An unconventional News Portal.

‘ರಾಯಣ್ಣ ಬ್ರಿಗೇಡ್’ ಹಿನ್ನೆಲೆಯಲ್ಲಿ ಅಸಮಾಧಾನ: ಬಿಜೆಪಿಯೊಳಗಿನ ಈ ಬೆಳವಣಿಗೆ ನಾಟಕನಾ?

‘ರಾಯಣ್ಣ ಬ್ರಿಗೇಡ್’ ಹಿನ್ನೆಲೆಯಲ್ಲಿ ಅಸಮಾಧಾನ: ಬಿಜೆಪಿಯೊಳಗಿನ ಈ ಬೆಳವಣಿಗೆ ನಾಟಕನಾ?

ರಾಜ್ಯ ಬಿಜೆಪಿ ಪಕ್ಷದಲ್ಲಿ ‘ರಾಯಣ್ಣ ಬ್ರಿಗೇಡ್’ ವಿವಾದದ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಇದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಧ್ಯೆ ಪತ್ರ ಸಮರಕ್ಕೆ ನಾಂದಿ ಹಾಡಿದೆ. ಜತೆಗೆ, ಬಿಜೆಪಿ ಪಕ್ಷದಡೆಗೆ ಜನರ ಗಮನವನ್ನು ಸೆಳೆಯುವಂತೆ ಮಾಡಿದೆ.

ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ 24 ಮಂದಿ ಬಿಜೆಪಿ ನಾಯಕರು ನಾಲ್ಕು ಪ್ರಮುಖ ಬೇಡಿಕೆಗಳನ್ನು ಮಂಡಿಸಿದ್ದರು. ಆದರೆ ಇದು ಕಿಡಿಗೇಡಿಗಳ ಕೃತ್ಯ ಎಂದು ಬಿಜೆಪಿ ನಾಯಕ ಗೋ ಮಧುಸೂಧನ್ ಪತ್ರಿಕಾ ಹೇಳಿಕಾ ನೀಡಿ ಗೊಂದಲಕ್ಕೆ ಅಂತ್ಯ ಹಾಡುವ ವಿಫಲ ಯತ್ನ ನಡೆಸಿದ್ದರು. ಇದಕ್ಕೆ ಶುಕ್ರವಾರ ಪ್ರತ್ಯುತ್ತರ ನೀಡಿರುವ ಹಿರಿಯ ಬಿಜೆಪಿ ನಾಯಕ ಭಾನುಪ್ರಕಾಶ್ ಇದು ಕಿಡಿಗೇಡಿಗಳ ಕೃತ್ಯ ಅಲ್ಲ. ಪತ್ರ ಬರೆದಿದ್ದು ನಿಜ ಎಂದು ಸ್ಪಷ್ಟಪಡಿಸಿದ್ದಾರೆ. ಅನುಮಾನಗಳಿಗೆ ಕಾರಣವಾದ ಬಿಜೆಪಿ ಒಳಗಿನ ಈ ನಡೆ, ಮುಂದಿನ ದಿನಗಳಲ್ಲಿ ಬಿಕ್ಕಟ್ಟಿನ ತೀವ್ರತೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.

ಪತ್ರದಲ್ಲೇನಿದೆ?

24 ಜನ ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ನಾಯಕರು ಈ ಪತ್ರವನ್ನು ಗುರುವಾರ ಯಡಿಯೂರಪ್ಪರಿಗೆ ಬರೆದಿದ್ದರು. ಇದರಲ್ಲಿ ಸ್ಪಷ್ಟವಾಗಿ ತಮ್ಮ ಬೇಡಿಕೆಗಳನ್ನು ಅತೃಪ್ತ ಶಾಸಕರು ಯಡಿಯೂರಪ್ಪನವರ ಗಮನಕ್ಕೂ ತಂದಿದ್ದರು.

ಅತೃಪ್ತ ಬಿಜೆಪಿ ನಾಯಕರು ಬರೆದ ಪತ್ರ ಹೀಗಿದೆ,

Bhanu Prakash Letter to Yadyurappa

Bhanu Prakash Letter to Yadyurappa 2

ಪತ್ರ ಕಿಡಿಗೇಡಿಗಳ ಕೃತ್ಯ- ಗೋ ಮಧುಸೂದನ್:

ಅತೃಪ್ತ ಬಿಜೆಪಿ ನಾಯಕರು ಬರೆದ ಪತ್ರ ಬಹಿರಂಗವಾಗುತ್ತಿದ್ದಂತೆ ರಾಜ್ಯ ಬಿಜೆಪಿ ವಕ್ತಾರ ಗೋ ಮಧುಸೂದನ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಇದರಲ್ಲಿ 24 ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರವು ಕಿಡಿಗೇಡಿಗಳ ಕೃತ್ಯ ಎಂದು ಅವರು ಹೇಳಿದ್ದರು.

ಮಧುಸೂದನ್ ಪತ್ರಿಕಾ ಪ್ರಕಟಣೆ ಹೀಗಿದೆ,

Go madhusudhan letter

ಭಾನು ಪ್ರಕಾಶ್ ವಾಗ್ದಾಳಿ:

ಪತ್ರದ ಕುರಿತು ಸ್ಪಷ್ಟನೆ ನೀಡಲು ಶುಕ್ರವಾರ ಶಾಸಕರ ಭವನದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ಬಿಜೆಪಿ ಮುಖಂಡ ಭಾನುಪ್ರಕಾಶ್ ಸುದ್ದಿಗೋಷ್ಟಿ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು, “ನಾವು ಮಾಧ್ಯಮಗಳಿಗೆ ಕೊಟ್ಟಿದ್ದ ಪತ್ರವನ್ನು ಬಿಜೆಪಿ ವಕ್ತಾರರು ಕಿಡಗೇಡಿಗಳ ಕೃತ್ಯ ಅಂತ ಹೇಳಿದ್ದಾರೆ. ನಾವು ಮಾಧ್ಯಮಗಳಿಗೆ ಪತ್ರ ಕೊಟ್ಟಿಲ್ಲ, ನಿನ್ನೆ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ರಾಜ್ಯ ಬಿಜೆಪಿ ಕಚೇರಿಗೆ ಪತ್ರ ತಲುಪಿಸಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯ ಅಲ್ಲ. ನಾವು ಯಡಿಯೂರಪ್ಪರಿಗೆ ಪತ್ರ ಬರೆದಿದ್ದು ನಿಜ; ಸಮಯ ಕೇಳಿದ್ದೂ ಸತ್ಯ. ಹಿಂದೆ ಮೈಸೂರಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ರವಿ ಸೋಲಿಗೆ ಕಾರಣರಾದವರು ಈಗ ವಕ್ತಾರರಾಗಿದ್ದಾರೆ. ಅವರ ಮೇಲೆಯೂ ಯಡಿಯೂರಪ್ಪರಿಗೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದೇವೆ,” ಎಂದು ಹೇಳಿದರು.

“ರಾಜ್ಯಾಧ್ಯಕ್ಷರಿಗೆ ನಾವು ಪತ್ರ ಬರೆದಿರುವಾಗ ನಮ್ಮನ್ನು ಕರೆದು ಮಾತನಾಡುವುದನ್ನು ಬಿಟ್ಟು ಹೀಗೆ ಮಾಡಿದ್ದು ಸರಿಯಲ್ಲ. ರಾಜಕೀಯ ಅಪ್ರಬುದ್ಧತೆ ಇದು. ಜಾತಿ ಸಮಾವೇಶಗಳಿಗೆ ಎಲ್ಲಾ ರಾಜಕಾರಿಣಿಗಳೂ ಹೋಗುವಂತೆ ಈಶ್ವರಪ್ಪನವರೂ ಬ್ರಿಗೇಡ್ ಸಮಾವೇಶಕ್ಕೆ ಹೋಗುತ್ತಾರೆ. ಇದರಲ್ಲಿ ತಪ್ಪೇನು?,” ಎಂದು ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಭಾನುಪ್ರಕಾಶ್ ಪ್ರಶ್ನಿಸಿದರು.

“ನಾನು ಈಗ ಮಾಧ್ಯಮದ ಎದುರು ಬಂದಿದ್ದರಿಂದ ವೆಂಕಟೇಶಮೂರ್ತಿ ಅವರಿಗೆ ಮಾಡಿದ್ದನ್ನೇ (ಉಚ್ಛಾಟನೆ) ನನಗೂ ಮಾಡಬಹುದು. ಆದರೆ ನಾನು ಬಿಜೆಪಿ ಕಾರ್ಯಕರ್ತನಾಗಿಯೇ ಇರುತ್ತೇನೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಯಕರ್ತ ಮಾಜಿ ಆಗಲು ಸಾಧ್ಯವಿಲ್ಲ ಎಂದಿದ್ದಾರೆ. ಹಾಗಾಗಿ ನಾನು ಬಿಜೆಪಿಯಲ್ಲಿಯೇ ಮುಂದುವರೆಯುತ್ತೇನೆ. ಅದನ್ನು ನನ್ನಿಂದ ಕಸಿದುಕೊಳ್ಳಲು ಯಾರಿಗೂ ಅಧಿಕಾರವಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಯಡಿಯೂರಪ್ಪನವರು ಇವತ್ತು (ಶುಕ್ರವಾರ) ಬೆಳಿಗ್ಗೆ ಫೋನ್ ಮಾಡಿದ್ದರು. ಏನು ಪತ್ರ ಬರೆದಿದ್ದೀರಿ ಅಂತ ಕೇಳಿದರು. ನಾನು ಪತ್ರದಲ್ಲಿನ ಅಂಶಗಳನ್ನು ತಿಳಿಸಿದ್ದೇನೆ. ಕಳೆದ ನಾಲ್ಕು ದಶಕಗಳಲ್ಲಿ ನಾನು ಪಕ್ಷದ ವಿಚಾರಗಳನ್ನು ಬಹಿರಂಗವಾಗಿ ಚರ್ಚೆ ಮಾಡುತ್ತಿರುವುದು ಇದೇ ಮೊದಲು; ಇದು ನನ್ನ ದುರ್ದೈವ ಆಗಿರಬಹುದು,” ಎಂದು ಭಾನು ಪ್ರಕಾಶ್ ವಿಷಾದ ವ್ಯಕ್ತಪಡಿಸಿದರು. ಪತ್ರದಲ್ಲಿ 16 ಮುಖಂಡರು ಸಹಿ ಮಾಡಿದ್ದಾರೆ; ಪತ್ರವನ್ನು ನಾನೇ, ಎಲ್ಲರ ಒಪ್ಪಿಗೆ ಪಡೆದೇ ಬರೆದಿದ್ದು, ಉಳಿದವರು ಊರಲ್ಲಿರದ ಕಾರಣ ಸಹಿ ಮಾಡಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಕೆ.ಎಸ್. ಈಶ್ವರಪ್ಪ ಹೇಳುವುದೇನು?

ಕುರುಬ ಸಮುದಾಯದ ಜತೆಗೆ ಹಿಂದುಳಿದ ವರ್ಷ ಮತ್ತು ದಲಿತರನ್ನು ಒಟ್ಟು ಹಾಕಲು ಸಂಗೊಳ್ಳಿ ‘ರಾಯಣ್ಣ ಬ್ರಿಗೇಡ್’ ಕಟ್ಟುವಲ್ಲಿ ನಿರತರಾಗಿರುವ ಕೆ.ಎಸ್ ಈಶ್ವರಪ್ಪ ಗುರುವಾರ ತಮ್ಮ ನಡೆಗಳನ್ನು ಸ್ಪಷ್ಟಪಡಿಸಿದ್ದರು. “ನಾನು ಕತ್ತು ಹಿಸುಕಿದರೂ ಬಿಜೆಪಿ ಬಿಡುವುದಿಲ್ಲ. ಈ ತಿಂಗಳ 26ರಂದು ಕೂಡಲ ಸಂಗಮದಲ್ಲಿ ನಡೆಯಲಿರುವ ರಾಯಣ್ಣ ಬ್ರಿಗೇಡ್ ಸಮಾವೇಶವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ,” ಎಂದು ಅವರು ಗುಡುಗಿದ್ದರು.

ಅಲ್ಲದೆ, “ಯಡಿಯೂರಪ್ಪ, ಅನಂತ್ ಕುಮಾರ್, ಪ್ರಹ್ಲಾದ್ ಜೋಶಿ ಅವರೆಲ್ಲಾ ಅವರವರ ಜಾತಿ ಸಭೆಗಳಲ್ಲಿ ಭಾಗವಹಿಸುತ್ತಾರೆ. ಆದರೆ ನಾನು ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಭಾಗವಹಿಸಿದರೆ ಆಕ್ಷೇಪ ಎತ್ತುವುದು ಏಕೆ?” ಎಂದೂ ಖಾರವಾಗಿಯೇ ಪ್ರಶ್ನಿಸಿದ್ದರು.

ಇನ್ನು ಈ ಕುರಿತು ಮಾತನಾಡಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಗೌರವಾಧ್ಯಕ್ಷ ಎಸ್.ಪುಟ್ಟಸ್ವಾಮಿ, “ಬ್ರಿಗೇಡ್ ಬೆಂಬಲ ಬಿಜೆಪಿಗೇ ಹೊರತು ಬೇರಾವ ಪಕ್ಷಕ್ಕೂ ಇಲ್ಲ. ಇದರಿಂದ ಬಿಜೆಪಿ ಮತ್ತು ಯಡಿಯೂರಪ್ಪನವರಿಗೆ ಅನೂಕೂಲ ಆಗುತ್ತದೆ,” ಎಂದು ಹೇಳಿದ್ದರು. ಅಲ್ಲದೆ, “ಈ ಹಿಂದೆ ಯಡಿಯೂರಪ್ಪನವರನ್ನು ಕೂಡಲ ಸಂಗಮ ಸಮಾವೇಶಕ್ಕೆ ಆಹ್ವಾನಿಸಿದ್ದೆವು. ಆದರೆ ಅವರು ಸಮಾವೇಶಕ್ಕೆ ಬರುವುದಿಲ್ಲ. ಜತೆಗೆ ಬ್ರಿಗೇಡ್ ಗೆ ಅಡ್ಡಿ ಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಮಧ್ಯದಲ್ಲಿ ಕೆಲವರು ಗೊಂದಲ ಸೃಷ್ಟಿಸಿ ಈ ಪರಿಸ್ಥಿತಿಗೆ ಕಾರಣರಾಗಿದ್ದಾರೆ,” ಎಂದು ಹೇಳಿದ್ದರು.

ಒಟ್ಟಾರೆ ‘ರಾಯಣ್ಣ ಬ್ರಿಗೇಡ್’ ಕರ್ನಾಟಕದ ಕೇಸರಿ ಪಕ್ಷದಲ್ಲಿ ಗೊಂದಲ ನಿರ್ಮಿಸಿರುವುದಂತೂ ಸತ್ಯ. ಆದರೆ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ತಮ್ಮ ಬೀದಿ ರಂಪದ ಮೂಲಕವೇ ಪ್ರಚಾರ ಗಿಟ್ಟಿಸುತ್ತಿರುವ ಹೊತ್ತಲ್ಲೇ ರಾಜ್ಯದಲ್ಲಿ ಇಂಥಹದ್ದೊಂದು ಬೆಳವಣಿಗೆಗಳು ನಡೆಯುತ್ತಿವೆ. ಬ್ರಿಗೇಡ್ ಹಿಂದೆ ಈಶ್ವರಪ್ಪನವರಿಗೆ ಬೇರಾನಾದರೂ ಉದ್ದೇಶಗಳಿವೆಯಾ? ಇದು ನಿಜಕ್ಕೂ ಬಿಜೆಪಿ ಲಾಭ ತರಲಿದೆಯಾ? ಇಲ್ಲವೇ ಬಿಕ್ಕಟ್ಟು ತಾರಕ್ಕೇರಿ ಮುಳುವಾಗಲಿದೆಯಾ? ಈ ಎಲ್ಲಾ ಪ್ರಶ್ನೆಗಳಿಗೆ ಭವಿಷ್ಯದ ದಿನಗಳು ಉತ್ತರ ನೀಡಲಿವೆ. ಅಲ್ಲಿವರೆಗೆ ಕಾಯುವುದೊಂದೇ ಸದ್ಯ ಉಳಿದಿರುವ ಏಕೈಕ ಮಾರ್ಗ.

ಚಿತ್ರ ಕೃಪೆ: ಬೆಂಗಳೂರು ಮಿರರ್

Leave a comment

Top