An unconventional News Portal.

ಜೀನಿಯಸ್ ಮ್ಯಾನ್- 3: ಪ್ರಶ್ನೆ ಕೇಳಿದವರಿಗೆ ಬುದ್ಧಿವಂತ ವಿಜ್ಞಾನಿ ಮುಂದಿಡುತ್ತಿದ್ದ ಸಾಧನೆಯ ಸರಳ ಸೂತ್ರ; A=X+Y+Z!

ಜೀನಿಯಸ್ ಮ್ಯಾನ್- 3: ಪ್ರಶ್ನೆ ಕೇಳಿದವರಿಗೆ ಬುದ್ಧಿವಂತ ವಿಜ್ಞಾನಿ ಮುಂದಿಡುತ್ತಿದ್ದ ಸಾಧನೆಯ ಸರಳ ಸೂತ್ರ; A=X+Y+Z!

ಐನ್‌ಸ್ಟೈನ್ ಅಪ್ಪಟ ಪ್ರತಿಭಾವಂತ, ಜಗತ್ತಿಗೇ ಬುದ್ಧಿವಂತ ಎಂಬ ಮಾತುಗಳಿವೆ. ಹೀಗಿದ್ದೂ ಇವರಿಗೆ ಕ್ವಾಂಟಂ ಮೆಕ್ಯಾನಿಕ್ಸ್ ಅರ್ಥವಾಗಿರಲಿಲ್ಲ! ಏಕಕಾಲದಲ್ಲಿ ಎರಡು ಕಡೆ ಒಂದೇ ಅಣು (ಡ್ಯುಯಲ್ ನೇಚರ್) ಇರಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಇದು ಇಬ್ಬರು ಮೇಧಾವಿ ವಿಜ್ಞಾನಿಗಳ ಮಧ್ಯೆ ಚರ್ಚೆಗೆ ನಾಂದಿ ಹಾಡಿತು. ಒಬ್ಬ ನೀಲ್ಸ್ ಬೋರ್ ಇನ್ನೊಬ್ಬರು ಆಲ್ಬರ್ಟ್ ಐನ್‌ಸ್ಟೈನ್.

ಅವರಿಬ್ಬರದೂ ವಿಚಿತ್ರ ಸಂಬಂಧ. ಮೊದಲಿಗೆ ಐನ್‌ಸ್ಟೈನ್ ಬೆಳಕಿನ ಕಣಗಳ ರೀತಿಯಲ್ಲೂ ವರ್ತಿಸುತ್ತದೆ ಎಂದಾಗ ನೀಲ್ಸ್ ಬೋರ್ ಒಪ್ಪಲಿಲ್ಲ. ಮುಂದೆ ನೀಲ್ಸ್ ಬೋರ್ ಹೈಡ್ರೋಜನ್ ಅಣುವಿನ ಮಾದರಿಯನ್ನು ಅನ್ವೇಷಣೆ ಮಾಡಿದಾಗ ಐನ್‌ಸ್ಟೈನ್ ಅದನ್ನು ನಂಬಿರಲಿಲ್ಲ. ಬಹುಶಃ ಅವರಿಬ್ಬರ ಜಗಳ ವಿಜ್ಞಾನ ಕ್ಷೇತ್ರ ಕಂಡ ದೀರ್ಘವಾದ ಜಗಳಗಳಲ್ಲಿ ಒಂದು.

ಖ್ಯಾತ ವಿಜ್ಞಾನಿಗಳಾದ ಆಲ್ಬರ್ಟ್ ಐನ್ಸ್ಟೈನ್ ಮತ್ತು ನೀಲ್ಸ್ ಬೋರ್ ಗಹನವಾದ ಚರ್ಚೆಯೊಂದರಲ್ಲಿ

ಖ್ಯಾತ ವಿಜ್ಞಾನಿಗಳಾದ ಆಲ್ಬರ್ಟ್ ಐನ್ಸ್ಟೈನ್ ಮತ್ತು ನೀಲ್ಸ್ ಬೋರ್ ಗಹನವಾದ ಚರ್ಚೆಯೊಂದರಲ್ಲಿ

1926ರಲ್ಲಿ ಮ್ಯಾಕ್ಸ್ ಬಾರ್ನ್ ಕ್ವಾಟಂ ಮೆಕ್ಯಾನಿಕ್ಸನ್ನು ಅರ್ಥಮಾಡಿಕೊಳ್ಳಲು ಪ್ರೊಬ್ಯಾಬಿಲಿಟಿಯೇ (ಸಂಭವನೀಯತೆ) ದಾರಿ ಎಂದಾಗ ಅದನ್ನು ನೀಲ್ಸ್ ಬೋರ್ ಮತ್ತು ಮ್ಯಾಕ್ಸ್ ಪ್ಲಾಂಕ್ ಒಪ್ಪಿಕೊಂಡು ವಿಜ್ಞಾನದಲ್ಲಿ ಕ್ರಾಂತಿಯೇ ನಡೆದು ಹೋಯ್ತು ಎಂದು ಘೋಷಿಸಿದರು. ಆದರೆ ಅದನ್ನು ಒಪ್ಪಲು ಐನ್‌ಸ್ಟೈನ್ ಸಿದ್ಧವಿರಲಿಲ್ಲ. ಇದಕ್ಕಾಗಿ ಮತ್ತಷ್ಟು ಅಭಿವೃದ್ಧಿ ಹೊಂದಿದ ಮಾದರಿಗಳು ಬೇಕು ಎಂದು ಪ್ರತಿಪಾದಿಸಿದರು. ಅನ್’ಸರ್ಟೆನಿಟಿ (ಅನಿಶ್ಚಿತತೆ) ಪ್ರಿನ್ಸಿಪಲ್ ಅನ್ನು ಐನ್‌ಸ್ಟೈನ್ ನಂಬಲಿಲ್ಲ. ಆಗ ಐನ್‌ಸ್ಟೈನ್ ನೀಡಿದ ಹೇಳಿಕೆ: God is not playing at dice (ದೇವರು ಕವಡೆ ಜೊತೆ ಆಟವಾಡುವುದಿಲ್ಲ) ವಿಶ್ವಪ್ರಸಿದ್ಧವಾಗಿತ್ತು.

ಇದರ ಮಧ್ಯೆ ಐನ್‌ಸ್ಟೈನ್ ನಿಯತಕಾಲಿಕೆಯಲ್ಲಿ ತಮ್ಮ ವಿಷಯ ಮಂಡಿಸಿದರು. ಅದಕ್ಕೆ ವಿರುದ್ಧವಾಗಿ ಬೋರ್ ವಿಷಯ ಮಂಡಿಸುತ್ತಿದ್ದರು. ಸಾಯುವವರೆಗೂ ತಾನು ಹೇಳಿದ್ದೇ ಸರಿ ಎಂದು ಐನ್‌ಸ್ಟೈನ್ ಪ್ರತಿಪಾದಿಸುತ್ತಾ ಬಂದರು. ಆದರೆ ಕೊನೆಗೆ ಬೋರ್ ಹೇಳಿದ್ದು ನಿಜವಾಗಿತ್ತು. ಐನ್‌ಸ್ಟೈನ್ ಸೋತಿದ್ದರು.

ವಿಚಿತ್ರವೆಂದರೆ ಕ್ವಾಂಟಂ ಮೆಕ್ಯಾನಿಕ್ಸ್ ಅಭಿವೃದ್ಧಿಯಲ್ಲಿ ಐನ್‌ಸ್ಟೈನ್ ಪಾತ್ರ ಮಹತ್ವದ್ದಾಗಿತ್ತು. “ಕ್ವಾಂಟಂ ಮೆಕ್ಯಾನಿಕ್ಸನ್ನು ವಿರೋಧಿಸುತ್ತಲೇ ಮೇಲಿಂದ ಮೇಲೆ ಪ್ರಶ್ನೆ ಮಾಡುತ್ತಾ ಅದನ್ನು ಬೆಳೆಸಿದ್ದೂ ಇದೇ ಐನ್‌ಸ್ಟೈನ್,” ಎನ್ನುತ್ತಾರೆ ಭೌತಶಾಸ್ತ್ರ ಉಪನ್ಯಾಸಕ ಕೇಶವ್ ಟಿ. ಎನ್. ಇವತ್ತಿನ ವಿಜ್ಞಾನದ ತಳಪಾಯವಾಗಿರುವ ಕ್ವಾಂಟಂ ಮೆಕ್ಯಾನಿಕ್ಸನ್ನು ಇಬ್ಬರೂ ತಮ್ಮ ಜಗಳದಿಂದಾಗಿಯೇ ಬೆಳೆಸಿದರು. ಮೇಧಾವಿಗಳ ಜಟಾಪಟಿಯಿಂದಾಗಿ ಸಹಜವಾಗಿಯೇ ಈ ಕ್ಷೇತ್ರದಲ್ಲಿ ಅತ್ಯುನ್ನತ ಎನಿಸುವಂತ ಸಂಶೋಧನೆಗಳು ನಡೆದವು. ಜಗತ್ತಿನ ಯುವ ವಿಜ್ಞಾನಿಗಳೆಲ್ಲಾ ಈ ಕ್ಷೇತ್ರದತ್ತ ಸೆಳೆದಿದ್ದರಿಂದ ವೇಗವಾಗಿ ಸಂಶೋಧನೆಗಳಾದವು. ಭೌತ ವಿಜ್ಞಾನ ಕ್ಷೇತ್ರ ನಾಗಾಲೋಟದಿಂದ ಮುನ್ನಡೆಯಿತು.

ಅವತ್ತಿಗೆ ಇವರಿಬ್ಬರ ಜಗಳ ನೋಡಿದವರಿಗೆ, ಇವರು ಆ ಜನ್ಮ ವೈರಿಗಳಿರಬೇಕು ಅನ್ನಿಸುವಂತಿತ್ತು. ಆದರೆ ಐನ್‌ಸ್ಟೈನ್ ಎಂತಹ ವ್ಯಕ್ತಿ ಎಂದರೆ ವಿಷಯಕ್ಕಾಗಿ ಮಾತ್ರ ನೀಲ್ಸ್ ಬೋರ್ ಜೊತೆ ಜಗಳವಾಡುತ್ತಿದ್ದರು. ಉಳಿದ ವಿಚಾರಗಳಲ್ಲಿ ಅವರಿಬ್ಬರ ಜೊತೆ ಉತ್ತಮ ಗೆಳತನವಿತ್ತು. ಇಬ್ಬರೂ ಮೇಧಾವಿ ವಿಜ್ಞಾನಿಗಳಾದರೂ ಅವರ ಮಧ್ಯೆ ವೃತ್ತಿ ಸಂಬಂಧಿತ ಅಸೂಯೆಗಳಾಗಲೀ, ವೈರತ್ವಗಳಾಗಲೀ ಹುಟ್ಟಲೇ ಇಲ್ಲ. ಕೊನೆವರೆಗೂ ಅವರಿಬ್ಬರು ಸ್ನೇಹಿತರಾಗಿಯೇ ಇದ್ದರು. ಐನ್‌ಸ್ಟೈನ್ ಮುಖ್ಯವಾಗುವುದು ಈ ಕಾರಣಕ್ಕೆ.

ಐನ್‌ಸ್ಟೈನ್ ಎಷ್ಟು ಗಂಭೀರ ವ್ಯಕ್ತಿಯೋ, ಅಷ್ಟೇ ಹಾಸ್ಯ ಪ್ರಜ್ಞೆಯ ಮನುಷ್ಯ. ಆಗಿಂದಾಗ್ಗೆ ತಮಾಷೆಯ ಅಭಿವ್ಯಕ್ತಿಗಳನ್ನು ಸೃಷ್ಟಿಸುತ್ತಿದ್ದರು. ಹೀಗೆ ತಮ್ಮ ಸುತ್ತ ಮುತ್ತ ಇರುವವರನ್ನು ನಗಿಸುತ್ತಿದ್ದರು. ತಾವೇ ನಗುವಿಗೆ ವಸ್ತುವಾಗುತ್ತಿದ್ದರು.

ಅದಕ್ಕೆ ಉದಾಹರಣೆಯಾಗಿ ನಿಲ್ಲುವುದು ನಾಲಗೆಯನ್ನು ಹೊರ ಹಾಕಿ ತೆಗೆದಿರುವ ಅವರ ಪ್ರಸಿದ್ಧ ಚಿತ್ರ (ಮಾರ್ಚ್ 14, 1951, ಫೋಟೊಗ್ರಾಫರ್: ಆರ್ಥರ್ ಸಾಸ್).ಈ ಚಿತ್ರ ತೆಗೆದಿದ್ದು ಐನ್‌ಸ್ಟೈನ್‌ 72ನೇ ಹುಟ್ಟುಹಬ್ಬದಂದು. ಐನ್‌ಸ್ಟೀನ್‌ಗೆ ಗೌರವ ಸೂಚಿಸಲು ಪ್ರಿನ್ಸ್‌ಟನ್ ಕ್ಲಬ್‌ನಲ್ಲಿ ಸಮಾರಂಭ ಆಯೋಜನೆಯಾಗಿತ್ತು. ಅವತ್ತು ಸ್ನೇಹಿತರು, ಸಹೋದ್ಯೋಗಿಗಳೆಲ್ಲಾ ಜಮಾಯಿಸಿದ್ದರು. ಅಲ್ಲಿಯೇ ಸಾಕಷ್ಟು ಪೋಟೋಗಳಿಗೆ ಪೋಸ್ ನೀಡಿ ನಕ್ಕು ನಕ್ಕು ವಿಜ್ಞಾನಿಗೆ ಸುಸ್ತಾಗಿತ್ತು. ಪಾರ್ಟಿ ಮುಗಿದ ಬಳಿಕ ಮನೆಗೆ ಹೊರಡಲು ಸ್ನೇಹಿತರೊಬ್ಬರ ಕಾರು ಹತ್ತಿದ ಮೇಧಾವಿಯನ್ನು ಫೋಟೊಗ್ರಾಫರ್‌ಗಳು ಬಿಡಲಿಲ್ಲ. ಮತ್ತಷ್ಟು ಫೋಟೋ ತೆಗೆಯಲು ಮುಂದಾದಾಗ ನಕ್ಕು ಸುಸ್ತಾಗಿದ್ದ ಐನ್‌ಸ್ಟೈನ್‌ ನಾಲಗೆಯನ್ನು ಹೊರಗೆ ಚಾಚಿ ಪೋಸು ನೀಡಿದರು. ಇದನ್ನು ಯುನೈಟೆಡ್ ಪ್ರೆಸ್ ಇಂಟರ್‌ನ್ಯಾಷನಲ್ (ಯುಪಿಐ) ಫೋಟೊಗ್ರಾಫರ್ ಆರ್ಥರ್ ಸಾಸ್ ಮಾತ್ರ ಕ್ಲಿಕ್ಕಿಸಿದ್ದರು. ಉಳಿದವರು ತೆಗೆದಿರಲಿಲ್ಲ.

ತಮ್ಮ ಯಾಚ್ ನಲ್ಲಿ ಸಿಗಾರ್ ಎಳೆಯುತ್ತಾ ವಿಹರಿಸುತ್ತಿರುವ ಆಲ್ಬರ್ಟ್ ಐನ್ಸ್ಟೈನ್

ತಮ್ಮ ಯಾಚ್ ನಲ್ಲಿ ಸಿಗಾರ್ ಎಳೆಯುತ್ತಾ ವಿಹರಿಸುತ್ತಿರುವ ಆಲ್ಬರ್ಟ್ ಐನ್ಸ್ಟೈನ್

ಮೊದಲು ಈ ಫೋಟೊ ಪ್ರಕಟಿಸಬೇಕೋ ಬೇಡವೋ ಎಂದು ಸಂಸ್ಥೆಯವರು ಚರ್ಚೆ ನಡೆಸಿದ್ದರಂತೆ. ಆ ಮೇಲೆ ಈ ಭಾವಚಿತ್ರ ಐನ್‌ಸ್ಟೈನ್‌ ಖ್ಯಾತ ಚಿತ್ರವಾಗಿ ಜನಪ್ರಿಯವಾಯಿತು. ವಿಜ್ಞಾನಿಯ ತುಂಟತನಕ್ಕೆ ಸಾಕ್ಷಿಯಾಗಿ ಉಳಿಯಿತು. ಸ್ವತಃ ಐನ್‌ಸ್ಟೈನ್‌ ಇದರ ಒಂಬತ್ತು ಪ್ರತಿಗಳನ್ನು ತರಿಸಿಕೊಂಡರು. ಅದರಲ್ಲಿ ಅವರು ಸಹಿ ಹಾಕಿದ ಒಂದು ಪ್ರತಿ 2009ರ ಜೂನ್‌ನಲ್ಲಿ 75,000 ಅಮೆರಿಕನ್ ಡಾಲರ್‌ಗೆ (50 ಲಕ್ಷ ರೂ.) ಹರಾಜಾಯಿತು.

ಜಗತ್ತಿನ ಪ್ರಖ್ಯಾತ ವಿಜ್ಞಾನಿಯಾಗಿದ್ದರೂ ಐನ್‌ಸ್ಟೈನ್‌ ಯಾವತ್ತೂ ವೈಯಕ್ತಿಕ ಜೀವನದಲ್ಲಿ ಒತ್ತಡ ತಂದುಕೊಳ್ಳಲಿಲ್ಲ. ಖಾಸಗಿ ಕ್ಷಣಗಳನ್ನು ಅಷ್ಟೇ ಸೊಗಸಾಗಿ ಕಳೆಯುತ್ತಿದ್ದರು. ಅವರಿಗೆ ಪುಟ್ಟ ದೋಣಿ (ಯಾಚ್) ಪ್ರಯಾಣವೆಂದರೆ ಅಚ್ಚು ಮೆಚ್ಚು. ನ್ಯೂಯಾರ್ಕ್ನಲ್ಲಿ ಒಬ್ಬರೇ ದೋಣಿ ಪ್ರಯಾಣ ಮಾಡುತ್ತಿದ್ದರು. ಯಾವಾಗಲೂ ಬಾಯಲ್ಲಿ ಸಿಗಾರ್ ಕೊಳವೆ ಇದ್ದೇ ಇರುತ್ತಿತ್ತು. ಮೊದಲೇ ಹೇಳಿದಂತೆ ಸಂಗೀತ ಎಂದರೆ ಅಚ್ಚು ಮೆಚ್ಚು. ಕೊನೆಗಾಲದಲ್ಲಿ ವಯೋಲಿನ್ ನುಡಿಸಿ ನುಡಿಸಿ ಕೈ ನೋವು ಬಂದು ಹೋಗಿತ್ತು. ವೈದ್ಯರ ಸಲಹೆ ಮೇರೆಗೆ ನುಡಿಸುವುದನ್ನು ನಿಲ್ಲಿಸಿದ್ದರು.

ಎಷ್ಟೋ ಗಂಭೀರ ವಿಷಯಗಳನ್ನು ತಮಾಷೆಯಾಗಿ ಹೇಳುತ್ತಿದ್ದರು. “ನಿಮ್ಮ ಕೈಯನ್ನು ಬಿಸಿಯಾದ ಸ್ಟವ್ ಮೇಲಿಡಿ, ಒಂದು ನಿಮಿಷ ಒಂದು ಗಂಟೆಯಂತೆ ಭಾಸವಾಗುತ್ತದೆ. ಅದೇ ಸುಂದರವಾದ ಹುಡುಗಿಯ ಪಕ್ಕದಲ್ಲಿ ಕುಳಿತುಕೊಳ್ಳಿ, ಗಂಟೆ ನಿಮಿಷದಂತೆ ತೋರುತ್ತದೆ; ಇದೇ ರಿಲೇಟಿವಿಟಿ (ಸಾಪೇಕ್ಷ ಸಿದ್ಧಾಂತ),” ಎನ್ನುತ್ತಿದ್ದರು.

ಐನ್‌ಸ್ಟೈನ್‌ಗೆ ಗಂಭೀರ ವ್ಯಕ್ತಿತ್ವದಾಚೆಗೂ ಮಗುವಿನ ಮುಗ್ಧತೆ ಇತ್ತು. ಅಮೆರಿಕಾದ ಪ್ರಿನ್ಸ್ ಟನ್ ವಿವಿಯಲ್ಲಿದ್ದಾಗ ಐನ್‌ಸ್ಟೈನ್‌ ಮನೆಗೆ ಗಣಿತ ಮನೆಪಾಠಕ್ಕೆ ಪುಟ್ಟ ಹುಡುಗಿ ಬರುತ್ತಿದ್ದಳು. ಆಗ ಆಕೆಗೆ ಒಂದು ಕೈಯಲ್ಲಿ ಗಣಿತ ಸೂತ್ರಗಳನ್ನು ಬಿಡಿಸುತ್ತಾ, ಇನ್ನೊಂದು ಕೈಯಲ್ಲಿ ತನ್ನ ಭೌತ ವಿಜ್ಞಾನದ ಸಿದ್ಧಾಂತಗಳನ್ನು ಬರೆಯುತ್ತಿದ್ದರಂತೆ. ಐನ್‌ಸ್ಟೈನ್‌ಗೆ ಏಕಕಾಲದಲ್ಲಿ ಎರಡೂ ಕೈಗಳಲ್ಲಿ ಬರೆಯುವ ಕೆಲೆ ಸಿದ್ಧಿಸಿತ್ತು; ಮಹಾನ್ ಬುದ್ಧಿವಂತರಿಗಷ್ಟೇ ಹೀಗೆ ಬರೆಯಲು ಸಾಧ್ಯ. ಆಕೆ ಗಣಿತದ ಸಮಸ್ಯೆಗಳ ಬಗ್ಗೆ ಹೇಳಿದಾಗ “ನಿನ್ನ ಗಣಿತದ ಸಮಸ್ಯೆ ಜೊತೆ ತಲೆ ಬಿಸಿ ಮಾಡಿಕೊಳ್ಳಬೇಡ. ನನ್ನ ಸಮಸ್ಯೆಗಳು ನಿನಗಿಂತ ದೊಡ್ಡದಿವೆ,” ಎಂದು ಪುಟ್ಟ ಹುಡುಗಿ ಮುಂದೆ ನಗುತ್ತಿದ್ದರಂತೆ.

ಐನ್‌ಸ್ಟೈನ್‌ ಹಾದಿಯಲ್ಲಿ ನಡೆಯಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅದಕ್ಕಾಗಿ ಯಶಸ್ಸಿಗೆ ಸೂತ್ರಗಳೇನಾದರೂ ಇವೆಯೋ ಎಂದು ಅವರ ಬಳಿ ಕೇಳುತ್ತಿದ್ದರು. ಅದಕ್ಕೆ ಐನ್‌ಸ್ಟೈನ್‌ ಒಂದು  ಫಾರ್ಮುಲಾ ನೀಡುತ್ತಿದ್ದರು ಅದು ಹೀಗಿತ್ತು, A = X+Y+Z. ಐನ್‌ಸ್ಟೈನ್‌ ಪ್ರಕಾರ ಇಲ್ಲಿ A ಅಂದರೆ ಯಶಸ್ಸು, ಅದಕ್ಕೆ ಬೇಕಾಗಿದ್ದು X- ಕೆಲಸ, Y-ಆಟ ಮತ್ತು Z-ಬಾಯಿ ಮುಚ್ಚಿಕೊಂಡಿರಬೇಕು ಎನ್ನುತ್ತಿದ್ದರು.

ಆಲ್ಬರ್ಟ್ ಐನ್ಸ್ಟೈನ್ ಎಂದೂ ಕಾರು, ಬೈಕು ಓಡಿಸಿದವರಲ್ಲ. ಅವರದ್ದೇನಿದ್ದರೂ ಸೈಕಲ್ ಯಾತ್ರೆ

ಆಲ್ಬರ್ಟ್ ಐನ್ಸ್ಟೈನ್ ಎಂದೂ ಕಾರು, ಬೈಕು ಓಡಿಸಿದವರಲ್ಲ. ಅವರದ್ದೇನಿದ್ದರೂ ಸೈಕಲ್ ಯಾತ್ರೆ

ಐನ್‌ಸ್ಟೈನ್‌ ಎಷ್ಟು ಬುದ್ಧಿವಂತರೋ ಅಷ್ಟೇ ಮರೆಗುಳಿತನಕ್ಕೂ ಹೆಸರುವಾಸಿ. ತನ್ನದೇ ಫೋನ್ ನಂಬರ್ ಕೇಳಿದರೆ ಟೆಲಿಫೋನ್ ಡೈರೆಕ್ಟರಿ ನೋಡಿ ಹೇಳುತ್ತಿದ್ದರಂತೆ. ತಮ್ಮ ಮತ್ತು ಸಂಬಂಧಿಕರ ಹುಟ್ಟುಹಬ್ಬಗಳನ್ನೆಲ್ಲಾ ಮರೆಯುವುದು ಅವರಿಗೆ ಅಭ್ಯಾಸವಾಗಿತ್ತು.

ಒಮ್ಮೆ ಪ್ರಿನ್ಸ್‌ಟನ್ ವಿವಿಯಲ್ಲಿದ್ದಾಗ ಮನೆಯ ಅಡ್ರೆಸ್ ಮರೆತು ಹೋಗಿದ್ದರಂತೆ. ಕ್ಯಾಬ್ ಡ್ರೈವರ್ಗೆ ವಿಜ್ಞಾನಿಯ ಪರಿಚಯ ಗೊತ್ತಾಗಲಿಲ್ಲ. ಆಗ ಚಾಲಕನಿಗೆ ಐನ್‌ಸ್ಟೈನ್‌ ಮನೆ ಗೊತ್ತೋ ಕೇಳಿದರಂತೆ. ಆತ ಅವರ ಮನೆ ಯಾರಿಗೆ ಗೊತ್ತಿಲ್ಲ ಹೇಳಿ, ನಿಮಗೆ ಅವರನ್ನು ಬೇಟಿಯಾಗಬೇಕಿತ್ತೋ? ಎಂದು ಮರು ಪ್ರಶ್ನೆ ಹಾಕಿದ. ಅದಕ್ಕೆ ಐನ್‌ಸ್ಟೈನ್‌ ಉತ್ತರ ಹೀಗಿತ್ತು; “ನಾನೇ ಐನ್‌ಸ್ಟೈನ್‌.. ನನ್ನ ಮನೆ ಅಡ್ರೆಸ್ ಮರೆತು ಹೋಗಿದ್ದೇನೆ. ನನ್ನನ್ನು ಅಲ್ಲಿಗೆ ಬಿಡುವೆಯಾ,” ಎಂದು ಕೇಳಿದರಂತೆ.

ಐನ್‌ಸ್ಟೈನ್‌ ಯಾವತ್ತೂ ಕಾರು ಬೈಕ್ ಓಡಿಸಿದವರಲ್ಲ. ಎಲ್ಲಿಗಾದರೂ ಹೋಗಬೇಕಾದರೆ ಅವರ ಗೆಳೆಯರೇ ಕರೆದುಕೊಂಡು ಹೋಗುತ್ತಿದ್ದರು. ಇಲ್ಲದಿದ್ದಲ್ಲಿ ಸೈಕಲ್ ಹತ್ತುತ್ತಿದ್ದರು. ಇಳಿವಯಸಲ್ಲೂ ಸೈಕಲ್ನಲ್ಲೇ ನಗರ ಸುತ್ತಾಡುತ್ತಿದ್ದರು.

ತಮ್ಮ ಸುಂದರ ಜೀವನವನ್ನು ವಿನೋದದಿಂದ ಹಾಸ್ಯ ಪ್ರಜ್ಷೆಯಿಂದ ಕಳೆದ ಐನ್‌ಸ್ಟೈನ್‌ ಕೊನೆಗಾಲದಲ್ಲಿ ಮಾತ್ರ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಅದಕ್ಕೆ ಕಾರಣವಾಗಿದ್ದು ಎರಡನೇ ಮಹಾಯುದ್ಧ ಮತ್ತು ಅಣು ಬಾಂಬ್. ಅದೊಂದು ನೋವಿನ ಕಥೆ.

(ನಾಳೆಗೆ)

ENTER YOUR E-MAIL

Name
Email *
August 2017
M T W T F S S
« Jul    
 123456
78910111213
14151617181920
21222324252627
28293031  

Top