An unconventional News Portal.

ಬೀಫ್ ಬ್ಯಾನ್: ಸುಪ್ರಿಂಕೋರ್ಟ್ ಚಾಪೆ ಕೆಳಗೆ ಕೇಂದ್ರ ಸರಕಾರ ರಂಗೋಲಿ ಹಾಕಿದ್ದು ಹೀಗೆ…

ಬೀಫ್ ಬ್ಯಾನ್: ಸುಪ್ರಿಂಕೋರ್ಟ್ ಚಾಪೆ ಕೆಳಗೆ ಕೇಂದ್ರ ಸರಕಾರ ರಂಗೋಲಿ ಹಾಕಿದ್ದು ಹೀಗೆ…

ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ಮಾರುವುದಕ್ಕೆ ಕಡಿವಾಣ ಹಾಕಿ, ಕೇಂದ್ರ ಸರಕಾರ ಹೊರಡಿಸಿರುವ ಹೊಸ ಅಧಿಸೂಚನೆ ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿದೆ. ಆದರೆ, ಇದನ್ನು ಸಮರ್ಥಿಸಿಕೊಂಡಿರುವ ಮೋದಿ ನೇತೃತ್ವದ ಸರಕಾರ, ಸುಪ್ರಿಂ ಕೋರ್ಟ್ ಆದೇಶಗಳನ್ನು ಪಾಲಿಸಿರುವುದಾಗಿ ಹೇಳಿಕೊಂಡಿದೆ.

ಆದರೆ ಇದು ಅರ್ಧ ಸತ್ಯ ಎನ್ನುತ್ತಿವೆ ‘ಸ್ಕ್ರಾಲ್ ಡಾಟ್ ಇನ್’ ಪ್ರಕಟಿಸಿರುವ ವರದಿ. ದಾಖಲೆಗಳನ್ನು ಪರಿಶೀಲನೆ ಮಾಡಿರುವ ಸುದ್ದಿತಾಣ, ಭಾರತ ಮತ್ತು ನೇಪಾಳದ ಗಡಿ ಭಾಗದಲ್ಲಿ ನಡೆಯುವ ಪ್ರಾಣಿ ಹಿಂಸೆಯ ಹಿನ್ನೆಲೆಯಲ್ಲಿ ಸಲ್ಲಿಕೆಯಾದ ಸಾರ್ವಜನಿಕ ರಿಟ್ ಪಿಟಿಷನ್ ಹಾಗೂ ನಂತರದ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲುತ್ತಿದೆ. ಇದೇ ವೇಳೆ, ಹೊಸ ಅಧಿಸೂಚನೆಯಲ್ಲಿ ವಾಕ್ಯವೊಂದರ ಬಳಕೆಯಲ್ಲಿ ಮೆರೆದ ಚಾಲಾಕಿತನದ ಮೇಲೂ ಬೆಳಕು ಚೆಲ್ಲುತ್ತಿದೆ.

2004ರಲ್ಲಿ ಪ್ರಾಣಿದಯಾ ಸಂಘದವರು ಸುಪ್ರಿಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಕ್ಕೆ ಸಮಿತಿಯೊಂದನ್ನು ರಚಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಸಮಿತಿಯು ವಿಶೇಷವಾಗಿ ಭಾರತ ಮತ್ತು ನೇಪಾಳದ ಗಡಿ ಭಾಗದಲ್ಲಿ ನಡೆಯುತ್ತಿರುವ ಜಾನುವಾರುಗಳ ಅಕ್ರಮ ಸಾಗಣೆ ಕುರಿತು ಗಮನ ಹರಿಸುವಂತೆ ಹೇಳಿತ್ತು. 2015ರಲ್ಲಿ ಸಮಿತಿಯು ಜಾನುವಾರುಗಳ ಮಾರುಕಟ್ಟೆಯನ್ನು ನಿಯಂತ್ರಣದಲ್ಲಿಡಲು ಹೊಸ ನಿಯಮಗಳನ್ನು ರೂಪಿಸಲು ಶಿಫಾರಸು ಮಾಡಿತ್ತು. ಈ ಮೂಲಕ ಆರೋಗ್ಯವಾಗಿರುವ ಜಾನುವಾರುಗಳು ‘ಕಾನೂನಾತ್ಮಕವಾಗಿ ಅಂಗೀಕೃತವಾಗಿರುವ ಉದ್ದೇಶ’ಗಳಿಗೆ ಮಾತ್ರ ಬಳಕೆಯಾಗುವಂತೆ ನೋಡಿಕೊಳ್ಳುವ ಉದ್ದೇಶವನ್ನು ಹೊಂದಲಾಗಿತ್ತು.

 

ಆದರೆ ಕೇಂದ್ರ ಸರಕಾರ, ಈ ಕಾನೂನಾತ್ಮಕ ಅಂಗೀಕೃತ ಉದ್ದೇಶ (legally authorised purposes) ಎಂದು ಇದ್ದ ವಾಕ್ಯವನ್ನು ಕಸಾಯಿಖಾನೆಗಳಿಗೆ ಮಾರುವ ಉದ್ದೇಶದಿಂದ ಮಾರುಕಟ್ಟೆಗೆ ತರುವಂತಿಲ್ಲ (not been brought to market for sale for slaughter) ಎಂದು ತನ್ನ ಹೊಸ ಅಧಿಸೂಚನೆಯಲ್ಲಿ ಬದಲಿಸಿತು. ಸದ್ಯ ದೇಶದೊಳಗೆ ಅದು ಮೂಡಿಸುತ್ತಿರುವ ಗಂಭೀರ ಪರಿಣಾಮಗಳ ಹಿನ್ನೆಲೆ ಇಷ್ಟೆ.

ಗೋ ಹತ್ಯೆ ವಿಚಾರದಲ್ಲಿ ಪ್ರತಿ ರಾಜ್ಯಗಳೂ ತನ್ನದೇ ಆದ ಕಾಯ್ದೆಗಳನ್ನು ಜಾರಿ ತಂದಿವೆ. ಸುಪ್ರಿಂ ಕೋರ್ಟ್‌ಗೆ ಸಮಿತಿ ನೀಡಿದ ಶಿಫಾರಸಿನ ಹಿನ್ನೆಲೆಯಲ್ಲಿಯೂ, ಕಸಾಯಿಖಾನೆಗಳಿಗೆ ಪರವಾನಗಿ ನೀಡಿರುವ ರಾಜ್ಯಗಳ ಮಾರುಕಟ್ಟೆಯಲ್ಲಿ ಮಾಂಸಕ್ಕಾಗಿ ಜಾನುವಾರುಗಳನ್ನು ಮಾರಾಟ ಮಾಡಬಹುದಾಗಿತ್ತು. ಇದೀಗ ಕೇಂದ್ರ ಸರಕಾರದ ಹೊಸ ಅಧಿಸೂಚನೆ ಹಿನ್ನೆಲೆಯಲ್ಲಿ ಎಮ್ಮೆ, ಒಂಟೆಗಳೂ ಸೇರಿದಂತೆ ಯಾವುದೇ ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುವುದನ್ನು ಎಲ್ಲಾ ರಾಜ್ಯಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕಿದೆ.

ಇವೆಲ್ಲಾ ಶುರುವಾಗಿದ್ದೇಗೆ?:

ಇದೇ ವರ್ಷದ ಮೇ. 23ರಂದು ಕೇಂದ್ರ ಸರಕಾರ ಅಧಿಸೂಚನೆಯನ್ನು ಹೊರಡಿಸಿತು. ಇದರ ನಿಯಮ- 22ರ ಅಡಿಯಲ್ಲಿ ಜಾನುವಾರುಗಳನ್ನು ಕೃಷಿ ಚಟುವಟಿಕೆ ಕಾರಣಕ್ಕಾಗಿ ಬಳಕೆ ಮಾಡುತ್ತೇವೆ ಎಂಬ ಪ್ರಮಾಣ ಪತ್ರವನ್ನು ಪಡೆದುಕೊಂಡರೆ ಮಾತ್ರವೇ ಮಾರಾಟ ಮಾಡಲು ಅವಕಾಶ ನೀಡಲಾಯಿತು. ಯಾವುದೇ ಕಾರಣಕ್ಕೂ ಕಸಾಯಿಖಾನೆಗಳಿಗೆ ಸಾಗಿಸುವುದನ್ನು ನಿಷೇಧಿಸಲಾಯಿತು. ಕಸಾಯಿಖಾನೆಗಳಿಗೆ ಮರುಮಾರಾಟ ಮಾಡುವುದರ ಮೇಲೂ ನಿರ್ಬಂಧ ಹೇರಲಾಯಿತು.

ದೇಶಾದ್ಯಂತ ಹೆಚ್ಚುತ್ತಿರುವ ಗೋ ರಕ್ಷಣಾ ದಾಳಿಗಳ ಹಿನ್ನೆಲೆಯಲ್ಲಿ ಈ ನಿಯಮಾವಳಿಗಳು ಗೋ ಹತ್ಯಾ ನಿಷೇಧ ಕಾಯ್ದೆ ತರಲು ನಡೆಸುತ್ತಿರುವ ತಯಾರಿ ಎಂದು ವಿಶ್ಲೇಷಣೆಗಳು ಕೇಳಿ ಬಂದವು. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ‘ಭೀಪ್ ಫೆಸ್ಟಿವಲ್’ ಹೆಸರಿನಲ್ಲಿ ಪ್ರತಿಭಟನೆಗಳು ಹುಟ್ಟಿಕೊಂಡವು.

ಹೀಗೆ, ವಿವಾದವನ್ನು ಹುಟ್ಟುಹಾಕಿದ ಅಧಿಸೂಚನೆಯ ಮೂಲ ಹಿಡಿದು ಹೊರಟರೆ 2014ರಲ್ಲಿ ಸುಪ್ರಿಂ ಕೋರ್ಟ್‌ಗೆ ಸಲ್ಲಿಕೆಯಾದ ರಿಟ್ ಪಿಟಿಷನ್ ಒಂದರ ಕಥನ ಬಿಚ್ಚಿಕೊಳ್ಳುತ್ತದೆ. ಪ್ರತಿ ಐದು ವರ್ಷಗಳಿಗೊಮ್ಮೆ ಭಾರತ ಮತ್ತು ನೇಪಾಳದ ಗಡಿಭಾಗದಲ್ಲಿ ನಡೆಯುವ ಗಡಿಮೈ ಹಬ್ಬದ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುವ ಪ್ರಾಣಿ ಹಿಂಸೆ ತಡೆಯಬೇಕು ಎಂದು ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಗೌರಿ ಮೌಲೇಖಿ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದರು. ಗೌರಿ ಪೀಪಲ್ ಫಾರ್ ಎನಿಮಲ್ ಎಂಬ ಸರಕಾರೇತರ ಸಂಸ್ಥೆಯ ಟ್ರಸ್ಟಿ ಕೂಡ. ಈ ಟ್ರಸ್ಟ್‌ನ ಅಧ್ಯಕ್ಷೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ.

ಇವರ ಅರ್ಜಿಯನ್ನು ಪುರಸ್ಕರಿಸಿದ ಸುಪ್ರಿಂ ಕೋರ್ಟ್ ಅದೇ ವರ್ಷದ ಅಕ್ಟೋಬರ್‌ನಲ್ಲಿ ಭಾರತ- ನೇಪಾಳ ಗಡಿಯನ್ನು ಕಾಯುವ ‘ಶಸಸ್ತ್ರ ಸೀಮಾ ಬಲ’ಕ್ಕೆ ಹಾಗೂ ಸಂಬಂಧಪಟ್ಟ ರಾಜ್ಯ ಸರಕಾರಗಳಿಗೆ ಮತ್ತು ಕೇಂದ್ರ ಸರಕಾರದ ನಾನಾ ಸಚಿವಾಲಯಗಳಿಗೆ ನೇಪಾಳಕ್ಕೆ ಜಾನುವಾರುಗಳ ಅಕ್ರಮ ಸಾಗಾಟ ತಡೆಯುವಂತೆ ಸೂಚನೆ ನೀಡಿತು. ಈ ಸಮಸ್ಯೆಗೆ ದೂರಗಾಮಿ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಸಮಿತಿಯೊಂದನ್ನು ರಚಿಸುವಂತೆಯೂ ತಿಳಿಸಲಾಯಿತು. ‘ಶಸಸ್ತ್ರ ಸೀಮಾ ಬಲ’ದ ಮಹಾನಿರ್ದೇಶಕರನ್ನೇ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು.

 

 

ಇದೇ ಸಮಿತಿಗೆ ನಾನಾ ರಾಜ್ಯ ಸರಕಾರಗಳ ಮುಖ್ಯ ಕಾರ್ಯದರ್ಶಿಗಳು, ಅನಿಮಲ್ ವೆಲ್‌ಫೇರ್ ಬೋರ್ಡ್‌ ಆಫ್ ಇಂಡಿಯಾ ಮತ್ತಿತರ ಪ್ರತಿವಾದಿಗಳು ಸದಸ್ಯರಾಗಿದ್ದರು. ಇದರ ಮೊದಲ ಸಭೆಗಳು ಮಾರ್ಚ್‌- ಏಪ್ರಿಲ್ 2015ರಲ್ಲಿ ಆರಂಭಗೊಂಡವು. ಆದರೆ ಆರಂಭದಲ್ಲಿಯೇ ಸಮಿತಿಗೆ ಭಾರತ- ನೇಪಾಳ ಗಡಿಯಲ್ಲಿ ನಡೆಯುತ್ತಿರುವ ಅಕ್ರಮ ಜಾನುವಾರಗಳ ಸಾಗಣೆ ಒಂದು ಸಣ್ಣ ವಿಚಾರ, ಅದರ ಹಿನ್ನೆಲೆಯಲ್ಲಿ ಅದಕ್ಕಿಂತ ದೊಡ್ಡ ಸಮಸ್ಯೆ ಇದೆ ಎಂಬುದು ಗೊತ್ತಾಗಿ ಹೋಯಿತು. ಜಾನುವಾರಗಳ ಮಾರಾಟ, ಸಾಗಣೆ ವೇಳೆ ಹಾಗೂ ಗಡಿಮೈ ಹಬ್ಬದ ಸಮಯದಲ್ಲಿ ನಾನಾ ಹಿಂಸಾ ವಿರೋಧಿ ಕಾನೂನುಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಅರ್ಥವಾಗಿತ್ತು.

ಗಡಿಮೈ ಉತ್ಸವದ ಒಂದು ಚಿತ್ರ.

ಗಡಿಮೈ ಉತ್ಸವದ ಒಂದು ಚಿತ್ರ.

ಸಾಕಷ್ಟು ಸಭೆಗಳ ನಂತರ ಸಮಿತಿ ಒಂದಷ್ಟು ಶಿಫಾರಸುಗಳನ್ನು ಮುಂದಿಟ್ಟಿತು. ಅದರಲ್ಲಿ ಜಾನುವಾರುಗಳ ಮಾರುಕಟ್ಟೆಯ ಮೇಲೆ ನಿರ್ಬಂಧ, ಕಾನೂನಾತ್ಮಕ ಅಂಗೀಕೃತ ಉದ್ದೇಶಗಳಿಗೆ ಮಾತ್ರವೇ ಆರೋಗ್ಯಪೂರ್ಣ ಹಸುಗಳನ್ನು ಮಾರಾಟ ಮಾಡಲು ಕ್ರಮಗಳನ್ನು ಒಳಗೊಂಡಿತ್ತು. ಇನ್ನೂ ವಿಶೇಷ ಎಂದರೆ, ಈ ಶಿಫಾರಸುಗಳಿಗೆ 2010ರಲ್ಲಿ ಜಾರ್ಖಂಡ್ ರಾಜ್ಯದಲ್ಲಿ ಇದೇ ಉದ್ದೇಶದಿಂದ ತಂದಿದ್ದ ಸರಕಾರದ ಆದೇಶವನ್ನು ಬಳಸಿಕೊಳ್ಳಲಾಗಿತ್ತು.

ಸಮಿತಿ ನೀಡಿದ ಶಿಫಾರಸನ್ನೇ ಮೂಲವಾಗಿಟ್ಟುಕೊಂಡು ಈಗ ಹೊರಬಿದ್ದಿರುವ ಕೇಂದ್ರ ಆದೇಶ, ‘ಕಾನೂತಾತ್ಮಕ ಅಂಗೀಕೃತ ಉದ್ದೇಶಗಳಿಗೆ ಆರೋಗ್ಯ ಪೂರ್ಣ ಜಾನುವಾರುಗಳ ಮಾರಾಟ’ ಜಾಗದಲ್ಲಿ ‘ಕಸಾಯಿಖಾನೆಗಳಿಗೆ ಮಾರುವ ಉದ್ದೇಶದಿಂದ ಮಾರುಕಟ್ಟೆಗೆ ತರುವಂತಿಲ್ಲ’ ಎಂದು ಬದಲಾಯಿಸಿದೆ. ಇದರಿಂದ ದೇಶಾದ್ಯಂತ ಗೋವಿನ ಜತೆಗೆ ಎಮ್ಮೆ, ಕೋಣ ಹಾಗೂ ಒಂಟೆಗಳನ್ನು ಕಡಿಯುವ ಉದ್ದೇಶದಿಂದ ಮಾರಾಟ ಮಾಡುವಂತಿಲ್ಲ. ಹಾಗೆ ನೋಡಿದರೆ, ಈ ವಿಚಾರ ಆರಂಭವಾಗಿದ್ದೇ ಭಾರತ- ನೇಪಾಳ ಗಡಿಯಲ್ಲಿ ನಡೆಯುವ ಪ್ರಾಣಿ ಹಿಂಸೆಯನ್ನು ತಡೆಯುವ ಉದ್ದೇಶದಿಂದ. ಇದೀಗ ಅದೇ ತೆರೆಮರೆಗೆ ಸರಿದು, ದೇಶದ ನಾನಾ ರಾಜ್ಯಗಳಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳಿಗೆ ಕೇಂದ್ರ ಸರಕಾರದ ಹೊಸ ಅಧಿಸೂಚನೆ ಅನುವು ಮಾಡಿಕೊಟ್ಟಿದೆ.

ಮಾಹಿತಿ ಕೃಪೆ: ಸ್ಕ್ರಾಲ್ ಡಾನ್ ಇನ್. 

ಚಿತ್ರ: ಬೆಟರ್ ಇಂಡಿಯಾ.

Leave a comment

Top