An unconventional News Portal.

ಕರ್ನಾಟಕ ಬಜೆಟ್ ಮೀರಿಸಿದ ‘ಸ್ಪೈಸ್ ಜೆಟ್’ ಡೀಲ್: 150 ವಿಮಾನ ಖರೀದಿಗೆ ಎಷ್ಟಾಯ್ತು ಗೊತ್ತಾ?

ಕರ್ನಾಟಕ ಬಜೆಟ್ ಮೀರಿಸಿದ ‘ಸ್ಪೈಸ್ ಜೆಟ್’ ಡೀಲ್: 150 ವಿಮಾನ ಖರೀದಿಗೆ ಎಷ್ಟಾಯ್ತು ಗೊತ್ತಾ?

ನಾಗರಿಕ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್, ಅಮೆರಿಕಾ ಮೂಲದ ವಿಮಾನ ತಯಾರಿಕಾ ಕಂಪೆನಿ ಬೋಯಿಂಗ್ ಜತೆ 1.5 ಲಕ್ಷ ಕೋಟಿಯ ಒಪ್ಪಂದ ಮಾಡಿಕೊಂಡಿದೆ. 150 ಹೊಸ ಬೋಯಿಂಗ್ ವಿಮಾನಗಳ ಖರೀದಿಗೆ ಸ್ಪೈಸ್ ಜೆಟ್ ಮುಂದಾಗಿದ್ದು ಸರಿ ಸುಮಾರು ಕರ್ನಾಟಕ ಸರಕಾರದ ವರ್ಷದ ಬಜೆಟ್ಟಿನಷ್ಟು ಮೊತ್ತವನ್ನು ಪಾವತಿ ಮಾಡಲಿದೆ.

ಇದು ಭಾರತದ ವಿಮಾನಯಾನ ಕ್ಷೇತ್ರದಲ್ಲಿ ನಡೆದಿರುವ ಅತೀ ದೊಡ್ಡ ಮೊತ್ತದ ಡೀಲ್ ಆಗಿದೆ. ಬೋಯಿಂಗ್ 737-8 ಮ್ಯಾಕ್ಸ್ ಮಾದರಿಯ 100 ವಿಮಾನಗಳ ಖರೀದಿಗೆ ಸ್ಪೈಸ್ ಜೆಟ್ ಆರ್ಡರ್ ನೀಡಿದ್ದರೆ ಇನ್ನುಳಿದ 50 ಅಗಲ ರೆಕ್ಕೆಯ ವಿಮಾನಗಳನ್ನು ಲೀಸ್ ರೂಪದಲ್ಲಿ ಬಳಸಿಕೊಳ್ಳಲಿದೆ.

2018ರ ಅಂತ್ಯಕ್ಕೆ ಆರ್ಡರ್ ನೀಡಿದ ವಿಮಾನಗಳನ್ನು ಬೋಯಿಂಗ್ ಕಂಪೆನಿ ಸ್ಪೈಸ್ ಜೆಟ್ಟಿಗೆ ನೀಡಲಿದೆ. 2024ಕ್ಕೆ ಒಪ್ಪಂದದಂತೆ ಎಲ್ಲಾ ವಿಮಾನಗಳನ್ನು ಪೂರೈಸಲಿದ್ದು ಡೀಲ್ ಅಂತ್ಯವಾಗಲಿದೆ.

ಮಾರುಕಟ್ಟೆ ಹೆಚ್ಚಿಸಿಕೊಂಡ ಸ್ಪೈಸ್ ಜೆಟ್:

ಸದ್ಯ ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಸ್ಪೈಸ್ ಜೆಟ್ ಶೇಕಡಾ 12. 8 ಪಾಲು ಹೊಂದಿದೆ. ಸದ್ಯ ಕಂಪೆನಿ ತನ್ನ ಮಾರುಕಟ್ಟೆ ವಿಸ್ತರಣೆ ಕಡೆ ಮನಸ್ಸು ಮಾಡಿದೆ. ಜತೆಗೆ ತನ್ನ ಲಾಭವನ್ನು ಹೆಚ್ಚಿಸಿಕೊಳ್ಳುವತ್ತಲೂ ಚಿತ್ತ ನೆಟ್ಟಿದೆ. 2016-17ನೇ ಆರ್ಥಿಕ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಸ್ಪೈಸ್ ಜೆಟ್ ದಾಖಲೆಯ 59 ಕೋಟಿ ಲಾಭ ಗಳಿಸಿದೆ. ವಿಮಾನದ ಇಂಧನ ದರವೂ ಕುಸಿತವಾಗಿದ್ದು ಸ್ಪೈಸ್ ಜೆಟ್ಟಿನ ಶೇರುಗಳ ಬೆಲೆಯೂ ಬಾಂಬೆ ಸ್ಟಾಕ್ ಎಕ್ಸ್’ಚೇಂಚ್ ನಲ್ಲಿ 65.5 ರೂಪಾಯಿಗೆ ಏರಿಕೆಯಾಗಿದೆ. ‘ಏರ್ ಬಸ್’ಗಿಂತ ಬೋಯಿಂಗ್ ಕಡಿಮೆ ಮೊತ್ತದ ಆಫರ್ ನೀಡಿದ್ದರಿಂದ ನಾವು ಬೋಯಿಂಗ್ ವಿಮಾನಗಳನ್ನು ಖರೀದಿ ಮಾಡುತ್ತಿರುವುದಾಗಿ ಸ್ಪೈಸ್ ಜೆಟ್ ಅಧ್ಯಕ್ಷ ಅಜಯ್ ಸಿಂಗ್ ಹೇಳಿದ್ದಾರೆ.

150 ವಿಮಾನಗಳ ಖರೀದಿಯೊಂದಿಗೆ ದೇಶದಲ್ಲಿ ಮಿತದರದ ವಿಮಾನಯಾನ ಸಾರಿಗೆಗೆ ಹೆಸರುವಾಸಿಯಾಗಿರುವ ಸ್ಪೈಸ್ ಜೆಟ್ ವಿದೇಶ ಪ್ರಯಾಣಗಳನ್ನು ಮತ್ತಷ್ಟು ಹೆಚ್ಚಿಸಲಿದೆ.

ಇಂಧನ ದರ ಇಳಿಕೆ:

ಸದ್ಯನ ವಿಮಾನದ ಇಂಧನ ದರ ಬ್ಯಾರಲ್ಲಿಗೆ 60-65 ಡಾಲರ್ ಇದೆ. ಈ ಹಂತದಲ್ಲಿ ನಮ್ಮ ಮಾರುಕಟ್ಟೆ ಸುಸ್ಥಿಯಲ್ಲಿದೆ. “ಸ್ವಲ್ಪ ಏರುಪೇರಾದರೆ ಏನು ಸಮಸ್ಯೆ ಇಲ್ಲ. ಒಂದೊಮ್ಮೆ ಇಂಧನ ದರ 70 ಡಾಲರ್ ದಾಟಿದರೆ ಮಾತ್ರ ಸಮಸ್ಯೆಯಾಗುತ್ತದೆ,” ಎಂದು ಸಿಂಗ್ ಹೇಳಿದ್ದಾರೆ.

ಸದ್ಯ ದೇಶದ ವಿಮಾನಯಾನ ಕ್ಷೇತ್ರದಲ್ಲಿ ಶೇಕಡಾ 100 ಹೂಡಿಕೆಗೆ ಸರಕಾರ ಅನುಮತಿ ನೀಡಿದೆ. ಆದರೆ ಬೇರಾವ ದೇಶದಲ್ಲಿಯೂ ಈ ರೀತಿ ಹೂಡಿಕೆ ಮಾಡಲು ಅವಕಾಶವಿಲ್ಲ. “ನಮಗೆ ಹೊರ ದೇಶಗಳಲ್ಲಿ ಇದೇ ರೀತಿ ಹೂಡಿಕೆ ಮಾಡಲು ಅವಕಾಶವಿಲ್ಲ. ಹೀಗಿರುವಾಗ ಸರಕಾರದ ಈ ನಿರ್ಧಾರ ಸರಿಯಲ್ಲ. ಸರಕಾರ ಈ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ನಂಬಿಕೆ ಇದೆ,” ಎನ್ನುತ್ತಾರೆ ಅಜಯ್ ಸಿಂಗ್.

Top