An unconventional News Portal.

ದೇವದಾಸಿಯರ ನಾಡಿನಲ್ಲಿ- ಭಾಗ 2: ಒಂದಷ್ಟು ಆಶಯ; ಮತ್ತೊಂದಿಷ್ಟು ವಿಷಾದ…

ದೇವದಾಸಿಯರ ನಾಡಿನಲ್ಲಿ- ಭಾಗ 2: ಒಂದಷ್ಟು ಆಶಯ; ಮತ್ತೊಂದಿಷ್ಟು ವಿಷಾದ…

ತಾಯಿ ಎದೆ ಹಾಲು ಕುಡಿಯುತ್ತಿದ್ದ ಈಕೆಗೆ ಮುತ್ತು ಕಟ್ಟಿ ದೇವದಾಸಿ ಪಟ್ಟಕ್ಕೇರಿಸಲಾಗಿತ್ತು. ಆದರೆ ಸದ್ಯ ಈಕೆ ಸ್ಥಳೀಯ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಇಂತಹ ಸಕಾರತ್ಮಕ ಬೆಳವಣಿಗೆಗಳ ಆಚೆಗೂ ದೇವದಾಸಿ ಪದ್ಧತಿ ಅದರ ಪಾಡಿಗದು ನಡೆದುಕೊಂಡು ಹೋಗುತ್ತಿದೆ. ಯಾಕೀಗೆ ಎಂಬುದಕ್ಕೆ ನಮ್ಮ ಅಭಿವೃದ್ಧಿ ಅಥವಾ ಆಧುನಿಕ ಕಾನೂನುಗಳಲ್ಲಿ ಎಲ್ಲದಕ್ಕೂ ಪರಿಹಾರಗಳಿಲ್ಲ ಎಂಬುದೇ ಕಾರಣ...

ಭಾಗ-2:

ಆಕೆಯ ಹೆಸರು ರಾಜಿ(ಹಾಗಂದುಕೊಳ್ಳಬಹುದು); ವಯಸ್ಸು 21. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಸಮೀಪದ ಗ್ರಾಮ ಈಕೆಯ ಊರು. ಇದು 20 ವರ್ಷಗಳ ಹಿಂದೆ ನಡೆದ ಕತೆ. ಅವತ್ತಿಗೆ ರಾಜಿ ಇನ್ನೂ ತಾಯಿ ಎದೆ ಹಾಲು ಕುಡಿಯುತ್ತಿದ್ದ ಒಂಬತ್ತು ತಿಂಗಳ ಹಸುಗೂಸು. ತೀರ ಹೇಳಿಕೊಳ್ಳುವಂತಹ ಆದಾಯವಿರದ ಕುಟುಂಬದ ಚುಕ್ಕಾಣಿ ಹಿಡಿದಿದ್ದ ರಾಜಿಯ ತಂದೆ-ತಾಯಿಗೆ ಇಬ್ಬರೂ ಹೆಣ್ಣುಮಕ್ಕಳು. ”ಹೇಗೂ ಒಬ್ಬಾಕಿ ಮದ್ವೆ ಆಯ್ತು ಅಂದ್ರ ಈಕೆನಾದ್ರೂ ಮನೆಲಿ ಗಂಡು ಮಗನಂಗೆ ಇರ್ತಾಳ,” ಅಂತ ಮುತ್ತು ಕಟ್ಟಿಸಲು ರಾಜಿ ಮನೆಯವರು ನಿರ್ಧರಿಸಿದ್ದಾರೆ. ಹಾಗಾಗಿ ಏನೆಂದರೆ ಏನೂ ತಿಳಿಯದ ವಯಸ್ಸಿನ ರಾಜಿ ತನ್ನ ಕುಟುಂಬದ ಮೊದಲ ದೇವದಾಸಿಯಾಗಿ ಬದಲಾಗುತ್ತಾಳೆ!

ದೇವದಾಸಿ ಎಂದರೆ ಕೇವಲ ತಲೆಮಾರಿಂದ ತಲೆಮಾರಿಗೆ ಬದಲಾಗುವ ನಂಬಿಕೆ, ಸಂಪ್ರದಾಯ ಎಂಬ ಕಲ್ಪನೆಗಳ ಆಚೆಗೂ ಇರಬಹುದಾದ ಸತ್ಯಗಳಿಗೆ ಸಾಕ್ಷಿ ಎಂಬಂತೆ ರಾಜಿ ಸಿಕ್ಕಿದ್ದಳು. ಈಕೆಯ ಕುಟುಂಬದಲ್ಲಿ ಹಿಂದೆ ಯಾರು ಮುತ್ತು ಕಟ್ಟಿಸಿಕೊಂಡಿರಲಿಲ್ಲ. ಮನೆ ಮುಂದುವರೆಸಲು ಗಂಡು ಮಗ ಇಲ್ಲ ಎಂಬ ಒಂದೇ ಕಾರಣಕ್ಕೆ ರಾಜಿಯನ್ನು ದೇವದಾಸಿಯಾಗಿ ಮಾಡಲಾಯಿತು. ಇವತ್ತು ಕಾನೂನು ಮತ್ತು ಸಾಮಾಜಿಕ ಅರಿವು ಮೀರಿ ದೇವದಾಸಿ ಎಂಬ ಅನಿಷ್ಟ ಪದ್ಧತಿ ಜೀವಂತವಾಗಿದೆ ಎಂದರೆ ಅದಕ್ಕೆ ಇಂತಹ ಕೆಲವು ಪ್ರಾಕ್ಟಿಕಲ್ ಆದ ಸಾಮಾನ್ಯ ಜನರ ನಂಬಿಕೆಗಳು ಕಾರಣ ಅಂತ ಅನ್ನಿಸುತ್ತದೆ. ರಾಜಿ ವಿಚಾರದಲ್ಲಿ ನಡೆದಿದ್ದೂ ಇದೆ.

ತಿಳುವಳಿಕೆ ಮೂಡುವವರೆಗೂ ಪ್ರತಿವರ್ಷ ದುರ್ಗವ್ವನ ಜಾತ್ರೆ ಸಮಯದಲ್ಲಿ ರಾಜಿ ಐದು ಮನೆ ಭಿಕ್ಷೆ ಎತ್ತಿ ದೇವರಿಗೆ ಹರಕೆ ತೀರಿಸುವ ಕೆಲಸ ಮಾಡುತ್ತಿದ್ದಳು. ಆದರೆ ಕಾಲ ಬದಲಾದಂತೆ ವಯಸ್ಸು ಮಾಗಿದಂಗೆ ರಾಜಿ, ದೇವದಾಸಿ ಎಂಬ ಪದ್ದತಿಯ ವಿರುದ್ಧ ದನಿ ಎತ್ತಿದ್ದಾಳೆ. ಈಕೆಯಂತೆ ಕಿರಿಯ ವಯಸ್ಸಿನಲ್ಲಿ ಶಾಸ್ತ್ರ ಮಾಡಿಸಿಕೊಂಡ ಅದೇ ಊರಿನ ಇನ್ನೂ ಇಬ್ಬರು ಹುಡುಗಿಯರು ಜಾತ್ರೆಯಲ್ಲಿ ಭಿಕ್ಷೆ ಬೇಡಲು ಹಿಂದೇಟು ಹಾಕಿದ್ದಾರೆ. ಇದಕ್ಕಾಗಿ ಊರಿನವರ ವಿರೋಧ ಹಾಗೂ ಮನೆಯವರ ಹೊಡೆತ ತಡೆದುಕೊಂಡಿದ್ದಾರೆ. ಹೀಗೆ ನಿರಂತರ ಪ್ರತಿರೋಧದ ನಡುವೆಯೂ ಕಾಲೇಜು ಮಟ್ಟಿಲು ಹತ್ತಲು ಸಫಲರಾಗಿದ್ದಾರೆ. ರಾಜಿ ಅಕ್ಕ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಸದ್ಯ ಕಾಲೇಜು ಸೇರಿರುವು ರಾಜಿ ಓದು ಮುಗಿದ ಮೇಲೆ ಕೆಲಸಕ್ಕೆ ಸೇರಿಕೊಂಡು ತಂದೆ-ತಾಯಿ ನೋಡಿಕೊಳ್ಳುವ ಭರವಸೆ ರಾಜಿಗಿದೆ.

ದೇವದಾಸಿ ಸಮುದಾಯದಲ್ಲಿ ಇಂತಹ ಹಲವು ಆಶಾಕಿರಣಗಳು ಕಾಣಿಸುತ್ತಿವೆ. ಹಿಂದೆ ದೇವದಾಸಿಯರ ಮನೆಯಲ್ಲಿ ಹೆಣ್ಣು ಹುಟ್ಟಿದರೆ ದೇವರಿಗೆ ಅಂತ ಅಲಿಖಿತ ನಿಯಮ ಪಾಲನೆಯಾಗುತ್ತಿತ್ತು. ಆದರೆ ಇವತ್ತು ಅದೇ ಸಮುದಾಯದ ಮಕ್ಕಳಲ್ಲಿ ಹೊಸ ಬೆಳಕು ಮೂಡಿದೆ. ಹುಡುಗರು ಮದುವೆಯಾಗುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೆಲವರು ಹೊಸ ಸಾಧ್ಯತೆಗಳ ಅನ್ವೇಷಣೆ ನಡೆಸಿದ್ದಾರೆ. ಸದ್ಯ ಈಗಿರುವ ಸಮಸ್ಯೆ ಏನೆಂದರೆ, ಹೆಣ್ಣುಮಕ್ಕಳ ಮದುವೆಗಾಗಿ ನೀಡಬೇಕಿರುವ ವರದಕ್ಷಿಣೆ ದೇವದಾಸಿ ತಾಯಂದಿರ ತಲೆಬಿಸಿ ಮಾಡುತ್ತಿದೆ. ಬಹುತೇಕ ದೇವದಾಸಿ ಮಕ್ಕಳಿಗೆ ತಂದೆಯ ಹಂಗು ಕಳೆದು ಹೋಗಿರುತ್ತದೆ. ಸಹಜವಾಗಿಯೇ ತಾಯಿ ಮನೆಯ ಜವಾಬ್ದಾರಿ ಹೊತ್ತುಕೊಂಡಿರುತ್ತಾಳೆ. ಹೀಗಿರುವಾಗ ಹೆಣ್ಣುಮಕ್ಕಳ ಮದುವೆಗಾಗಿ ಹಣ ಹೊಂದಿಸುವುದಕ್ಕಿಂತ ಮುತ್ತು ಕಟ್ಟಿಸುವುದು ಲಾಭದಾಯಕ ಎಂಬ ಜೀವನದ ಲೆಕ್ಕಾಚಾರ ಮಾಡತೊಡಗುತ್ತಾರೆ. ಗಂಡು ಮಕ್ಕಳನ್ನು ಅಷ್ಟಾಗಿ ನಂಬದ ಸಮುದಾಯದ ಪಾಲಿಗೆ ಮುತ್ತು ಕಟ್ಟಿಸಿಕೊಂಡ ಹೆಣ್ಣು ಮಗಳೇ ಮನೆಯ ಆಧಾರ. ಅಂಗ ವೈಕಲ್ಯಕ್ಕೆ ತುತ್ತಾದ ಹೆಣ್ಣು ಮಕ್ಕಳಿಗೆ ಇವತ್ತಿಗೂ ಮುತ್ತು ಕಟ್ಟಿಸಿ ಜವಾಬ್ಧಾರಿ ಕಳೆದುಕೊಳ್ಳಲಾಗುತ್ತಿದೆ.

ರಾಜಿ ಅಂತಹ ಕೆಲವು ಆಶಾದಾಯಕ ಕತೆಗಳ ನಡುವೆಯೇ ಹೊಸಪೇಟೆ ತಾಲೂಕಿನ ದೇವರ ಚಮ್ನಳ್ಳಿ ಎಂಬ ಗ್ರಾಮದಲ್ಲಿ ಸಿಕ್ಕ ಜಂಬವ್ವ ಎಂಬ ಹೆಣ್ಣು ಮಗಳೊಬ್ಬಳು ತೆರೆದಿಡದ ಪ್ರಪಂಚ ಬೇರೆಯದೇ ಕತೆಯನ್ನು ಹೇಳುತ್ತಿತ್ತು. ಸುತ್ತಮುತ್ತಲಿನ ಹಳ್ಳಿಗಳ ಪೈಕಿ ಅದೊಂದು ಗ್ರಾಮದಲ್ಲಿ ದೇವದಾಸಿ ಪದ್ಧತಿ ಜೀವಂತವಾಗಿದೆ ಎಂಬ ಮಾಹಿತಿ ಇತ್ತು. ದುರ್ಗವ್ವನ ಜಾತ್ರೆಯ ಉತ್ಸವ ಪಲ್ಲಕ್ಕಿಯನ್ನು ಐವರು ದೇವದಾಸಿಯರು ಹೊರುವುದು ಇಲ್ಲಿ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಅದೂ ಇವತ್ತಿಗೂ ಪಾಲನೆಯಾಗುತ್ತದೆ; ಆದರೆ ಕಾನೂನಿನ ಭಯದಿಂದ ಎಲ್ಲವೂ ಕದ್ದು ಮುಚ್ಚಿ ನಡೆಯುತ್ತವೆ ಎನ್ನುವುದು ಸ್ಥಳೀಯರು ಮಾತುಗಳು. ಬಳ್ಳಾರಿ-ದಾವಣಗೆರೆ ಹೆದ್ದಾರಿಯಲ್ಲಿ ಎಡಕ್ಕೆ ತಿರುಗಿ ಐದಾರು ಕಿ.ಮೀ ಹೋದರೆ ಸಿಗುವ ಆ ಊರಿನ ದೇವಸ್ಥಾನದ ಪೂಜಾರಿ ಬರ್ಮಪ್ಪ. ಇಲ್ಲಿನ ದೇವದಾಸಿ ಆಚರಣೆಯಲ್ಲಿನ ವಿಶೇಷ ಏನೆಂದರೆ ದೇವಸ್ಥಾನದ ಪೂಜಾರಿಗೆ ಹೆಣ್ಣು ಮಕ್ಕಳು ಹುಟ್ಟಿದರೆ ಅವರಿಗೇ ಮುತ್ತು ಕಟ್ಟಿಸುವುದು ಸಂಪ್ರದಾಯ.

ದುರ್ಗವ್ವನ ಗುಡಿ ಮುಂದೆ ಜಂಬವ್ವ

ದುರ್ಗವ್ವನ ಗುಡಿ ಮುಂದೆ ಜಂಬವ್ವ

ಬರ್ಮಪ್ಪ ಅವರ ಮಗಳು ಜಂಬವ್ವರಿಗೆ ಇನ್ನೂ 17 ವರ್ಷ ವಯಸ್ಸು. ಆಗಲೇ ಕಂಕಳಲ್ಲೊಂದು ಮಗುವಿತ್ತು. ಜಪ್ಪಯ್ಯ ಅಂದರೂ ಮಾತನಾಡಲಿಲ್ಲ. ಅದಕ್ಕಿಂತ ಹೆಚ್ಚಾಗಿ ತನ್ನ ಇವತ್ತಿನ ಬದುಕಿನ ಕುರಿತು ಅವ್ಯಕ್ತ ದುಃಖವನ್ನು ಆಕೆಯಿಂದ ತಡೆದುಕೊಳ್ಳಲೂ ಆಗಲಿಲ್ಲ. ಎದುರಿಗೆ ಮೇಯುತ್ತಿದ್ದ ಬಿಳಿ ಕುದುರೆಯನ್ನು ಒಮ್ಮೊಮ್ಮೆ ದಿಟ್ಟಿಸಿ ನೋಡುತ್ತಿದ್ದ ಆಕೆಯ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಅಷ್ಟೊತ್ತಿಗೆ ಹತ್ತಿರ ಬಂದ ಮಗುವನ್ನು ಮಗ್ಗುಲಿಗೆ ಎಳೆದುಕೊಂಡು ಎದೆಯ ಭಾರ ಹೊರಹಾಕುವಂತೆ ಒಮ್ಮೆ ನಿಟ್ಟುಸಿರು ಬಿಟ್ಟರು. ಬಹುಶಃ ಅಕ್ಷರಗಳಿಗೆ ನಿಲುಕದ ಆ ಕ್ಷಣ, ಆಕೆ ಎದ್ದು ನಿಂತಾಗ ಬದಲಾಗಿ ಹೋಯಿತು. ಅತ್ತ ಸಮಾಜ ಕಟ್ಟುಪಾಡು, ಸರಕಾರದ ಕಾನೂನಿನ ಕುರಿತು ಭಯ ಮತ್ತು ಬದಲಾದ ಪರಿಸ್ಥಿತಿಯಲ್ಲೂ ಬದಲಾಗದ ಬದುಕು ತಂದ ಹತಾಶೆ ಎಲ್ಲವನ್ನೂ ಹಿಂದೆ ಬಿಟ್ಟು ನಡೆದು ಹೋದರು ಜಂಬವ್ವ…

(ನಾಳೆಗೆ)

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top