An unconventional News Portal.

‘ಸೊಮಾಲಿಯಾ ಸ್ಪೆಷಲ್’: ಇಲ್ಲಿ ಭಯೋತ್ಪಾದಕರು ಮತ್ತು ಸರಕಾರದ ನಡುವೆ ಪತ್ರಕರ್ತರೇ ಕಾಲ್ಚೆಂಡು!

‘ಸೊಮಾಲಿಯಾ ಸ್ಪೆಷಲ್’: ಇಲ್ಲಿ ಭಯೋತ್ಪಾದಕರು ಮತ್ತು ಸರಕಾರದ ನಡುವೆ ಪತ್ರಕರ್ತರೇ ಕಾಲ್ಚೆಂಡು!

ಸೊಮಾಲಿಯಾ…

ಪ್ರಧಾನಿ ಮೋದಿ ಅವರಿಂದಾಗಿ ಇವತ್ತು ಚರ್ಚೆಯಲ್ಲಿರುವ ಪದ. ಇದು ಪತ್ರಕರ್ತರ ಪಾಲಿಗೆ ಹಲವು ಒಳನೋಟಗಳನ್ನು ನೀಡುವ ಆಫ್ರಿಕಾ ಖಂಡದ ಪುಟ್ಟ ದೇಶ ಕೂಡ. 1992ರಿಂದ ಈಚೆಗೆ ಇಲ್ಲಿ ನಡೆದ ಪತ್ರಕರ್ತರ ಹತ್ಯೆಗಳಿಂದಾಗಿ ಅಂತರಾಷ್ಟ್ರೀಯ ಮಾಧ್ಯಮ ಸಮೂಹ ಸೊಮಾಲಿಯಾವನ್ನು ‘ಕೆಂಪು ಪಟ್ಟಿ’ಯಲ್ಲಿರುವ ದೇಶ ಎಂದು ತೀರ್ಮಾನಿಸಿದೆ.

ಲತಿಶಾ ಬಾಡಾರ್ ಎಂಬ ಮಾನವ ಹಕ್ಕು ಸಂಶೋಧಕಿಯೊಬ್ಬರ ಜೊತೆ ಸ್ಟೆಫಾನಿ ಹಾಂಕಾಕ್ ಎಂಬ ಪತ್ರಕರ್ತೆ ನಡೆಸಿದ ಅನೌಪಚಾರಿಕ ಸಂವಾದವಿದು. ಲತಿಶಾ ಬಾಡಾರ್ ಸೊಮಾಲಿಯಾವನ್ನೇ ಗುರಿಯಾಗಿಸಿ ಸಂಶೋಧನೆ ನಡೆಸುವ ಹ್ಯುಮನ್ ರೈಟ್ಸ್ ವಾಚ್ ಸಂಸ್ಥೆಯ ಕಾರ್ಯಕರ್ತೆ. ಆದರೆ ಆಕೆ ಸೊಮಾಲಿಯಾ ಕುರಿತು ಸಂವಾದಕ್ಕೆ ಕುಳಿತಾಗ ಹೆಚ್ಚಿನ ಗಮನ ನೀಡಿದ್ದು, ಪ್ರತಿಕ್ರಿಯಿಸಿದ್ದು ಪತ್ರಿಕೋದ್ಯಮದ ಕುರಿತು ಎಂಬುದು ಗಮನಾರ್ಹ.

ಸದ್ಯ ನಮ್ಮಲ್ಲಿ ರಾಜಕೀಯ ಕಾರಣಗಳಿಗಾಗಿ ಸೊಮಾಲಿಯಾ ಸುತ್ತ ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲಿ ಸೊಮಾಲಿಯಾದಲ್ಲಿ ಕೆಲಸ ಮಾಡಿದ ಕಾರ್ಯಕರ್ತರೊಬ್ಬರ ಜತೆ ಪತ್ರಕರ್ತರೊಬ್ಬರ ಅಪರೂಪದ ಸಂವಾದದ ಆಯ್ದ ಭಾಗಗಳಲ್ಲಿ ‘ಮೀಡಿಯಾ 2.0’ ಇಲ್ಲಿ ಕಟ್ಟಿ ಕೊಡುವ ಪ್ರಯತ್ನ ಮಾಡಿದೆ.

ಸ್ಟೆಫಾನಿ ಹಾಂಕಾಕ್ : ಸೊಮಾಲಿಯಾ ಪತ್ರಕರ್ತರದ್ದು ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡ ಪರಿಸ್ಥಿತಿ ಅಲ್ವಾ?

ಲತಿಶಾ ಬಾಡಾರ್ : ಪತ್ರಕರ್ತರು ತಮ್ಮ ಪರಿಸ್ಥಿತಿಯನ್ನು ಹೀಗೇ ವಿವರಿಸುತ್ತಾರೆ, ಅತ್ತ ಸೊಮಾಲಿಯಾ ಸರ್ಕಾರದ ಜೈಲು ಮತ್ತು ಇತ್ತ ಅಲ್ ಶಬಾಬ್ ಗನ್ಗಳ ಮಧ್ಯೆ ಸಿಕ್ಕಿ ಹಾಕಿಕೊಂಡ ಪರಿಸ್ಥಿತಿ ಎನ್ನುತ್ತಾರೆ. ಹಾಗೆ ನೋಡಿದರೆ ಸೊಮಾಲಿಯಾದಲ್ಲಿ ತೀರಾ ವೈವಿಧ್ಯಮಯ ಮಾಧ್ಯಮಗಳನ್ನು ಕಾಣಬಹುದು. 50ಕ್ಕೂ ಹೆಚ್ಚು ರೇಡಿಯೋ ಸ್ಟೇಷನ್ಗಳು ಇಲ್ಲಿವೆ. ಆದರೆ ಸಮಸ್ಯೆ ಏನೆಂದರೆ ಮಾಧ್ಯಮಗಳ ಮೇಲಿರುವ ನಿಯಂತ್ರಣ ಮತ್ತು ವರದಿ ಸಿದ್ಧಪಡಿಸಿದ ವರದಿಗಾರರು ಎದುರಿಸಬೇಕಾದ ಬೆದರಿಕೆಗಳು. 2016ರಲ್ಲಿ ಸೊಮಾಲಿಯಾದಲ್ಲಿ ಚುನಾವಣೆ ನಡೆಯಲಿದೆ. ಹಾಗಾಗಿ ಮಾಧ್ಯಮ ಕೆಲವು ಮುಖ್ಯ ಅಂಶಗಳ ಬಗ್ಗೆ ವರದಿ ಮಾಡಬೇಕಾಗಿದೆ. ಆದರೆ ಭಯವಿಲ್ಲದೆ ವರದಿ ತಯಾರಿಸಲು ಸಾಧ್ಯವಿಲ್ಲ.

ಅಂದರೆ ಹೇಗೆ?

somalia-journalists-4ಸೊಮಾಲಿಯಾದ ಮಧ್ಯ ಭಾಗದಲ್ಲಿಎರಡು ಪ್ರಮುಖ ಪಟ್ಟಣಗಳು ಸೂಫಿ ಮಿಲಿಟರಿ ಗ್ರೂಪ್ನ ಹಿಡಿತದಲ್ಲಿದೆ. ಇದೇ ಪಟ್ಟಣಗಳಲ್ಲಿ ಸೊಮಾಲಿಯಾ ಸರ್ಕಾರ ಒಕ್ಕೂಟ ಸರ್ಕಾರವನ್ನು ತರಲು ಹೊರಟಿದೆ. ಇದರ ವಿರುದ್ಧ ಪ್ರತಿ ದಿನ ಪತ್ರಕರ್ತರಿಗೆ ಮಿಲಿಟರಿ ನಾಯಕರ ಕಡೆಯಿಂದ ಕರೆಗಳು ಬರುತ್ತವೆ. ಆಗ ಅವರು ಸರಕಾರವನ್ನು ಬೆಂಬಲಿಸುವಂತಿಲ್ಲ. ಮಿಲಿಟರಿ ನಾಯಕರ ಅಣತಿಯನ್ನು ಉಲ್ಲಂಘಿಸಿದರೆ, ಮಿಲಿಟರಿ ಕಡೆಯಿಂದ ಬಂಧನಕ್ಕೆ ಒಳಗಾಗಬೇಕಾಗುತ್ತದೆ. ಇದಾದ ಬಳಿಕ ರೇಡಿಯೋ ಸ್ಟೇಷನ್ ತಾತ್ಕಾಲಿಕವಾಗಿ ಬಾಗಿಲು ಮುಚ್ಚುತ್ತದೆ. ಅದೇ ರೀತಿ ಬಾಗಿಲು ಮುಚ್ಚಿಕೊಂಡ ರೇಡಿಯೋ ಸ್ಟೇಷನ್ ನಿರ್ದೇಶಕನೊಬ್ಬ ನಮ್ಮ ಬಳಿ ಹೇಳುತ್ತಿದ್ದ, ನಾವು ‘ವಿವಾದಾತ್ಮಕ ವಿಷಯ’ಗಳ ಬಗ್ಗೆ ಬರೆಯುವಂತಿಲ್ಲ. ಹಾಗಾಗಿ ನಾವು ಮತ್ತೆ ಪ್ರಸಾರ ಆರಂಭಿಸುವುದಿಲ್ಲ ಎನ್ನುತ್ತಿದ್ದ.

ಮಾಧ್ಯಮ ಯಾವುದರ ಬಗ್ಗೆ ಮಾತಾಡಬಾರದು ಎಂದು ಬಯಸುತ್ತದೆ?

ಪ್ರಮುಖ ವಿಷಯ ಅಂದರೆ ಅಲ್-ಶಬಾಬ್ ವಿರುದ್ಧ ಸರ್ಕಾರದ ಹೋರಾಟ. ಈ ಸಮಯದಲ್ಲಿ ನಾಗರಿಕರ ಮೇಲೆ ಸರಕಾರದ ದೌರ್ಜನ್ಯವನ್ನು ಬರೆದರೆ ಸಾಕು, ಸ್ಥಳೀಯ ಪೊಲೀಸರಿಂದ ಎಚ್ಚರಿಕೆ ಸಂದೇಶ ಬರುತ್ತದೆ. ಅದೇ ಸಂದರ್ಭದಲ್ಲಿಅಲ್ ಶಬಾಬ್ ಸರಕಾರಿ ಪಡೆಗಳ ಮೇಲೆ ದಾಳಿ ಮಾಡಿದಾಗಲೂ ಮಾಧ್ಯಮಗಳು ವರದಿ ಮಾಡಬಾರದು ಎಂದೇ ಆಡಳಿತ ಬಯಸುತ್ತದೆ. ಪತ್ರಕರ್ತರು ದಾಳಿಯಲ್ಲಿ ಎಷ್ಟು ಸೈನಿಕರು ಸತ್ತರು, ದಾಳಿಯ ತೀವ್ರತೆ ಎಷ್ಟಿದೆ ಎಂದು ಹೇಳುವಂತಿಲ್ಲ. ಸೆನ್ಸಾರ್ಶಿಪ್ ಯಾವ ಮಟ್ಟಕ್ಕೆ ಕೆಟ್ಟದಾಗಿ ಇದೆ  ಅಂದರೆ, ಸಂಪಾದಕರು ವರದಿಗಾರರಿಗೆ ಇಡೀ ವರದಿಯನ್ನೇ ಬಿಟ್ಟು ಹಾಕಲು ಹೇಳುತ್ತಾರೆ. ಕಾರಣ ವಸ್ತುನಿಷ್ಠ ಜೀವಕ್ಕೆ ಸಂಚಕಾರ ತರುವ ಸನ್ನಿವೇಶ ಇಲ್ಲಿದೆ.

ಸೆನ್ಸಾರ್’ಶಿಪ್ ತೀವ್ರತೆ ಎಷ್ಟಿದೆ?

ಹೌದು, ಮೊಗದೀಶುನಲ್ಲಿ ಗುಪ್ತಚರ ಇಲಾಖೆ ಅಲ್-ಶಬಾಬ್ನ ಯಾವುದೇ ಸ್ಟೇಟ್’ಮೆಂಟ್ಗಳನ್ನು ವರದಿ ಮಾಡಲು ಬಿಡುವುದಿಲ್ಲ. ಯಾವ ಪತ್ರಕರ್ತರು ‘ಬಿಬಿಸಿ ಸೊಮಾಲಿ ಸರ್ವೀಸ್’ ಮತ್ತು ‘ವಾಯ್ಸ್ ಆಫ್ ಅಮೆರಿಕಾ’ ರೇಡಿಯೋ ವರದಿಗಳನ್ನು ಮರು ಪ್ರಸಾರ ಮಾಡುತ್ತಾರೋ ಆ ಗ್ರೂಪ್ಗಳನ್ನೂ ಬಂಧಿಸಲಾಗುತ್ತದೆ. ಒಬ್ಬ ವರದಿಗಾರ ಹೇಳುತ್ತಿದ್ದ, ಒಂದೊಮ್ಮೆ ಬಿಬಿಸಿ ರೇಡಿಯೋವನ್ನೇ ಲೈವ್ ಆಗಿ ಪ್ರಸಾರ ಮಾಡಿ ಅದರಲ್ಲಿ ಎಲ್ಲಿಯಾದರೂ ನೇರವಾಗಿ ಅಲ್ ಶಬಾಬ್ ಶಬ್ದ ಪ್ರಸಾರವಾದರೆ ಆತನ ಜಾಹೀರಾತಿಗೆ ಕತ್ತರಿ ಬೀಳುತ್ತದೆಯಂತೆ.

ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸೊಮಾಲಿಯಾ ಪತ್ರಿಕೋದ್ಯಮವಿದೆ. ಇಲ್ಲಿ ಪತ್ರಕರ್ತರ ಬೆಂಬಲಕ್ಕೆ ಬಂಡುಕೋರ ಸಂಘಟನೆಗಳೂ ಇಲ್ಲ ಸರಕಾರವೂ ಇಲ್ಲ. ಇಬ್ಬರೂ ತಮ್ಮ ಪರವಾಗಿ ಮಾಧ್ಯಮ ವರದಿ ಮಾಡಬೇಕೆಂದೇ ಬಯಸುತ್ತಾರೆ. ಆದರೆ ಮಾಧ್ಯಮ ಹಾಗಿರಲು ಸಾಧ್ಯವಿಲ್ಲವಲ್ಲ…

Leave a comment

Top