An unconventional News Portal.

‘ಮೈಥುನ ಮಿಸ್ಟರಿ’-3: ಟ್ಯೂಬ್ ಸೈಟ್ಸ್ ಸೃಷ್ಟಿಸುವ ಭ್ರಮಾಲೋಕ ಮತ್ತು ಮರೆಯಾದ ವಾಸ್ತವ!

‘ಮೈಥುನ ಮಿಸ್ಟರಿ’-3: ಟ್ಯೂಬ್ ಸೈಟ್ಸ್ ಸೃಷ್ಟಿಸುವ ಭ್ರಮಾಲೋಕ ಮತ್ತು ಮರೆಯಾದ ವಾಸ್ತವ!

ಇವತ್ತು ಒಂದು ದಿನಕ್ಕೆ ಜಗತ್ತಿನಾದ್ಯಂತ ಪೊರ್ನ್ ಮೂವಿಗಳಿಗಾಗಿ ಅಂತರ್ಜಾಲದಲ್ಲಿ ತಡಕಾಡುವವರ ಸಂಖ್ಯೆ ಬರೋಬ್ಬರಿ 10 ಕೋಟಿ! ಅಂದರೆ, ನಮ್ಮ ಕರ್ನಾಟಕ, ಕೇರಳ ಹಾಗೂ ಗೋವಾ ರಾಜ್ಯಗಳ ಒಟ್ಟು ಜನಸಂಖ್ಯೆ.

ಇಷ್ಟು ದೊಡ್ಡ ಪ್ರಮಾಣದ ಗ್ರಾಹಕರನ್ನು ಹೊಂದಿರುವ ಉದ್ಯಮವಾಗಿ ಬೆಳೆದಿರುವ ಪೊರ್ನೋಗ್ರಫಿ ತನ್ನ ಮಾರುಕಟ್ಟೆ ಉಳಿಸಿಕೊಳ್ಳಲು, ತನ್ನ ಗ್ರಾಹಕರನ್ನು ಸೆಳೆಯಲು ನಡೆಸುತ್ತಿರುವ ಕಸರತ್ತುಗಳು, ಅವುಗಳದ್ದೇ ಆದ ಭ್ರಮಾತ್ಮಕ ಲೋಕವೊಂದನ್ನು ಸೃಷ್ಟಿಸಿವೆ. ಮತ್ತದು ಇವತ್ತಿನ ಮಟ್ಟಿಗೆ ಯಾರ ಅಂಕೆಗೂ ಸಿಗದ ಹಾಗೆ ಬೆಳೆದು ಬಿಟ್ಟಿವೆ ಕೂಡ.

porn-shop-1ಅದು 2012ನೇ ಇಸವಿ. ಜರ್ಮನಿ ಮೂಲದ ಫ್ರಾಬ್ರಿಯನ್ ಥೈಲ್ಮ್ಯಾನ್ ಎಂಬಾತನಿಗೆ ಅಂತರ್ಜಾಲದಲ್ಲಿ ಪೊರ್ನೋಗ್ರಫಿ ಹಂಚುವುದು ಹೆಚ್ಚು ಲಾಭಕರ ಎಂಬುದು ಅರ್ಥವಾಗಿತ್ತು. ಮುಂಚೆ ಇದ್ದ ಡಿವಿಡಿ ಹಾಗೂ ಸಿಡಿ ರೂಪದ ಮಾರುಕಟ್ಟೆಯನ್ನು ಈತನ ‘ಟ್ಯೂಬ್’ ವೆಬ್ಸೈಟ್ ಪರಿಕಲ್ಪನೆ ಒಡೆದು ಹಾಕಿತ್ತು. ಪೊರ್ನೋಗ್ರಫಿಯ ಕುರಿತು ಕನಿಷ್ಟ ಜ್ಞಾನ ಇರುವವರಿಗೆ ಈ ‘ಟ್ಯೂಬ್’ ಸೈಟ್ಗಳು ಎಂದರೇನು? ಎಂಬುದು ಗೊತ್ತಿದೆ. ಸಾಮಾನ್ಯವಾಗಿ, ಅಶ್ಲೀಲ ಚಿತ್ರ ತಯಾರಿಸುವ ಕಂಪನಿಗಳು ತಮ್ಮ ಪ್ರೊಡಕ್ಷನ್ ಸ್ಟುಡಿಯೋದ ನಟ ಹಾಗೂ ನಟಿಯರ ಹೆಸರಿನಲ್ಲಿ ಅಥವಾ ತಮ್ಮದೇ ‘ಬ್ರಾಂಡ್’ನಲ್ಲಿ ಪ್ರತ್ಯೇಕ ವೆಬ್ಸೈಟ್ಗಳನ್ನು ನಿರ್ಮಿಸಿಕೊಂಡಿದ್ದಾರೆ. ಇವುಗಳ ಒಟ್ಟು ಸಂಖ್ಯೆಯೇ, ಸುಮಾರು 42 ಲಕ್ಷ. ಅಂದರೆ, ಜಗತ್ತಿನಲ್ಲಿರುವ ಒಟ್ಟು ವೆಬ್ ತಾಣಗಳ ಪೈಕಿ ಇವುಗಳ ಪಾಲೇ ಶೇ. 12ರಷ್ಟಿದೆ.

ಹೀಗೆ, ವಿಸ್ತಾರವಾಗಿ ಹರಡಿಕೊಂಡಿರುವ ವೆಬ್ ತಾಣಗಳನ್ನು ಒಂದೇ ಸೂರಿನಡಿ ತರುವ ಕೆಲಸವನ್ನು ‘ಟ್ಯೂಬ್’ ಸೈಟ್ಗಳು ಮಾಡುತ್ತಿವೆ. ಇಲ್ಲಿ, ಮೂಲ ವೆಬ್ ತಾಣಗಳು ಉಚಿತವಾಗಿ ನೀಡುವ ವಿಡಿಯೋ ತುಣುಕುಗಳು ಸಿಗುತ್ತವೆ. ಇಲ್ಲಿಗೆ ಬರುವ ಗ್ರಾಹಕರಿಗೆ ತುಣಕು ವಿಡಿಯೋಗಳ ಮೂಲಗಳಿಗಾಗಿ, ಒರಿಜಿನಲ್ ವೆಬ್ ತಾಣಗಳಿಗೆ ಭೇಟಿ ನೀಡುವಂತೆ ಪ್ರಚೋದಿಸಲಾಗುತ್ತದೆ. ಅಲ್ಲಿ ಹೆಚ್ಚಿನ ಸಮಯದ ಹಾಗೂ ಗುಣಮಟ್ಟದ (ವಿಡಿಯೋ ಕ್ವಾಲಿಟಿ) ವಿಡಿಯೋ ನೋಡಬೇಕು ಎಂದರೆ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಹೀಗೆ, ಪ್ರತಿ ದಿನ ಭೇಟಿ ನೀಡುವ 10 ಕೋಟಿ ಗ್ರಾಹಕರಲ್ಲಿ ಶೇ. 1ರಷ್ಟು ಜನ ನೋಂದಣಿ ಮಾಡಿಸಿಕೊಂಡರೂ, ವಹಿವಾಟಿನ ಪ್ರಮಾಣ ಎಷ್ಟಿರಬಹುದು, ಊಹಿಸಿ ನೋಡಿ. ಇದರ ಜತೆಗೆ ‘ಲೈವ್ ಕ್ಯಾಮ್’ ತನ್ನದೇ ಆದ ಪ್ರತ್ಯೇಕ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ಇವುಗಳ ಕೊಂಡಿಗಳನ್ನೂ ‘ಟ್ಯೂಬ್’ ಸೈಟ್ಗಳು ನೀಡುತ್ತವೆ. ಇದರ ಜಾಹೀರಾತುಗಳನ್ನು ‘ಟ್ರಾಫಿಕ್ ಜಂಕಿಸ್’ ನಿರ್ವಹಿಸುತ್ತದೆ. ಪೋರ್ನ್ ಆಸಕ್ತಿಯಿಂದ ಬಂದ ಹಣದಲ್ಲಿ ಇಬ್ಬರಿಗೂ ಸಮಪಾಲು ಇರುತ್ತದೆ. ಇದು ಮಾರುಕಟ್ಟೆಯ ಬಿಜಿನೆಸ್ ಮಾಡೆಲ್.

ಇಂತಹದೊಂದು ಮಾರುಕಟ್ಟೆಯ ಪರಿಕಲ್ಪನೆಯನ್ನು ಹುಟ್ಟು ಹಾಕಿದವನು ‘ಮ್ಯಾನ್ ವಿನ್’ ಕಂಪನಿಯ ಸಂಸ್ಥಾಪಕ ಫ್ರಾಬ್ರಿಯನ್ ಥೈಲ್ಮ್ಯಾನ್. ಈತ 2012ರ ಸುಮಾರಿಗೆ ಎಲ್ಲಾ ‘ಟ್ಯೂಬ್’ ಸೈಟ್ಗಳನ್ನು ಕೊಂಡುಕೊಳ್ಳಲು ಭಾರಿ ಮೊತ್ತದ ಹಣದೊಂದಿಗೆ ಅಖಾಡಕ್ಕಿಳಿದ. ಆದರೆ, ಕೆಲವು ‘ಟ್ಯೂಬ್’ ಸೈಟ್ಗಳು ಈತನ ಆಸೆಗೆ ತಣ್ಣೀರು ಎರಚಿದವು. ಮುಂದಿನ ವರ್ಷ ಆತನ ಕಂಪನಿಯ ಮೇಲೆ ಜರ್ಮಿನಿಯ ತೆರಿಗೆ ಅಧಿಕಾರಿಗಳು ತನಿಖೆ ಶುರು ಮಾಡಿದರು. ಈ ಸಮಯದಲ್ಲಿ, ಫ್ರಾಬ್ರಿಯನ್ ತನ್ನ ಕಂಪನಿಯನ್ನೇ ಮಾರಾಟ ಮಾಡಿ, ಅಶ್ಲೀಲ ಚಿತ್ರ ಮಾರುಕಟ್ಟೆಯಿಂದ ಹೊರಬಂದ. ಇವತ್ತು ‘ಮ್ಯಾನ್ ವಿನ್’, ‘ಮೈಂಡ್ ಗೀಕ್’ ಎಂದು ಹೆಸರು ಬದಲಾಯಿಸಿಕೊಂಡಿದೆ. ‘ಟ್ಯೂಬ್’ ಸೈಟ್ಗಳಿನ್ನೂ ಉಚಿತವಾಗಿ ಗ್ರಾಹಕರಿಗೆ ಸಿಗುತ್ತಿವೆ. ನೀವು ಕುತೂಹಲಕ್ಕಾದರೂ, ಈ ವೆಬ್ ತಾಣಕ್ಕೆ ಭೇಟಿ ಕೊಟ್ಟು ನೋಡಿ. ಪೊರ್ನೋಗ್ರಫಿ ಕುರಿತು ಹೊಸ ಒಳನೋಟಗಳನ್ನು ನೀಡುವ ಅಂಕಿ ಅಂಶಗಳಲ್ಲಿ ಲಭ್ಯ ಇವೆ.

porn-film-shooting-2ಇನ್ನು, ಈ ವೆಬ್ ಸೈಟ್ಗಳು ತನ್ನ ಗ್ರಾಹಕರನ್ನು ತೃಪ್ತಿ ಪಡಿಸಲು ನಡೆಸುವ ಕಸರತ್ತುಗಳದ್ದೇ ಇನ್ನೊಂದು ದೊಡ್ಡ ಕತೆ. ಇತ್ತೀಚೆಗೆ ಅತಿರೇಕದ ಮೈಥುನದ ದೃಶ್ಯಗಳಿಗೆ ಅವು ಮೊರೆ ಹೋಗುತ್ತಿವೆ. ಇವೆಲ್ಲವನ್ನೂ ಕ್ಯಾಮೆರಾ ಮುಂದೆ ಹಣಕ್ಕಾಗಿ ನಟಿಸುವವರು, ನಂತರ ತಮ್ಮ ಸಾಮಾನ್ಯ ಬದುಕಿಗೆ ಮರಳುತ್ತಾರೆ. ಆದರೆ. ”ಅವುಗಳಿಗೆ ಮಾರು ಹೋಗಿರುವವರು ಭ್ರಮಾತ್ಮಕವಾದ ಲೋಕವನ್ನು ವಾಸ್ತವಕ್ಕೆ ಇಳಿಸಲು ಪ್ರಯತ್ನಿಸುತ್ತಾರೆ. ಇದು ಸಾಧ್ಯವಾಗುತ್ತಿಲ್ಲ ಎಂದು ಅನ್ನಿಸಿದಾಗ ಖಿನ್ನತೆಗೆ ಒಳಗಾಗುತ್ತಾರೆ,” ಎನ್ನುತ್ತಾರೆ ಮನಃಶಾಸ್ತ್ರಜ್ಞೆ ಡಾ. ದಿವ್ಯಾ ಕೆ. ಆರ್. ಜತೆಗೆ, ಇವು ಮಕ್ಕಳ ಮೇಲೆ ಬೀರುವ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳು ಗಾಬರಿ ಹುಟ್ಟಿಸುಂತಿವೆ. ಪೋರ್ನ್ ಇಂಡಸ್ಟ್ರಿ ಹಾಗೂ ಮಾನವ ಕಳ್ಳ ಸಾಗಣೆ ನಡುವೆ ಇರುವ ಸಂಬಂಧದ್ದೇ ಮತ್ತೊಂದು ಪ್ರತ್ಯೇಕ ಕತೆ.

ಅವೆಲ್ಲವನ್ನೂ ತೆಗೆದುಕೊಂಡು ಬರ್ತೀವಿ. ನಾಳೆ ಮತ್ತೆ ಇಲ್ಲೇ ಸಿಗೋಣ.

(ನಾಳೆಗೆ)

Leave a comment

Top