ.

ಸದ್ಯ 5, 07, 737 ಡಾಲರ್‌ ಹಣ ಸಂಗ್ರಹವಾಗಿದೆ. ಈ ಕ್ಷಣದಲ್ಲಿಯೂ ಜನ ತಮ್ಮ ಕೈಲಾದ ನೆರವು ನೀಡುವುದನ್ನು ಮುಂದುರಿಸಿದ್ದಾರೆ.

go-fundme-1

ಇದರ ಜತೆಗೆ, ಘಟನೆಯಲ್ಲಿ ಗಾಯಗೊಂಡ ಇನ್ನೊಬ್ಬ ಭಾರತ ಮೂಲದ ಎಂಜಿನಿಯರ್ ಅಲೋಕ್ ಹಾಗೂ ದಾಳಿಯನ್ನು ತಪ್ಪಿಸಲು ಮುಂದಾದ ಅಮೆರಿಕನ್ ಪ್ರಜೆ ಇಯಾನ್‌ ವೈದ್ಯಕೀಯ ವೆಚ್ಚವನ್ನು ಭರಿಸಲು ನಿಧಿ ಸಂಗ್ರಹ ಅಭಿಯಾನಗಳು ನಡೆಯುತ್ತಿವೆ.

ಈ ಸಾವು ನ್ಯಾಯವೇ?:

“ಪತಿ ಸಾವಿಗೆ ಮುನ್ನವೇ ಅಮೆರಿಕಾದಲ್ಲಿ ಜೀವನ ನಡೆಸುವ ಬಗ್ಗೆ ನನಗೆ ಪ್ರಶ್ನೆಗಳಿದ್ದವು. ಆದರೆ ಪತಿ ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳಿದ್ದರು,” ಎಂದು ಕೊಲೆಗೀಡಾದ ಶ್ರೀನಿವಾಸ್ ಪತ್ನಿ ಸುಜನ್ಯಾ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

“ಅಮೆರಿಕಾದಲ್ಲಿ ನೆಲೆಸುವುದು ಸುರಕ್ಷಿತವಲ್ಲ ಎಂದು ನಾನು ಹೇಳಿದ್ದೆ. ಆದರೆ ಒಳ್ಳೆಯವರಿಗೆ ಏನೂ ಆಗುವುದಿಲ್ಲ ಎಂದು ಶ್ರೀನಿವಾಸ್ ಸಮಾಧಾನ ಮಾಡಿದ್ದರು. ಅವರಿಗೆ ಅಂತಹ ಸಾವು ಬರಬಾರದಿತ್ತು,” ಎಂದು ಅವರು ಹೇಳಿದ್ದಾರೆ.

 

ದಾಳಿ ನಡೆಸಿದ ನಂತರ ಅಮೆರಿಕಾ ಪ್ರಜೆ ಪುರಿಂಟನ್ ಮತ್ತೊಂದು ಬಾರ್‌ಗೆ ಹೋಗಿ ಅಡಗಿಕೊಳ್ಳಲು ಜಾಗ ಕೊಡಿ ಎಂದು ಕೇಳಿಕೊಂಡಿದ್ದ. ಇಬ್ಬರು ಮಧ್ಯಪ್ರಾಚ್ಯ ದೇಶದವರ ಮೇಲೆ ಗುಂಡು ಹಾರಿಸಿ ಬಂದಿದ್ದೇನೆ ಎಂದು ತಿಳಿಸಿದ್ದ ಎಂದು ವರದಿಗಳು ಶುಕ್ರವಾರ ಬಹಿರಂಗಪಡಿಸಿವೆ.

ಇದೊಂದು ಜನಾಂಗೀಯ ದ್ವೇಷಕ್ಕೆ ನಡೆದ ಕೊಲೆ ಎಂದು ಅಮೆರಿಕನ್ನರು ಪ್ರತಿಪಾದಿಸುತ್ತಿದ್ದಾರೆ. ಸದ್ಯ ತನಿಖೆ ಪ್ರಗತಿಯಲ್ಲಿದ್ದು, ಸದ್ಯ ಕೊಲೆ ಆರೋಪವನ್ನಷ್ಟೆ ಪುರಿಂಟನ್ ಮೇಲೆ ಹೊರಿಸಲಾಗಿದೆ.

ಅಮೆರಿಕಾದಲ್ಲಿ ಟ್ರಂಪ್ ಪ್ರಮಾಣವಚನ ಸ್ವೀಕಸಿದ ನಂತರ ಎಚ್‌-1ಬಿ ವೀಸಾ ಮೇಲಿನ ನಿರ್ಬಂಧವನ್ನು ಜಾರಿಗೆ ತರುವ ಚಿಂತನೆ ನಡೆಯುತ್ತಿದೆ. ಹೀಗಾಗಿ ಅಲ್ಲಿರುವ ಸುಮಾರು 1. 5 ಲಕ್ಷ ಭಾರತೀಯ ಮೂಲದ ಐಟಿ ಕ್ಷೇತ್ರದ ನೌಕರರ ಬದುಕು ಅಭದ್ರತೆಯಲ್ಲಿದೆ. ಕಳೆದ ವಾರವಷ್ಟೆ ಪ್ರಧಾನಿ ಮೋದಿ ಕೌಶಲ್ಯ ಹೊಂದಿದ ನೌಕರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಅಮೆರಿಕಾಕ್ಕೆ ಮನವಿ ಮಾಡಿಕೊಂಡಿದ್ದರು.

 

Top