An unconventional News Portal.

ಕೇಂದ್ರ ಸೇವೆಗೆ ಹೊರಟು ನಿಂತ ಸೋನಿಯಾ ನಾರಂಗ್

ಕೇಂದ್ರ ಸೇವೆಗೆ ಹೊರಟು ನಿಂತ ಸೋನಿಯಾ ನಾರಂಗ್

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಡಿಐಜಿ ಸೋನಿಯಾ ನಾರಂಗ್ ರಾಷ್ಟ್ರೀಯ ತನಿಖಾ ದಳದ(ಎನ್‍ಐಎ) ಎಸ್‍ಪಿ ಹುದ್ದೆ ಹೊಣೆಯನ್ನು ವಹಿಸಿಕೊಳ್ಳಲಿದ್ದಾರೆ.

ಸೋನಿಯಾ ನಾರಂಗ್ ಕೇಂದ್ರ ಸೇವೆಗೆ ತೆರಳಲು ಸಿದ್ಧವಾಗಿದ್ದು, ವಿಚಾರದ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ಈಗಾಗಲೇ ರಾಜ್ಯ ಗೃಹ ಇಲಾಖೆ ಜತೆ ಚರ್ಚೆ ನಡೆಸಿದೆ. ನಾರಂಗ್ ಕಾರ್ಯದಕ್ಷತೆ ಆಧಾರದ ಮೇಲೆ ಎನ್‍ಐಎಗೆ ನೇಮಕ ಮಾಡಲು ಮುಂದಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯಸಿದ ಅವರು, “ಕೇಂದ್ರ ಗೃಹಇಲಾಖೆಯ ಆದೇಶ ನನಗೆ  ತಲುಪಿದೆ. ಅಧಿಕಾರ ಸ್ವೀಕರಿಸಲು 2-3 ತಿಂಗಳು ಬೇಕಾಗಬಹುದು,” ಎಂದು ತಿಳಿಸಿದ್ದಾರೆ. ಸದ್ಯ ಚುನಾವಣಾ ಕರ್ತವ್ಯದ ನಿಮಿತ್ತ ಪುದುಚೇರಿಗೆ ತೆರಳಿರುವ ಅವರು, ಮೇ 18ಕ್ಕೆ ವಾಪಾಸಾಗಲಿದ್ದಾರೆ.

ಲೋಕಾಯುಕ್ತ ಸಂಸ್ಥೆಯೊಳಗಿನ ಭ್ರಷ್ಟಾಚಾರವನ್ನು ಸೋನಿಯಾ ನಾರಂಗ್ ಬಯಲಿಗೆಳೆದಿದ್ದರು. ಎಂಜಿನಿಯರ್ ಕೃಷ್ಣ ಮೂರ್ತಿ ಅವರ ದೂರನ್ನು ಆಧರಿಸಿ ಲೋಕಾಯುಕ್ತ ಎಸ್‍ಪಿಯಾಗಿದ್ದ ಸೋನಿಯಾ ನಾರಂಗ್ ತನಿಖೆ ನಡೆಸಿ ಲೋಕಾಯುಕ್ತ ರಿಜಿಸ್ಟ್ರಾರ್ಗೆ ಮತ್ತು ಎಡಿಜಿಪಿಗೆ ವರದಿ ಸಲ್ಲಿಸಿದ್ದರಿಂದ ಲೋಕಾ ಭ್ರಷ್ಟಾಚಾರದ ಹಗರಣ ಬೆಳಕಿಗೆ ಬಂದಿತ್ತು.

ಸಿಐಡಿ ಎಸ್‍ಪಿ ಮಧುರವೀಣಾ ಅವರು ವೇಶ್ಯಾವಾಟಿಕೆ ದಂಧೆಯ ನೆಪ ಮಾಡಿ ಖಾಸಗಿ ಹೊಟೇಲ್ ಮೇಲೆ ನಕಲಿ ದಾಳಿ ನಡೆಸಿ ಹಣ ವಸೂಲಿ ಮಾಡಿರುವ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ಸೋನಿಯಾ ನಾರಂಗ್ ಅವರು ತನಿಖೆ ನಡೆಸಿ ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರಿಗೆ ವರದಿ ಸಲ್ಲಿಸಿದ್ದರು.

ಸದ್ಯ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಅವರು ಮುನ್ನಡೆಸುತ್ತಿದ್ದಾರೆ.

2002ರ ತಂಡದ ಐಪಿಎಸ್ ಅಧಿಕಾರಿ ಸೋನಿಯಾ ಕಳೆದ ಜನವರಿಯಲ್ಲಿ ಡಿಐಜಿಯಾಗಿ ಭಡ್ತಿ ಪಡೆದು ಸಿಐಡಿಗೆ ವರ್ಗಾವಣೆಗೊಂಡಿದ್ದರು.

Top