An unconventional News Portal.

‘ಧರ್ಮಸ್ಥಳ’ದ ಮೀಟರ್ ಬಡ್ಡಿ ಸಾಮ್ರಾಜ್ಯದ ಕಡಿವಾಣಕ್ಕೆ ಕಾನೂನು ರಚಿಸುವವರು ಬೇಕಾಗಿದ್ದಾರೆ!

‘ಧರ್ಮಸ್ಥಳ’ದ ಮೀಟರ್ ಬಡ್ಡಿ ಸಾಮ್ರಾಜ್ಯದ ಕಡಿವಾಣಕ್ಕೆ ಕಾನೂನು ರಚಿಸುವವರು ಬೇಕಾಗಿದ್ದಾರೆ!

ಭಾಗ: 2

ಭಾರತದಲ್ಲಿ ಹಲವಾರು ಮೈಕ್ರೋ ಫೈನಾನ್ಸ್ ಗಳಿವೆ. ಕರ್ನಾಟಕದಲ್ಲಿಯೂ ನೂರಾರು ಮೈಕ್ರೋ ಫೈನಾನ್ಸ್ ಗಳು ಕಾರ್ಯ ನಿರ್ವಹಿಸುತ್ತವೆ. ಈ ಮೈಕ್ರೋಫೈನಾನ್ಸ್ ಗಳಿಗೆ ಸರಿಯಾದ ಮಾನದಂಡ, ನಿಯಮಾವಳಿಗಳು ದೇಶದಲ್ಲೇ ಇಲ್ಲ. ಇರುವ ನಿಯಮಾವಳಿಗಳನ್ನು ಮೀರಿ ನಿಂತಿರುವ ಸಂಸ್ಥೆ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP)’ ಎಂಬುದು ದಾಖಲೆಗಳಿಂದ ಬಹಿರಂಗವಾಗುತ್ತದೆ.

ಇದು ಬ್ಯಾಂಕೇತರ ಹಣಕಾಸು ಸಂಸ್ಥೆಯಲ್ಲ; ಮೈಕ್ರೋ ಫೈನಾನ್ಸ್ ಸಂಸ್ಥೆಯಾಗಿ ವ್ಯವಹಾರ ಮಾಡಲು ‘ಆರ್ಬಿಐ’ ಕಾನೂನಿನ ಅಡಿಯಲ್ಲಿ ನೋಂದಾವಣೆಯಾಗಿಲ್ಲ; ಕರ್ನಾಟಕ ಲೇವಾದೇವಿ ಕಾಯ್ದೆಯನ್ನೂ ಪಾಲಿಸುತ್ತಿಲ್ಲ; ಲಾಭ ಗಳಿಸುತ್ತಿದ್ದು ‘ಚಾರಿಟೇಬಲ್’ ಚಟುವಟಿಕೆ ಎಂದೇ ಹೇಳುತ್ತಿದೆ. ಮಾತ್ರವಲ್ಲ ‘ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ ಸರಕಾರದಿಂದ ತೆರಿಗೆ ವಿನಾಯಿತಿಯನ್ನೂ ಪಡೆದುಕೊಂಡಿದೆ.

‘ಆರ್ಬಿಐ’ ನಿಯಂತ್ರಣದಿಂದ ಮುಕ್ತ:

ಮೊದಲೇ ಹೇಳಿದಂತೆ ಎಸ್.ಕೆ.ಡಿ.ಆರ್.ಡಿ.ಪಿ ಒಂದು ಟ್ರಸ್ಟ್. ಹೀಗಿದ್ದೂ ‘ಮೈಕ್ರೋ ಫೈನಾನ್ಸ್’ ವ್ಯವಹಾರಗಳಲ್ಲಿ ವ್ಯಾಪಕವಾಗಿ ತೊಡಗಿಸಿಕೊಂಡಿದೆ. ಜನರಿಂದ ಬರೋಬ್ಬರಿ ಠೇವಣಿಯನ್ನೂ ಸಂಗ್ರಹಿಸುತ್ತದೆ. ‘ಆರ್ಬಿಐ ಆಕ್ಟ್-1934’ರ ಸೆಕ್ಷನ್ 45ಎಸ್, ಯಾವುದೇ ಟ್ರಸ್ಟ್ ಹಾಗೂ ಸೊಸೈಟಿಗಳು ಠೇವಣಿ ರೂಪದಲ್ಲಿ ಹಣ ಸಂಗ್ರಹಿಸುವುದನ್ನು ನಿರ್ಬಂಧಿಸುತ್ತದೆ.’ ಇದನ್ನು ‘ಕ್ರಿಸಿಲ್ ರೇಟಿಂಗ್ಸ್’ ವರದಿಯಲ್ಲಿಯೂ ಸ್ಪಷ್ಟವಾಗಿ ಹೇಳಲಾಗಿದೆ.

‘ಎಸ್.ಕೆ.ಡಿ.ಆರ್.ಡಿ.ಪಿ ಒಂದು ‘ಟ್ರಸ್ಟ್’ ಆಗಿದೆ. ರಿಸರ್ವ್ ಬ್ಯಾಂಕ್ ಕಾರ್ಪೋರೇಟ್ (ಕಂಪನಿ) ರೂಪದಲ್ಲಿರುವ ಸಂಸ್ಥೆಗಳ ಆಡಳಿತದಲ್ಲಿ ಮಾತ್ರ ಮೇಲುಸ್ತುವಾರಿ ವಹಿಸುತ್ತದೆ,’ ಎಂದು ತಾನು ನೀಡಿದ ಸ್ಪಷ್ಟನೆ ಪತ್ರದಲ್ಲಿ ಆರ್ಬಿಐ ಹೇಳಿದೆ. ಈ ಕುರಿತು ಸಾಮಾಜಿಕ ಕಾರ್ಯಕರ್ತ ರಂಜನ್ ರಾವ್ ಯರ್ಡೂರ್ ರಿಸರ್ವ್ ಬ್ಯಾಂಕಿಗೆ ಪತ್ರ ಬರೆದಾಗ, ಬ್ಯಾಂಕ್ ಈ ಕುರಿತು ಸ್ಪಷ್ಟನೆ ನೀಡಿದೆ. ಹೀಗಾಗಿ ಆರ್ಬಿಐ ಕಾಯ್ದೆಯಿಂದ ಈ ವ್ಯವಹಾರಗಳು ಮುಕ್ತವಾಗಿವೆ ಎಂಬುದು ಸ್ಪಷ್ಟವಾಗುತ್ತದೆ.

ಆರ್ಬಿಐ 'ಎಸ್.ಕೆ.ಡಿ.ಆರ್.ಡಿ.ಪಿ' ವಿಚಾರದಲ್ಲಿ ನೀಡಿದ ಸ್ಪಷ್ಟನೆ

ಆರ್ಬಿಐ ‘ಎಸ್.ಕೆ.ಡಿ.ಆರ್.ಡಿ.ಪಿ’ ವಿಚಾರದಲ್ಲಿ ನೀಡಿದ ಸ್ಪಷ್ಟನೆ

ಈ ಕುರಿತು ‘ಸಮಾಚಾರ’ ರಿಸರ್ವ್ ಬ್ಯಾಂಕ್ ಬೆಂಗಳೂರು ಕಚೇರಿಯನ್ನು ಸಂಪರ್ಕಿಸಿತು. “ನಮಗೆ ದೂರುಗಳು ಬಂದಿದ್ದು ನಿಜ. ನಮ್ಮ ಅಧಿಕಾರಿ ಅಲ್ಲಿಗೆ ಹೋಗಿ ತನಿಖೆ ನಡೆಸಿದ್ದಾರೆ. ಈ ಸಂದರ್ಭ ಸಂಸ್ಥೆ ಠೇವಣಿಗಳನ್ನು ಸಂಗ್ರಹಿಸಿರುವುದು ಕಂಡು ಬಂದಿಲ್ಲ. ಬ್ಯಾಂಕ್, ಅಲ್ಲಿನ ಸ್ಥಳೀಯ ಅಧಿಕಾರಿಗಳು ಮತ್ತು ಸಂಸ್ಥೆಯ ಸಿಬ್ಬಂದಿ ಹಾಗೂ ಜನರಲ್ಲಿ ಈ ಕುರಿತು ವಿಚಾರಿಸಿದ್ದೇವೆ. ಅವರ ಲೆಕ್ಕಪತ್ರಗಳನ್ನೂ ಪರಿಶೀಲಿಸಿದ್ದೇವೆ. ನಮಗೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಈ ಕುರಿತು ಬೇರೆ ದೂರುಗಳೂ ಇರಬಹುದು. ಆದರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ,” ಎನ್ನುತ್ತಾರೆ ರಿಸರ್ವ್ ಬ್ಯಾಂಕ್ ಬೆಂಗಳೂರು ಪ್ರಾದೇಶಿಕ ಕಚೇರಿಯ ‘DNDA’ ವಿಭಾಗದ ಅಧಿಕಾರಿ ಶ್ರೀಕಾಂತ್.

ಲೇವಾದೇವಿ ಕಾಯ್ದೆಗೂ ಬರಲ್ಲ:

ಇದನ್ನು ಹೊರತಾಗಿ ‘ಕರ್ನಾಟಕ ಲೇವಾದೇವಿ ಕಾಯ್ದೆ -1962’ ಈ ರೀತಿಯ ಚಟುವಟಿಕೆಗಳಿಗೆ ಅನ್ವಯವಾಗುತ್ತದೆ. ಆದರೆ ಇಲ್ಲೂ ಸಂಸ್ಥೆ ನೋಂದಣಿ ಮಾಡಿಕೊಂಡಿಲ್ಲ. ಈ ಕುರಿತು ಆರ್ಟಿಐ ಮೂಲಕ ಕೇಳಿದ ಮಾಹಿತಿಗೆ ಇಲಾಖೆ ಉತ್ತರ ನೀಡಿದೆ. ‘ನಮ್ಮಲ್ಲಿ ನೋಂದಾವಣಿಗಾಗಿ ಅರ್ಜಿಯನ್ನೇ ನೀಡಿಲ್ಲ, ಹೀಗಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಹೇಳಿದೆ. ಈ ಕುರಿತು ಮಂಗಳೂರು ಡೆಪ್ಯುಟಿ ರೆಜಿಸ್ಟಾರ್ ಆಫ್ ಕೋ-ಆಪರೇಟಿವ್ ಬಿ.ಕೆ ಸಲೀಮ್ ಹೇಳುವುದು ಹೀಗೆ: “ಎಸ್.ಕೆ.ಡಿ.ಆರ್.ಡಿ.ಪಿ ನಡೆಸುತ್ತಿರುವಂಥದ್ದು SHG (ಸ್ವ ಸಹಾಯ ಸಂಘ)ಗಳು. ಇವು ಕರ್ನಾಟಕ ಲೇವಾದೇವಿ ಕಾಯ್ದೆ ಅಡಿಯಲ್ಲಿ ಬರುವುದಿಲ್ಲ. ಇದಕ್ಕೆ ಕರ್ನಾಟಕದಲ್ಲಿ ಸರಿಯಾದ ಕಾನೂನುಗಳೇ ಇಲ್ಲ,” ಎನ್ನುತ್ತಾರೆ ಅವರು. ಈಗಾಗಲೇ ದೂರು ಬಂದಿದೆ ಸರಿಯಾಗಿ ಇನ್ನಷ್ಟೇ ಪರಿಶೀಲಿಸಬೇಕಷ್ಟೇ ಎಂಬ ಮಾಹಿತಿಯನ್ನು ಅವರು ನೀಡುತ್ತಾರೆ.

ಸಹಕಾರ ಸಂಘಗಳ ಉಪ ನಿಬಂಧಕರು ಲೇವಾದೇವಿ ಕಾಯ್ದೆಯಲ್ಲಿ 'ಎಸ್.ಕೆ.ಡಿ.ಆರ್.ಡಿ.ಪಿ' ನೋಂದಣಿ ಆಗಿಲ್ಲ ಎಂದು ಹೇಳಿರುವುದು

ಸಹಕಾರ ಸಂಘಗಳ ಉಪ ನಿಬಂಧಕರು ಲೇವಾದೇವಿ ಕಾಯ್ದೆಯಲ್ಲಿ ‘ಎಸ್.ಕೆ.ಡಿ.ಆರ್.ಡಿ.ಪಿ’ ನೋಂದಣಿ ಆಗಿಲ್ಲ ಎಂದು ಹೇಳಿರುವುದು

‘ಬಿಸಿನೆಸ್’ಗೂ ತೆರಿಗೆ ವಿನಾಯ್ತಿ!

ಈ ಎರಡೂ ಕಾಯ್ದೆಗಳನ್ನು ಹೊರತಾಗಿ ಟ್ರಸ್ಟ್ ಮೈಕ್ರೋಪೈನಾನ್ಸ್ (ಸಾಲದ ನೆರವು ನೀಡುವುದು) ನಡೆಸಬಹುದು. ಆದರೆ ಅದು ವ್ಯವಹಾರವಾಗಿರಬಾರದು, ಅದು ಸೇವೆಯಾಗಿರಬೇಕು. ಇದಕ್ಕಾಗಿ ಯಾವ ಉದ್ದೇಶಿತ ಸಮುದಾಯಕ್ಕೆ ಸಾಲ ನೀಡುತ್ತಾರೋ, ಆ ಸಮುದಾಯಕ್ಕೆ ಸಾಮಾನ್ಯ ಬ್ಯಾಂಕ್ಗಳು ವಿಧಿಸುವ ಬಡ್ಡಿದರಗಳಿಗಿಂತ ಕಡಿಮೆ ದರದಲ್ಲಿ ಸಾಲಗಳನ್ನು ನೀಡಬೇಕಾಗುತ್ತದೆ. ಆದರೆ ಟ್ರಸ್ಟ್ ಶೇಕಡಾ 18.96 (ಎಸ್.ಕೆ.ಡಿ.ಆರ್.ಡಿ.ಪಿ ಕುರಿತಾದ M2i Consultingನ ವರದಿ ಪ್ರಕಾರ) ಬಡ್ಡಿ ವಿಧಿಸುತ್ತಿದೆ. ಇನ್ನು ಯೋಜನೆಯ ನಿರ್ದೇಶಕ ಎಲ್ ಹೆಚ್ ಮಂಜುನಾಥ್ ಒಪ್ಪಿಕೊಂಡಂತೆ ಪರಿಗಣಿಸಿದರೂ  ಬಡ್ಡಿದರ ಶೇಕಡಾ 16; ಇದು ಮೇಲ್ನೋಟಕ್ಕೆ ಸಾಮಾನ್ಯ ಬ್ಯಾಂಕ್ ವಿಧಿಸುವ ಬಡ್ಡಿ ದರಗಳಿಗಿಂತ ಹೆಚ್ಚಾಗಿದೆ.

'ಎಸ್.ಕೆ.ಡಿ.ಆರ್.ಡಿ.ಪಿ'ಯ ಟ್ರಸ್ಟ್ ಡೀಡ್

‘ಎಸ್.ಕೆ.ಡಿ.ಆರ್.ಡಿ.ಪಿ’ಯ ಟ್ರಸ್ಟ್ ಡೀಡ್

ಇಲ್ಲಿ ‘ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯಮ – 2004’ರ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ. ಈ ಕಾನೂನು ಪ್ರಕಾರ  ಗರಿಷ್ಠ ಶೇಕಡಾ 16 ಬಡ್ಡಿ ದರ ವಿಧಿಸಲು ಸರಕಾರ ಅವಕಾಶ ನೀಡಿದ್ದು, ಸಂಸ್ಥೆ ಅದಕ್ಕೂ ಮೀರಿ (18.96) ಬಡ್ಡಿ ವಿಧಿಸುತ್ತಿದೆ.

ಈ ಎಲ್ಲಾ ವ್ಯವಹಾರಗಳಿಂದ ಸಂಸ್ಥೆ ವರ್ಷಕ್ಕೆ 52 ಕೋಟಿವರೆಗೆ ನಿವ್ವಳ ಲಾಭವನ್ನೂ ಪಡೆಯುತ್ತಿದೆ. ಇದಕ್ಕೆ ಟ್ಯಾಕ್ಸ್ ಕೂಡಾ ಕಟ್ಟುತ್ತಿಲ್ಲ; ಕಾರಣ ಎಸ್.ಕೆ.ಡಿ.ಆರ್.ಡಿ.ಪಿಗೆ ತೆರಿಗೆ ವಿನಾಯ್ತಿ ಇದೆ ಎಂದು ಮಂಜುನಾಥ್ ಹೇಳಿದ್ದಾರೆ. ಸದ್ಯ “ಸಂಸ್ಥೆ ಬ್ಯಾಂಕುಗಳು ಮತ್ತು ಎಸ್.ಎಚ್.ಜಿ ಗುಂಪುಗಳ ಮಧ್ಯೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ,” ಎಂದು ಮಂಜುನಾಥ್ ಹೇಳುತ್ತಾರೆ. ಇದನ್ನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ‘ಬಿಸಿನೆಸ್ ಕರೆಸ್ಪಾಂಡೆಂಟ್ ಮಾಡೆಲ್’ ಎಂದು ಕರೆಯುತ್ತಾರೆ. (ಪಿಗ್ಮಿ ಸಂಗ್ರಹಗಾರರಂತೆ ಹಣ ಸಂಗ್ರಹಿಸಿ ಕೊಡುವುದು. ಇದಕ್ಕೆ ಬ್ಯಾಂಕೇ ಇಂತಿಷ್ಟು ಎಂದು ಕಮಿಷನ್ ನೀಡುತ್ತದೆ- ಇದು ಕಮಿಷನ್ ವ್ಯವಹಾರ).

“ಯಾವುದೇ ಟ್ರಸ್ಟ್ ‘ವ್ಯವಹಾರ’ ಮಾಡುತ್ತಿದ್ದರೆ ಟ್ಯಾಕ್ಸ್ ಕಟ್ಟಲೇ ಬೇಕು. ನಮಗೆ ಟ್ಯಾಕ್ಸ್ ಹಾಕುವ ಅಧಿಕಾರ ಇದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಟ್ರಸ್ಟುಗಳು ಅದನ್ನು ಕೋರ್ಟಿನಲ್ಲಿ ಪ್ರಶ್ನಿಸುತ್ತವೆ. ಆಗ ಕೋರ್ಟ್ ಇದರಲ್ಲಿ ಯಾವುದು ಸೇವೆ, ಯಾವುದು ವ್ಯವಹಾರ ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಸಾಮಾನ್ಯವಾಗಿ ಈಗ ಎಸ್.ಕೆ.ಡಿ.ಆರ್.ಡಿ.ಪಿ ವಿಚಾರಕ್ಕೆ ಬಂದಾಗ ನಾವು ಬಡವರಿಗೆ, ಮಹಿಳೆಯರಿಗೆ ಸಾಲ ನೀಡುತ್ತೇವೆ. ಅವರನ್ನು ಅಭಿವೃದ್ಧಿ ಮಾಡಿದ್ದೇವೆ ಎನ್ನುತ್ತಾರೆ. ಹೆಚ್ಚಾಗಿ ಇಂಥ ಪ್ರಕರಣಗಳಲ್ಲಿ ತೀರ್ಪು ಟ್ರಸ್ಟ್ ಪರವಾಗಿಯೇ ಬರುತ್ತದೆ. ಆದರೆ ಸಾಮಾನ್ಯ ನಿಯಮ ಏನೆಂದರೆ ಟ್ರಸ್ಟ್ ಗಳಿಸಿದ ಹಣವನ್ನು ಮನೆಗೆ ಕೊಂಡೊಯ್ಯುವಂತಿಲ್ಲ ಅಷ್ಟೆ. ಅವರು ಅದನ್ನು ಬೇರೇನಾದರೂ ಸೇವೆಗೆ, ಟ್ರಸ್ಟಿಗೆ ಜಾಗ ಖರೀದಿಸಲು, ಕಟ್ಟಡ ಕಟ್ಟಲು ಬಳಸಬಹುದು. ಹೀಗಾಗಿ ಸೇವೆ ಮತ್ತು ವ್ಯವಹಾರ ಈ ಗೊಂದಲಗಳನ್ನು ನಿರ್ಧರಿಸುವುದು ಕಷ್ಟ,” ಎನ್ನುತ್ತಾರೆ ಆದಾಯ ತೆರಿಗೆ ಇಲಾಖೆಯ ಮಂಗಳೂರು ಅಧಿಕಾರಿ ಸಿ.ಬಿ ಸುರೇಶ್ ಕುಮಾರ್.

ಸದ್ಯ ಈ ಕುರಿತು ರಂಜನ್ ರಾವ್ ಯರ್ಡೂರು ನೀಡಿದ ದೂರಿನ ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೀಗೆ ಗೊಂದಲದಲ್ಲೇ ಕಳೆದ 20 ವರ್ಷಗಳಿಂದ ಎಸ್.ಕೆ.ಡಿ.ಆರ್.ಡಿ.ಪಿಯ ಮೈಕ್ರೋ ಫೈನಾನ್ಸ್ ವ್ಯವಹಾರಗಳು ನಡೆಯುತ್ತಿವೆ. ಆದರೆ ಯಾವುದೇ ಸರಕಾರಗಳಾಗಲೀ, ಇಲಾಖೆಗಳಾಗಲೀ ‘ಎಸ್.ಕೆ.ಡಿ.ಆರ್.ಡಿ.ಪಿ’ಯ ವ್ಯವಹಾರಗಳ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸಿಲ್ಲ.

ದೂರು ದಾಖಲು:

“ಟ್ರಸ್ಟಿನ ವ್ಯವಹಾರಗಳು ‘ಕರ್ನಾಟಕ ಲೇವಾದೇವಿ ಕಾಯ್ದೆ- 1962’ ಮತ್ತು ‘ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯಮ – 2004’ರ ಉಲ್ಲಂಘನೆಯಾಗುತ್ತದೆ. ಹೀಗಾಗಿ ಟ್ರಸ್ಟಿಗಳು ಮತ್ತು ಟ್ರಸ್ಟಿನ ನಿರ್ದೇಶಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು,” ಎಂದು ಕೋರಿ ರಂಜನ್ ರಾವ್ ಯರ್ಡೂರು ಬೆಳ್ತಂಗಡಿ ಠಾಣೆಗೆ 13 ಫೆಬ್ರವರಿ 2016 ರಂದು ದೂರು ನೀಡಿದ್ದಾರೆ. ಆದರೆ ಪೊಲೀಸರು ದೂರು ಸ್ವೀಕರಿಸಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಈ ದೂರು ನೀಡಿದ್ದರೂ ಅವರೂ ಸುಮ್ಮನಾಗಿದ್ದಾರೆ. “ಈ ಹಿಂದೆ ಹಲವು ಬಾರಿ ಸುಪ್ರಿಂ ಕೋರ್ಟ್ ಪೊಲೀಸರಿಗೆ ‘ದೂರು ನೀಡಿದ ತಕ್ಷಣ ಕಂಪ್ಲೆಂಟ್ ದಾಖಲಿಸಬೇಕು’ ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಇದನ್ನು ಪೊಲೀಸರು ಗಾಳಿಗೆ ತೂರುತ್ತಾರೆ. ಇದರ ಹಿಂದೆ ಯಾರ ಪ್ರಭಾವವಿದೆ,” ಎಂದು ರಂಜನ್ ರಾವ್ ಪ್ರಶ್ನಿಸುತ್ತಾರೆ.

ಬೆಳ್ತಂಗಡಿ ಠಾಣೆಗೆ ರಂಜನ್ ರಾವ್ ಯರ್ಡೂರು ನೀಡಿದ ದೂರು

ಬೆಳ್ತಂಗಡಿ ಠಾಣೆಗೆ ರಂಜನ್ ರಾವ್ ಯರ್ಡೂರು ನೀಡಿದ ದೂರು

ಕೊನೆಗೆ ಮ್ಯಾಜಿಸ್ಟ್ರೇಟ್ ಮುಂದೆ ವೈಯಕ್ತಿಕ ದೂರನ್ನು ರಂಜನ್ ರಾವ್ ಸಲ್ಲಿಸಿದರಾದರೂ ಇದರ ವಿಚಾರಣೆಗೆ ಹೈಕೋರ್ಟಿನಿಂದ ಎಸ್.ಕೆ.ಡಿ.ಆರ್.ಡಿ.ಪಿ ಮಧ್ಯಂತರ ತಡೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಯೋಜನೆಯ ‘ಸಂಪೂರ್ಣ’ ವೈಫಲ್ಯ:

“ಎಸ್.ಕೆ.ಡಿ.ಆರ್.ಡಿ.ಪಿ ಕೇವಲ ಬ್ಯಾಂಕ್ ಮತ್ತು ಈ ಸ್ವಸಹಾಯ ಸಂಘಗಳ ಮಧ್ಯೆ ಮಧ್ಯವರ್ತಿಯಾಗಿ ಮಾತ್ರ ಕೆಲಸ ನಿರ್ವಹಿಸುತ್ತದೆ. ಹೀಗಿದ್ದೂ ಇದು ಗಳಿಸಿದ ಆದಾಯ ಬೆರಗು ಮೂಡಿಸುತ್ತದೆ. ಈ ಸಂಸ್ಥೆಗಳು ಸೂಕ್ತ ನಿಯಮಗಳೊಂದಿಗೆ ಹಣಕಾಸು ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸುವ ಬದಲು ಸ್ವಯಂ ಸೇವಾ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ,” ಎಂದು ಸಂಶೋಧಕ ಅಜಯ್ ಟಂಕಾ ತಮ್ಮ ‘ಬ್ಯಾಂಕಿಂಗ್ ಆನ್ ಸೆಲ್ಫ್ ಹೆಲ್ಪ್ ಗ್ರೂಪ್ಸ್: ಟ್ವೆಂಟಿ ಇಯರ್ಸ್ ಆನ್’ ಪುಸ್ತಕದಲ್ಲಿ ಹೇಳುತ್ತಾರೆ. “ಸ್ವತಂತ್ರ ಸಂಸ್ಥೆಯಾಗಿ ವರ್ಷಗಟ್ಟಲೆ ಎಸ್.ಕೆ.ಡಿಆರ್.ಡಿಪಿ ಕಾರ್ಯ ನಿರ್ವಹಿಸಿದ ನಂತರವೂ ಬಡವರ ಸ್ಥಿತಿಗತಿಯಲ್ಲೇನೂ ಬದಲಾವಣೆಯಾಗಲೇ ಇಲ್ಲ. ಆಗ ಸಂಸ್ಥೆಯು ಗಂಡಸರ ಸಣ್ಣ ಸಣ್ಣ ಸ್ವಸಹಾಯ ಗುಂಪುಗಳತ್ತ ಮನಸ್ಸು ಮಾಡಿತು,” ಎಂಬುದಾಗಿ ಟಂಕಾ ತಮ್ಮ ವರದಿಯಲ್ಲಿ ಹೇಳುತ್ತಾರೆ.

ಅಂದರೆ ಯಾವ ‘ಸೋ ಕಾಲ್ಡ್’ ಉದ್ದೇಶವನ್ನು ಇವತ್ತಿಗೂ ಸಂಸ್ಥೆ ಹೇಳುತ್ತಾ ಬಂದಿದೆಯೋ ಆ ಉದ್ದೇಶವೂ ಸಫಲವಾಗಿಲ್ಲ. ಹೀಗಿದ್ದೂ ಸೇವೆಯ ಹೆಸರಿನಲ್ಲಿ ತನ್ನ ಮೀಟರ್ ಬಡ್ಡಿ ವ್ಯವಹಾರವನ್ನು ಮುಂದುವರಿಸಿಕೊಂಡು ಬಂದಿದೆ.

ಆದರೆ ಈ ಎಲ್ಲಾ ಆರೋಪಗಳನ್ನೂ ನಿರಾಕರಿಸುವ ಸಂಸ್ಥೆಯ ನಿರ್ದೇಶಕರಾದ ಎಲ್.ಎಚ್. ಮಂಜುನಾಥ್ “ಎಸ್.ಕೆ.ಡಿ.ಆರ್.ಡಿ.ಪಿ ವತಿಯಿಂದ ರಚಿಸಲಾಗಿರುವ ಸ್ವಸಹಾಯ ಸಂಘಗಳೇ ಆಗಲಿ, ಅವರು ಪಡೆದುಕೊಳ್ಳುತ್ತಿರುವ ಆರ್ಥಿಕ ನೆರವೇ ಆಗಲಿ, ಕಾನೂನು ಬಾಹಿರ ಎಂದು ಹೇಳುತ್ತಿರುವವರು ಸುಳ್ಳು ಹೇಳುತ್ತಿದ್ದಾರೆ ಮತ್ತು ಅವರು ಬಡವರ ವಿರೋಧಿ,” ಎಂದು ಪ್ರತಿಪಾದಿಸುತ್ತಾರೆ.

ಆಂಧ್ರ ಕಾನೂನು ಕರ್ನಾಟಕದಲ್ಲೇಕೆ ಇಲ್ಲ?:

ಇಂದು ಭಾರತವಷ್ಟೇ ಅಲ್ಲ, ಜಗತ್ತಿನ ಎಲ್ಲಾ ದೇಶಗಳಲ್ಲೂ ಮೈಕ್ರೋಫೈನಾನ್ಸ್ ರಕ್ತ ಹೀರುವ ಉದ್ಯಮಗಳು ಎಂಬುದು ರುಜುವಾತಾಗಿದೆ. ಬಾಂಗ್ಲಾದೇಶದಲ್ಲಿ ಸಾಲ ಕಟ್ಟಲಾಗದೇ ಬಡವರು ಕಿಡ್ನಿ ಮಾರಿದ ಪ್ರಕರಣಗಳು ಜಾಗತಿಕ ಸುದ್ದಿಯಾಗಿದ್ದವು. ಈ ಹಿಂದೆ ಸಾಲಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಆಂಧ್ರ ಪ್ರದೇಶದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಆಂಧ್ರದಲ್ಲಿ ಮೈಕ್ರೋ ಫೈನಾನ್ಸ್ ತೀವ್ರ ಸಮಸ್ಯೆಯಾಗಿ ಕಂಡು ಬಂದಿತ್ತು. ಇದರ ಬಗ್ಗೆ ಸಾಕಷ್ಟು ಸಂಶೋಧನೆಗಳೇ ನಡೆದವು.

ಇದಾದ ಬಳಿಕ ಆಂಧ್ರ ಪ್ರದೇಶ ಸರಕಾರ ಇಂಥಹ ವ್ಯವಹಾರಗಳಿಗೆ ವಿಶೇಷ ಕಾನೂನನ್ನು ಜಾರಿಗೆ ತಂದಿತು (Andhra Pradesh Microfinance Institutions (Regulation of Money Lending) Act -2011). ಆದರೆ ವಿಚಿತ್ರವೆಂದರೆ ಕರ್ನಾಟಕದಲ್ಲಿ ಇಂಥಹ ಯಾವುದೇ ಕಾಯ್ದೆಗಳು ಇವತ್ತಿಗೂ ಇಲ್ಲ. ಸರಕಾರ ಈ ಕುರಿತು ಗಮನವನ್ನೂ ಹರಿಸಿಲ್ಲ. ಇದನ್ನು ಸರಕಾರ ಈ ಹೊತ್ತಲ್ಲಿ ಗಮನಿಸಬೇಕಿದೆ.

ಎಸ್.ಕೆ.ಡಿ.ಆರ್.ಡಿ.ಪಿ. ಟ್ರಸ್ಟ್ ಹೆಸರಿನಲ್ಲಿ ತೆರಿಗೆ ವಿನಾಯಿತಿ ಪಡೆದುಕೊಂಡು ಬಡ್ಡಿ ವ್ಯವಹಾರದಿಂದ ಇವತ್ತು ಕೋಟಿಗಟ್ಟಲೆ ಲಾಭಗಳಿಸುತ್ತಿದೆ. ಹೀಗಿದ್ದೂ ಈ ಚಟುವಟಿಕೆಗಳು ಯಾಕೆ ಆದಾಯ ತೆರಿಗೆ ಕಾನೂನಿನ ಅಡಿಯಲ್ಲಿ ಬರುವುದಿಲ್ಲ? ಈವರೆಗೆ ತೆರಿಗೆ ಇಲಾಖೆ ಕಡೆಯಿಂದ ಯಾವುದೇ ಕ್ರಮ ಯಾಕೆ ಜರುಗಿಸಿಲ್ಲ? ಪೊಲೀಸರು ದೂರು ತೆಗೆದುಕೊಳ್ಳುವುದಿಲ್ಲವಾದರೆ ಯಾರ ಬಳಿ ದೂರು ನೀಡಬೇಕು? ಈ ಎಲ್ಲಾ ಪ್ರಶ್ನೆಗಳು ಉದ್ಭವಿಸುತ್ತವೆ. ಇದಕ್ಕೆ ಉತ್ತರ ಕಂಡುಕೊಳ್ಳದ ಹೊರತು ಈ ಬಡ್ಡಿದಂಧೆ ನಿಲ್ಲುವುದಿಲ್ಲ.

ಇನ್ನಷ್ಟು ಶೋಷಣೆ, ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಲತಾ ತರಹದವರು ಬಡ್ಡಿ ಕಟ್ಟಲಾಗದೆ ಸಾಮಾಜಿಕ ಅವಮಾನಕ್ಕೆ ತುತ್ತಾಗುತ್ತಲೇ ಇರುತ್ತಾರೆ. ಇದ್ದ ಕಾನೂನುಗಳನ್ನೇ ಮೀರುವವರಿಗೆ, ಹೊಸ ಕಾನೂನುಗಳಾದರೂ ಕಡಿವಾಣ ಹಾಕಬೇಕಿದೆ. ಆದರೆ ಕಾನೂನು ರಚಿಸಬೇಕಾದವರೆ ಕಾಲಿಗೆ ಬಿದ್ದು ಬರುತ್ತಿರುವಾಗ, ದೇವರು- ಧರ್ಮಗಳನ್ನು ಆರ್ಥಿಕ ವ್ಯವಹಾರ ಬೆನ್ನೆಲುಬಾಗಿ ಮಾಡಿಕೊಂಡಿರುವಾಗ ನ್ಯಾಯ ಎಂಬುದು ರಾಜ್ಯದಲ್ಲಿ ಮರೀಚಿಕೆಯಾಗಿದೆ ಇನ್ನೇನು ತಾನೆ ಆಗಲು ಸಾಧ್ಯ?

…ಮುಗಿಯಿತು.

Also Read:

ಭಾಗ-1:

ಧರ್ಮಸ್ಥಳದ ‘ಮೀಟರ್ ಬಡ್ಡಿ ಬೆಟ್ಟ’ ಮತ್ತು 30 ಸಾವಿರ ಕೋಟಿ ವ್ಯವಹಾರದ ಒಡಲಾಳದ ಕತೆ!

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top