An unconventional News Portal.

‘ಮೈಥುನ ಮಿಸ್ಟರಿ’-5: ಸಹಜತೆಯ ಸವಾಲುಗಳು ಮತ್ತು ಈಕೆಯ ಪರ್ಯಾಯದ ಹುಡುಕಾಟ!

‘ಮೈಥುನ ಮಿಸ್ಟರಿ’-5: ಸಹಜತೆಯ ಸವಾಲುಗಳು ಮತ್ತು ಈಕೆಯ ಪರ್ಯಾಯದ ಹುಡುಕಾಟ!

2015ರ ಆಗಸ್ಟ್ ತಿಂಗಳಿನಲ್ಲಿ ಕೇಂದ್ರ ಸರಕಾರ ದೇಶದಲ್ಲಿ ಪೊರ್ನೋಗ್ರಫಿಯಲ್ಲಿ ನಿಷೇಧಿಸುವ ತೀರ್ಮಾನ ತೆಗೆದುಕೊಂಡಿತು. ಇದು ವ್ಯಾಪಕ ಟೀಕೆಗೆ, ತಮಾಷೆಗೆ ಕಾರಣವಾಯಿತು. ಒಟ್ಟು 857 ಅಶ್ಲೀಲ ವೆಬ್ಸೈಟ್ಗಳನ್ನು ಕಡಿವಾಣ ಹಾಕಿದ ಮಾತ್ರಕ್ಕೆ, ಅಂತರ್ಜಾಲದಲ್ಲಿರುವ ಪೊರ್ನೋಗ್ರಫಿಗೆ ಕಡಿವಾಣ ಹಾಕುವುದು ಕಷ್ಟ ಎಂಬುದು ಟೀಕೆಗಳ ಹಿಂದಿದ್ದ ಕಾಳಜಿ ಅಷ್ಟೆ. ಕೊನೆಗೆ, ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು. ಈ ವಿದ್ಯಮಾನದಿಂದ ಆದ ಲಾಭವೇನು ಎಂದರೆ, ಜಗತ್ತಿನ ನಾಲ್ಕನೇ ದೊಡ್ಡ ಗ್ರಾಹಕರನ್ನು ಹೊಂದಿರುವ ದೇಶದಲ್ಲಿ ಪೊರ್ನ್ ಕುರಿತು ಅಂತರ್ಜಾಲದಲ್ಲಿ ಹುಡುಕಾಡುವವರ ಸಂಖ್ಯೆ ಇನ್ನಷ್ಟು ಹೆಚ್ಚಾಯಿತು, ಅಷ್ಟೆ!

porn-ban-1ಹಾಗಂತ, ಪೊರ್ನ್ ನಿಷೇಧ ಸರಿನಾ? ಈ ಸರಣಿಯ ಆರಂಭದಲ್ಲಿಯೇ ಹೇಳಿದಂತೆ, ಮೈಥುನ ಎಂಬುದು ಅನ್ನ ಹಾಗೂ ನೀರಿನಷ್ಟೆ ಮನುಷ್ಯನಿಗೆ ನಿತ್ಯ ಅಗತ್ಯಗಳಲ್ಲಿ ಒಂದು. ಆತನ ಮಾನಸಿಕ ಆರೋಗ್ಯವನ್ನು ಸ್ಥಿಮಿತದಲ್ಲಿ ಇಟ್ಟು, ಅಥವಾ ಮಾನಸಿಕವಾಗಿ ಆತನನ್ನು ಗೆಲುವಾಗಿಡಲು ಮೈಥುನ ಕೂಡ ಸಹಾಯ ಮಾಡುತ್ತದೆ. ಹೀಗಿರುವಾಗ, ಮೈಥುನದ ತಳಹದಿಯ ಮೇಲೆ ರೂಪುಗೊಂಡಿರುವ ಪೊರ್ನ್ ಕೂಡ ಒಂದು ಆಯಾಮದಲ್ಲಿ, ನೈಸರ್ಗಿಕ ಕ್ರಿಯೆಯೊಂದರ ಕ್ರೀಯಾಶೀಲತೆಯನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ. ಆದರೆ, ಸಮಸ್ಯೆ ಇರುವುದು ಪೊರ್ನ್ ಉದ್ಯಮ ತನ್ನ ಗ್ರಾಹಕರನ್ನು ಸೆಳೆಯಲು ಬಳಸುತ್ತಿರುವ ತಂತ್ರಗಳಲ್ಲಿ.

ಪರಿಣಾಮ ಜಗತ್ತಿನ ಹಲವು ದೇಶಗಳಲ್ಲಿ ಮೈಥುನ ಕ್ರಿಯೆಗಳು ವಾಸ್ತವದಿಂದ ದೂರ ಸರಿಯುತ್ತಿವೆ. ಇದಕ್ಕೆ ಒಂದು ಉದಾಹರಣೆ ಜಪಾನ್. ಹಿರೋಷಿಮಾ ಮತ್ತು ನಾಗಸಾಕಿಗಳ ದುರಂತದ ನಂತರ ತನ್ನನ್ನು ತಾನು ಕಟ್ಟಿಕೊಳ್ಳುವ ಅತೀವ ಶ್ರಮಕ್ಕೆ ಬಿದ್ದ ದೇಶ, ಆಧುನಿಕತೆಗೆ ಹೆಚ್ಚಿನ ಒತ್ತು ನೀಡತೊಡಗಿತು. ಅಮೆರಿಕಾ ಮಾದರಿಯಲ್ಲಿಯೇ ತನ್ನದೇ ಆದ ಪೊರ್ನ್ ಉದ್ಯಮವೊಂದನ್ನು ಸ್ಥಳೀಯವಾಗಿ ಹುಟ್ಟು ಹಾಕಿತು. ಮೈಥುನ ಕ್ರಿಯೆಗಳಿಗೂ, ಆಧುನಿಕ ತಂತ್ರಜ್ಞಾನದ ಮೆರಗು ನೀಡಿತು ಜಪಾನ್. ಇವತ್ತು ಅಲ್ಲಿನ ಯುವ ಸಮಯದಾಯಕ್ಕೆ ಸಹಜ ಸೆಕ್ಸ್ ರುಚಿಸದಂತಾಗಿದೆ. ಲೈಂಗಿಕ ಕ್ರಿಯೆಗೆ ಸಂಗಾತಿ ಬೇಕು ಅನ್ನಿಸುತ್ತಿಲ್ಲ. ಬದಲಿಗೆ, ತಂತ್ರಜ್ಞಾನವೇ ಅವರ ಇಷ್ಟಗಳನ್ನು ನೆರವೇರಿಸುತ್ತಿದೆ.

ಇದು ನಮ್ಮಲ್ಲೂ ಸಮಸ್ಯೆಗಳನ್ನು ಹುಟ್ಟು ಹಾಕಿಲ್ಲ ಅಂತಿಲ್ಲ. “ಒಂದು ಮಗುವಾದ ನಂತರ ಗಂಡನಿಗೆ ಲೈಂಗಿಕ ಆಸಕ್ತಿ ಹೊರಟು ಹೋಗಿದೆ. ಆತನಿಗೆ ಜತೆಗೊಬ್ಬರು ಬೇಕು ಅನ್ನಿಸುತ್ತಿಲ್ಲ. ತನ್ನ ಮೊಬೈಲ್ ಇದ್ದರೆ ಸಾಕು, ತನ್ನ ಆ ಕ್ಷಣದ ಸುಖಗಳನ್ನು ನೆರವೇರಿಸಿಕೊಂಡು ಬಿಡುತ್ತಾನೆ,” ಎಂಬುದು ಮಹಿಳೆಯೊಬ್ಬರ ಮನಃಶಾಸ್ತ್ರಜ್ಞರ ಮುಂದಿಟ್ಟಿರುವ ಸಮಸ್ಯೆ.

ಹೀಗೆ, ತಂತ್ರಜ್ಞಾನ ಮೈಥುನವನ್ನು ತನ್ನ ಸಹಜತೆಯಿಂದ ಹೊರತರುತ್ತಿರುವುದು ಮತ್ತು ಅದಕ್ಕೆ ಪೊರ್ನೋಗ್ರಫಿ ಉದ್ಯಮ ನೀಡುತ್ತಿರುವ ಕೊಡುಗೆಗಳು ಇವತ್ತಿನ ಸಮಸ್ಯೆಗಳು. ಅದರ ಆಚೆಗೆ, ಪೊರ್ನೋಗ್ರಫಿಯ ಸಂಪೂರ್ಣ ನಿಷೇಧ ಎಂಬುದು ಅಪ್ರಸ್ತುತ ವಾದವಾಗುತ್ತದೆ.

ಬಹುಶಃ ಈ ಕಾರಣಕ್ಕಾಗಿಯೇ ಎರಿಕಾ ಲಸ್ಟ್ ರೀತಿಯ ಹೆಂಗಸರು ತಮ್ಮದೇ ಆದ ಪೊರ್ನೋಗ್ರಫಿ ಇಂಡಸ್ಟ್ರಿಯೊಂದನ್ನು ಸೃಷ್ಟಿಸಿಕೊಂಡಿದ್ದಾರೆ. ಆಕೆ ಈ ತಲೆಮಾರು ಬೆರಗುಗಣ್ಣಿನಿಂದ ನೋಡುತ್ತಿರುವ ಅಶ್ಲೀಲ ಚಿತ್ರಗಳ ನಿರ್ಮಾಪಕಿ. ಆಕೆಯ ಸಿನೆಮಾಗಳು, ಇವತ್ತು ಮಕ್ಕಳ ಕೈಗೂ ಸುಲಭಕ್ಕೆ ಎಟಕುತ್ತಿರುವ ಪೊರ್ನ್ ಮೂವಿಗಳಂತಲ್ಲ ಎಂಬುದು ಮುಖ್ಯ.

emotions-porn-1“ವಾಸ್ತವಕ್ಕೆ ಸಂಬಂಧವೇ ಇಲ್ಲದಂತೆ ಸೃಷ್ಟಿಯಾಗುತ್ತಿರುವ ಪೊರ್ನ್ ನೋಡಿ ಬೇಸತ್ತಿದ್ದೆ. ಗಂಡಸನ್ನು ಪ್ರಧಾನವಾಗಿಟ್ಟುಕೊಂಡು ಸೃಷ್ಟಿಸುವ ಪೊರ್ನ್ ಮೂವಿಗಳನ್ನು ನೋಡಿ ನನಗಂತೂ ವಾಕರಿಕೆ ಬರುತ್ತಿತ್ತು,” ಎನ್ನುತ್ತಾರೆ ಲಸ್ಟ್. “ನನ್ನ ಮಕ್ಕಳಿಗೆ, ಸೆಕ್ಸ್ ಎಂಬುದು ಮುಖ್ಯ. ಆದರೆ, ಅದು ಇವತ್ತು ಪೋರ್ನ್ ಮೂವಿಗಳು ಕಟ್ಟಿಕೊಡುತ್ತಿರುವ ಚೌಕಟ್ಟನ್ನು ಮೀರಿದ್ದು ಎಂಬುದನ್ನು ಹೇಳಲಾದರೂ ಪರ್ಯಾಯವನ್ನು ಸೃಷ್ಟಿಸಬೇಕಿತ್ತು. ಹೀಗಾಗಿ, ನನ್ನ ಸಿನೆಮಾಗಳಿವತ್ತು ಮಾರುಕಟ್ಟೆಯಲ್ಲಿವೆ,” ಎಂದು ‘ಟೆಡ್ ಟಾಕ್’ನಲ್ಲಿ ಆಕೆ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.

ಆಕೆಯ ಸಿನೆಮಾಗಳಲ್ಲಿ ಉದ್ರೇಕಕಾರಿ ದೃಶ್ಯಗಳಿಗಿಂತ ಭಾವನೆಗಳಿವೆ. ಗಂಡಸು ಪ್ರಧಾನ ಎನ್ನುವುದಕ್ಕಿಂತ ಮೈಥುನದಲ್ಲಿ ಗಂಡು ಹಾಗೂ ಹಣ್ಣು ಸಮಾನರು ಎಂಬುದನ್ನು ತೋರಿಸುತ್ತವೆ. ಅದಕ್ಕಿಂತ ಹೆಚ್ಚಾಗಿ, ಸಹಜತೆಗಳು ಕಾಣಸಿಗುತ್ತವೆ. ಕಾರ್ಪೊರೇಟ್ ಉದ್ಯಮಕ್ಕೆ ಪರ್ಯಾಯವಾಗಿ ಬಿಂಬಿಸುತ್ತಿರುವ ದೇಸಿ ಉದ್ಯಮದ ರೀತಿಯಲ್ಲೇ ಲಸ್ಟ್ ಪ್ರಯತ್ನಗಳು ಕಾಣಿಸುತ್ತಿವೆ. ದೇಸಿ ಪರ್ಯಾಯ ಇರಬಹುದು ಆದರೆ ದುಬಾರಿ. ಅದೇ ರೀತಿ, ಲಸ್ಟ್ ಪ್ರಯತ್ನ ಕೂಡ. ಆಕೆಯ ಸಿನೆಮಾಗಳು ಪೊರ್ನ್ ಜಗತ್ತಿನ ಪರ್ಯಾಯ ಇರಬಹುದು, ಆದರೆ ಉಚಿತವಾಗಿ ಕೈಗೆ ಸಿಗುವುದಿಲ್ಲ!

ಹೀಗೆ, ಮೈಥುನದ ಸುತ್ತ ನಡೆಯುತ್ತಿರುವ ಆಧುನಿಕ ವಿದ್ಯಮಾನಗಳ ಹರವು ದೊಡ್ಡದಿದೆ. ಅದರೊಳಗಿರುವ ವಿಸ್ಮಯಗಳ ಪಟ್ಟಿಯೂ ಬೆಳೆಯುತ್ತಲೇ ಹೋಗುತ್ತವೆ. ನಾವು ಇಷ್ಟನ್ನು ಮಾತ್ರವೇ ಇಲ್ಲಿ ಕಟ್ಟಿಕೊಡಲು ಸಾಧ್ಯವಾಗಿದೆ. ಹೇಳದೆ ಉಳಿದ ವಿಚಾರಗಳೇ ಸಾಕಷ್ಟಿವೆ.

ಯುಕೆ ಮೂಲದ ಚಾನಲ್ 4 ಹೊರತಂದ ‘ಡೇಟ್ ಯುವರ್ ಪೋರ್ನ್ ಸ್ಟಾರ್’, ಬಿಬಿಸಿ ಪೊರ್ನ್ ಮೇಲೆ ಹೊರತಂದ ಡಾಕ್ಯುಮೆಂಟರಿಗಳು, ‘ಹೌ ಐ ಬಿಕಮ್ ಎ ಪೊರ್ನ್ ಸ್ಟಾರ್’ ತರಹದ ಪುಸ್ತಕಗಳು ಹೀಗೆ ಹಲವು ಸರಕುಗಳು ನಿಮ್ಮ ಇನ್ನಷ್ಟು ಕುತೂಹಲವನ್ನು ತಣಿಸಬಹುದು.

ಸದ್ಯಕ್ಕೆ ‘ಸಮಾಚಾರ ಸರಣಿ’ ಇಲ್ಲಿಗೆ ಮುಗಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ, ಹೊಸತೊಂದು ವಿಚಾರದ ಜತೆ, ಹೊಸ ಮಾಲಿಕೆಯಲ್ಲಿ ಸಿಗೋಣ…

(ಮುಗಿಯಿತು)

Leave a comment

Top