An unconventional News Portal.

ಇದು ಮಾನವನ ಮೂಳೆ, ತಲೆ ಬುರುಡೆಗಳಿಂದ ಅಲಂಕೃತಗೊಂಡಿರುವ ದೇಗುಲ; ಕೈ ಮುಗಿದು ಒಳಗೆ ಬನ್ನಿ!

ಇದು ಮಾನವನ ಮೂಳೆ, ತಲೆ ಬುರುಡೆಗಳಿಂದ ಅಲಂಕೃತಗೊಂಡಿರುವ ದೇಗುಲ; ಕೈ ಮುಗಿದು ಒಳಗೆ ಬನ್ನಿ!

ನೀವು ಆಸ್ತಿಕರೋ? ಅಥವಾ ನಾಸ್ತಿಕರೋ? ಗೊತ್ತಿಲ್ಲ. ಆದರೆ ದೇವರು ಇದ್ದಾನೆ ಎಂದು ನಂಬುವ ಸ್ಥಳಗಳಿಗೂ, ಸ್ಮಶಾನಗಳಿಗೂ ಇರುವ ವ್ಯತ್ಯಾಸ ನಿಮಗೆ ಗೊತ್ತೇ ಇರುತ್ತದೆ.

ಆದರೆ ಇಲ್ಲೊಂದು ಚರ್ಚು ಇದೆ. ಹೊರಗಡೆಯಿಂದ ನೋಡಿದರೆ ಇದು ಅದ್ಭುತವಾಗಿ ಕಾಣಿಸುತ್ತದೆ. ಒಳಗಡೆ ಅಲಂಕಾರಕ್ಕೆ ಬಳಸಿರೋದು ಮಾತ್ರ ಮನುಷ್ಯನ ತಲೆ ಬುರುಡೆಗಳು ಹಾಗೂ ಅಸ್ತಿಪಂಜರದ ಭಾಗಗಳು. ಸ್ಮಶಾನದಲ್ಲಿರಬೇಕಾದ ಅಸ್ತಿಗಳೇ ಇಲ್ಲಿನ ಇಂಟೀರಿಯರ್ ಡೆಕೊರೇಶನ್ಗೆ ಬಳಕೆಯಾದ ವಸ್ತುಗಳು.

ಚರ್ಚ್’ನ ಎಲ್ಲಾ ಭಾಗದಲ್ಲೂ ಅದ್ಭುತ ಎಂಬಂತೆ ಅತ್ಯಂತ ಸುಂದರವಾಗಿ ಹಾಗೂ ಕಲಾತ್ಮಕವಾಗಿ ಮೂಳೆಗಳನ್ನು ಜೋಡಿಸಿಡಲಾಗಿದೆ. ಒಮ್ಮೆ ನೋಡಲು ಭಯವನ್ನು ಹುಟ್ಟಿಸಿದರೂ ಅಲಂಕಾರಿಕ ಶೈಲಿಯಿಂದ ನಿಮ್ಮನ್ನು ಸೆಳೆಯದೆ ಇರದು.

ಈ ವಿಶೀಷ್ಟವಾದ ಚರ್ಚ್ ಇರೋದು ಜೆಕ್ ಗಣರಾಜ್ಯದ ಕುತ್ನ ಎಂಬ ಪ್ರದೇಶದ ಸೆಡ್ಲಿಕ್ ಎಂಬಲ್ಲಿ. ನೋಡೋದಿಕ್ಕೆ ಈ ಚರ್ಚ್ ಪುಟ್ಟದಾಗಿದ್ದು ಅತ್ಯಂತ ಸುಂದರವಾಗಿದೆ. ಅದರಲ್ಲೂ ಇದು ಯುರೋಪ್’ನ ಪ್ರಾಚೀನ ಗೋಥಿಕ್ ಶೈಲಿಯಲ್ಲಿದ್ದು ನೋಡುಗರನ್ನು ಸೆಳೆಯುತ್ತಿದೆ. ಇನ್ನು ಈ ಚಂದದ ಚರ್ಚ್ ನಿರ್ಮಾಣವಾಗಿದ್ದು ಸುಮಾರು ಸಾವಿರದ ಇನ್ನೂರು ವರ್ಷಗಳಷ್ಟು ಹಿಂದೆ ಎಂದು ದಾಖಲೆಗಳು ಹೇಳುತ್ತವೆ.

ಚರ್ಚ್ ಕುರಿತು ಕುತೂಹಲ ಮಾಹಿತಿ ಇನ್ನೊಂದಿದೆ.  1278ರಲ್ಲಿ ಈ ಪ್ರದೇಶವನ್ನು ಆಳುತ್ತಿದ್ದ ದೊರೆ ಇಲ್ಲಿನ ಧಾರ್ಮಿಕ ಮುಖಂಡರೊಬ್ಬರನ್ನು ಜೆರುಸಲೇಂಗೆ ಭೇಟಿ ಮಾಡಲು ಕಳುಹಿಸಿದ್ದನಂತೆ. ಅಲ್ಲಿಂದ ವಾಪಾಸ್ ಬರುವಾಗ ಧಾರ್ಮಿಕ ಮುಖಂಡರು ಜೆರುಸಲೇಂನ ಪವಿತ್ರ ಮಣ್ಣಿನೊಂದಿಗೆ ವಾಪಾಸಾಗಿದ್ದರಂತೆ. ಆ ಮಣ್ಣನ್ನು ಬಳಸಿಕೊಂಡು ಇಲ್ಲಿ ಚರ್ಚನ್ನು ನಿರ್ಮಾಣ ಮಾಡಲಾಯಿತು ಎಂದು ಈ ದೇಗುಲದ ವೆಬ್ಸೈಟ್ ತಿಳಿಸುತ್ತದೆ.

sedlec-ossuary

ಈ ಚರ್ಚ್ ಈ ರೀತಿ ಮೂಳೆಗಳು ಹಾಗೂ ತಲೆಬುರುಡೆಗಳಿಂದ ಅಲಂಕೃತವಾಗೋದಿಕ್ಕೆ ಕಾರಣ ಫ್ರಾಂಟೆಸಿಕ್ ರಿಂಟ್ ಎಂಬ ಒಬ್ಬ ಮರದ ಕರಕುಶಲ ಕರ್ಮಿ. ಈ ಚರ್ಚ್’ಅನ್ನು ಸುಂದರವಾಗಿ ನಿರ್ಮಾಣ ಮಾಡೋದಿಕ್ಕೆ 1870 ರಲ್ಲಿ ಈತನನ್ನು ನೇಮಿಸಲಾಯ್ತು. ಆತ ನಿರ್ಮಿಸಿದ ಕಲಾಕೃತಿ ಇದು. ಆದರೆ, ಇದಕ್ಕೆ ಯಾಕೆ ಮನುಷ್ಯನ ಅಸ್ತಿ ಪಂಚರವನ್ನು ಬಳಸಿಕೊಂಡ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ.

ಬಹುಶಃ ದೇವರ ನಂಬಿಕೆಯನ್ನು ವೈರಾಗ್ಯದ ಸಂಕೇತವಾಗಿಸುವ ಪ್ರಯತ್ನ ಇದು ಎಂಬ ವಿಶ್ಲೇಷಣೆಗಳಿವೆ. ಹೀಗಾಗಿ, ಇದು ನೋಡುಗರ ಭಕ್ತಿ ಮತ್ತು ಭಾವಕ್ಕೆ ಬಿಟ್ಟ ವಿಚಾರ.

Top