An unconventional News Portal.

ಬಾಹ್ಯಾಕಾಶ ನಿಲ್ದಾಣಕ್ಕೆ ಚೀನಿಯರ ಲಗ್ಗೆ: ಅಮೆರಿಕಾ ವಿರುದ್ದ ಸಡ್ಡು ಹೊಡೆಯಲು ಹೊಸ ಸಾಹಸ!

ಬಾಹ್ಯಾಕಾಶ ನಿಲ್ದಾಣಕ್ಕೆ ಚೀನಿಯರ ಲಗ್ಗೆ: ಅಮೆರಿಕಾ ವಿರುದ್ದ ಸಡ್ಡು ಹೊಡೆಯಲು ಹೊಸ ಸಾಹಸ!

ಚೀನಾ ಇದೇ ಮೊದಲ ಬಾರಿಗೆ ಇಬ್ಬರು ಅಂತರಿಕ್ಷಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ.

‘ಶೆಂಜೂ 11’ ಹೆಸರಿನ ಬಾಹ್ಯಾಕಾಶ ನೌಕೆ ಇಬ್ಬರು ಗಗನಯಾನಿಗಳನ್ನು ಹೊತ್ತು ಉತ್ತರ ಚೀನಾದ ‘ಜಿಕ್ವನ್ ಉಪಗ್ರಹ ಉಡಾವಣಾ ಕೇಂದ್ರ’ದಿಂದ ನಭಕ್ಕೆ ಚಿಮ್ಮಿತು. ಸೋಮವಾರ ಮುಂಜಾನೆ ಸ್ಥಳೀಯ ಕಾಲಮಾನ 7:30ಕ್ಕೆ ‘ಲಾಂಗ್ ಮಾರ್ಸ್-2ಎಫ್’ ಹೆಸರಿನ ರಾಕೆಟ್ ಶೇಂಜೂ 11ನ್ನು ಹೊತ್ತೊಯ್ಯಿತು.

china-launches-astronautsಈ ಇಬ್ಬರ ಗಗನಯಾನಿಗಳು ಚೀನಾದ ‘ತಿಯಾಂಗಾಂಗ್ ಬಾಹ್ಯಾಕಾಶ ಕೇಂದ್ರ’ದಲ್ಲಿ ಮೂವತ್ತು ದಿನ ಕಳೆದು ವಾಪಸ್ಸು ಬರಲಿದ್ದಾರೆ. ಇದು ಚೀನಾದ ಅಂತರಿಕ್ಷಯಾನಿಗಳ ಸುದೀರ್ಘ ಗಗನಯಾತ್ರೆಯಾಗಲಿದೆ.

ಭವಿಷ್ಯದಲ್ಲಿ ಚಂದ್ರ ಮತ್ತು ಮಂಗಳ ಗ್ರಹದ ಮೇಲೆ ಮನುಷ್ಯನನ್ನು ಕಾಲೂರಿಸಲು ಹೊರಟಿರುವ ಚೀನಾದ ಯೋಜನೆಯ ಹಿನ್ನಲೆಯಲ್ಲಿ ಈ ಬಾಹ್ಯಾಕಾಶ ಯಾನ ಅಂತರಾಷ್ಟ್ರೀಯ ಸುದ್ದಿ ಕೇಂದ್ರಕ್ಕೆ ಬಂದಿದೆ.

ತಿಯಾಂಗಾಂಗ್ ಬಾಹ್ಯಾಕಾಶ ಕೇಂದ್ರ:

ತಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣವನ್ನು ಇದಕ್ಕೂ ಮೊದಲು ಮೂರು ರಾಕೆಟ್ ಉಡಾಯಿಸಿ ಚೀನಾ ನಿರ್ಮಿಸಿತ್ತು. ಚೀನೀ ಭಾಷೆಯಲ್ಲಿ ತಿಯಾಂಗಾಂಗ್ ಎಂದರೆ ‘ಸ್ವರ್ಗದ ಅರಮನೆ’ ಎಂದು ಅರ್ಥ. ಈ ಸ್ವರ್ಗದ ಅರಮನೆಯಲ್ಲಿ 49 ವರ್ಷ ವಯಸ್ಸಿನ ಜಿಂಗ್ ಹೈಪೆಂಗ್, 37 ವರ್ಷದ ಚೆನ್ ಡಾಂಗ್ ಅಧ್ಯಯನ ನಡೆಸಲಿದ್ದಾರೆ. ಇವರಲ್ಲಿ ಜಿಂಗ್ ಹೈಪೆಂಗ್ ಈ ಹಿಂದೆ ಎರಡು ಬಾರಿ ಗಗನಯಾತ್ರೆ ಮಾಡಿದ ಅನುಭವ ಉಳ್ಳವರಾದರೆ, ಚೆನ್ ಡಾಂಗ್ಗೆ ಇದು ಮೊದಲ ಬಾಹ್ಯಾಕಾಶ ಯಾನದ ಅನುಭವ.

ಎರಡು ದಿನಗಳ ಪ್ರಯಾಣ:

ರಾಕೆಟ್ ಗಗನಯಾನಿಗಳನ್ನು ಬಾಹ್ಯಾಕಾಶ ಪ್ರಯೋಗಾಲಯಕ್ಕೆ ಕೊಂಡೊಯ್ಯಲು ಎರಡು ದಿನ ತೆಗೆದುಕೊಳ್ಳಲಿದೆ. ನಂತರ ಬಾಹ್ಯಾಕಾಶ ಕೇಂದ್ರ ತಲುಪಲಿರುವ ಅಂತರಿಕ್ಷಯಾನಿಗಳು ‘ಬಾಹ್ಯಾಕಾಶದಲ್ಲಿ ಗಿಡಗಳ ಬೆಳವಣಿಗೆ’ ಬಗ್ಗೆ ಸುದೀರ್ಘ ಅಧ್ಯಯನ ನಡೆಸಲಿದ್ದಾರೆ. ಜೊತೆಗೆ ತಮ್ಮ ದೇಹದ ಮೇಲೆಯೇ ಅಲ್ಟ್ರಾಸೌಂಡ್ ಪ್ರಯೋಗಗಳನ್ನೂ ನಡೆಸಲಿದ್ದಾರೆ.

ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತಾಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, “ಈ ಯೋಜನೆ ಮೂಲಕ ಚೀನಾ ಬಾಹ್ಯಾಕಾಶದಲ್ಲಿ ಹೊಸ ಹೆಜ್ಜೆಗಳನ್ನು ಇಡಲು ಸಾಧ್ಯವಾಗಲಿದೆ. ಈ ಮೂಲಕ ಚೀನಾವನ್ನು ಬಾಹ್ಯಾಕಾಶ ಶಕ್ತಿ ಕೇಂದ್ರವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ,” ಎಂದು ಹೇಳಿದ್ದಾರೆ.

ಸದ್ಯ ಚೀನಾ ಸತತವಾಗಿ ಬಾಹ್ಯಾಕಾಶ ಯೋಜನೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಭಾರಿ ಹಣ ಹೂಡಿದೆ. ಒಟ್ಟಾರೆ ಈ ವರ್ಷವೊಂದರಲ್ಲೇ 20 ಬಾಹ್ಯಾಕಾಶ ಯೋಜನೆಗಳಿಗೆ ಚೀನಾ ಚಾಲನೆ ನೀಡಲಿದೆ.

ಈ ಹಿಂದೆ ಕೇವಲ ರಷ್ಯಾ ಮತ್ತು ಅಮೆರಿಕಾ ಮಾತ್ರ ತಮ್ಮದೇ ಯಾತ್ರೆಗಳಲ್ಲಿ ಅಂತರಿಕ್ಷಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಇದೀಗ ಈ ಸಾಲಿಗೆ ಚೀನಾವೂ ಸೇರ್ಪಡೆಯಾಗಿದೆ. 2013ರಲ್ಲಿ ಚೀನಾ ‘ಯುತು’ ಹೆಸರಿನ ರೋವರನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಹಿಂದೆ ‘ತಿಯಾಂಗಾಂಗ್ -1’ ಹೆಸರಿನಲ್ಲಿ ಚೀನಾ ಕೈಗೊಂಡಿದ್ದ ಯೋಜನೆ ವಿಫಲವಾಗಿ ರಾಕೆಟ್ ನೆಲಕ್ಕೆ ಬಿದ್ದು ಭಸ್ಮವಾಗಿತ್ತು. ಇದಾದ ನಂತರ ‘ತಿಯಂಗಾಂಗ್ -2 ಯೋಜನೆ ಕೈಗೆತ್ತಿಕೊಂಡಿದ್ದು ಯಶಸ್ವಿಯಾಗಿ ಉಡಾವಣೆಯಾಗಿದೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಚೀನಾಕ್ಕಿಲ್ಲ ಎಂಟ್ರಿ:

ಈ ಹಿಂದೆ ಚೀನಾವನ್ನು ‘ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ’ಕ್ಕೆ ಬರುವಂತೆ ಅಹ್ವಾನಿಸಲಾಯಿತಾದರೂ ನಂತರ ಬರದಂತೆ ನಿರ್ಬಂಧಿಸಲಾಗಿತ್ತು. ಚೀನಾ ಮಿಲಿಟರಿ ರೀತಿಯಲ್ಲಿ ಬಾಹ್ಯಾಕಾಶ ಮಹತ್ವಾಕಾಂಕ್ಷೆ ಹೊಂದಿದ್ದರಿಂದ ಈ ನಿರ್ಧಾರವನ್ನು ಅಮೆರಿಕಾ ತೆಗೆದುಕೊಂಡಿತ್ತು.

ಇದಾದ ನಂತರ ಚೀನಾ ತನ್ನದೇ ಆದ ಸ್ವಂತ ಬಾಹ್ಯಾಕಾಶ ಕೇಂದ್ರ ಕಟ್ಟುವ ಯೋಜನೆಯಲ್ಕಿ ನಿರತವಾಗಿದೆ. ಮುಂದಿನ ದಿನಗಳಲ್ಲಿ ‘ತಿಯಾಂಗಾಂಗ್’ನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಚೀನಾದ ಮುಂದಿದೆ. 2022ರ ಹೊತ್ತಿಗೆ ಈ ಬಾಹ್ಯಾಕಾಶ ಕೇಂದ್ರ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಲಭ್ಯವಾಗಬಹುದು ಎಂದುಕೊಳ್ಳಲಾಗಿದೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ

ಹಲವು ದೇಶಗಳು ಜಂಟಿಯಾಗಿ ಸಂಶೋಧನೆಗಾಗಿ ಬಾಹ್ಯಾಕಾಶದಲ್ಲಿ ನಿಲ್ದಾಣ ಸ್ಥಾಪಿಸಿರುತ್ತವೆ. ಇವು ಭೂಮಿಯ ಸುತ್ತ ನಿರ್ಧಿಷ್ಟ ಕಕ್ಷೆಯಲ್ಲಿ ನಿರಂತರವಾಗಿ ಸುತ್ತುತ್ತಿರುತ್ತವೆ. ಈ ನಿಲ್ದಾಣದಲ್ಲಿ ಬೇರೆ ಬೇರೆ ದೇಶಗಳು ತಮ್ಮ ಗಗನಯಾನಿಗಳನ್ನು ಕಳುಹಿಸಿ ಬಾಹ್ಯಾಕಾಶಕ್ಕೆ ಸಂಬಂಧಪಟ್ಟ ಸಂಶೋಧನೆ, ಅಧ್ಯಯನಗಳನ್ನು ನಡೆಸುತ್ತವೆ.

ಅಮೆರಿಕಾ, ರಷ್ಯಾ ಸೇರಿ ಹಲವು ರಾಷ್ಟ್ರಗಳು ಜಂಟಿಯಾಗಿ ನಿರ್ಮಿಸಿರುವ 'ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ

ಅಮೆರಿಕಾ, ರಷ್ಯಾ ಸೇರಿ ಹಲವು ರಾಷ್ಟ್ರಗಳು ಜಂಟಿಯಾಗಿ ನಿರ್ಮಿಸಿರುವ ‘ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ

1998ರಲ್ಲಿ ಅಮೆರಿಕಾ ಮತ್ತು ರಷ್ಯಾ ಜಂಟಿಯಾಗಿ ‘ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ’ವನ್ನು ಕಟ್ಟಿದ್ದವು. ಇದು ಬೃಹತ್ ಯೋಜನೆಯಾದ್ದರಿಂದ ಹಲವು ದೇಶಗಳ ನೆರವನ್ನು ಇದಕ್ಕೆ ಪಡೆದುಕೊಳ್ಳಲಾಗಿತ್ತು.ಇವತ್ತಿಗೂ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇದರಲ್ಲಿ ಹಲವು ದೇಶಗಳು ಬರುತ್ತವೆ), ಕೆನಡಾ, ಜಪಾನ್, ರಷ್ಯಾ, ಮತ್ತು ಅಮೆರಿಕಾ ಇದನ್ನು ಜಂಟಿಯಾಗಿ ನಿರ್ವಹಿಸುತ್ತಿವೆ. ಹೀಗಿದ್ದೂ ಈ ಬಾಹ್ಯಾಕಾಶ ಕೇಂದ್ರ ನಡೆಸಲು ಹಣಕಾಸು ಅಭಾವ ಎದುರಾಗಿದೆ. ಹೀಗಾಗಿ ಈ ಯೋಜನೆಯ ನಿರ್ದೇಶಕರು ಇತರ ರಾಷ್ಟ್ರಗಳನ್ನು ಈ ಯೋಜನೆಯಲ್ಲಿ ಬಂದು ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದರು. ಇದರಲ್ಲಿ ಭಾರತ, ಚೀನಾ ಮತ್ತು ದಕ್ಷಿಣಾ ಕೊರಿಯಾ ಪ್ರಮುಖವಾಗಿದ್ದವು. ಆದರೆ ಚೀನಾ ಈ ಯೋಜನೆಯಲ್ಲಿ ಪಾಲ್ಗೊಳ್ಳಬಾರದು ಎಂದು ಅಮೆರಿಕಾ ಸಂಸತ್ತು ನಿರ್ಬಂಧ ವಿಧಿಸಿದ್ದರಿಂದ ಈಗ ಚೀನಾ ತನ್ನ ಸ್ವಂತ ಬಾಹ್ಯಾಕಾಶ ಕೇಂದ್ರ ಕಟ್ಟಲು ಹೊರಟಿದೆ. ಭಾರತವನ್ನು ಆಹ್ವಾನಿಸಿದ್ದರೂ ಈವರೆಗೆ ಭಾರತ ಇದರಲ್ಲಿ ಪಾಲ್ಗೊಂಡಿಲ್ಲ.

ಚಿತ್ರ ಕೃಪೆ: ರಾಯ್ಟರ್ಸ್

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top