An unconventional News Portal.

‘ಮಲ್ಯ ಖುಷ್ ಹುವಾ’: 63 ಸಾಲಗಾರರ 7, 016 ಕೋಟಿ ರೂಪಾಯಿ ಪರೋಕ್ಷ ಮನ್ನಾ!

‘ಮಲ್ಯ ಖುಷ್ ಹುವಾ’: 63 ಸಾಲಗಾರರ 7, 016 ಕೋಟಿ ರೂಪಾಯಿ ಪರೋಕ್ಷ ಮನ್ನಾ!

ದೇಶವಾಸಿಗಳು ಸರತಿ ಸಾಲಿನಲ್ಲಿ ನಿಂತು ತಮ್ಮಲ್ಲಿರುವ ಚಿಲ್ಲರೆ ಹಣವನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ, ದೇಶದ ಪ್ರಮುಖ ಸರಕಾರಿ ಸ್ವಾಮ್ಯದ ಬ್ಯಾಂಕ್- ಎಸ್ಬಿಐ (SBI) ಸಾಲಕಟ್ಟಲಾಗದೆ ‘ಉದ್ದೇಶಪೂರ್ವಕವಾಗಿ ಸುಸ್ತಿದಾರ’ರಾಗಿದ್ದ 63 ಜನರಿಂದ ಸಾಲ ವಸೂಲಿ ಮಾಡುವುದರಿಂದ ಹಿಂದೆ ಸರಿದಿದೆ. ಈ ಮೊತ್ತವೇ 7, 016 ಕೋಟಿ ರೂಪಾಯಿಗಳಷ್ಟಿದೆ.

ಬುಧವಾರ ‘ಡಿಎನ್ಎ’ ಈ ಕುರಿತು ವರದಿ ಮಾಡಿದ್ದು, ಸಾಲ ಮಾಡಿ ವಿದೇಶಕ್ಕೆ ಪಲಾಯನ ಮಾಡಿದ ಕರ್ನಾಟಕ ಮೂಲದ ಉದ್ಯಮಿ ವಿಜಯ್ ಮಲ್ಯ ಹೆಸರೂ ಕೂಡ ಇದೆ. ಮಲ್ಯ ಮಾಡಿದ ಸಾಲದ ಪೈಕಿ ಎಸ್ಬಿಐ ಬ್ಯಾಂಕ್ 1, 201 ಕೋಟಿ ಹಣವನ್ನು ವಸೂಲಿ ಮಾಡಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದೆ.

ಪತ್ರಿಕೆ ಲಭ್ಯವಾಗಿರುವ ದಾಖಲೆಗಳನ್ನು ಇಟ್ಟುಕೊಂಡು ವರದಿ ಮಾಡಿದ್ದು, ಬ್ಯಾಂಕ್ ಲೆಕ್ಕಪತ್ರ ಸಲ್ಲಿಕೆ ವೇಳೆ ಈ ತೀರ್ಮಾನಕ್ಕೆ ಬಂದಿರುವುದು ಬೆಳಕಿಗೆ ಬಂದಿದೆ. ಕೆಎಸ್ ಆಯಿಲ್ (596 ಕೋಟಿ), ಸೂರ್ಯ ಫಾರ್ಮಸೂಟಿಕಲ್ಸ್ (526 ಕೋಟಿ), ಜಿಇಟಿ ಪವರ್ಸ್ (400 ಕೋಟಿ), ಸಾಯಿ ಇನ್ಫೋ ಸಿಸ್ಟಂ (376 ಕೋಟಿ) ಮತ್ತಿತರರು ಸಾಲ ವಸೂಲಿ ಮಾಡಲಾಗದ ಕೈ ಚೆಲ್ಲಿದ ಪ್ರಮುಖ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಕರ್ನಾಟಕ ಮೂಲಕ ಉದ್ಯಮಿ ವಿಜಯ್ ಮಲ್ಯ ಸಾಲ ಕಟ್ಟಲಾಗದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಕ್ರಮಕ್ಕೆ ಮುಂದಾಗಿತ್ತು. ಮಲ್ಯ ಒಡೆತನದ ಕಿಂಗ್ ಫಿಶರ್ ಏರ್ಲೈನ್ಸ್ ಸುಮಾರು 6, 963 ಕೋಟಿ ರೂಪಾಯಿಗಳ ಸಾಲವನ್ನು 17 ನಾನಾ ಬ್ಯಾಂಕ್ಗಳಲ್ಲಿ ಪಡೆದಿತ್ತು. ಇದರಲ್ಲಿ ಎಸ್ಬಿಐ ಬ್ಯಾಂಕ್ ಇದೀಗ 1, 201 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲು ಸಾಧ್ಯವಿಲ್ಲ ಎಂದು ಲೆಕ್ಕಪತ್ರ ಸಲ್ಲಿಸಿದೆ.

ಈ ಹಿಂದೆ, ದೇಶದ ಸುಮಾರು 29 ಸರಕಾರಿ ಸ್ವಾಮ್ಯದ ಬ್ಯಾಂಕ್ಗಳು ಒಟ್ಟು 1. 14 ಲಕ್ಷ ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲಾಗದ ಸಾಲ ಎಂದು ಕೈ ಚೆಲ್ಲಿದ್ದವು. ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಎಸ್ಬಿಐ ಒಂದೇ, ಸುಮಾರು 40, 084 ಕೋಟಿ ರೂಪಾಯಿಗಳ ಸಾಲವನ್ನು ವಸೂಲಿ ಮಾಡುವುದರಿಂದ ಹಿಂದೆ ಸರಿದಿತ್ತು.

“ಉದ್ದೇಶ ಪೂರ್ವಕ ಸುಸ್ತಿದಾರರ ಹೆಸರನ್ನು ಬಹಿರಂಗ ಪಡಿಸುವ ಮೂಲಕ ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆಯನ್ನು ತರುವ ಅಗತ್ಯವಿದೆ ಎಂದು ಸಮಿತಿಯ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ. ಅಂತವರ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ವಿವರಣೆ ಕೇಳಲಾಗಿದೆ,” ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.

Top