An unconventional News Portal.

ಜೀನಿಯಸ್ ಮ್ಯಾನ್-1: ಪಾಲಿಟೆಕ್ನಿಕ್ ಪ್ರವೇಶ ಪರೀಕ್ಷೆಯಲ್ಲಿ ಫೇಲಾಗಿದ್ದ ಐನ್‌ಸ್ಟೈನ್; ಒಂದೇ ವರ್ಷದಲ್ಲಿ ನಾಲ್ಕು ಸಿದ್ಧಾಂತಗಳನ್ನು ಮಂಡಿಸಿದ್ದರು!

ಜೀನಿಯಸ್ ಮ್ಯಾನ್-1: ಪಾಲಿಟೆಕ್ನಿಕ್ ಪ್ರವೇಶ ಪರೀಕ್ಷೆಯಲ್ಲಿ ಫೇಲಾಗಿದ್ದ ಐನ್‌ಸ್ಟೈನ್; ಒಂದೇ ವರ್ಷದಲ್ಲಿ ನಾಲ್ಕು ಸಿದ್ಧಾಂತಗಳನ್ನು ಮಂಡಿಸಿದ್ದರು!

ಈ ಜಗತ್ತು ಕಂಡ ಅತ್ಯಂತ ಪ್ರತಿಭಾನ್ವಿತ ವ್ಯಕ್ತಿ ಆಲ್ಬರ್ಟ್ ಐನ್ಸ್ಟೈನ್. ಆತನನ್ನು ‘ಜೀನಿಯಸ್ ಮ್ಯಾನ್’ ಎಂದು ಕರೆಯಲಾಗುತ್ತಿದೆ. ಮನುಷ್ಯ ಪ್ರಾಣಿಯೊಂದು ಜೀವಿತಾವಧಿಯಲ್ಲಿ ತನ್ನ ಬುದ್ಧಿಮತ್ತೆಯ ಬಳಕೆಯ ಕಾರಣಕ್ಕೆ ಹೀಗೊಂದು ಹೊಗಳಿಕೆ ಪಡೆದುಕೊಂಡಿದ್ದರೆ, ಅದು ಐನ್ಸ್ಟೈನ್ ಮಾತ್ರ.

ವಿಜ್ಞಾನ ಲೋಕದಲ್ಲಿ ಐನ್ಸ್ಟೈನ್ ಸಾಧಿಸಿದ್ದೇನು? ಮಂಡಿಸಿದ ಸಿದ್ಧಾಂತಗಳೇನು? ಅವುಗಳಿಂದ ಈ ಜಗತ್ತು ಪಡೆದುಕೊಂಡ ಪ್ರಯೋಜನಗಳೇನು? ಈ ಪ್ರಶ್ನೆಗಳಿಗೆ ಉತ್ತರ ಒಂದು ಆಯಾಮದಲ್ಲಿ ಸಿಕ್ಕಿ ಬಿಡುತ್ತದೆ. ಆತ ಸವೆಸಿದ ಬದುಕು ಎಂತಹದಿತ್ತು? ಆತನ ಸುತ್ತ ಹರಡಿಕೊಂಡ ಎರಡನೇ ಮಹಾಯುದ್ಧ, ಅಣುಬಾಂಬ್, ಹಿಟ್ಲರ್ ಮತ್ತು ಐನ್ಸ್ಟೈನ್ ತಳೆದ ರಾಜಕೀಯ ನಿಲುವುಗಳ ವಿಚಾರಗಳು ಹೊಸಬಗೆಯ ಆಯಾಮವೊಂದನ್ನು ಕಟ್ಟಿಕೊಡುತ್ತವೆ. ಮತ್ತವು ಜೀನಿಯಸ್ ಮ್ಯಾನ್ ಒಬ್ಬನ ಸೃಷ್ಟಿಯಲ್ಲಿ ಪಾತ್ರವಹಿಸಿದ ಬಗೆಯನ್ನು ಬಿಚ್ಚಿಡುತ್ತವೆ.

ಐನ್ಸ್ಟೈನ್ ಕುರಿತಾಗಿನ ಇಂತಹ ಹತ್ತು ಹಲವು ಕುತೂಹಲಕಾರಿ ವಿಚಾರಗಳನ್ನು ನಿಮ್ಮೆದುರಿಗೆ ಇಡುವ ಅಪರೂಪದ ಲೇಖನಗಳ ಗುಚ್ಛ ಇದು. ‘ಸಮಾಚಾರ’ದ ಆರನೇ ವಿಶೇಷ ಸರಣಿ ಮಾಲಿಕೆ- ‘ಜೀನಿಯಸ್ ಮ್ಯಾನ್’ ನಿಮ್ಮೆದುರಿಗೆ ಇಡುತ್ತಿದ್ದೇವೆ. ಓದುವ ಖುಷಿ ನಿಮ್ಮದಾಗಲಿ…

ಭಾಗ: 1

einstein-childಐನ್‌ಸ್ಟೈನ್ ಹುಟ್ಟಿದ್ದು ಜರ್ಮನಿಯ ಉಲ್ಮ್ ನಲ್ಲಿ. ಇಸವಿ 1879, ಮಾರ್ಚ್ 14ನೇ ತಾರೀಖು.  ಸುಮಾರು 5 ವರ್ಷಗಳವರೆಗೆ ಐನ್‌ಸ್ಟೈನ್ ಮಾತನಾಡುತ್ತಿರಲಿಲ್ಲ; ಮೂಗನಾಗಿದ್ದ. ಈತನ ತಂದೆ ತಾಯಿ ಸಹಜವಾಗಿಯೇ ಚಿಂತೆಗೆ ಬಿದ್ದಿದ್ದರು. ನಿಧಾನವಾಗಿ ಮಾತು ಆರಂಭಿಸಿದ ಐನ್‌ಸ್ಟೈನ್ಗೆ ಮಾತಿನ ಸಮಸ್ಯೆ 9 ವರ್ಷಗಳವರೆಗೂ ಇತ್ತು. ಈ ಕಾರಣದಿಂದ ಐನ್‌ಸ್ಟೈನ್ ಹೆಚ್ಚು ಮೌನಿಯಾಗಿರುತ್ತಿದ್ದ, ಭಾವನೆಗಳನ್ನು ಹೊರ ಹಾಕಲು ಆತನ ಬಳಿ ದಾರಿಗಳಿರಲಿಲ್ಲ. ಈ ಕಾರಣಕ್ಕೆ ಆಲೋಚನೆ ಮಾಡುವ ಅಭ್ಯಾಸ ಐನ್‌ಸ್ಟೈನ್ಗೆ ಬೆಳೆದಿರಬಹುದು ಎಂಬ ತರ್ಕಗಳಿವೆ.

ಈ ಭವಿಷ್ಯದ ಮಹಾನ್ ವಿಜ್ಞಾನಿಯನ್ನು ವಿಜ್ಞಾನ ತನ್ನತ್ತ ಸೆಳೆದಿದ್ದು ಒಂದು ದಿಕ್ಸೂಚಿಯ ಮೂಲಕ. ಆಲ್ಬರ್ಟ್ 5ವರ್ಷದ ಬಾಲಕನಾಗಿದ್ದಾಗ ಆತನ ಅಪ್ಪ ದಿಕ್ಸೂಚಿಯೊಂದನ್ನು ತಂದು ಕೊಟ್ಟಿದ್ದರು. ದಿಕ್ಸೂಚಿ ಆತನಿಗೆ ಸೋಜಿಗ ಅಂತ ಅನಿಸಿತ್ತು. ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುತ್ತಾ ಹೋದ. ಅದು ಆತನನ್ನೇ ವಿಜ್ಞಾನದತ್ತ ಎಳೆದು ತಂದಿತು.

ತನ್ನ ಪ್ರೌಢಾವಸ್ಥೆಯನ್ನು ಐನ್‌ಸ್ಟೈನ್ ಜರ್ಮನಿ ರಾಜಧಾನಿ ಮ್ಯೂನಿಚ್ ನಲ್ಲಿ ಕಳೆದ. ಅಲ್ಲಿ ಅವರ ಕುಟುಂಬಸ್ಥರಿಗೆ ಎಲೆಕ್ಟ್ರಾನಿಕ್ ವಸ್ತುಗಳ ಉದ್ಯಮವಿತ್ತು. 1894ರ ಅಂತ್ಯಕ್ಕೆ ಉದ್ಯಮ ನೆಲಕಚ್ಚಿತು. ಮ್ಯೂನಿಚ್ನಿಂದ ಇಟಲಿಯ ಮಿಲಾನ್ಗೆ, ಅಲ್ಲಿಂದ ಪೇವಿಯಾಗೆ ಕುಟುಂಬದ ವಾಸ್ತವ್ಯ ಬದಲಾಯಿತು. ಆದರೆ ಶಾಲೆ ಪೂರ್ಣಗೊಳಿಸಲು ಐನ್‌ಸ್ಟೈನ್ ಮ್ಯೂನಿಚ್ನಲ್ಲೇ ಉಳಿದುಕೊಂಡ.

1895ರಲ್ಲಿ ತನ್ನ 16ನೇ ವಯಸ್ಸಿಗೆ ಜ್ಯೂರಿಚ್ನಲ್ಲಿದ್ದ ಸ್ವಿಸ್ ಫೆಡರಲ್ ಪಾಲಿಟೆಕ್ನಿಕ್ಗೆ ಪ್ರವೇಶ ಪರೀಕ್ಷೆ ಬರೆದಿದ್ದ ಐನ್‌ಸ್ಟೈನ್. ಗಣಿತ ಮತ್ತು ಭೌತ ವಿಜ್ಞಾನ ಬಿಟ್ಟು ಉಳಿದ ವಿಷಯಗಳಲ್ಲಿ ಡುಮ್ಕಿ ಹೊಡೆದಿದ್ದ. ಕೊನೆಗೆ ಸ್ವಿಟ್ಜರ್ಲ್ಯಾಂಡ್ನಲ್ಲೇ ಹೈಸ್ಕೂಲು ಸೇರಿದ. ನಮ್ಮೆಲ್ಲರಂತೆ ಆತನಿಗೆ ಅಲ್ಲಿನ ಅಧ್ಯಾಪಕರ ಪಾಠ ಬೋರು ಹೊಡೆಸುತ್ತಿತ್ತು. ಕಾಲೇಜಿಗೆ ಬಂಕ್ ಹಾಕುತ್ತಿದ್ದ. ಅದಕ್ಕೆ ಬದಲಾಗಿ ವಯೋಲಿನ್ ನುಡಿಸುತ್ತಾ ಕೂರುತ್ತಿದ್ದ; ಫಿಸಿಕ್ಸ್ ಲ್ಯಾಬ್ನಲ್ಲಿ ಪ್ರಯೋಗಗಳನ್ನು ಮಾಡುತ್ತಿದ್ದ. ಐನ್‌ಸ್ಟೈನ್ಗೆ ವಯೋಲಿನ್ ಮತ್ತು ಸಂಗೀತ ಎಂದರೆ ಅತೀವ ಮೋಹ. ಒಂದೊಮ್ಮೆ ನಾನು ವಿಜ್ಞಾನಿಯಾಗದಿದ್ದರೆ; ಸಂಗೀತಗಾರನಾಗುತ್ತಿದ್ದೆ ಎಂದು ಸ್ವತಃ ಐನ್‌ಸ್ಟೈನ್ ಹೇಳಿಕೊಂಡಿದ್ದರು. ಹೈಸ್ಕೂಲು ಓದುತ್ತಿದ್ದಾಗಲೇ ಐನ್‌ಸ್ಟೈನ್ಗೆ ಮನೆ ಪಾಠ ಹೇಳಿಕೊಡುತ್ತಿದ್ದ ಮೇಷ್ಟ್ರ ಮಗಳ ಜೊತೆ ಪ್ರೇಮ ಅಂಕುರಿಸಿತ್ತು; ಆಕೆಯ ಹೆಸರು ಮೇರಿ ವಿಂಟ್ಲರ್. ಐನ್‌ಸ್ಟೈನ್ ಬರೆದ ಪತ್ರಗಳಲ್ಲೇ ಇವೆಲ್ಲಾ ದಾಖಲಾಗಿವೆ.

ಐನ್‌ಸ್ಟೈನ್ ಅಪ್ಪನಿಗೆ ಮಗ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಬೇಕು ಎಂಬ ಅದಮ್ಯ ಆಸೆ; ಈತನಿಗೆ ನಾನು ಪ್ರಾಧ್ಯಾಪಕನಾಗುತ್ತೇನೆ ಎಂಬ ಬಯಕೆ. ಕೊನೆಗೆ ಮತ್ತೆ ಪರೀಕ್ಷೆ ಬರೆದು ನಾಲ್ಕು ವರ್ಷಗಳ ಗಣಿತ ಮತ್ತು ಭೌತವಿಜ್ಞಾನದ ಟೀಚಿಂಗ್ ಡಿಪ್ಲೊಮೋ ಕೋರ್ಸ್ಗೆ ಜೂರಿಚ್ ಪಾಲಿಟೆಕ್ನಿಕ್ನಲ್ಲಿ ಹೆಸರು ನೋಂದಾಯಿಸಿಕೊಂಡ. ಅಲ್ಲಿಗೆ ಬಂದಿದ್ದಳು ಆತನ ಭಾವೀ ಪತ್ನಿ ಮಿಲೇವಾ ಮ್ಯಾರಿಕ್; ಆಕೆಯೂ ಅಲ್ಲಿ ವಿದ್ಯಾರ್ಥಿನಿಯಾಗಿ ಹೆಸರು ನೋಂದಾಯಿಸಿಕೊಂಡಿದ್ದಳು. ಆರು ಜನರ ತರಗತಿಯಲ್ಲಿ ಈಕೆಯೊಬ್ಬಳೇ ಹುಡುಗಿ.

ಮಿಲೇವಾ ಮ್ಯಾರಿಕ್ ಮತ್ತು ಐನ್‌ಸ್ಟೈನ್

ಮೊದಲ ಪತ್ನಿ ಮಿಲೇವಾ ಮ್ಯಾರಿಕ್ ಮತ್ತು ಐನ್‌ಸ್ಟೈನ್

ಕೆಲವೇ ವರ್ಷಗಳಲ್ಲಿ ಮಿಲೇವಾ ಮತ್ತು ಐನ್‌ಸ್ಟೈನ್ ಸ್ನೇಹ ಪ್ರಣಯದತ್ತ ತಿರುಗಿತು. ಐನ್‌ಸ್ಟೈನ್ಗೆ ಇಷ್ಟವಿದ್ದ ಭೌತ ವಿಜ್ಞಾನದ ಪುಸ್ತಕಗಳನ್ನು ಅವರಿಬ್ಬರು ಒಟ್ಟಿಗೆ ಓದುತ್ತಿದ್ದರು. 1900ರಲ್ಲಿ ಐನ್‌ಸ್ಟೈನ್ ಪಾಲಿಟೆಕ್ನಿಕ್ ಮುಗಿಸಿದ, ಆದರೆ ಮಿಲೇವಾ ಫೇಲ್ ಆಗಿದ್ದಳು. ಮುಂದಿನ ಎರಡು ವರ್ಷ ಅಧ್ಯಾಪನ ಮಾಡಲು ಐನ್‌ಸ್ಟೈನ್ ಕೆಲಸ ಹುಡುಕಿದ. ಆದರೆ ಕೆಲಸ ಸಿಗಲೇ ಇಲ್ಲ. 1902ರಲ್ಲಿ ಐನ್‌ಸ್ಟೈನ್ ಸ್ವಿಸ್ ಪೇಟೆಂಟ್ ಆಫೀಸಿನಲ್ಲಿ ಪರೀಕ್ಷಕನ ಕೆಲಸಕ್ಕೆ ಸೇರಿಕೊಂಡ. ಅಲ್ಲಿದ್ದಾಗಲೇ ಐನ್‌ಸ್ಟೈನ್ ಸಹಪಾಠಿ ಮಿಲೇವಾ ಮ್ಯಾರಿಕ್ ಜೊತೆ ಲಿವ್ ಇನ್ ಸಂಬಂಧ ಹೊಂದಿದ್ದರು. ಇವರಿಗೆ ಮಗಳು ಹುಟ್ಟಿದಳು. ಮಿಲೇವಾ ತವರಲ್ಲಿ ಮಗುವಿಗೆ ಜನ್ಮ ನೀಡಿದಳು. ಆದರೆ ಐನ್‌ಸ್ಟೈನ್ ಬಳಿಗೆ ಮಿಲೇವಾ ಮರಳಿ ಬಂದಾಗ ಮಗು ಇರಲಿಲ್ಲ. ಐನ್‌ಸ್ಟೈನ್ ಎಂಬ ಜನಪ್ರಿಯ ವಿಜ್ಞಾನಿಯ ಮೊದಲ ಮಗು ಏನಾಯ್ತು? ಎಲ್ಲಿಗೆ ಹೋಯ್ತು? ಎಂಬುದಕ್ಕೆ ಇಂದಿಗೂ ದಾಖಲೆಗಳಿಲ್ಲ. ಮುಂದೆ 1903ರಲ್ಲಿ ಇಬ್ಬರ ಮಧ್ಯೆ ಮದುವೆ ನಡೆಯಿತು; ಆ ನಂತರ ಎರಡು ಗಂಡು ಮಕ್ಕಳೂ ಹುಟ್ಟಿದರು. ಒಬ್ಬ ಹಾನ್ಸ್ ಆಲ್ಬರ್ಟ್ ಇನ್ನೊಬ್ಬ ಎಡ್ವರ್ಡ್.

ಕಾಲೇಜು ದಿನಗಳಲ್ಲಿ ಆಲ್ಬರ್ಟ್ ಐನ್‌ಸ್ಟೈನ್

ಕಾಲೇಜು ದಿನಗಳಲ್ಲಿ ಆಲ್ಬರ್ಟ್ ಐನ್‌ಸ್ಟೈನ್

1900ರಲ್ಲೇ ಐನ್‌ಸ್ಟೈನ್ ಸಿದ್ಧಾಂತವೊಂದು ಜರ್ಮನಿಯ ಪ್ರತಿಷ್ಠಿತ ‘ಅನ್ನಲೆನ್ ಡೆರ್ ಫಿಸಿಕ್’ ನಿಯತಕಾಲಿಕೆಯಲ್ಲಿ ಪ್ರಕಟವಾಯಿತು. 1905 ಐನ್‌ಸ್ಟೈನ್ ಪಾಲಿಗೆ ಮತ್ತು ವಿಜ್ಞಾನದ ಪಾಲಿಗೆ ಮಹತ್ವದ ವರ್ಷ. ಆ ವರ್ಷ ಐನ್‌ಸ್ಟೈನ್ಗೆ ಜ್ಯೂರಿಚ್ ವಿಶ್ವವಿದ್ಯಾಲಯ ಪಿಎಚ್ಡಿ ಗೌರವ ನೀಡಿತು. ಅದಕ್ಕಿಂತ ಹೆಚ್ಚಾಗಿ ಅದೇ ಒಂದು ವರ್ಷದಲ್ಲಿ ಐನ್‌ಸ್ಟೈನ್ ನಾಲ್ಕು ಪೇಪರ್ಗಳನ್ನು ಮೇಲಿಂದ ಮೇಲೆ ಪಬ್ಲಿಷ್ ಮಾಡಿದರು. ಬ್ರೌನಿಯನ್ ಮೋಶನ್, ಮಾಸ್ ಎನರ್ಜಿ ಈಕ್ವಿವಾಲೆನ್ಸ್, ಫೋಟೋ ಎಲೆಕ್ಟ್ರಿಕ್ ಇಫೆಕ್ಟ್, ಮತ್ತು ಸ್ಪೆಷಲ್ ಥಿಯರಿ ಆಫ್ ರಿಲೇಟಿವಿಟಿ (ವಿಶೇಷ ಸಾಪೇಕ್ಷ ಸಿದ್ಧಾಂತ). ಇವೆಲ್ಲಾ ಒಂದಕ್ಕೊಂದು ಮೀರಿದ ಸಿದ್ಧಾಂತಗಳು.

ಇಡೀ ವಿಜ್ಞಾನದ ದಿಕ್ಕು ಮತ್ತು ದೆಸೆಯನ್ನೇ ಬದಲಾಯಿಸಿದ ಈ ಸಿದ್ದಂತಗಳನ್ನು ಕೇವಲ ಒಂದು ವರ್ಷದ ಅಂತರದಲ್ಲಿ ಐನ್ ಸ್ಟೈನ್ ಬರೆದಿದ್ದರು. ಇವತ್ತಿಗೂ ಇದೊಂದು ಪವಾಡ ಎಂದು ವಿಜ್ಞಾನ ಲೋಕ ಗುರುತಿಸುತ್ತದೆ. ಇದರಲ್ಲಿ ಐನ್‌ಸ್ಟೈನ್ ಪತ್ನಿ ಮಿಲೇವಾ ಮ್ಯಾರಿಕ್ ಪಾತ್ರವೂ ಇದೇ ಎಂಬ ಮಾತುಗಳು ಚಾಲ್ತಿಯಲ್ಲಿವೆ. ಆದರೆ ಇದಕ್ಕೆ ಇಂದಿನವರೆಗೆ ಸ್ಪಷ್ಟ ಪುರಾವೆಗಳು ಮಾತ್ರ ಸಿಕ್ಕಿಲ್ಲ.

ಐನ್‌ಸ್ಟೈನ್ ವಿಜ್ಞಾನಿಯಾಗಿ ದೊಡ್ಡ ಮಟ್ಟಕ್ಕೆ ಹೆಸರು ಗಳಿಸಿದ ನಂತರ ವಿಶ್ವದಾದ್ಯಂತ ಸುತ್ತಾಟ ಆರಂಭವಾಯಿತು. ಆಗ ತನ್ನ ಹೆಂಡತಿಗೇ ಅಪರಿಚಿನಾಗಿ ಬಿಟ್ಟರು ಐನ್‌ಸ್ಟೈನ್. ಈ ಸಂದರ್ಭ ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇಬ್ಬರೂ ಮುಂದಾದರು. ಆಗ ಜೊತೆಗೆ ಬಾಳಬೇಕೆಂದರೆ ಐನ್‌ಸ್ಟೈನ್ ಕೆಲವು ಕರಾರುಗಳನ್ನು ಪತ್ನಿ ಮಂದಿಟ್ಟರು. ಬಹುಶಃ ಗಣಿತದ ಸೂತ್ರಗಳಲ್ಲೇ ಮಿಂದೇಳುತ್ತಿದ್ದ ಐನ್‌ಸ್ಟೈನ್ಗೆ ಇಲ್ಲೂ ಸೂತ್ರಗಳಿಂದ ಹೊರಬರಲಾಗಲಿಲ್ಲವೇನೋ.

‘ನನ್ನ ಬಟ್ಟೆಯನ್ನು ಚೆನ್ನಾಗಿ ಇಟ್ಟಿರಬೇಕು, ದಿನಕ್ಕೆ ಮೂರು ಬಾರಿ ಊಟ ಕೊಡಬೇಕು, ನಾನು ಮಲಗುವ ಕೋಣೆ ಮತ್ತು ನನ್ನ ಟೇಬಲ್ ಚೆನ್ನಾಗಿರಬೇಕು, ಅದರಲ್ಲೂ ನನ್ನ ಟೇಬಲನ್ನು ಯಾರೂ ಮುಟ್ಟಬಾರದು’ ಎಂದು ಷರತ್ತು ವಿಧಿಸಿದರು ಐನ್‌ಸ್ಟೈನ್. ‘ಸಮಾಜಕ್ಕೆ ಇದೆಲ್ಲಾ ಬೇಕಾಗಿಲ್ಲದೇ ಇದ್ದರೂ ನೀನು ನನ್ನೊಂದೊಗಿನ ಎಲ್ಲಾ ಸಂಬಂಧಗಳನ್ನು ತ್ಯಜಿಸಬೇಕು’ ಎಂಬ ಕರಾರನ್ನು ಪತ್ನಿಯ ಮುಂದಿಟ್ಟಿದ್ದರು. ಇದಕ್ಕೆಲ್ಲಾ ಒಪ್ಪಿ ಆಕೆ ಐನ್‌ಸ್ಟೈನ್ ಜೊತೆ ಹೊಸ ಬಾಳ್ವೆ ಆರಂಭಿಸಿದ್ದರು. ಹೀಗಿದ್ದೂ 14 ಫೆಬ್ರವರಿ 1919ರಲ್ಲಿ ಇವರ ದಾಂಪತ್ಯ ಕೊನೆಯಾಗಿತ್ತು.

ನಂತರ ಐನ್‌ಸ್ಟೈನ್ ತಮ್ಮ ಕಸಿನ್ ಎಲಸಾ ಲೋವೆಂತಲ್ ಎಂಬಾಕೆಯನ್ನು ಅದೇ ವರ್ಷ ಜೂನ್ನಲ್ಲಿ ವಿವಾಹವಾದರು. 1912ರಿಂದ ಆಕೆಯ ಜತೆಗಿದ್ದ ಸಂಬಂಧಕ್ಕೆ ಮದುವೆಯ ರೂಪ ನೀಡಿದ್ದರು ಅಷ್ಟೆ.

ಎರಡನೇ ಪತ್ನಿ ಎಲಸಾ ಲೊವೆಂತಲ್ ಜತೆ ಐನ್‌ಸ್ಟೈನ್

ಎರಡನೇ ಪತ್ನಿ ಎಲಸಾ ಲೊವೆಂತಲ್ ಜತೆ ಐನ್‌ಸ್ಟೈನ್

1905ರಲ್ಲಿ ತಮ್ಮ ಸಿದ್ಧಾಂತಗಳನ್ನು ಜರ್ಮನಿ ಭಾಷೆಯಲ್ಲಿ ಮಂಡಿಸಿದ ನಂತರ ಐನ್‌ಸ್ಟೈನ್ ಜಗದ್ವಿಖ್ಯಾತರಾದರು. ಅದಕ್ಕೂ ಮುಂಚೆ ಐನ್‌ಸ್ಟೈನ್ ಮಂಡಿಸಿದ ಕೆಲವು ಸಿದ್ಧಾಂತಗಳನ್ನು ನಂಬಲು ಜಗತ್ತೇ ಸಿದ್ಧವಿರಲಿಲ್ಲ.

ಐನ್‌ಸ್ಟೈನ್ ಸಿದ್ಧಾಂತಗಳ ಕತೆ ಏನಾಯ್ತು? ವಿಜ್ಞಾನವನ್ನೇ ಅವು ಹೇಗೆ ಬದಲಾಯಿಸಿದವು? ಇನ್ನಷ್ಟು ರೋಚಕ ವಿಚಾರಗಳನ್ನು ನಿಮ್ಮೆದುರಿಗೆ ಇಡುವ ಮುಂಚೆ ಇದಿಷ್ಟು ಮುನ್ನುಡಿ ಅಷ್ಟೆ.

(ನಾಳೆಗೆ…)

Leave a comment

Top