An unconventional News Portal.

ಅಕ್ರಮ ಗಣಿ ಹಗರಣ: ವಿಶೇಷ ನ್ಯಾಯಾಲಯದಲ್ಲಿ ಹೊಸ ದೋಷಾರೋಪ ಪಟ್ಟಿ ಸಲ್ಲಿಕೆ

ಅಕ್ರಮ ಗಣಿ ಹಗರಣ: ವಿಶೇಷ ನ್ಯಾಯಾಲಯದಲ್ಲಿ ಹೊಸ ದೋಷಾರೋಪ ಪಟ್ಟಿ ಸಲ್ಲಿಕೆ

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಬೇಲಿಕೇರಿ ಬಂದರು ಮೂಲಕ ಅಕ್ರಮ ಅದಿರು ರಫ್ತು ಮಾಡಿದ ಪ್ರಕರಣದಲ್ಲಿ ಇಬ್ಬರು ಶಾಸಕರು ಸೇರಿದಂತೆ 38 ಮಂದಿ ವಿರುದ್ಧ ವಿಶೇಷ ತನಿಖಾದಳ(ಎಸ್‍ಐಟಿ)ಶನಿವಾರ ಚಾರ್ಜ್‍ಶೀಟ್ ಸಲ್ಲಿಸಿದೆ.

ವಿಜಯನಗರ ಶಾಸಕ ಆನಂದ್ ಸಿಂಗ್, ಕೂಡ್ಲಗಿ ಶಾಸಕ ನಾಗೇಂದ್ರ, ಮಾಜಿ ಸಚಿವ ಜನಾರ್ಧನ ರೆಡ್ಡಿ ಬಲಗೈ ಬಂಟ ಸ್ವಸ್ತಿಕ್ ನಾಗರಾಜ್, ಖಾರದಪುಡಿ ಮಹೇಶ್, ಶಾಮ್‍ಸಿಂಗ್, ನಂದಾಸಿಂಗ್ ಸೇರಿದಂತೆ ಒಟ್ಟು 38 ಮಂದಿ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಹೊಸತಾಗಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿ 69 ಪ್ರಕರಣಗಳಲ್ಲಿ ಈಗಾಗಲೇ 45 ಪ್ರಕರಣಗಳ ತನಿಖೆ ಪೂರ್ಣಗೊಳಿಸಿದೆ. ಇದರಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು, ಹೊಸಪೇಟೆ ಸೇರಿದಂತೆ ಜಿಲ್ಲೆಯ ಸುತ್ತಮುತ್ತ ಸಿಗುವ ಅದಿರನ್ನು ಕಾನೂನು ಬಾಹಿರವಾಗಿ ವಿದೇಶಕ್ಕೆ ರಫ್ತು ಮಾಡಿರುವುದು ಸಾಬೀತಾಗಿದೆ ಎಂದು ಆರೋಪಿಸಿದೆ.

ಆನಂದ್ ಸಿಂಗ್, ಬಿ. ನಾಗೇಂದ್ರ , ಸ್ವಸ್ತಿಕ್ ನಾಗರಾಜ್, ಖಾರದಪುಡಿ ಮಹೇಶ್ ಅಧಿಕಾರ ದುರುಪಯೋಗಪಡಿಸಿಕೊಂಡು ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲ ಅದಿರನ್ನು ಬೇಲೇಕೇರಿ ಬಂದರಿನಿಂದ ವಿದೇಶಕ್ಕೆ ರಫ್ತು ಮಾಡಿದ್ದಾರೆ. ಇದರ ವಹಿವಾಟು ಕೋಟ್ಯಂತರ ರೂ.ಗೂ ಅಧಿಕ ಎಂದು ಚಾರ್ಜ್‍ಶೀಟ್‍ನಲ್ಲಿ ಹೇಳಲಾಗಿದೆ.

ಅರಣ್ಯ ಮತ್ತು ಪರಿಸರ , ಸಾರಿಗೆ, ಗಣಿ, ಗೃಹ ಸೇರಿದಂತೆ ಮತ್ತಿತರ ಇಲಾಖೆ ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ. ಅಧಿಕಾರಿಗಳಿಗೆ ಭಾರೀ ಪ್ರಮಾಣದ ಹಣ ನೀಡಿ ಬಳ್ಳಾರಿ ಜಿಲ್ಲೆಯಿಂದ ಅದಿರನ್ನು ಬೇಲಿಕೇರಿಗೆ ಸಾಗಾಣಿಕೆ ಮಾಡಲಾಗಿದೆ. ಇಲ್ಲಿಂದ ಚೀನಾಕ್ಕೆ ರಫ್ತು ಮಾಡಲಾಗಿದ್ದು, ನೈಸರ್ಗಿಕ ಸಂಪನ್ಮೂಲ ಲೂಟಿ ಮಾಡಿರುವವರಿಂದ ಹಣ ವಸೂಲಿ ಮಾಡುವಂತೆ ತನಿಖಾಧಿಕಾರಿಗಳು ಶಿಫಾರಸ್ಸು ಮಾಡಿದ್ದಾರೆ.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ಧನ ರೆಡ್ಡಿ , ಶಾಸಕ ಸುರೇಶ್ ಬಾಬು ಸೇರಿದಂತೆ ಕೆಲ ಅಧಿಕಾರಿಗಳು, ಗಣಿ ಕಂಪನಿ ಮಾಲೀಕರು ಜೈಲುವಾಸ ಅನುಭವಿಸಿದ್ದರು. ಕೆಲವರು ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಡೆ ಬಂದಿದ್ದರೆ, ಇನ್ನು ಕೆಲವರು ಜೈಲಿನಲ್ಲೇ ಕಂಬಿ ಎಣಿಸುತ್ತಿದ್ದಾರೆ.

ಸುಪ್ರೀಂಕೋರ್ಟ್ ನಿರ್ದೇಶನದಂತೆ ಎಸ್‍ಐಟಿ ತನಿಖೆ ನಡೆಸುತ್ತಿದೆ.

Leave a comment

Top