An unconventional News Portal.

#ಜಸ್ಟಿಸ್ ಫಾರ್ ಸೌಜನ್ಯ: ಪ್ರಕರಣದ ಏಕೈಕ ಆರೋಪಿ ಸಂತೋಷ್‌ ರಾವ್‌ಗೆ ಜಾಮೀನು

#ಜಸ್ಟಿಸ್ ಫಾರ್ ಸೌಜನ್ಯ: ಪ್ರಕರಣದ ಏಕೈಕ ಆರೋಪಿ ಸಂತೋಷ್‌ ರಾವ್‌ಗೆ ಜಾಮೀನು

‘ಸೌಜನ್ಯ ಪ್ರಕರಣ’ದ ಹೆಚ್ಚಿನ ಸಿಬಿಐ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿರುವ ಬೆನ್ನಲ್ಲೇ ಪ್ರಕರಣದ ಏಕೈಕ ಆರೋಪಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ದರ್ಮಸ್ಥಳ ಮೂಲಕ ಯುವತಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕುಂದಾಪುರ ಸಂತೋಷ್ ರಾವ್ ಎಂಬಾತನನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಈತನ ವಿರುದ್ಧ ಮೊದಲು ಬೆಳ್ತಂಗಡಿ ಪೊಲೀಸರು ಮತ್ತು ನಂತರ ತನಿಖೆ ನಡೆಸಿದ ಸಿಬಿಐ ಗುರುತದ ಆರೋಪವನ್ನು ಹೊರಿಸಿದ್ದರು.

“ಈವರೆಗಿನ ಸಾಕ್ಷಿಗಳ ಪ್ರಕಾರ ಪ್ರಕರಣದಲ್ಲಿ ಒಬ್ಬನಿಗಿಂತ ಹೆಚ್ಚಿನ ಜನ ಇದ್ದಾರೆ ಎಂಬುದು ನ್ಯಾಯಾಲಯಕ್ಕೆ ಮನವರಿಕೆ ಆಗಿದೆ. ಈಗಾಗಲೇ ನಾಲ್ಕು ವರ್ಷಗಳ ಕಾಲ ಆತ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಇದೀಗ ನ್ಯಾಯಾಲಯ ಜಾಮೀನು ನೀಡಿದೆ,” ಎಂದು ವಕೀಲ ಭಾಸ್ಕರ್ ಹೊಳ್ಳ ‘ಸಮಾಚಾರ’ಕ್ಕೆ ಮಾಹಿತಿ ನೀಡಿದರು.

ಯಾರೀತ ಸಂತೋಷ್ ರಾವ್?:

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೆಳಕಿಗೆ ಬರುತ್ತಲೇ ಧರ್ಮಸ್ಥಳದ ದೇವಸ್ಥಾನದ ಟ್ರಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದವರು ಯುವಕನೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾನೆ ಎಂದು ಪೊಲೀಸರಿಗೆ ಹಿಡಿದು ಕೊಟ್ಟಿದ್ದರು. ಆತ ಕೆಲವು ತಿಂಗಳುಗಳ ಹಿಂದೆ ರವಿ ಎಂಬ ಹೆಸರಿನಲ್ಲಿ ಶೃಂಗೇರಿಯ ಶಾರದಾ ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ನಂತರ ತಿಳಿದು ಬಂದಿತ್ತು. ಬಂಧನಕ್ಕೊಳಗಾದ ನಂತರ ಆತ ಕುಂದಾಪುರ ಮೂಲಕ ಸಂತೋಷ್ ರಾವ್ ಎಂದು ಗೊತ್ತಾಗಿತ್ತು. ಆತ ಧರ್ಮಸ್ಥಳದಲ್ಲಿ ಊಟ ಖರೀದಿಸಿದ್ದ ಎಂಬುದಕ್ಕೆಲ್ಲಾ ಸಾಕ್ಷಿಗಳನ್ನು ಪೊಲೀಸರು ಹುಡುಕಿದ್ದರು. ಆತನೇ ಸೌಜನ್ಯಳ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾನೆ ಎಂದು ಆರೋಪ ಹೊರಿಸಲಾಗಿತ್ತು. ಇದನ್ನೇ ಸಿಬಿಐ ಕೂಡ ತನ್ನ ದೋಷಾರೋಪ ಪಟ್ಟಿಯಲ್ಲಿ ಹೇಳಿತ್ತು.

ಆದರೆ, ಸಂತೋಷ್‌ ಮೇಲೆ ಯಾಕೆ ಅನುಮಾನ ಬಂತು? ಅಂತಾಗಲೀ ಅಥವಾ ಆತನೇ ಅತ್ಯಾಚಾರ ಎಸಗಿ ಸೌಜನ್ಯಳನ್ನು ಕೊಲೆ ಮಾಡಿದ್ದಾನೆ ಎಂದು ಗೊತ್ತಾಗಿದ್ದು ಹೇಗೆ ಅಂತಾಗಲೀ? ಎಲ್ಲಿಯೂ ಹೇಳಿಕೆಗಳು ದಾಖಲಾಗಿಲ್ಲ. ಇನ್ನೂ ವಿಶೇಷ ಏನೆಂದರೆ, ಸಂತೋಷ್‌ನನ್ನು ಪೊಲೀಸರಿಗೆ ಹಿಡಿದುಕೊಟ್ಟ ಸಮಯದಲ್ಲಿ ಜತೆಗಿದ್ದ ರವಿ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸಾವು, ಕೊಲೆ ಇರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಾರೆ. ಇನ್ನೊಬ್ಬ, ಗೋಪಾಲ ಕೃಷ್ಣ ಗೌಡ ಅನಾರೋಗ್ಯದ ಕಾರಣದಿಂದ ಸಾವನ್ನಪ್ಪಿದ್ದಾರೆ.

ಅನುಮಾನ ಸಹಜ:

ಪ್ರಕರಣದಲ್ಲಿ ಸೌಜನ್ಯಳ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಗುರಿಪಡಿಸಿದ ಬೆಳ್ತಂಗಡಿಯ ತಾಲೂಕು ಜನರಲ್‌ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಆದಂ, ‘ಸೌಜನ್ಯಳ ಮೇಲೆ ಭೀಕರವಾಗಿ ಅತ್ಯಾಚಾರ ನಡೆದಿದೆ’ ಎಂದು ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ, ಮಂಗಳೂರಿನ ಕೆ. ಎಸ್. ಹೆಗಡೆ ಮೆಡಿಕಲ್ ಅಕಾಡೆಮಿಯ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಮಹಬಲೇಶ್ವರ ಶೆಟ್ಟಿ, ಆರೋಪಿ ಸಂತೋಷ್‌ ರಾವ್ ‘ಫಿಮಾಸಿಸ್’ ಕಾಯಿಲೆಯಿಂದ ನರಳುತ್ತಿದ್ದ ಎಂದು ದಾಖಲಿಸಿದ್ದಾರೆ. (ಫಿಮಾಸಿಸ್ ಎಂದರೆ, ಪುರುಷರ ಜನನಾಂಗಕ್ಕೆ ಮುಂದಿನ ಚರ್ಮ ಅಂಟಿಕೊಂಡಿರುವುದು. ಇದು ಲೈಂಗಿಕ ಚಟುವಟಿಕೆ ಸಮಯದಲ್ಲಿ ಹಿಂದಕ್ಕೆ ಹೋಗದಂತೆ ತಡೆ ಹಿಡಿದಿರುತ್ತದೆ). ಈ ಎರಡೂ ಹೇಳಿಕೆಗಳ ಜತೆಗೆ, ಸಂತೋಷ್‌ ರಾವ್‌ನನ್ನು ಪರೀಕ್ಷಿಸಿದ ವೈದ್ಯರು ಆತನ ಜನನಾಂಗದಲ್ಲಿ ಯಾವುದೇ ಗಾಯಗಳಾಗಿರಲಿಲ್ಲ ಎಂದೂ ಹೇಳಿದ್ದಾರೆ.

ಒಂದು ಕಡೆ ಸೌಜನ್ಯ ಮೇಲೆ ಭೀಕರವಾದ ಅತ್ಯಾಚಾರ ಎಸಗಲಾಗಿದೆ, ಮತ್ತೊಂದೆಡೆ ಫಿಮಾಸಿಸ್‌ನಿಂದ ಬಳಲುತ್ತಿದ್ದ ಆರೋಪಿಯ ಜನನಾಂಗದಲ್ಲಿ ಯಾವುದೇ ಗಾಯಗಳಾಗಿಲ್ಲ. ಇಂತಹ ವೈರುಧ್ಯ ಸಹಜವಾಗಿ ಅನುಮಾನ ಮೂಡಿಸಿತ್ತು.

ವರದಿಯಲ್ಲಿ ಇಲ್ಲದ ಸಮಜಾಯಿಷಿ:

ಆರೋಪಿ ಸಂತೋಷ್‌ ರಾವ್ ಪೊಲೀಸರ ವಶಕ್ಕೆ ಸಿಗುವ ವಾರದ ಹಿಂದಷ್ಟೆ ಶೃಂಗೇರಿಯ ಲಾಡ್ಜ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ. ನಂತರ ಆತ ಧರ್ಮಸ್ಥಳಕ್ಕೆ ಬಂದಿದ್ದ ಎನ್ನುತ್ತವೆ ಸಿಬಿಐ ಕಲೆ ಹಾಕಿರುವ ಸಾಕ್ಷಿಗಳು. ಆತನಿಂದ 3 ಶರ್ಟ್, 1 ಬನಿಯನ್, 1 ಪಂಚೆ ಮತ್ತು 1 ಒಳ ಉಡುಪನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವೆಲ್ಲವನ್ನೂ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿನ ಪರೀಕ್ಷಾ ವರದಿಗಳಲ್ಲಿ ಇವ್ಯಾವುದರ ಮೇಲೆಯೂ ಒಂದೇ ಒಂದು ರಕ್ತದ ಕಲೆಯಾಗಲೀ, ಡಿಎನ್‌ಎ ಮಾರ್ಕಿಂಗ್‌ಗಳಾಗಿ ಕಂಡು ಬಂದಿಲ್ಲ. ಅತ್ಯಾಚಾರ ಮತ್ತು ಕೊಲೆ ನಡೆಸಿದ ಆರೋಪಿ ಬಳಿ ಇರುವ ಬಟ್ಟೆಗಳಲ್ಲಿ ಅಂತಹ ಕುರುಹುಗಳು ಸಿಗದಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಸಿಬಿಐ ಈ ಕುರಿತು ಯಾವುದೇ ಸಮಾಜಾಯಿಷಿಯನ್ನೂ ನೀಡಿರಲ್ಲ.

ಇನ್ನು, ಡಿಎನ್‌ಎ ತಜ್ಷ ವಿನೋದ್ ಕೆ. ಲಕ್ಕಪ್ಪ ನೀಡಿರುವ ಹೇಳಿಕೆಯಲ್ಲಿ ಆರೋಪಿ ಸಂತೋಷ್‌ ಪಂಚೆಯಲ್ಲಿ ಕೂದಲುಗಳು ಸಿಕ್ಕಿವೆ ಎಂದು ಹೇಳಿದ್ದಾರೆ. ವಿಶೇಷ ಅಂದರೆ, ಈ ಕೂದಲುಗಳು ಇಬ್ಬರು ಪ್ರತ್ಯೇಕ ಪುರುಷರಿಗೆ ಸೇರಿದ್ದು ಎಂದು ಅವರು ಗುರುತಿಸಿದ್ದಾರೆ. ಈ ಕುರಿತು ಸಿಬಿಐ ತನಿಖೆ ಹೆಚ್ಚಿನ ಬೆಳಕು ಬೀರಿರಲ್ಲ. ಜತೆಗೆ, ಸೌಜನ್ಯ ಉಗುರುಗಳಲ್ಲಿ ಸಿಕ್ಕಿರುವ ಡಿಎನ್‌ಎಗೂ ಸಂತೋಷ್‌ಗೂ ಯಾವುದೇ ಸಾಮ್ಯತೆ ಇರಲಿಲ್ಲ.

ವಿನೋದ್ ಕೆ. ಲಕ್ಕಪ್ಪ ನೀಡಿರುವ ಬಾಯಿ ಮಾತಿನ ಹೇಳಿಕೆಯಲ್ಲಿ ಕೊಲೆಯಾದ ಸೌಜನ್ಯ ಮೇಲೆ ಒಬ್ಬರಿಗಿಂತ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳಿಂದ ಬಲತ್ಕಾರ ನಡೆದಿರಬಹುದು ಎಂದು ತಿಳಿಸಿದ್ದಾರೆ. ಡಾ. ಆದಂ ಕೂಡ ಇದನ್ನೇ ಪುಷ್ಠೀಕರಿಸಿದ್ದಾರೆ. ಆದರೆ ಪ್ರಕರಣದಲ್ಲಿ ಈವರೆಗೆ ಪೊಲೀಸರು ಸಂತೋಷ್ ರಾವ್ ಒಬ್ಬನನ್ನೇ ಅಪರಾಧಿ ಎಂದು ಹೇಳಲಾಗಿತ್ತು. ಇದೀಗ ನಾಲ್ಕು ವರ್ಷಗಳ ನಂತರ ಆತನಿಗೂ ಜಾಮೀನು ಸಿಕ್ಕಿದೆ.

ಆತ್ಯಾಚಾರ ಮತ್ತು ಕೊಲೆಗೆ ಈಡಾದ ಸೌಜನ್ಯಳ ಕುಟುಂಬ ಮಾತ್ರ ನ್ಯಾಯದ ನಿರೀಕ್ಷೆಯನ್ನು ಇನ್ನೂ ಉಳಿಸಿಕೊಂಡಿದೆ.

Top