An unconventional News Portal.

ಪೊಲೀಸರ ಪ್ರತಿಭಟನೆ ಮೇಲೆ ಮೊದಲ ‘ಮಹಾ ಪ್ರಹಾರ’: ಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಬಂಧನ

ಪೊಲೀಸರ ಪ್ರತಿಭಟನೆ ಮೇಲೆ ಮೊದಲ ‘ಮಹಾ ಪ್ರಹಾರ’: ಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಬಂಧನ

ಪೊಲೀಸರ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ‘ಎಸ್ಮಾ’ ಜಾರಿಯಾದ 24 ಗಂಟೆಯೊಳಗೆ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರನ್ನು ವಶಕ್ಕೆ ಪಡೆಯಲಾಗಿದೆ.

ಮಧ್ಯರಾತ್ರಿ 12.30ರ ಸುಮಾರಿಗೆ ಯಲಹಂಕ ನ್ಯೂಟೌನ್ ಆರ್ಟಿಒ ಕಛೇರಿ ಹಿಂಭಾಗದಲ್ಲಿರುವ ಮನೆಯಿಂದ ಶಶಿಧರ್ ಅವರನ್ನು ಸುಮಾರು 30 ಮಂದಿ ಇದ್ದ ಪೊಲೀಸರ ತಂಡ ಕರೆದುಕೊಂಡು ಹೋಗಿದೆ.

ಘಟನೆ ನಡೆಯುತ್ತಿದ್ದಂತೆ ಸಾಮಾಜಿಕ ಜಾಲತಾಣ ಫೇಸ್ ಬುಕ್ನಲ್ಲಿ ಶಶಿಧರ್ ಮಗ ‘ತಂದೆಯ ಬಂಧನವಾಗಿದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾನೆ. ‘ಏನೇ ಆಗಲಿ, ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಕೈ ಬಿಡಬೇಡಿ,’ ಎಂದು ಆತ ಸಂದೇಶದಲ್ಲಿ ತಿಳಿಸಿದ್ದಾನೆ.

Shashidhar Venugopal

“ಮನೆಗೆ ಒಂದು ಟೆಂಪೋ ಹಾಗೂ ಜೀಪುಗಳಲ್ಲಿ ಪೊಲೀಸರು ಬಂದು ಬಾಗಿಲು ಬಡಿಯಲು ಶುರು ಮಾಡಿದ್ದರು. ಇದನ್ನು ನಿರೀಕ್ಷಿಸುತ್ತಿದ್ದ ತಂದೆ ಗಲಾಟೆ ಮಾಡಲು ಅವಕಾಶ ನೀಡದೆ ಅವರ ಜತೆ ಹೊರಟು ಹೋದರು. ಯಾವುದೇ ವಾರೆಂಟ್ ನೀಡಲಿಲ್ಲ. ಈ ಸಮಯದಲ್ಲಿ ನನ್ನ ತಮ್ಮ ಫೊಟೋ ತೆಗೆಯಲು ಮುಂದಾದಾಗ, ಅವನ ಮೊಬೈಲ್ ಕಿತ್ತುಕೊಂಡು ಒಡೆದು ಹಾಕಿದರು,’’ ಎಂದು ಶಶಿಧರ್ ಮಗಳು ನಯನ ‘ಸಮಾಚಾರ’ಕ್ಕೆ ಮಾಹಿತಿ ನೀಡಿದರು.

“ತಂದೆ ಬಂಧನವನ್ನು ನಿರೀಕ್ಷಿಸಿದ್ದರು. ಹೀಗಾಗಿ ಮುಂದೇನು ಮಾಡಬೇಕು? ಯಾರು ಯಾರಿಗೆ ಮಾಹಿತಿ ನೀಡಬೇಕು? ಎಂದು ತಿಳಿಸಿದ್ದಾರೆ,” ಎಂದು ನಯನ ಹೇಳಿದರು.

ಜೂನ್ 4ರಂದು ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘ ಪ್ರತಿಭಟನೆಗೆ ಕರೆ ನೀಡಿತ್ತು. ಸಂಘದ ಅಧ್ಯಕ್ಷ ಶಶಿಧರ್ ವೇಣು ಗೋಪಾಲ್ ಹಲವು ವರ್ಷಗಳಿಂದ ಪೊಲೀಸರ ಸಂಕಷ್ಟಗಳ ಕುರಿತು ಹೋರಾಟ ನಡೆಸಿಕೊಂಡು ಬಂದವರು. ಹಿಂದೆ ಇಲಾಖೆಯಲ್ಲಿದ್ದು, ಇದೇ ಕಾರಣಕ್ಕೆ ಅಮಾನತ್ತುಗೊಂಡಿದ್ದರು. ಇದೀಗ, ರಾಜ್ಯವ್ಯಾಪಿ ಭಾರಿ ಬೆಂಬಲ ಪಡೆದುಕೊಂಡ ಪ್ರತಿಭಟನೆಯನ್ನು ಹುಟ್ಟು ಹಾಕುವಲ್ಲಿ ಅವರದ್ದು ಪ್ರಮುಖ ಪಾತ್ರವಿದೆ.

ಶಶಿಧರ್ ವೇಣುಗೋಪಾಲ್ ಬಂಧನವನ್ನು ಪೊಲೀಸರು ಖಚಿತ ಪಡಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್,” ಸರ್ಕಾರದ ವಿರುದ್ಧ ಸಮರ, ಒಳಸಂಚು ರೂಪಿಸಿದ ಆರೋಪದಡಿ ಬಂಧಿಸಲಾಗಿದೆ. ನ್ಯಾಯಾಧೀಶರ ಮುಂದೆ ಅವರನ್ನು ಹಾಜರುಪಡಿಸಿದ್ದು, ಜೂನ್ 16ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ,” ಎಂದು ಮಾಹಿತಿ ನೀಡಿದ್ದಾರೆ.

Leave a comment

Top