An unconventional News Portal.

‘ಸಮಯ’ಕ್ಕೊಂದು ಒಳ್ಳೆ ಸಮಯದ ನಿರೀಕ್ಷೆಯಲ್ಲಿ…

‘ಸಮಯ’ಕ್ಕೊಂದು ಒಳ್ಳೆ ಸಮಯದ ನಿರೀಕ್ಷೆಯಲ್ಲಿ…

ಎಲ್ಲವೂ ಅಂದುಕೊಂಡಂತೆ, ಕೊಟ್ಟ ಮಾತಿನಂತೆ ನಡೆದಿದ್ದರೆ ಶನಿವಾರ ಸಂಜೆ ವೇಳೆಗೆ ‘ಸಮಯ’ ಸುದ್ದಿ ವಾಹಿನಿಯ ಪತ್ರಕರ್ತರು, ಸಿಬ್ಬಂದಿಗಳಿಗೆ ಬಾಕಿ ಇರುವ ಸಂಬಳವಾಗಬೇಕಿತ್ತು. ಅವರಲ್ಲಿ ಬಹುತೇಕರು ಪಡುತ್ತಿರುವ ಆರ್ಥಿಕ ಸಂಕಷ್ಟಗಳು ತೀರಿ ಹೋಗಬೇಕಿತ್ತು.

ಆದರೆ, ಹಾಗೆ ಆಗಲಿಲ್ಲ ಎಂಬ ಕಾರಣಕ್ಕಾಗಿಯೇ ‘ಸಮಾಚಾರ’ ಈ ವರದಿಯನ್ನು ಪ್ರಕಟಿಸುತ್ತಿದೆ. ಕಳೆದ 15 ದಿನಗಳಿಂದ ‘ಸಮಯ’ದೊಳಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ದಿನದಿಂದ ದಿನಕ್ಕೆ ವಾಹಿನಿಯ ಆರೋಗ್ಯ ಹದಗೆಡುತ್ತಿದೆ. ಅದರ ಮಾಲೀಕ ವಿಜಯ್ ಟಾಟಾ ಅವರ ಆರ್ಥಿಕ ಬಿಕ್ಕಟ್ಟು, ಉದ್ಯೋಗಿಗಳ ಆರ್ಥಿಕ ಮುಗ್ಗಟ್ಟಾಗಿ ಪರಿವರ್ತನೆಗೊಂಡಿದೆ.

ವಾರದ ಹಿಂದೆ ಕಸ್ತೂರ್ ಬಾ ರಸ್ತೆಯಲ್ಲಿರುವ ವಾಹಿನಿಯ ಕಚೇರಿಗೆ ಬಂದಿದ್ದ ಸದ್ಯದ ಮಾಲೀಕ ವಿಜಯ್ ಟಾಟಾ, “ಶನಿವಾರದೊಳಗೆ ಎಲ್ಲರಿಗೂ ಬಾಕಿ ಉಳಿಸಿಕೊಂಡಿರುವ ಸಂಬಳವನ್ನು ಪಾವತಿಸುವುದಾಗಿ,” ಭರವಸೆ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸದ್ಯ ನಮ್ಮ ಕೆಲವು ಯೋಜನೆಗಳು (ರಿಯಲ್ ಎಸ್ಟೇಟ್) ಆರ್ಥಿಕ ಮುಗ್ಗಟ್ಟಿನಲ್ಲಿವೆ. ಸದ್ಯದಲ್ಲಿಯೇ ಎಲ್ಲವೂ ಸರಿಯಾಗಬಹುದು. ನಾನು ಚಾನಲ್ ಮಾರುತ್ತೇನೆ, ಇನ್ನೊಬ್ಬರನ್ನು ಪಾಲುದಾರರನ್ನಾಗಿ ಕರೆದುಕೊಂಡು ಬರುತ್ತೇನೆ ಎಂದು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ,” ಎಂದು ಭರವಸೆಯನ್ನೂ ತುಂಬಿ ಹೋಗಿದ್ದರು. ಒಂದಷ್ಟು ಜನರ ಅಕೌಂಟಿಗೆ 2-4 ಸಾವಿರ ರೂಪಾಯಿಗಳ ವ್ಯವಸ್ಥೆ ಮಾಡಿದ್ದರು.

ಸಮಸ್ಯೆ ಏನು?: 

ಸದ್ಯ ವಾಹಿನಿ ಕಾರ್ಯನಿರ್ವಹಿಸುತ್ತಿದೆಯಾದರೂ, ಕೇಬಲ್ ಆಪರೇಟರ್ಸ್ಗಳಿಗೆ ನೀಡುವ ಹಣವನ್ನು ಬಾಕಿ ಉಳಿಸಿಕೊಂಡಿದೆ. ಹೀಗಾಗಿ, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ‘ಸಮಯ’ ಪ್ರಸಾರವಾಗುತ್ತಿಲ್ಲ. ವಾಹಿನಿಯ ದೈನಂದಿನ ಚಟುವಟಿಕೆಗಳ ಮೇಲೂ ಇದು ಪರಿಣಾಮ ಬೀರಿದೆ. “ಗಂಭೀರ ಬೆಳವಣಿಗೆಗಳು ನಡೆದರೆ ಮಾತ್ರವೇ ಸುದ್ದಿಯನ್ನು ಪ್ರಸಾರ ಮಾಡಲಾಗುತ್ತಿದೆ. ಬಿಟ್ಟರೆ, ವಿಶೇಷ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ. ಜ್ಯೋತಿಷ್ಯ ಹಾಗೂ ಪೇಯ್ಡ್ ಡಾಕ್ಟರ್ಸ್ ಪ್ರೋಗ್ರಾಂಗಳು ಪ್ರಸಾರವಾಗುತ್ತಿವೆ,” ಎಂದು ‘ಸಮಯ’ ಸಿಬ್ಬಂದಿಯೊಬ್ಬರು ಮಾಹಿತಿ ನೀಡುತ್ತಾರೆ.

ಸದ್ಯ ‘ಸಮಯ’ ವಾಹಿನಿಯನ್ನು ನಡೆಸುತ್ತಿರುವ ವಿಜಯ್ ಟಾಟಾ ಮೂಲತಃ ರಿಯಲ್ ಎಸ್ಟೇಟ್ ಉದ್ಯಮಿ. ಅವರ ‘ಇಂಡಿಯಾ ಎಸ್ಟೇಟ್ಸ್’ ಎಂಬ ಕಂಪನಿ ರಾಜ್ಯವೂ ಸೇರಿದಂತೆ ಹೊರ ರಾಜ್ಯಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದೆ. ಇತ್ತೀಚೆಗೆ, ಇದು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವುದರಿಂದ ಅದು ‘ಸಮಯ’ದ ಮೇಲೂ ಪರಿಣಾಮಗಳನ್ನು ಬೀರುತ್ತಿದೆ ಎಂಬುದು ಮಾರುಕಟ್ಟೆಯಲ್ಲಿರುವ ವಿಶ್ಲೇಷಣೆಗಳು.

“ವಿಜಯ್ ಟಾಟಾ ಅವರ ಎದುರಾಳಿಗಳು ಕನ್ನಡದ ಇತರೆ ವಾಹಿನಿಗಳ ಮೇಲೂ ಹಣ ಹಾಕಿದ್ದಾರೆ. ಅವರ ಉದ್ಯಮ ಮತ್ಸರಗಳಿಗೆ, ಪೈಪೋಟಿಗೆ ಚಾನಲ್ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಮತ್ತೊಂದು ವಾಹಿನಯ ಮೂಲಕ ವಿಜಯ್ ಟಾಟಾ ಅವರ ಉದ್ಯಮಕ್ಕೆ ಹೊಡೆತ ಕೊಡುವ ಕೆಲಸ ಆಗುತ್ತಿದೆ,” ಎಂಬುದು ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಒಬ್ಬರು ಹೊರಗೆಡವಿದ ಮಾಹಿತಿ. ಜತೆಗೆ, ಟಾಟಾ ಮೇಲಿರುವ ಆರೋಪಗಳ ಬಗ್ಗೆಯೂ ಅವರು ಒಂದಷ್ಟು ಒಳನೋಟಗಳನ್ನು ನೀಡುತ್ತಾರೆ.

ಹುಟ್ಟು, ಬದಲಾವಣೆ:

“ವಾಹಿನಿಯ ಹುಟ್ಟು ಮತ್ತು ಆರಂಭದ ದಿನಗಳಲ್ಲಿ ಕನ್ನಡದ ಪಾಲಿಗೆ, ಜನರ ಪಾಲಿಗೆ ನಿಜವಾದ ಧ್ವನಿಯಾಗುವ ಎಲ್ಲಾ ಸಾಧ್ಯತೆಗಳನ್ನು ಹೊಂದಿತ್ತು,” ಎಂಬುದನ್ನು ‘ಸಮಯ’ವನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಸತೀಶ್ ಶುಗರ್ಸ್ ಮಾಲೀಕ, ಸತೀಶ್ ಜಾರಕಿಹೋಳಿ ‘ಸಮಯ’ ವಾಹಿನಿಯನ್ನು 2010ರ ಮಳೆಗಾಲದಲ್ಲಿ ಆರಂಭಿಸಿದಾಗ, ಉತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಸಾಮಾನ್ಯ ಜನರ ದನಿಯಾಗುವಂತಹ ವರದಿಗಳು ಪ್ರಸಾರವಾಗುತ್ತಿದ್ದವು. ನಂತರದ ದಿನಗಳಲ್ಲಿ ನಡೆದ ಆಂತರಿಕ ಬೆಳವಣಿಗೆಗಳಿಂದಾಗಿ, ಜಾರಕಿಹೋಳಿ ‘ಸಮಯ’ವನ್ನು ಬಿಜೆಪಿಯ ಮುರಗೇಶ್ ನಿರಾಣಿಯವರ ಸುಪರ್ದಿಗೆ ನೀಡಿ ಕೈ ತೊಳೆದುಕೊಂಡರು.

ಹೊಸ ಆಡಳಿತ ಮಂಡಳಿ ಬಂತಾದರೂ ವಾಹಿನಿಯ ದೆಸೆ ಮಾತ್ರ ಬದಲಾಗಲಿಲ್ಲ. ಒಂದಷ್ಟು ಜನ ಪಿಎಫ್ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದರು. ಆ ಸಮಯದಲ್ಲೂ ಇಂತಹದ್ದೇ ಬಿಕ್ಕಟ್ಟನ್ನು ಎದುರಿಸುತ್ತಿದ್ದ ‘ಸಮಯ’ಕ್ಕೆ ಕಾಲಿಟ್ಟವರು ವಿಜಯ್ ಟಾಟಾ.

ಒಳ್ಳೆಯ ಕಾಲ ಬರಲಿ: samaya-tv-2

ಆರಂಭದಲ್ಲಿ ವಿಜಯ್ ಟಾಟಾ ಅದ್ದೂರಿಯಾಗಿಯೇ ಖರ್ಚು ಮಾಡಿದರು. ಜನರಿಗಾಗಿ ‘ಸಹಾಯ ವಾಣಿ’ಯನ್ನು ಆರಂಭಿಸಿದರು. ‘ಬಿಗ್ 3’ಯಂತಹ ಸಮಸ್ಯೆಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ನೀಡಿದರು. ಆದರೆ, ಕ್ರಮೇಣ ‘ಸಮಯ’ ಮತ್ತದೇ ಹಳೆಯ ಬಿಕ್ಕಟ್ಟುಗಳನ್ನು ಎದುರಿಸುವಂತಾಯಿತು.

“ಇದು ತಾತ್ಕಾಲಿಕ ಬಿಕ್ಕಟ್ಟು ಅಷ್ಟೆ. ಹಣ ಹಾಕಿದ ಮನುಷ್ಯ ಓಡಿ ಹೋಗಿಲ್ಲ. ಸಮಸ್ಯೆ ಇದೆ, ಸ್ವಲ್ಪ ದಿನ ತಡೆದುಕೊಳ್ಳಿ ಎಂದಿದ್ದಾರೆ. ನಾವು ಕಾಯುತ್ತಿದ್ದೇವೆ. ಎಲ್ಲವೂ ಬದಲಾಗುತ್ತದೆ ನೋಡುತ್ತಿರಿ,” ಎನ್ನುತ್ತಾರೆ ‘ಸಮಯ’ದ ಹಿರಿಯ ಪತ್ರಕರ್ತರೊಬ್ಬರು.

ಅವರ ಮಾತು ನಿಜವಾಗಲಿ, ‘ಸಮಯ’ದ ಬಿಕ್ಕಟ್ಟು ಬಗೆಹರಿಯಲಿ, ‘ಸಮಯ’ಕ್ಕೆ ಒಳ್ಳೆಯ ಕಾಲ ಬರಲಿ. ಜತೆಗೆ, ಕನ್ನಡ ಟಿವಿ ಮಾಧ್ಯಮದಲ್ಲಿ ಇಂತಹ ಬಿಕ್ಕಟ್ಟುಗಳು ಯಾಕೆ ಸೃಷ್ಟಿಯಾಗುತ್ತಿವೆ ಎಂಬ ಕುರಿತೂ ಚರ್ಚೆ ನಡೆಯಲಿದೆ ಎಂಬುದು ನಮ್ಮ ಹಾರೈಕೆ.

Leave a comment

Top