An unconventional News Portal.

‘ಸಿಮಿ ಕಾರ್ಯಕರ್ತರ ಎನ್ಕೌಂಟರ್’: ಒಂದು ವೀಡಿಯೋ.. ಹಲವು ಪ್ರಶ್ನೆಗಳು!

‘ಸಿಮಿ ಕಾರ್ಯಕರ್ತರ ಎನ್ಕೌಂಟರ್’: ಒಂದು ವೀಡಿಯೋ.. ಹಲವು ಪ್ರಶ್ನೆಗಳು!

ಸೋಮವಾರ ಮಧ್ಯಪ್ರದೇಶದ ಭೋಪಾಲ್ ಜೈಲಿನ ಗೋಡೆ ಹಾರಿ ನಾಪತ್ತೆಯಾದ ಶಂಕಿತ ಸಿಮಿ (ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ) ಕಾರ್ಯಕರ್ತರನ್ನು ಕೇವಲ 9 ಗಂಟೆಗಳ ಅಂತರದಲ್ಲಿ ಎನ್ಕೌಂಟರ್ ಮಾಡಿ ಹತ್ಯೆ ಮಾಡಲಾಗಿತ್ತು. ಇದೀಗ ಎನ್ಕೌಂಟರಿನ ವೀಡಿಯೋ ಒಂದು ಹರಿದಾಡುತ್ತಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಎನ್ಕೌಂಟರ್ ನಕಲಿಯೋ ಅಸಲಿಯೋ ಅಂತ ಹಲವು ಇಂಗ್ಲೀಷ್ ಮಾಧ್ಯಮಗಳು ವಿಶ್ಲೇಷಣೆಗೆ ಇಳಿದಿವೆ. ಒಂದಷ್ಟು ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ಅವುಗಳ ಸಂಕ್ಷಿಪ್ತ ರೂಪ ಇಲ್ಲಿದೆ.

central-jail-bhopalಘಟನೆ ಕುರಿತು ‘ದಿ ಕ್ವಿಂಟ್’ ಮೇಲಿಂದ ಮೇಲೆ ವರದಿ ಮಾಡುತ್ತಿದೆ. “ಜೈಲಿನಿಂದ 30 ಕಿಲೋಮೀಟರ್ ದೂರದ ಮನಿಖೇಡ ಪತ್ತಾರ್ ಗ್ರಾಮದಲ್ಲಿ 8 ಶಂಕಿತ ಸಿಮಿ ಕಾರ್ಯಕರ್ರನ್ನು ಕೊಲೆ ಮಾಡುವ ಮೊದಲು ಜೈಲಿನಲ್ಲಿ ಬಂಧಿಸಲಾಗಿತ್ತು. ನಮ್ಮ ಭೋಪಾಲ್ ಮೂಲಗಳ ಪ್ರಕಾರ ಅವರೆಲ್ಲಾ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು ನಿಜ. ಆದರೆ ಮುಖ್ಯ ದ್ವಾರ ತಲುಪುವ ಮೊದಲೇ ಅವರನ್ನು ಮತ್ತೆ ಬಂಧಿಸಲಾಗಿತ್ತು,” ಎಂದು ಅದು ವರದಿ ಮಾಡಿದೆ. ಜೈಲಿನ 360 ಡಿಗ್ರಿ ಕ್ಯಾಮೆರಾ ಸರಿಯಾಗಿ ಕೆಲಸ ಮಾಡುತ್ತಿದ್ದರೆ. ಅದರಲ್ಲಿ ಎಲ್ಲಾ ಸಾಕ್ಷ್ಯಗಳಿರುತ್ತವೆ. ಹೀಗಂತ ತಮಗೆ ಮೂಲಗಳಿಂದ ಮಾಹಿತಿ ಬಂದಿದೆ ಎಂದು ಅದು ಬರೆದುಕೊಂಡಿದೆ. ಒಣ ಹಣ್ಣುಗಳು, ಬಟ್ಟೆಗಳು ಮತ್ತು ನಾಡ ಬಂದೂಕುಗಳನ್ನು ಪೊಲೀಸರು ಮತ್ತು ಬಿಜೆಪಿ ಸರಕಾರ ಇಟ್ಟು ನಾಟಕವಾಡಿತ್ತು ಎಂದು ಮೂಲಗಳು ಹೇಳಿದ್ದಾಗಿ ಅದು ಬರೆದುಕೊಂಡಿದೆ.

ಇನ್ನು ಘಟನೆ ಕುರಿತು ಅಲ್ಲಿನ ಸರಪಂಚ್ ರನ್ನು ಕ್ವಿಂಟ್ ಮಾತನಾಡಿಸಿದ್ದು, ಆತ ಹೇಳಿದ್ದನ್ನು ಯಥಾವತ್ತಾಗಿ ಪ್ರಕಟಿಸಿದೆ. “ಬೆಳಗ್ಗೆ ಆರು ಗಂಟೆಗೆ ಪೊಲೀಸರು ಬಂದು ನನಗೆ ಅವರು (ಸಿಮಿ ಶಂಕಿತರು) ಪರಾರಿಯಾಗಿದ್ದಾರೆ ಎಂದು ಹೇಳಿದ್ದರು. ನಂತರ ಹತ್ತಿರದ ಮನೆಯವನೊಬ್ಬ ಬಂದು 5-6 ಜನರನ್ನು ಚಂದಾಪುರದ ಬಳಿ ನೋಡಿದ್ದಾಗಿ ಹೇಳಿದ. ನಂತರ ನಾವೆಲ್ಲಾ ಅಲ್ಲಿ ಹೋದೆವು. ಅಲ್ಲಿ ಎಂಟು ಜರನ್ನು ಕಂಡೆವು. ನಮಗೆ ಅನುಮಾನ ಬಂತು; ಪೊಲೀಸರಿಗೆ ಮಾಹಿತಿ ನೀಡಿ ದೂರದಿಂದ ಅವರನ್ನೇ ಫಾಲೋ ಮಾಡುತ್ತಾ ಹೋದೆವು. ಅವರ ಬಳಿ ಆಯುಧಗಳು ಇದ್ದವು,” ಎಂದು ಅವರು ಹೇಳಿದ್ದಾರೆ. ಕೊನೆಗೆ ಪೊಲೀಸರು ಬಂದು ಎನ್ಕೌಂಟರಿನಲ್ಲಿ ಮುಗಿಸಿದ್ದನ್ನೂ ಸರಪಂಚ್ ವರದಿಗಾರ್ತಿಗೆ ವಿವರಿಸಿದ್ದಾರೆ.

 

ಈ ಕುರಿತು ಕ್ವಿಂಟ್ ಕೆಲವು ಪ್ರಶ್ನೆಗಳನ್ನು ಎತ್ತಿದೆ.

ಪ್ರಮುಖ ಪ್ರಶ್ನೆಗಳು ಹೀಗಿವೆ,

 • ಎಲ್ಲಾ ಶಂಕಿತ ಸಿಮಿ ಕಾರ್ಯಕರ್ತರನ್ನೂ ಒಂದೇ ಜೈಲಿನಲ್ಲಿ ಇಡಲಾಗಿತ್ತೇ?
 • ಪರಾರಿಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಾಗಲು 90 ನಿಮಿಷ ಬೇಕಾಯ್ತಾ?
 • ಕೆಲವು ಮಾಧ್ಯಮಗಳು ಮಾತ್ರ ಯಾಕೆ ಸತ್ತವರನ್ನೆಲ್ಲಾ ಉಗ್ರರು ಅಥವಾ ಶಂಕಿತ ಉಗ್ರರು ಎನ್ನುತ್ತಿದ್ದಾರೆ?
 • ಒಬ್ಬರು ಕೊಲೆ ಮಾಡಿದ ನಂತರ ಉಳಿದವರಿಗೆ ಶರಣಾಗಲು ಅವಕಾಶ ನೀಡಲಾಯಿತೇ?
 • ಕೊಲೆಯಾದವರ ದೇಹಗಳ ಪೋಸ್ಟ್ ಮಾರ್ಟಮ್ ವರದಿ ಬಂದಿದೆಯೇ? ಅದರಲ್ಲಿ ದೇಹದ ಗಾಯಗಳ ಬಗ್ಗೆ ವಿವರಗಳಿವೆಯಾ?
 • ಅವರಿಗಾದ ಬುಲೆಟ್ಟಿನ ಗಾಯಗಳು ಯಾವ ಮಾದರಿಯದ್ದು? ಹತ್ತಿರದಿಂದ ಹೊಡೆದಿದ್ದೋ, ದೂರದಿಂದಲೋ, ಹಿಂದಿನಿಂದಲೋ, ಮುಂದಿನಿಂದಲೋ?
 • 8 ಜನ ಒಟ್ಟಿಗೆ ಒಂದೇ ದಿಕ್ಕಿನಲ್ಲಿ ಏಕೆ ತಪ್ಪಿಸಿಕೊಂಡರು?
 • ಅವರೆಲ್ಲಾ ಜೈಲು ಯೂನಿಫಾರ್ಮ್ ಬಿಟ್ಟು ನಾಗರಿಕ ಬಟ್ಟೆ ಧರಿಸಿದ್ದು ಹೇಗೆ? ಅವರಿಗೆ ಸಹಾಯ ಮಾಡಿದವರು ಯಾರು?
 • ಗ್ರಾಮಸ್ಥರ ಜೊತೆ ಮಾತನಾಡಿದ ನಂತರವೂ ಅವರು ಯಾಕೆ ಆ ಸ್ಥಳ ಬಿಟ್ಟು ಓಡಿ ಹೋಗಲಿಲ್ಲ?

“ಎನ್ಕೌಂಟರ್ ಸಂದರ್ಭ ಪೊಲೀಸರ ಮೇಲೆ ಶಂಕಿತರು ಗುಂಡಿನ ದಾಳಿ ನಡೆಸಿದ್ದಾರೆ. ಅವರ ಬಳಿ 4 ನಾಡ ಬಂದೂಕುಗಳು  ಎರಡು ಚೂರಿಗಳಿತ್ತು ಎಂದು ಪೊಲೀಸರು ಹೇಳಿದ್ದಾರೆ. ಆದರೆ ರಾಜ್ಯ ಗೃಹ ಸಚಿವ ಭೂಪೇಂದ್ರ ಸಿಂಗ್ ಮಾತ್ರ ಅವರೆಲ್ಲಾ ನಿರಾಯುಧರಾಗಿದ್ದರು ಎಂದಿದ್ದಾರೆ. ಹೀಗೆ ಇಬ್ಬರ ಹೇಳಿಕೆಗೂ ವ್ಯತ್ಯಾಸಗಳಿವೆ,” ಎಂದು ಕ್ವಿಂಟ್ ವರದಿ ಮಾಡಿದೆ. ಒಂದೊಮ್ಮೆ ಆಯುಧಗಳೇ ಇಲ್ಲದಿದ್ದರೆ ಎನ್ಕೌಂಟರ್ ಮಾಡಿದ್ದು ಯಾಕೆ? ಇದ್ದರೆ ಆಯುಧಗಳನ್ನು ಶಂಕಿತರಿಗೆ ಕೊಟ್ಟವರು ಯಾರು? ಎಂದು ಅದು ವಿಶ್ಲೇಷಣೆ ಮಾಡಿದೆ.


ಇದೇ ರೀತಿಯ ಪ್ರಶ್ನೆಗಳನ್ನು ‘ಸ್ಕ್ರಾಲ್ ಡಾಟ್ ಇನ್’ ಕೂಡಾ ಎತ್ತಿದೆ. ವೀಡಿಯೋದಲ್ಲಿಹೆಣಗಳು ಕಾಣಿಸುತ್ತಿವೆ ಆದರೆ ಯಾರ ಬಳಿಯೂ ಆಯುಧಗಗಳು ಕಾಣಿಸುತ್ತಿಲ್ಲ ಎಂದು ಅದು ಬರೆದಿದೆ.

ಇನ್ನು “ಪ್ರಕರಣದ ಕುರಿತು ಸಿಬಿಐ ತನಿಖೆಗೆ ನಾವು ಹೈ ಕೋರ್ಟ್ ಮೊರೆ ಹೋಗಲಿದ್ದೇವೆ,” ಎಂದು 8ರಲ್ಲಿ 7 ಆರೋಪಿಗಳ ಪರ ವಾದ ಮಂಡಿಸುತ್ತಿದ್ದ ಪರ್ವೀಜ್ ಆಲಂ ಹೇಳಿದ್ದಾರೆ. ಬಟ್ಟೆಗಳ್ನು ಅವರಿಗೆ ಕೊಡಲಾಗಿದೆ. ಇದು ಜೈಲಿನ ಬಟ್ಟೆಗಳಲ್ಲ. ಅವರ ಬಳಿ ವಾಚು, ಬೆಲ್ಟ್, ಶೂಗಳಿವೆ. ಬಟ್ಟೆಗಳನ್ನು ಹೊರಗಿನವರು ನೀಡಿದ್ದರೆ ವಾಹನಗಳನ್ನು ಯಾಕೆ ನೀಡಿಲ್ಲ. ಅವರು ಯಾಕೆ ಪೊಲೀಸರು ಬಂದು ಎನ್ಕೌಂಟರ್ ಮಾಡಲಿ ಎಂದು ಕಾಯುತ್ತಿದ್ದರು? ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನು ‘ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿದೆ.


simi-encounterಎನ್ಕೌಂಟರ್ ಘಟನೆಯ ಬಗ್ಗೆ ‘ಹ್ಯೂಮನ್ ರೈಟ್ಸ್ ವಾಚ್’ನ ಏಷ್ಯಾ ವಿಭಾಗದ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಕೂಡಾ ಅನುಮಾನ ವ್ಯಕ್ತಪಡಿಸಿದ್ದು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ ಎಂದು ‘ಹಿಂದೂಸ್ಥಾನ ಟೈಮ್ಸ್’ ವರದಿ ಮಾಡಿದೆ. ಮಾತ್ರವಲ್ಲ ಎಲ್ಲಾ ಅನುಮಾನಿತ ಪ್ರಕರಗಳಲ್ಲೂ ಸಿಸಿಟಿವಿ ಸಾಕ್ಷ್ಯ ಕೇಳಲಾಗುತ್ತದೆ. ಹೀಗೆ ಕೇಳಿದಾಗೆಲ್ಲಾ ಸಿಸಿಟಿವಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎನ್ನುತ್ತಾರೆ. ಈಗ ಭೋಪಾಲ್ ಜೈಲಿನಲ್ಲೂ ಸಿಸಿಟಿವಿ ಕೆಲಸ ನಿರ್ವಹಿಸುತ್ತಿರಲಿಲ್ಲ ಎಂದು ಅದು ವರದಿ ಮಾಡಿದ್ದು ಅನುಮಾನಗಳೂ ಇನ್ನೂ ಹೆಚ್ಚಾಗಿವೆ.

ಆರೋಪಿಗಳಲ್ಲಿ ಕೆಲವರು ಈ ಹಿಂದೆ ಇದೇ ಮಧ್ಯ ಪ್ರದೇಶದ ಖಾಂಡ್ವಾ ಜೈಲಿನಿಂದ ತಪ್ಪಿಸಿಕೊಂಡವರಾಗಿದ್ದರು. ಹೀಗಿದ್ದೂ ಇವರನ್ನೆಲ್ಲಾ ಒಟ್ಟಿಗೆ ಇರಲು ಬಿಟ್ಟಿದ್ದು ಹೇಗೆ? ಇವರ ಈ ಹಿಂದಿನ ಕೃತ್ಯ ಗೊತ್ತಿದ್ದು ನಿಗಾ ಇಟ್ಟಿರಲಿಲ್ವಾ? ಎಂದು ಅದು ಪ್ರಶ್ನಿಸಿದೆ. ಮಾತ್ರವಲ್ಲ ಜೈಲಿನ ಒಳಗೆ ಗೂಢಚರ್ಯೆ ನಡೆಸಲಾಗುತ್ತದೆ. ಹೀಗಿದ್ದು ಮಾಹಿತಿಗಳನ್ನು ಪಡೆಯದಷ್ಟು ಪೊಲೀಸ್ ವ್ಯವಸ್ಥೆ ಹದಗೆಟ್ಟಿತ್ತಾ ಎಂದು ಅದು ಪ್ರಶ್ನೆಗಳನ್ನುಕೇಳಿದೆ.


SIMI encounterಎನ್ಕೌಂಟರ್ ಕುರಿತು ‘ಫಸ್ಟ್ ಪೋಸ್ಟ್’ ಕೂಡಾ ಒಂದಷ್ಟು ಪ್ರಶ್ನೆಗಳನ್ನು ಜನರ ಮುಂದಿಟ್ಟಿದೆ.

 • ಪೊಲೀಸ್ ಅಧಿಕಾರಿಯನ್ನು ಕೊಂದಾಗಲೂ ಜೈಲಿನಲ್ಲಿದ್ದ ಯಾರೂ ಯಾಕೆ ಅಲಾರಂ ಒತ್ತಿಲ್ಲ?
 • ತಪ್ಪಿಸಿಕೊಂಡ ದಾರಿಯಲ್ಲೇ ಏಕೆ ಸಿಸಿಟಿವಿಗಳು ಕೆಲಸ ಮಾಡುತ್ತಿರಲಿಲ್ಲ?
 • 2400 ಜನ ಇರುವ ಜೈಲಿನಲ್ಲಿ 32 ಅಡಿ ಎತ್ತರದ ಗೋಡೆ, ಅದರ ಮೇಲೆ ಕರೆಂಟ್ ಹರಿಯುವ ತಂತಿಗಳನ್ನು ಅಷ್ಟು ಸುಲಭಕ್ಕೆ ಹೇಗೆ ದಾಟಿ ಎಸ್ಕೇಪ್ ಆದರು? ಒಬ್ಬರೂ ಆಕಸ್ಮಿಕವಾಗಿಯಾದರೂ ಕರೆಂಟ್ ಶಾಕಿಗೆ ಒಳಗಾಗಲಿಲ್ಲವೇ? ಲಾಯರುಗಳು ಎಂಟರಲ್ಲಿ ಮೂರು ಜನರಿಗೆ ಈ ಗೋಡೆ ಹತ್ತಿ ದೈಹಿಕವಾಗಿ ಕಷ್ಟ ಎನ್ನುತ್ತಿದ್ದಾರಲ್ವಾ?
 • ಎಲ್ಲಾ ಜೈಲುಗಳಲ್ಲೂ ವಾಚ್ ಟವರುಗಳಿರುತ್ತವೆ, ಸರ್ಚ್ ಲೈಟುಗಳಿರುತ್ತವೆ, ಜೈಲಿನೊಳಗೆ ಮಾಹಿತಿ ನೀಡುವವರಿರುತ್ತಾರೆ. ಯಾವುದೂ ಇರಲಿಲ್ಲವೇ?
 • ಸಿಮಿ ಗ್ಯಾಂಗ್ ಈ ಕೃತ್ಯ ಆಯೋಜಿಸಿದ್ದರೆ ಅದರ ನಾಯಕ ಇನ್ನೊಂದು ಜೈಲಿನಲ್ಲಿದ್ದ ಅಬು ಫೈಸಲ್ ನ್ನನು ಯಾಕೆ ತಪ್ಪಿಸಿಕೊಳ್ಳುವಂತೆ ಮಾಡಲಿಲ್ಲ?
 • ಪೊಲೀಸರತ್ತ ಅವರು ನಿಜವಾಗಿಯೂ ಗುಂಡು ಹಾರಿಸುತ್ತಿದ್ದರು ಎಂದಾದರೆ, ಯಾವ ಪೊಲೀಸ್ ಅಥವಾ ವೀಡಿಯೋ ಮಾಡಿದಾತ ಯಾವುದೇ ರಕ್ಷಣೆಯನ್ನು ಬಳಸದೇ ನೇರವಾಗಿ ನಿಂತು ಶೂಟ್ ಮಾಡುತ್ತಾನೆ?
 • ಒಂದು ಸಲ ಅವರೆಲ್ಲಾ ನೆಲಕ್ಕೆ ಬಿದ್ದ ಮೇಲೂ ಮತ್ತೆ ಶೂಟ್ ಮಾಡಿರುವುದರ ಹಿಂದಿನ ಉದ್ದೇಶ ಏನು? ಯಾರನ್ನು ಎಟಿಎಸ್ ಫಿಕ್ಸ್ ಮಾಡಲು ಹೊರಟಿದೆ?
 • ಯಾರೇ ವೃತ್ತಿಪರ ಪೊಲೀಸ್ ಅಧಿಕಾರಿ ಆಪರೇಷನ್’ಗೆ ಹೋಗುವಾಗ ಕೆಂಪು ಶರ್ಟಿನಲ್ಲಿ (ವೀಡಿಯೋದಲ್ಲಿ ಕಾಣಿಸಿದಂತೆ) ಹೋಗುತ್ತಾರಾ?

ಜೈಲಿನೊಳಗೆ ನಡೆದಿದ್ದಕ್ಕೂ ಎನ್ಕೌಂಟರ್ ನಡೆದ ಸಮಯಕ್ಕೂ ಮಧ್ಯದಲ್ಲಿ ‘ಮಿಸ್ಸಿಂಗ್ ಲಿಂಕ್’ಗಳಿವೆ ಎಂದು ಅದು ವರದಿ ಮಾಡಿದೆ.

ಮಾಧ್ಯಮ ವರದಿಗಳು ಈ ರೀತಿ ಬರುತ್ತಿದ್ದರೆ ‘ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ’ಗೆ ಕಾಂಗ್ರೆಸ್ ಒತ್ತಾಯಿಸಿದೆ. ಈ ಕುರಿತು ಹಿರಿಯ ನಾಯಕ ಕಮಲ್ ನಾಥ್ ಹಾಗೂ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದಾರೆ. ಇನ್ನು ಕಮ್ಯೂನಿಷ್ಟ್ ಪಕ್ಷದ ನಾಯಕಿ ಬೃಂದಾ ಕಾರಟ್ ಕೂಡಾ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.

ಸಾರ್ವಜನಿಕವಾಗಿ ಇಷ್ಟೆಲ್ಲಾ ಪ್ರಶ್ನೆಗಳು ಎದ್ದಿದ್ದರೂ, ಮಧ್ಯಪ್ರದೇಶ ಬಿಜೆಪಿ ಸರಕಾರ ಇನ್ನೂ ಎನ್ಕೌಂಟರ್ ಕುರಿತ ಪ್ರಶ್ನೆಗಳಿಗೆ ಉತ್ತರಿಸುವ ರಿಸ್ಕ್ ತೆಗೆದುಕೊಂಡಿಲ್ಲ.

Leave a comment

Top