An unconventional News Portal.

‘ಅಗಸ್ಟಾ ವೆಸ್ಟ್ ಲ್ಯಾಂಡ್’ಗೆ ಮರುಜೀವ: ಜೈಲು ಪಾಲದ ಮಾಜಿ ಏರ್ ಮಾರ್ಷಲ್ ತ್ಯಾಗಿ

‘ಅಗಸ್ಟಾ ವೆಸ್ಟ್ ಲ್ಯಾಂಡ್’ಗೆ ಮರುಜೀವ: ಜೈಲು ಪಾಲದ ಮಾಜಿ ಏರ್ ಮಾರ್ಷಲ್ ತ್ಯಾಗಿ

ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರಕಾರವನ್ನು ಬೇತಾಳದಂತೆ ಕಾಡಿದ್ದ ‘ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ’ ಮತ್ತೆ ಸದ್ದು ಮಾಡಲು ಶುರುಮಾಡಿದೆ. ಪ್ರಕರಣದಲ್ಲಿ ಈ ಬಾರಿ ಮಾಜಿ ಏರ್ ಚೀಫ್ ಮಾರ್ಷಲ್ ಎಸ್.ಪಿ ತ್ಯಾಗಿಯೇ ಜೈಲು ಪಾಲಾಗಿದ್ದಾರೆ. ಇದು ದೇಶದ ರಕ್ಷಣಾ ಪಡೆಗಳ ಅತ್ಯಂತ ಹಿರಿಯ ಹುದ್ದೆಯಲ್ಲಿದ್ದು ನಿವೃತ್ತರಾದವರು ಜೈಲಿಗೆ ಹೋಗಿರುವ ಮೊದಲ ನಿದರ್ಶನ ಎಂಬ ಕಾರಣಕ್ಕೆ ಮಹತ್ವ ಪಡೆದುಕೊಂಡಿದೆ.

ತ್ಯಾಗಿ ಜತೆಯಲ್ಲಿ ದೆಹಲಿ ಮೂಲದ ವಕೀಲ ಗೌತಮ್ ಖೇತನ್ ಮತ್ತು ಎಸ್.ಪಿ ತ್ಯಾಗಿ ಸೋದರ ಸಂಬಂಧಿ ವಕೀಲ ಸಂಜೀವ್ ತ್ಯಾಗಿಯವರನ್ನೂ ಬಂಧಿಸಲಾಗಿದೆ.

ಹಗರಣದ ನಡೆದು ಬಂದ ದಾರಿ:

ಫೆಬ್ರವರಿ 2010ರಲ್ಲಿ ಯುಪಿಎ ಸರಕಾರ ಮತ್ತು ಬ್ರಿಟನ್ ಮೂಲದ ‘ಅಗಸ್ಟಾ ವೆಸ್ಟ್ ಲ್ಯಾಂಡ್’ ನಡುವೆ 12 ‘ಎಡಬ್ಲ್ಯೂ101′ ಹೆಲಿಕಾಪ್ಟರ್ಗಳ ಖರೀದಿಗೆ ಒಪ್ಪಂದ ನಡೆದಿತ್ತು. 3600 ಕೋಟಿ ರೂಪಾಯಿಗಳ ಬೃಹತ್ ಡೀಲ್ ಇದಾಗಿತ್ತು. ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿದಂತೆ ವಿವಿಐಪಿಗಳ ಪ್ರಯಾಣಕ್ಕಾಗಿ ಈ ಹೆಲಿಕಾಪ್ಟರ ಖರೀದಿಗೆ ಕೇಂದ್ರ ಕೈಹಾಕಿತ್ತು.

ಈ ಒಪ್ಪಂದದಲ್ಲಿ ಹಗರಣ ನಡೆದಿರುವುದು ಬೆಳಕಿಗೆ ಬಂದಿತ್ತು. ಭಾರತದ ವಾಯು ಸೇನೆಯ ಜೊತೆ ಡೀಲ್ ಕುದುರಿಸಲು ಮಧ್ಯವರ್ತಿಗೆ ಲಂಚ ನೀಡಿದ ಆರೋಪದಲ್ಲಿ ಅಗಸ್ಟಾ ವೆಸ್ಟ್ ಲ್ಯಾಂಡ್ ಸಿಇಒ ಬ್ರುನೋ ಸ್ಪಾಗ್ನೋಲಿನ್ ಹಾಗೂ ಫಿನ್ಮೆಕಾನಿಕಾ ಎಂಬ ಇಟಲಿ ಮೂಲದ ಕಂಪೆನಿಯ ಅಧ್ಯಕ್ಷ ಗುಸೆಪ್ಪೆ ಒರ್ಸಿ ಬಂಧಿತರಾಗಿದ್ದರು. ಫಿನ್ಮೆಕಾನಿಕಾ ಕಂಪೆನಿಯೇ ಅಗಸ್ಟಾ ವೆಸ್ಟ್ ಲ್ಯಾಂಡ್ ಮಾತೃ ಕಂಪೆನಿ ಎಂಬುದು ಗಮನಾರ್ಹ. ಕೊನೆಗೆ ಭಾರತ ಸರಕಾರ ಈ ಡೀಲನ್ನೇ ರದ್ದುಗೊಳಿಸಿತ್ತು. ಅಂದಿನ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಪ್ರಕರಣದ ತನಿಖೆಗೂ ಆದೇಶ ನೀಡಿದ್ದರು.

2014ರ ಆರಂಭದಲ್ಲಿ ಈ ಪ್ರಕರಣ ಇಟಲಿ ಕೋರ್ಟ್ ಮೆಟ್ಟಿಲೇರಿದಾಗ, ವಿಚಾರಣೆ ವೇಳೆ ಭಾರತೀಯ ವಾಯು ಸೇನೆ ಅಂದಿನ ಮುಖ್ಯಸ್ಥ ಎಸ್.ಪಿ ತ್ಯಾಗಿ ಹೆಸರೂ ಪ್ರಸ್ತಾಪವಾಗಿತ್ತು. ಮಾತ್ರವಲ್ಲ ಫಿನ್ಮೆಕಾನಿಕಾ ಕಂಪೆನಿ ಕಡೆಯಿಂದ ಅಗಸ್ಟಾ ವೆಸ್ಟ್ ಲ್ಯಾಂಡ್ ಜತೆ ಒಪ್ಪಂದ ಕುದುರಿಸಲು ತ್ಯಾಗಿಗೆ ಹಣ ಸಂದಾಯವಾಗಿದೆ ಎಂದೂ ಹೇಳಿತ್ತು. ಆದರೆ 2015ರಲ್ಲಿ ಪ್ರಕರಣದಿಂದ ತ್ಯಾಗಿಯನ್ನು ದೋಷಮುಕ್ತಗೊಳಿಸಿದ ಇಟಲಿ ನ್ಯಾಯಾಲಯ ಭಾರತದ ಅಧಿಕಾರಿಗಳ್ಯಾರೂ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿತ್ತು.

ಅಗಸ್ಟಾದಲ್ಲೇನು ಕೊರತೆ?

ಭಾರತೀಯ ವಾಯು ಸೇನೆ ಸಿಯಾಚಿನ್, ಟೈಗರ್ ಹಿಲ್ಸ್ ನಂಥಹ ಎತ್ತರದ ಪ್ರದೇಶಗಳಲ್ಲಿ ಪ್ರಯಾಣಿಸಲು ಸಾಧ್ಯವಿರುವ ಹೆಲಿಕಾಪ್ಟರ್ಗಳನ್ನು ಖರೀಸುವಂತೆ ರಕ್ಷಣಾ ಇಲಾಖೆ ಬಳಿ ಕೇಳಿಕೊಂಡಿತ್ತು. ಅದರಂತೆ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿಗೆ ಇಲಾಖೆ ಮುಂದಾಗಿತ್ತು. ಆದರೆ ಸವಿವರವಾಗಿ ‘ಎಡಬ್ಲ್ಯೂ101’ ಹೆಲಿಕಾಪ್ಟರನ್ನು ಪರೀಕ್ಷೆಗೆ ಒಳಪಡಿಸಿದಾಗ ಸಮುದ್ರ ಮಟ್ಟದಿಂಸ 6,000 ಮೀಟರಿಗಿಂತ ಎತ್ತರದ ಪ್ರದೇಶದಲ್ಲಿ ಹೆಲಿಕಾಪ್ಟರ್ ಓಡಾಡಲು ಸಾಧ್ಯವಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಇದರಿಂದ ಉದ್ದೇಶಿತ ಬೇಡಿಕೆಯನ್ನೇ ಅಗಸ್ಟಾ ಪೂರೈಸಲು ಶಕ್ತವಾಗಿರಲಿಲ್ಲ. ಆರೋಪಿ ಮಧ್ಯವರ್ತಿ ಗೈಡೋ ಹಶ್ಚ್ಕೆ ಕೂಡಾ ವಾಯುಸೇನೆಯ ಬೇಡಿಕೆಯನ್ನು ‘ಎಡಬ್ಲ್ಯೂ101’ ನೀಗಿಸಲಾರದು ಎಂದು ಹೇಳಿದ್ದರು ಎನ್ನಲಾಗಿದೆ.

ಡೀಲ್ ಕುದುರಿದ್ದು ಹೇಗೆ?

ಹೀಗಿದ್ದೂ ಡೀಲ್ ಕುದುರಿದ್ದೇ ಅಚ್ಚರಿಯ ಸಂಗತಿ ಹಾಗೂ ಹಗರಣದ ಮೂಲ. ಈ ಸಂದರ್ಭದಲ್ಲಿ ಅಗಸ್ಟಾ ಕಂಪೆನಿ ಡೀಲ್ ಕುದುರಿಸಲು ಸುಮಾರು 200 ಕೋಟಿ ಲಂಚ ನೀಡಿತ್ತು. ಇದರಲ್ಲಿ ಸುಮಾರು 140 ಕೋಟಿಯನ್ನು ಹಶ್ಚ್ಕೆ ಮತ್ತು ಕಾರ್ಲೊ ಗೆರೋಸಾ ಮೂಲಕ ಪಾವತಿ ಮಾಡಲಾಗಿತ್ತು. ಮುಂದೆ ಬಿಡುಗಡೆಯಾದ ಸಿಬಿಐ ವರದಿಯಲ್ಲಿ, ತ್ಯಾಗಿ ವಾಯು ಸೇನೆ ಮುಖ್ಯಸ್ಥರಾಗುವವರೆಗೆ ವಾಯು ಸೇನೆ ಕೆಳ ಹಂತದಲ್ಲಿ ಹಾರಾಟ ಮಾಡುವ ಹೆಲಿಕಾಪ್ಟರ್ ಖರೀದಿಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿತ್ತುವಎಂದು ಹೇಳಿತ್ತು. ಆದರೆ ತ್ಯಾಗಿ ಬಂದ ಮೇಲೆ ಬದಲಾಯಿತು ಎಂದು ಷರಾ ಬರೆದಿತ್ತು. ತ್ಯಾಗಿ ಆಗಮನದ ನಂತರ ಉದ್ದೇಶಿತ ಹಾರಾಟದ ಸಾಮರ್ಥ್ಯವನ್ನು ಕಡಿಮೆ ಮಾಡಲಾಗಿತ್ತು. ಈ ಮೂಲಕ ಅಗಸ್ಟಾ ವೆಸ್ಟ್ ಲ್ಯಾಂಡಿಗೆ ಮತ್ತೆ ಬಿಡ್ಡಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.

ಇಟಲಿಯ ಅಧಿಕಾರಿಗಳ ಪ್ರಾಥಮಿಕ ತನಿಖೆಗಳ ಪ್ರಕಾರ, ಡೀಲ್ ನಡೆಯುವುದಕ್ಕೆ ಮೊದಲು ತ್ಯಾಗಿ ಖುದ್ದು ಹಶ್ಚ್ಕೆಯನ್ನು ಭೇಟಿಯಾಗಿದ್ದರು. ತ್ಯಾಗಿಯ ಸಹೋದರ ಜೂಲಿ, ಸಂದೀಪ್ ಮತ್ತು ಡಿಸ್ಕಾ ಮೂಲಕ ಹಣ ಚಲಾವಣೆಯಾಗಿತ್ತು. ಆದರೆ ಹಶ್ಚ್ಕೆ ಭೇಟಿಯಾಗಿರುವುದನ್ನು ಮುಂದೆ ತ್ಯಾಗಿ ಸರಸಗಾಟಾಗಿ ತಳ್ಳಿ ಹಾಕಿದ್ದರು.

ಮಿಲಾನ್ ನ್ಯಾಯಾಲಯ ತನ್ನ ಆದೇಶದಲ್ಲಿಯೂ ತ್ಯಾಗಿ ಹೆಸರನ್ನು ಪ್ರಸ್ತಾಪಿಸಿತ್ತು. “ವೈರುಧ್ಯ ಸೂಚನೆಗಳು ಇಲ್ಲದ ಕಾರಣ ಮಿಲಿಟರಿಗಾಗಿ ಭಾರತ ಸರಕಾರ ಖರೀದಿಸಲು ಹೊರಟಿದ್ದ €10,500,000 (3,600 ಕೋಟಿ) ಯ ಪ್ರಕರಣದಲ್ಲಿ ಅಗಸ್ಟಾ ವೆಸ್ಟ್ ಲ್ಯಾಂಡ್ ಪರವಾಗಿ ನಿಂತಿದ್ದಕ್ಕೆ ತ್ಯಾಗಿ ಕುಟುಂಬ ಪ್ರತಿಫಲ ಪಡೆದಿತ್ತು,” ಎಂದು ಹೇಳಿತ್ತು.

ಇದೀಗ ತ್ಯಾಗಿ ಬಂಧನವಾಗಿದೆ; ಹಗರಣ ಯಾವ ತಿರುವು ತೆಗೆದುಕೊಳ್ಳುತ್ತದೋ ನೋಡಬೇಕು.

ಸೋನಿಯಾ ಗಾಂಧಿ ಸಂಬಂಧ:

ಮಿಲಾನ್ ನ್ಯಾಯಾಲಯ ಕಾರ್ಲೊಸ್ ಗೆರೊಸಾ, ಕ್ರಿಸ್ಟಿಯನ್ ಮಿಶೆಲ್ ಮತ್ತು ಗುಲ್ಡೊ ಹಶ್ಚ್ಕೆ ನಡುವೆ ನಡೆದ ಸಂಭಾಷಣೆಯನ್ನು ವಿಚಾರಣೆಗೆ ಎತ್ತಿಕೊಂಡಿತ್ತು. ಈ ಸಂಭಾಷಣೆಗಳಲ್ಲಿ ಮೂವರೂ ಆರೋಪಿಗಳು ‘ಮಿಸೆಸ್ ಗಾಂಧಿ’ ಮತ್ತು ಆಕೆಯ ಆಪ್ತರಾದ ಅಹ್ಮದ್ ಪಟೇಲ್ ಹಾಗೂ ಪ್ರಣಬ್ ಮುಖರ್ಜಿ ವಿಐಪಿಗಳ ಬೆನ್ನಿಗಿದ್ದಾರೆ ಎಂದು ಮಾತಾಡಿಕೊಂಡಿದ್ದರು.

15 ಮಾರ್ಚ್ 2008ರಂದು ಅಗಸ್ಟಾ ವೆಸ್ಟ್ ಲ್ಯಾಂಡ್ ಮಾರಾಟ ಮತ್ತು ಲೈಸನ್ಸ್ ವಿಭಾಗದ ಭಾರತೀಯ ಪ್ರತಿನಿಧಿ ಪೀಟರ್ ಹುಲೆಟ್ಗೆ ಕ್ರಿಷ್ಟಿಯನ್ ಮೈಖೆಲ್ ಬರೆದ ಪತ್ರದಲ್ಲಿ, “ಆತ್ಮೀಯ ಪೀಟರ್, ವಿಐಪಿಗಳ ಹಿಂದೆ ಮಿಸೆಸ್ ಗಾಂಧಿ ಇದ್ದು ಆಕೆ ಎಂ18ನಲ್ಲಿ ಪ್ರಯಾಣಿಸಲಾರರು. ಶ್ರೀಮತಿ ಗಾಂಧಿ ಮತ್ತು ಆಕೆಯ ಆತ್ಮೀಯರಾದ ಹಿರಿಯ ಸಲೆಹೆಗಾರರು, ನಿಸ್ಸಂಶಯವಾಗಿ ಪ್ರಧಾನಮಂತ್ರಿ ಮನ್ ಮೋಹನ್ ಸಿಂಗ್ ಮತ್ತು ಅಹ್ಮದ್ ಪಟೇಲ್ ಇದರ ಹಿಂದಿದ್ದಾರೆ,” ಎಂದು ಬರೆದಿದ್ದರು.

ಆದರೆ ಯುಪಿಎ ಸರಕಾರ ಮುಂದೆ ಇದನ್ನು ತಳ್ಳಿ ಹಾಕಿತ್ತು. ಮಾತ್ರವಲ್ಲ ಮುಚ್ಚಿಡಲು ಏನೂ ಇಲ್ಲ ಎಂದು ಹೇಳಿತ್ತು.

ಗೌತಮ್ ಖೇತನ್ ಯಾರು?

ಖೇತನ್ ದೆಹಲಿ ಮೂಲದ ವಕೀಲರಾಗಿದ್ದು 2014ರಲ್ಲಿ ಅವರನ್ನು ಮೊದಲ ಬಾರಿಗೆ ಬಂಧಿಸಲಾಗಿತ್ತು. ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣದಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪ ಇವರ ಮೇಲಿತ್ತು. ಖೇತನ್ ಏರೋಮ್ಯಾಟ್ರಿಕ್ಸ್ ಎಂಬ ಕಂಪೆನಿಯ ಬೋರ್ಡ್ ಸದಸ್ಯರೂ ಆಗಿದ್ದರು. ಲಂಚವನ್ನು ಕಳ್ಳ ಮಾರ್ಗದ ಮೂಲಕ ತಂದುಕೊಳ್ಳಲು ಶೆಲ್ ಕಂಪೆನಿ ಸೃಷ್ಟಿಸಿರುವುದಾಗಿ ಇವರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದರು.

ಗೆರೊಸಾ ಮತ್ತ ಹಚ್ಕೆ ಕೈಯಿಂದ ಹಣ ಪಡೆದುಕೊಂಡಿರುವುದನ್ನು ಒಪ್ಪಿಕೊಂಡಿದ್ದ ಖೇತನ್ ಅವು ಡೀಲಿಗಾಗಿ ಪಡೆದುಕೊಂಡ ಕಿಕ್ ಬ್ಯಾಕ್ ಅಲ್ಲ ಎಂದು ಹೇಳಿದ್ದರು. ಇದು ವಿಚಿತ್ರ.

Top