An unconventional News Portal.

ತಮಿಳುನಾಡಿನಲ್ಲಿ ಸೋತಿದ್ದು ಸಮೀಕ್ಷೆಗಳು; ‘ಅಮ್ಮ’ ಮರು ಆಯ್ಕೆ ಹಿಂದಿರುವ ನಿಗೂಢ ನಡೆಗಳು!

ತಮಿಳುನಾಡಿನಲ್ಲಿ ಸೋತಿದ್ದು ಸಮೀಕ್ಷೆಗಳು; ‘ಅಮ್ಮ’ ಮರು ಆಯ್ಕೆ ಹಿಂದಿರುವ ನಿಗೂಢ ನಡೆಗಳು!

ತಮಿಳುನಾಡು ಜನರ ಮನದಲ್ಲಿ ಏನಿದೆ ಎಂಬುದನ್ನು ಫಲಿತಾಂಶಕ್ಕೆ ಮುನ್ನವೇ ಅರಿಯುವಲ್ಲಿ ಈ ಬಾರಿಯೂ ಬಹುತೇಕ ಮತದಾನ ಪೂರ್ವ ಹಾಗೂ ಮತದಾನೋತ್ತರ ಸಮೀಕ್ಷೆಗಳು ವಿಫಲವಾಗಿವೆ.

ನೆರೆಯ ರಾಜ್ಯ ತಮಿಳುನಾಡಿನಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕರುಣಾನಿಧಿ ನೇತೃತ್ವದ ಡಿಎಂಕೆ ಅಥವಾ ಜಯಲಲಿತಾ ಮುಂದಾಳತ್ವದ ಎಐಎಡಿಎಂಕೆ ಪಕ್ಷಗಳ ನಡುವೆ ಪೈಪೋಟಿ ಇರುವುದಾಗಿ ಸಮೀಕ್ಷೆಗಳು ಬಿಂಬಿಸಿದವು. ಇಂಡಿಯಾ ಟಿವಿ ಹಾಗೂ ಸಿ- ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಆಡಳಿತರೂಢ ಪಕ್ಷಕ್ಕೆ ಗೆಲುವಿನ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು.

ಅತ್ತ ಮತ ಸಮೀಕ್ಷೆಗಳು, ಚುನಾವಣಾ ನಾಡಿನಿಂದ ವರದಿಗಳು ಹೊರಬರುತ್ತಿರುವಾಗಲೇ ತಮಿಳುನಾಡಿನ ಚುನಾವಣಾ ಕಣ ತನ್ನದೇ ಒಳಸುಳಿಗಳನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡಲು ತಯಾರಿರಲಿಲ್ಲ. ನಟ ವಿಜಯಕಾಂತ್ ಸ್ಥಾಪಿಸಿದ ಡಿಎಂಡಿಕೆ ಪಕ್ಷ ಈ ಬಾರಿಯ ಅಂತಿಮ ಫಲಿತಾಂಶದ ಮೇಲೆ ಪ್ರಬಾವ ಬೀರಲಿದೆ ಎಂದು ಬಿಂಬಿಸುವ ಕೆಲಸ ನಡೆಯಿತು. ಅದಕ್ಕೆ ಕಾರಣವಾಗಿದ್ದು, ಮತ್ತದೇ ಜಾತಿ ಆಧಾರದ ಮೇಲೆ ಮತ ಚಲಾವಣೆಯನ್ನು ಅಳೆಯುವ ಮಾನದಂಡ. ಯಾವಾಗ ವಿಜಯಕಾಂತ್ ಕೊನೆಯ ಕ್ಷಣದಲ್ಲಿ ಡಿಎಂಕೆ ಜತೆಗೆ ಮೈತ್ರಿ ಮಾಡಿಕೊಳ್ಳುವ ಅವಕಾಶದಿಂದ ಹೊರ ಬಿದ್ದರೋ, ಡಿಎಂಡಿಕೆ ಪ್ರಬಲ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಅನ್ನಿಸತೊಡಗಿತ್ತು. ಆದರೆ, ತಳಮಟ್ಟದ ವಾಸ್ತವಗಳು ಬೇರೆಯದೇ ಆಗಿದ್ದವು.


 

jayalalithaa-rally-1

HIGHLIGHTS

  • ತಮಿಳುನಾಡಿನಲ್ಲಿ ಮಿಸ್ ಹೊಡೆದ ಸಮೀಕ್ಷೆಗಳು
  • ‘ಅಮ್ಮ’ನ ಪ್ರಣಾಳಿಕೆಗೆ ಜನ ನೀಡಿದ ಪ್ರತಿಫಲ
  • ಜಯಲಲಿತಾ ನಿಗೂಢ ನಡೆಗಳ ಹಿಂದಿದ್ದ ತಂತ್ರಗಾರಿಕೆ
  • ಕೈಕೊಟ್ಟ ಡಿಎಂಕೆ ಮೇಲ್ಮಟ್ಟದ ಪ್ರಚಾರ; ಗೂಗಲ್ ಜಾಹೀರಾತು

ಉಳಿದ ಪಕ್ಷಗಳು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿ, ಡಿಎಂಕೆಯಂತಹ ಪಕ್ಷ ಸಾಮಾಜಿಕ ಜಾಲತಾಣಗಳಲ್ಲೂ ದೊಡ್ಡ ಮಟ್ಟದಲ್ಲಿ ಹಂಗಾಮ  ಮಾಡಲು ಶುರುಮಾಡಿದರೂ, ಜಯಲಲಿತಾ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲೇ ಇಲ್ಲ. ಅವರ ಚುನಾವಣಾ ನಡೆಗಳೇನಿವೆ ಎಂಬುದನ್ನು ಗೌಪ್ಯವಾಗಿಯೇ ಇಟ್ಟರು. ಈ ಸಮಯದಲ್ಲಿ ಎಐಎಡಿಎಂಕೆ ಎಲ್ಲಾ ಕ್ಷೇತ್ರಗಳಿಂದ ತಜ್ಞರನ್ನು ನೇಮಿಸಿಕೊಂಡು ಪ್ರಣಾಳಿಕೆಯೊಂದನ್ನು ತಯಾರಿ ಮಾಡಿಸುತ್ತಿತ್ತು. ಅದು ಹೊರಜಗತ್ತಿಗೆ ಗೊತ್ತಾಗಿದ್ದು, ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇವೆ ಅನ್ನುವಾಗ ಜಯಲಲಿತಾ ಉಚಿತಗಳ ಸರಮಾಲೆಯೇ ಇದ್ದ, ಮಹಿಳೆಯರಿಗೆ, ಗ್ರಾಮೀಣ ಜನರಿಗೆ ಹಾಗೂ ರೈತರಿಗೆ ಮಹತ್ವ ನೀಡಿದ್ದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದಾಗ.

ಅದು ಮುಖ್ಯವಾಹಿನಿಯಲ್ಲಿ ದೊಡ್ಡ ಸಂಚಲನ ಹುಟ್ಟುಹಾಕದಿದ್ದರೂ, ತಳಮಟ್ಟದಲ್ಲಿ ಜನರ ಮನಸ್ಸನ್ನು ಸೆಳೆಯಲು ಸಾಕಾಯಿತು. ಇದೀಗ ಜಯಲಲಿತಾ ಪಕ್ಷ ಗೆದ್ದಿರುವ ಸ್ಥಾನಗಳಲ್ಲಿ ಬಹುತೇಕ ಗ್ರಾಮೀಣ ಪ್ರದೇಶದ ವಿಧಾನ ಸಭಾ ಕ್ಷೇತ್ರಗಳು ಎಂಬುದು ಗಮನಾರ್ಹ. ಇಡೀ ಚುನಾವಣೆ ಪ್ರಕ್ರಿಯೆ ಉದ್ದಕ್ಕೂ ಜಯಲಲಿತಾ ಇಡುತ್ತಾ ಬಂದ ಒಂದೊಂದು ನಡೆಗಳೂ ನಿಗೂಢವಾಗಿ, ಅಷ್ಟೆ ಚಾಣಾಕ್ಷತನಗಳಿಂದ ಕೂಡಿದ್ದವು ಎಂಬುದನ್ನು ಗಮನಿಸಬೇಕಿದೆ. ಕೆಲವು ಕ್ಷೇತ್ರಗಳಲ್ಲಿ ಕೊನೆಯ ಕ್ಷಣದವರೆಗೂ ಅಭ್ಯರ್ಥಿಗಳನ್ನು ಘೋಷಿಸಲಿಲ್ಲ, ಇನ್ನು ಕೆಲವು ಕಡೆಗಳಲ್ಲಿ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳನ್ನೇ ಬದಲಾಯಿಸಲಾಯಿತು. ಹೀಗೆ, ಗೆಲುವಿಗೆ ಇರುವ ನಾನಾ ಸಾಧ್ಯತೆಗಳನ್ನು ಆಕೆ ತಳಮಟ್ಟದಲ್ಲಿ ಅನ್ವೇಷಣೆ ಮಾಡುತ್ತಲೇ ಹೋದರು.

ಇತ್ತ ಡಿಎಂಕೆ, ಅದರಲ್ಲೂ ವಿಶೇಷವಾಗಿ ಕರುಣಾನಿಧಿ ಪುತ್ರ ಸ್ಟಾಲಿನ್ ಸಾಮಾಜಿಕ ಜಾಲತಾಣಗಳ ಮೂಲಕ ಚುನಾವಣೆ ಗೆಲ್ಲುವ ಕಸರತ್ತು ಶುರುಮಾಡಿದ್ದರು. ಗೂಗಲ್ ಮೂಲಕ ದೇಶ, ವಿದೇಶಗಳ ಪೋರ್ಟಲ್ಗಳಿಗೆ ಕೋಟ್ಯಾಂತರ ರೂಪಾಯಿ ಜಾಹೀರಾತು ನೀಡಿದರು. ಆ ಮೂಲಕ ಮುಖ್ಯ ವಾಹಿನಿ  ಮಾಧ್ಯಮಗಳ ಮನಸ್ಥಿತಿಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ತಳಮಟ್ಟದಲ್ಲಿ ಪಕ್ಷದ ಸಂಘಟನೆ ಕೈಕೊಡುತ್ತಿರುವುದನ್ನು ಹೊರಜಗತ್ತಿನಿಂದ ಮುಚ್ಚಿಟ್ಟರು.  ಇವೆಲ್ಲವನ್ನೂ ಗಣನೆಗೇ ತೆಗೆದುಕೊಳ್ಳದ ಜಯಲಲಿತಾ ಮಾತ್ರ, ಶಿಸ್ತುಬದ್ಧವಾಗಿ ಸಾಂಪ್ರದಾಯಿಕ ಚುನಾವಣಾ ಚೌಕಟ್ಟಿನೊಳಗೇ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿದರು. ಅದೀಗ ಫಲ ನೀಡಿದೆ. ‘ಅಮ್ಮ’ ನೀಡಿದ ಉಚಿತ ಯೋಜನೆಗಳ ಆಶ್ವಾಸನೆಗಳು ಹುಸಿ ಹೋಗಲಿಲ್ಲ. ಆಕೆಯ ಗೆಲುವಿನಲ್ಲಿ, ಚುನಾವಣಾ ಸಮೀಕ್ಷೆಗಳ ಸೋಲು ಎದ್ದು ಕಾಣಿಸುತ್ತಿದೆ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top