An unconventional News Portal.

ದೇವದಾಸಿಯರ ನಾಡಿನಲ್ಲಿ- ಭಾಗ 3: ಹೊರಳಿದ ಹಾದಿಯಲ್ಲಿ ಹೇಮಾ ಎಂಬ ರೂಪಕ…!

ದೇವದಾಸಿಯರ ನಾಡಿನಲ್ಲಿ- ಭಾಗ 3: ಹೊರಳಿದ ಹಾದಿಯಲ್ಲಿ ಹೇಮಾ ಎಂಬ ರೂಪಕ…!

ಕಾಲ ಬದಲಾದಂತೆ ದೇವದಾಸಿ ಪದ್ಧತಿಯಲ್ಲೂ ಮಾರ್ಪಾಡುಗಳಾದವು. ದಾಸ್ಯಕ್ಕೊಳಪಡುತ್ತಿದ್ದ ಹೆಣ್ಣು ಮಕ್ಕಳ ಬಾಳಲ್ಲಿ ಹೊಸ ಅಲೆ ಎದ್ದಿತು. ಜೀವನ ಕ್ರಮ ಬದಲಾದರೂ ನಂಬಿಕೆಗಳು ಮಾತ್ರ ಅಷ್ಟು ಸುಲಭಕ್ಕೆ ಕಳಚಿಕೊಳ್ಳಲೇ ಇಲ್ಲ. ಹೀಗೆ ಕಾಲದ ಅಲೆಯಲ್ಲಿ ತೇಲುತ್ತ ಮುಳುಗುತ್ತ ಕೊನೆಗೆ ‘ಲೈಂಗಿಕ ಕಾರ್ಯಕರ್ತೆ’ಯರು ಎಂಬ ಪಟ್ಟ ಕಟ್ಟಿಕೊಂಡ ಬಗೆಯೇ ವಿಚಿತ್ರವಾದುದು . ಇದು ನಾಗರಿಕ ಸಮಾಜ, ಮತ್ತದರ ಕಾನೂನು ದೇವದಾಸಿ ಸಮುದಾಯಕ್ಕೆ ನೀಡಿದ ಕೊಡುಗೆ…

ಭಾಗ-3: 

ಮುಧೋಳದಲ್ಲಿ ಸಿಕ್ಕ ಹೇಮಾ ಕ್ಯಾಮೆರಾ ಮುಂದೆ.

ಮುಧೋಳದಲ್ಲಿ ಸಿಕ್ಕ ಹೇಮಾ ಕ್ಯಾಮೆರಾ ಮುಂದೆ.

ದೇವದಾಸಿ ಹೆಣ್ಣು ಮಕ್ಕಳೇಕೆ ವೇಶ್ಯಾವಾಟಿಕೆಗೆ ಇಳಿದರು?. ನೇರ ಪ್ರಶ್ನೆಗೆ ಆಕೆ ಸಣ್ಣಗೆ ಕಂಪಿಸಿದಳು. ಮುಧೋಳದ ಗಲ್ಲಿಯೊಂದರ ಕತ್ತಲ ಕೋಣೆಯ ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತು ಇಡೀ ಸಮಾಜಕ್ಕೆ ಸವಾಲೆಸುವಂತೆ ಮಾತನಾಡುತ್ತಿದ್ದ ಹೇಮಾ (ಅವರೇ ಬದಲಿಸಿಕೊಂಡ ಹೆಸರು) ಮೌನಕ್ಕೆ ಶರಣಾದರು. ಬದುಕನ್ನು ದೇನಿಸುವಂತೆ ತಲೆ ತಗ್ಗಿಸಿದರು; ಒಂದು ಕ್ಷಣ ಅಷ್ಟೆ. ಆಕೆ ತನ್ನ ಎರಡು ದಶಕಗಳ ವೃತ್ತಿಯ ಅನುಭವಗಳನ್ನೆಲ್ಲಾ ಕೂಡಿಹಾಕಿಕೊಂಡು ದೇವದಾಸಿ ಮಹಿಳೆಯರ ಇಂದಿನ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದರು. ಆಕೆ ಮೇಧಾವಿಯಲ್ಲ, ಹಾಗಂತ ಆಕೆ ಹೇಳುತ್ತಿದ್ದ ಸತ್ಯಗಳು ಯಾವ ಪಂಡಿತರಿಗೂ ಕಡಿಮೆ ಇರಲಿಲ್ಲ. ಗೊತ್ತಿದ್ದೊ ಗೊತ್ತಿಲ್ಲದೇನೊ ವರ್ತಮಾನದ ಇತಿಹಾಸ ದಾಖಲಿಸುತ್ತಿದ್ದ ಆಕೆ ಮಾತುಗಳು ಸಮಾಜವೆಂಬ ನಾಣ್ಯದ ಇನ್ನೊಂದು ಮುಖ ಅನಾವರಣ ಮಾಡಿದಂತಿತ್ತು.

“ನೋಡಿ ಸಾಹೇಬ್ರೆ(ವ್ಯಂಗ್ಯ) ಇಲ್ಲಿ ಜಾತಿ ಬರಾಂಗಿಲ್ಲ. ಪುಣೆಲೊ, ಸಾಂಗ್ಲಿಲೊ ದಂಧಾ ಮಾಡೋರು ಎಲ್ಲಾ ಸಣ್ಣಜಾತಿ ಮುತ್ತೈದೆರೇನೂ ಅಲ್ರಿ. ಆ ಕಸುಬಿನಾಗ ಎಲ್ರೂ ಇದಾರ. ಪ್ರೀತಿ ಪ್ರೇಮ ಅಂತ ಗುಂಡರ ಗೋವಿಗಳ ಸಂಗಡ ಸುತ್ತಿ ಕೊನೆಗೆ ಅವರಿಂದ ಮಾರ್ಕೊಂಡು ದಂಧೆ ಮನಿ ಸೇರ್ದೊರು ಬಾಳಾ ಮಂದಿ ಅದಾರ. ಅವರಿಗೆ ಜಾತಿ ಇರಾಂಗಿಲ್ಲ. ಹೆಣ್ಣು ಅನ್ನೋದೊಂದಾ ಜಾತಿ ನೋಡ್ರಿ. ನಮ್ಮಂಗೆ ಪ್ಯಾಟೇಲಿ ದಂಧೆ ಮಾಡೋರು ಮಾರಾಷ್ಟ್ರಕ್ಕ ಹೋಗ್ಬೇಕು ಅಂತಿಲ್ರಿ. ಯಾಕೆಂದ್ರೆ ಗಿರಾಕಿಗಳಿಗೆ ನಮ್ಮ ಮನಿ ಗೊತ್ತಿರತ್ತ. ನಾವು ಇದ್ದಲ್ಗೇ ರಗಡ್ ಮಂದಿ ಹುಡ್ಕೊಂಡು ಬರ್ತಾರ. ಆದ್ರೆ ಮಧೋಳದಿಂದ ಸ್ವಲ್ಪೆ ದೂರ ಹೊದ್ರ ಅಲ್ಲಿ ದಂಧೆ ಪಸಂದ್ ಇಲ್ಲ. ಸಂಸಾರ ನಡೆಯೋದೆ ಕಷ್ಟ ಆಗ್ತದ. ಹಂಗಾಗಿ ಚಂದ ಇರೊ ಹೆಣ್ಮಕ್ಳು ಬಣ್ಣ ಮಾಸೋಗಂಟ ಹೊಗ್ತಾರ. ಮೊದ್ಲು ಒಂದು ಲಕ್ಷ ಹತ್ರ ರೊಕ್ಕ ಇಸ್ಕೋತಾರಾ. ಅದು ತೀರೊವರೆಗೆ ಅಲ್ಲಿ ಇಳ್ಕೋತಾರು. ಆಮೇಲೆ ಊರಿಗ್ ಬಂದು ಇರೊರು ಇರ್ತಾರೆ, ಹೋಗೊರು ಮತ್ತೆ ಹೋಗ್ತಾರ್ರಿ.” ಇದು ಇವತ್ತಿನ ಬಹುತೇಕ ದೇವದಾಸಿ ಸಮುದಾಯ ವಾಸಿಸುವ ಹಳ್ಳಿಗಳಲ್ಲಿನ ಚಿತ್ರಣ. ಮೇಲ್ನೋಟಕ್ಕೆ ಎಲ್ಲಿಯೂ ದೇವದಾಸಿ ಹೆಣ್ಣುಮಕ್ಕಳು ವೇಶ್ಯಾವಾಟಿಕೆ ನಡೆಸುತ್ತಿಲ್ಲ ಎಂದು ಬಿಂಬಿತವಾಗುತ್ತಿದೆ. ಹಾಗಂತ ಪ್ರತಿ ದೇವದಾಸಿ ಮಹಿಳೆ ವೇಶ್ಯಾವಾಟಿಕೆ ನಡೆಸುತ್ತಾಳೆ ಅಂತಲ್ಲ. ಆದರೆ ನಿಷೇಧ ಕಾನೂನು ಜಾರಿಯಾದ ಮೇಲೆ ಇತ್ತ ಕಾನೂನಿನ ಭಯಕ್ಕೆ, ಅತ್ತ ಸಮಾಜದ ಹಸಿವಿಗೆ ಚಿಕ್ಕ ವಯಸ್ಸಿನ, ಸ್ವಲ್ಪ ರೂಪವತಿಯರೂ ಆಗಿರುವ ದೇವದಾಸಿ ಸಮುದಾಯದ ಹೆಣ್ಣು ಮಕ್ಕಳು ತಮ್ಮ ಊರು ಬಿಟ್ಟು ‘ವಲಸೆ’ ಹೋಗಲು ಶುರು ಮಾಡಿದ್ದಾರೆ.

ಹತ್ತಿರದ ಹಳ್ಳಿಯಲ್ಲಿ ಸಿಕ್ಕ ಪ್ರಯಾದ ಹುಡುಗಿಯೊಬ್ಬಳು ಬಹುಶಃ ಪುಣೆಯಿಂದ ಹಿಂದಿರುಗಿ ಬಂದಿದ್ದವಳು. ಸುಂದರವಾಗಿ ಹಿಂದಿ ಮತ್ತು ಮರಾಠಿ ಮಾತನಾಡುತ್ತಿದ್ದಳು. ನಿಮ್ಮ ಬದುಕು ಯಾಕೆ ಹೀಗಾಯಿತು? ಅಂತ ಕೇಳಿದರೆ “ಇಲ್ಲಿ ಇದ್ರೆ ನಮ್ನೇನು ಮದ್ವಿ ಮಾಡ್ಕೊತಾರೇನ್ರಿ,” ಅಂತ ಕೇಳಿ ನಕ್ಕಳು. ಆಕೆಯ ಹಿಂದೆಯೂ ಒಂದು ಭಗ್ನ ಪ್ರೇಮದ ಕತೆ ಇತ್ತು. ಇವತ್ತು ಅವಳ ಬದುಕಿಗೆ ಆಕೆ ನೀಡುವ ವಿವರಣೆ ಸಮರ್ಥನೆಯ ಧಾಟಿಯಲ್ಲಿಯೇ ಇತ್ತು. ಇದೇ ರೀತಿಯ ಭಾವನೆಗಳು ಮುಧೋಳದ ಬಸ್ ನಿಲ್ದಾಣದ ಪಕ್ಕದ ಗಲ್ಲಿಯಲ್ಲಿ ಸಿಕ್ಕ ಹೇಮಾ ಮಾತುಗಳಲ್ಲೂ ವ್ಯಕ್ತವಾಗುತ್ತಿದ್ದವು.

ಹೇಮಾ ಮಾತಿಗೆ ಕುಳಿತದ್ದರ ಹಿಂದೆಯೂ ಒಂದು ಕತೆಯಿದೆ. ಸಾಮಾನ್ಯವಾಗಿ ಈ ತರಹದ ಮಹಿಳೆಯರನ್ನು ಹುಡುಕಿಕೊಂಡು ಸಾಕಷ್ಟು ಜನ ಬರುತ್ತಾರೆ. ಅದರಲ್ಲಿ ಗಿರಾಕಿಗಳು ಎಷ್ಟು ಜನರಿರುತ್ತಾರೊ, ಅಷ್ಟೆ ಸಂಖ್ಯೆಯಲ್ಲಿ ದೇವದಾಸಿ ಕುರಿತು ಸಂಶೋಧನೆ ನಡೆಸುವವರೂ ಇರುತ್ತಾರೆ. ವಿದೇಶಿ ವಾಹಿನಿಗಳು, ಡಾಕ್ಯುಮೆಂಟರಿ ಸಂಸ್ಥೆಗಳು ಬಂದು ಇವರ ಬದುಕನ್ನು ಚಿತ್ರಿಸಿಕೊಂಡು ಹೋಗುತ್ತಿರುತ್ತಾರೆ. ಅದರಿಂದಲೂ ಸಾಕಷ್ಟು ಆದಾಯ ಬರುತ್ತದೆ. ಯಾವ ‘ಹಿಡನ್ ಕ್ಯಾಮರಾ’ದ ಅವಶ್ಯಕತೆಯೂ ಇಲ್ಲದಂತೆ ಎದುರಿಗೆ ಕುಳಿತು ಮುಕ್ತವಾಗಿ ಮಾತನಾಡುತ್ತಾರೆ.

ಹೇಮಾ ಮಾತನಾಡಲು ಶುರುಮಾಡುತ್ತಿದ್ದಂತೆ ಅವರಿಗೆ ಇಂತಹ ಸಾಕಷ್ಟು ಸಂದರ್ಶನಗಳಲ್ಲಿ ಪಳಗಿದ ಅನುಭವ ಇದೆ ಎಂಬುದು ಸ್ಪಷ್ಟವಾಯಿತು. ಕೇಳಬಹುದಾದ ಸಾಮಾನ್ಯ ಪ್ರಶ್ನೆಗಳನ್ನು ಅವರೇ ಹಾಕಿಕೊಂಡು, ಅದಕ್ಕೆ ರೆಡಿಮೇಡ್ ಉತ್ತರಗಳನ್ನು ನೀಡುತ್ತಿದ್ದ ಅವರ ಮಾತುಗಳಲ್ಲಿ ಅಸಾಧ್ಯ ಆಕ್ರೋಶ ಇಣುಕುತ್ತಿತ್ತು. ಅಲ್ಲಿ ಆಕೆಯ ಬದುಕಿನ ಪ್ರತಿ ನಿರ್ಧಾರಕ್ಕೂ ಸಮರ್ಥನೆ ಇತ್ತು. ಯಾವ ಮಹಿಳಾವಾದಿಗಳಿಗೂ ಕಡಿಮೆ ಇಲ್ಲದಂತೆ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿವರಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದರು.

ಆ ಗಲ್ಲಿಯ ಇತರ ದೇವದಾಸಿ ಕಂ ಲೈಂಗಿಕ ಕಾರ್ಯಕರ್ತೆಯರಿಗೆ ಹೋಲಿಸಿದರೆ ಇವರು ಕೊಂಚ ಸ್ಥಿತಿವಂತೆ. ಮನೆಯಲ್ಲಿದ್ದ ಆರೇಳು ಮಂದಿಗೆ ಹೊತ್ತಿನ ಊಟ ಹಾಕುವ ಸಲುವಾಗಿ ಶುರುವಾದ ಈ ದಂಧೆ; ಇವತ್ತು ಇರೋರಲ್ಲೇ ಶ್ರೀಮಂತೆ ಎಂಬ ಪಟ್ಟಕ್ಕೆ ತಂದು ಬಿಟ್ಟಿದೆ. ಆಕೆಯ ತಾಯಿಗೆ ಎಪ್ಪತ್ತರ ಆಸುಪಾಸಿನ ವಯಸ್ಸು. ಮಗಳು ಗಟ್ಟಿದನಿಯಲ್ಲಿ ಮಾತನಾಡುತ್ತಿದ್ದ ಹೊತ್ತಿಗೆ ಒಳಬಂದವರು ಇನ್ನೂರು ರೂಪಾಯಿ ಕೇಳಿದರು. ಅವತ್ತಿನ ರಾತ್ರಿ ಊಟಕ್ಕೆ ಮಾಂಸ ತರಿಸಬೇಕು ಎಂಬುದು ಅವರು ನೀಡಿದ ಕಾರಣ. ಆ ಸಮಯದಲ್ಲಿ ಹೇಮಾ ತೋರಿಸಿದ ಅಸಹನೆಯನ್ನು ಎದುರಿಗೆ ಕುಳಿತವರು ಭರಿಸುವುದು ಕಷ್ಟ ಎನ್ನುವಂತಿತ್ತು. ಕೊನೆಗೆ ಅಷ್ಟೆ ಶಾಂತವಾಗಿ ಹಣ ಕೊಟ್ಟು “ಇದ ನೋಡ್ರಿ ನನ್ ಬದುಕು,” ಎಂದು ನಿಟ್ಟುಸಿರು ಬಿಟ್ಟರು.

ದೇವದಾಸಿ ಪದ್ಧತಿ ಆಚರಣೆಯಲ್ಲಿರುವ ಹಳ್ಳಿಯೊಂದರ ಮನೆಯ ಮುಂದೆ ಸಿಕ್ಕ ಚಿತ್ರ.

ದೇವದಾಸಿ ಪದ್ಧತಿ ಆಚರಣೆಯಲ್ಲಿರುವ ಹಳ್ಳಿಯೊಂದರ ಮನೆಯ ಮುಂದೆ ಸಿಕ್ಕ ಚಿತ್ರ.

ಇನ್ನು ಹೇಮಾ ಮನೆಯವರೆಗೂ ಕರೆದೊಯ್ದವನಿಗೆ ಇಪ್ಪತ್ತು ವರ್ಷ ವಯಸ್ಸಿರಬಹುದು. ಜಮಖಂಡಿ ಹೋಗುವ ಹಾದಿಯಲ್ಲಿದ್ದ ಲಾಡ್ಜ್ ಒಂದರಲ್ಲಿ ಕೆಲಸ ಮಾಡುತ್ತಾನೆ. ಅದೇ ವೇಳೆ ಗಿರಾಕಿಗಳಿಗೆ ಹೇಮಾರಂತವರ ಮನೆಯನ್ನು ತೋರಿಸುವುದು ಈತನ ಕೆಲಸ. ವಿಚಿತ್ರ ಎಂದರೆ ಆ ಹುಡುಗನ ಮನೆ ಹೇಮಾ ಮನೆಯ ಪಕ್ಕದಲ್ಲಿದೆ. ಅಲ್ಲಿಗೆ ಹೋಗುವ ಹಾದಿಯಲ್ಲಿ ಈತನ ಮನೆಯ ಮುಂದೆಯೂ ಹೆಣ್ಣುಮಕ್ಕಳು ತಲೆ ಬಾಚಿಕೊಳ್ಳುತ್ತ ಕುಳಿತಿದ್ದರು. ಅವರ ನೋಟ ಮತ್ತು ಪ್ರತಿಕ್ರಿಯೆ ಆ ಚಿಕ್ಕ ವಯಸ್ಸಿನ ಹುಡುಗ ಮಾಡುತ್ತಿರುವ ಕೆಲಸದ ಕುರಿತು ಸ್ಪಷ್ಟ ಅರಿವಿದ್ದನ್ನು ತೋರಿಸುತ್ತಿತ್ತು. ಅಲ್ಲಿ ಅವನಂತಹ ಇನ್ನೂ ಅನೇಕ ಹುಡುಗರಿದ್ದಾರೆ ಮತ್ತು ತಮ್ಮ ಜೀವನವನ್ನು ಇದೇ ಕೆಲಸ ಮಾಡಿ ಸಾಗಿಸುತ್ತಾರೆ ಎಂಬುದನ್ನು ಆತ ನಂತರ ತಿಳಿಸಿದ. ಅಷ್ಟರ ಮಟ್ಟಿಗೆ ವೇಶ್ಯಾವೃತ್ತಿಯನ್ನು ಕೌಟುಂಬಿಕ ನೆಲೆಯಲ್ಲಿ ವೃತ್ತಿಪರತೆಯಿಂದ ಕಾಣಲಾಗುತ್ತಿದೆ.

ಇಷ್ಟೆ ಆಗಿದ್ದರೆ ಇದನ್ನು ಬದಲಾಯಿಸಬಹುದು ಎಂಬ ಆಶಯವಾದರೂ ಉಳಿಯುತ್ತಿತ್ತು. ಆದರೆ ಅದಕ್ಕಿಂತಲೂ ದೊಡ್ಡ ಜಾಲವೊಂದು ದೇವದಾಸಿ ಆಚರಣೆಯನ್ನು ಬೇರೆ ನೆಲೆಗೆ ಕೊಂಡೊಯ್ದು ಬಿಟ್ಟಿದೆ ಎಂಬ ವಿಚಾರ ಸ್ಪಷ್ಟವಾಗುವಂತಹ ಘಟನೆಯೊಂದು ಕಣ್ಣೆದುರಿಗೇ ನಡೆಯಿತು…

(ನಾಳೆಗೆ)

Leave a comment

Top