An unconventional News Portal.

‘ಸಂವಾದ’ ಸಂಸ್ಥೆಯ ಬೆಳ್ಳಿಹಬ್ಬ ‘ಪರಿಸೆ’: ವಿಚಾರ ಸಂಕಿರಣ; ಸಮಕಾಲೀನ ಭಾರತದಲ್ಲಿ ಯುವತ್ವ ಮತ್ತು ಉನ್ನತ ಶಿಕ್ಷಣ

‘ಸಂವಾದ’ ಸಂಸ್ಥೆಯ ಬೆಳ್ಳಿಹಬ್ಬ ‘ಪರಿಸೆ’: ವಿಚಾರ ಸಂಕಿರಣ; ಸಮಕಾಲೀನ ಭಾರತದಲ್ಲಿ ಯುವತ್ವ ಮತ್ತು ಉನ್ನತ ಶಿಕ್ಷಣ

ಸಂವಾದ ಸಂಸ್ಥೆ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಮಕಾಲೀನ ಭಾರತದಲ್ಲಿ ಉನ್ನತ ಶಿಕ್ಷಣ ಅವಕಾಶ ವಂಚಿತ ಯುವಜನ ಸಮುದಾಯಗಳಿಂದ ದೂರವಾಗುತ್ತಿರುವ ರಾಜಕಾರಣದ ಕುರಿತು ‘ಸಮಕಾಲೀನ ಭಾರತದಲ್ಲಿ ಯುವತ್ವ ಮತ್ತು ಉನ್ನತ ಶಿಕ್ಷಣ’ ಎಂಬ ಶೀರ್ಷಿಕೆಯಡಿಯಲ್ಲಿ ಬೆಂಗಳೂರಿನ ಗಾಂಧಿ ಭವನ, ಕುಮಾರ ಪಾರ್ಕ್‌ನಲ್ಲಿ ಫೆಬ್ರುವರಿ 9ರ ಶುಕ್ರವಾರ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ…

ಈ ವಿಚಾರ ಸಂಕಿರಣದಲ್ಲಿ  ಚಿಂತಕ ಮತ್ತು ಲೇಖಕ ಆನಂದ್ ತೇಲ್ತುಂಬ್ಡೆ, ಸಮಾಜ ವಿಜ್ಞಾನಿ  ಡಾ. ಸಿ.ಜಿ. ಲಕ್ಷ್ಮಿಪತಿ, ರಾಜಕೀಯ ಚಿಂತಕ ಹಾಗೂ ಸಮಾಜ ವಿಜ್ಞಾನಿ ಡಾ.ಮುಜಾಫರ್ ಅಸ್ಸಾದಿ, ವಿದ್ವಾಂಸ ಮತ್ತು ಅಂಕಣಕಾರ ಡಾ.ಶಿವ ವಿಶ್ವನಾಥನ್, ಸಂವಾದ ಸಂಸ್ಥೆಯ ಸಂಸ್ಥಾಪಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ಅನಿತಾ ರತ್ನಂ, ಸಮಾಜ ಶಾಸ್ತ್ರಜ್ಞೆ ಮತ್ತು ಅಂಕಣಗಾರ್ತಿ ಸುಜಾತ ಸುರೆಪಲ್ಲಿ, ಅಧ್ಯಾಪಕಿ ಹಾಗೂ ಶಿಕ್ಷಣ ತಜ್ಞೆ ಉಷಾ ರಾಜರಾಮ್, ರೈತ ಮಹಿಳೆ ಹಾಗೂ ರೇಡಿಯೋ ಪ್ರೋಗ್ರಾಮರ್ ಕವಿತ ಕಮ್ಮನಕೋಟೆ ಮತ್ತಿತರರು ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಲಿದ್ದಾರೆ. ಜೊತೆಗೆ, ಇನ್ನೂ ಅನೇಕ ಚಿಂತಕರು ಉನ್ನತ ಶಿಕ್ಷಣದ ರಾಜಕಾರಣದ ಕುರಿತು ಚರ್ಚಿಸಲಿದ್ದಾರೆ.

ಸಂವಾದ ಸಂಸ್ಥೆಯು ಕಳೆದ 2 ದಶಕಗಳಿಗಿಂತ ಹೆಚ್ಚು ಕಾಲ ಯುವಜನರ ಸಬಲೀಕರಣದ ಜೊತೆಗೆ ಸಾಮಾಜಿಕ ಬದಲಾವಣೆಗಾಗಿ ಕೆಲಸ ಮಾಡುತ್ತಿದೆ. ವಿಚಾರ ಸಂಕಿರಣದ ವಿಷಯವಾಗಿ ಇಂದಿನ ದಿನಮಾನದಲ್ಲಿ ಯುವಜನರಲ್ಲಿ ರೂಪುಗೊಳ್ಳಬೇಕಾದ ಮೌಲ್ಯಗಳು ಅದರ ಜೊತೆಗೆ ಉನ್ನತ ಶಿಕ್ಷಣ ಪಡೆಯುವಲ್ಲಿ ಎದುರಾಗುವ ಸವಾಲುಗಳ ಕುರಿತಾಗಿ ಚರ್ಚೆ ನಡೆಯಲಿದೆ.

ಸಂವಾದ ಸಂಸ್ಥೆ ತನ್ನ ಬೆಳ್ಳಿ ಹಬ್ಬವನ್ನು ‘ಪರಿಸೆ’ ಯಾಗಿ ಆಚರಿಸುತ್ತಿದೆ. ಈ ಪ್ರಯುಕ್ತ ಫೆ.9 ರಿಂದ 11ರವರೆಗೆ ಬೆಂಗಳೂರಿನಲ್ಲಿ ಮೂರು ದಿನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆ ಬಗ್ಗೆ ಕಾರ್ಯಕ್ರಮಗಳ ವಿವರಗಳು ಇಲ್ಲಿವೆ:

ಫೆ.11ರಂದು ಸಾಮಾಜಿಕ ನ್ಯಾಯಕ್ಕಾಗಿ ನಡೆಯುವ ಯುವ ಮುಂದಾಳತ್ವದ ಚರ್ಚೆಯಲ್ಲಿ ‘ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ’ದ ಮಾಧುರಿ ಬೋಲಾರ್, ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ನಸ್ರೀನ್, ದಲಿತ ದಮನಿತರ ಹೋರಾಟ ಸಮಿತಿಯ ಹುಲಿಕುಂಟೆ ಮೂರ್ತಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭವು ಸಾಯಂಕಾಲ 4ಗಂಟೆಯಿಂದ ನಡೆಯಲಿದೆ. ‘ಯುವಮುಂದಾಳತ್ವ ನಿರ್ಮಾಣದ ಪಯಣದಲ್ಲಿ ಸಾಧನೆಗಳು, ಸವಾಲುಗಳು, ಯೋಜನೆಗಳು ಹಾಗೂ ದೂರದೃಷ್ಟಿ’ ಎಂಬ ವಿಷಯದ ಕುರಿತು ಚರ್ಚೆ ನಡೆಯಲಿದೆ. ಈ ಸಮಾರೋಪ ಕಾರ್ಯಕ್ರಮದಲ್ಲಿ ಸಾಹಿತಿ  ಹಾಗೂ ಪ್ರಗತಿಪರ ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್ ಭಾಗಿಯಾಗಲಿದ್ದಾರೆ.

“ನಾವು ಹುಟ್ಟುಹಾಕಿದ ಸಂವಾದ ಸಂಸ್ಥೆ 25 ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನಲೆಯಲ್ಲಿ ‘ಸಂವಾದ’ ನಡೆದು ಬಂದ ದಾರಿ, ಎದುರಿಸಿದ ಸವಾಲುಗಳು ಮತ್ತು ಸಾಧನೆಗಳನ್ನು ಇಟ್ಟುಕೊಂಡು ಸಂಭ್ರಮದ ರೀತಿಯಲ್ಲಿ ಪರಿಸೆ ಆಚರಿಸುತ್ತಿದ್ದೇವೆ. ಈ ಸಮಾರಂಭದಲ್ಲಿ ಅನೇಕ ಬುದ್ದಿ ಜೀವಿಗಳು, ಚಿಂತಕರು, ಲೇಖಕರು ಹಾಗೂ ಇನ್ನಿತರರು ಭಾಗವಹಿಸುತ್ತಿದ್ದಾರೆ. ಫೆ.9ರಂದು ನಡೆಯುವ ವಿಚಾರ ಸಂಕಿರಣದಲ್ಲಿ ಯುವ ಜನರ ಉನ್ನತ ಶಿಕ್ಷಣದ ಕುರಿತು ಕೇವಲ ಸಮಸ್ಯೆ ಮತ್ತು ಎದುರಿಸಿದ ಸವಾಲುಗಳಷ್ಟೇ ಅಲ್ಲದೇ, ಅದಕ್ಕೆ ಬೇಕಾದ ಪರಿಹಾರಗಳ ಕುರಿತು ಚರ್ಚೆಗೆ ವೇದಿಕೆ ನಿರ್ಮಿಸುತ್ತಿದ್ದೇವೆ” ಎಂದು ಸಂವಾದದ ನಿರ್ದೇಶಕಿ ಅನಿತಾ ರತ್ನಂ ‘ಸಮಾಚಾರ’ಕ್ಕೆ ತಿಳಿಸಿದರು.

‘ಸಂವಾದ’ ಕಿರುಪರಿಚಯ:

ಯುವಜನರ ಸಶಕ್ತತೆ, ಸಮಸಮಾಜ, ನ್ಯಾಯಪರ ಮತ್ತು ಸುಸ್ಥಿರ ಸಮಾಜದ ನಿರ್ಮಾಣದ ಉದ್ದೇಶದೊಂದಿಗೆ 1992ರಲ್ಲಿ ಹುಟ್ಟಿಕೊಂಡ ಸಂಸ್ಥೆ ಸಂವಾದ. ಬೆಂಗಳೂರು, ತುಮಕೂರು, ಹೊಸಪೇಟೆ, ಬಂಟ್ವಾಳ, ಚಿತ್ರದುರ್ಗ ಮತ್ತು ಕೋಲಾರದಲ್ಲಿ ಸಂವಾದ ಯುವ ಕೇಂದ್ರಗಳು  ಕಾರ್ಯ ನಿರ್ವಹಿಸುತ್ತಿವೆ. ಈ ಕೇಂದ್ರಗಳು ಯುವಜನರಲ್ಲಿ ಅವಲೋಕನ ಕೌಶಲ್ಯಗಳನ್ನು ಹೆಚ್ಚಿಸಲು ಕೆಲಸ ಮಾಡುತ್ತಿವೆ.

‘ಸಂವಾದ’ದ ಅಂಗ ಸಂಸ್ಥೆ ಬದುಕು ಕಮ್ಯೂನಿಟಿ ಕಾಲೇಜು. ಇದು ಸ್ಥಾಪನೆಯಾಗಿದ್ದು 2008ರಲ್ಲಿ. ಇದು ಅವಕಾಶ ವಂಚಿತ ಯುವಜನರು ತಮ್ಮ ವೃತ್ತಿಗಳನ್ನು ಪ್ರತಿನಿಧಿಸಿಕೊಳ್ಳಲು ಅವಕಾಶ ಒದಗಿಸುತ್ತದೆ. ಸಾಮಾಜಿಕ ನಿರ್ಣಾಯಕ ಹಂತದಲ್ಲಿರುವ ವೃತ್ತಿಗಳಾದ ಕೃಷಿ, ಶಿಕ್ಷಣ, ಆಪ್ತ ಸಮಾಲೋಚನೆ, ಪತ್ರಿಕೋದ್ಯಮ, ಮಕ್ಕಳ ಆರೈಕೆ, ವೃತ್ತಿ ಮಾರ್ಗದರ್ಶನ ಮತ್ತು ತ್ಯಾಜ್ಯ ನಿರ್ವಹಣೆಯಂತಹ ವೃತ್ತಿಗಳನ್ನು ಯುವಜನರು ಪ್ರವೇಶಿಸಲು ‘ಸಂವಾದ’ ಅವಕಾಶ ಮಾಡಿಕೊಡುತ್ತಿದೆ.

Leave a comment

Top