An unconventional News Portal.

ದೇವದಾಸಿಯರ ನಾಡಿನಲ್ಲಿ- ಭಾಗ 5: ಇಲ್ಲಿಗೆ ಈ ಕತೆ ಮುಗಿಯುವುದಿಲ್ಲ…

ದೇವದಾಸಿಯರ ನಾಡಿನಲ್ಲಿ- ಭಾಗ 5: ಇಲ್ಲಿಗೆ ಈ ಕತೆ ಮುಗಿಯುವುದಿಲ್ಲ…

ಇದಿಷ್ಟು ದೇವದಾಸಿ ಎಂಬ ಅನಿಷ್ಟ ಆಚರಣೆಗೆ ಈಡಾದ ನಾಡಿನಲ್ಲಿ ಸಿಕ್ಕ ಇವತ್ತಿನ ಪರಿಸ್ಥಿತಿಗಳ ಅಪರೂಪದ ಮಾಹಿತಿಗಳು. ಇಲ್ಲಿವರೆಗೆ ಸರಣಿಯ ಎಲ್ಲಿಯೂ ಸರಕಾರದ ಯೋಜನೆಗಳು, ಅದರ ಅನುಷ್ಠಾನ ಮತ್ತು ಅಂಕಿಅಂಶಗಳ ಪ್ರಸ್ತಾಪ ಆಗಲಿಲ್ಲ. ಯಾಕೆಂದರೆ ಸಾಂಸ್ಕೃತಿಕ ದಾಸ್ಯಕ್ಕೆ ಈಡಾದ ಯಾವ ಹೆಣ್ಣುಮಕ್ಕಳ ಮನೆಗೆ ಹೋದರೂ ಅಲ್ಲಿ ಸರಕಾರದ ದಿವ್ಯ ನಿರ್ಲಕ್ಷ್ಯ ಕಾಣುತ್ತದೆ. ಆದರೆ ಸರಕಾರಿ ಕಡತಗಳಲ್ಲಿ ದೇವದಾಸಿರ ಕುರಿತು ಬೇರೆಯದೇ ಕತೆ ಸಿಗುತ್ತದೆ…!
ಭಾಗ: 5
ಜಮಖಂಡಿಯ ಅಂಬೇಡ್ಕರ್ ವೃತ್ತದ ಹತ್ತಿರವಿರುವ ರುದ್ರಸ್ವಾಮಿ ಪೇಟೆಯಲ್ಲಿ ಮಾತಿಗೆ ಸಿಕ್ಕ ದೇವದಾಸಿ ಹೆಣ್ಣು ಮಕ್ಕಳಲ್ಲಿ ವಿಚಿತ್ರ ಎನ್ನಿಸುವಂತಹ ಅನುಮಾನ ಮತ್ತು ಅಸಹನೆ ವ್ಯಕ್ತವಾಗುತ್ತಿತ್ತು. ಮುಖ್ಯವಾಗಿ ದೇವದಾಸಿಯರು ವೇಶ್ಯಾವೃತ್ತಿಯನ್ನು ಬಿಟ್ಟು ಬಿಟ್ಟಿದ್ದಾರೆ ಎಂದು ನಂಬಿಸಲು ಹರಸಾಹಸ ಪಡುತ್ತಿದ್ದಂತೆ ಭಾಸವಾಗುತ್ತಿತ್ತು. ಅದೇನೆ ಇರಲಿ ಸಂಪತ್ತವ್ವ ಎಂಬ ದೇವದಾಸಿ ಮಹಿಳೆ ಹೇಳಿದ್ದು ಇಷ್ಟು; “ಇವತ್ತು ಅರಿವಿ ಹಾಕ್ಕೊಂಡೀವಲ್ರಿ, ಅದನ್ನು ಸಣ್ಣೊರಿರುವಾಗ ಕನಸಿನಂಗೆ ಕಾಣ್ತಿದ್ವಿ. ಹುಲ್ಲು ಮಾರಿ ಹೊಟ್ಟೆ ತುಂಬ್ಕೊಬೇಕಿತ್ರಿ. ಮನೆ ತುಂಬಾ ಮಕ್ಳು. ಅರ್ಧ ರೊಟ್ಟಿ ಬಂದ್ರೆ ಹೆಚ್ಚು. ಆದ್ರೆ ಇವತ್ತು ಪಸಂದಾಗಿದೆ,” ಎಂದು ಮಾತು ಮುಗಿಸಿದರು. ಅಷ್ಟೊತ್ತಿಗೆ ಒಳಮನೆಗೆ ಬಂದ ಮಗನ ಕೈಲಿ ನೋಟಿನ ಕಂತೆ ಮತ್ತು ಪಾಸ್ ಬುಕ್ ಕೊಟ್ಟು ಬ್ಯಾಂಕ್ ಕಡೆ ಓಡಿಸಿದರು.
ಅದಾದ ಮೇಲೆ ಸುಮಾರು ಅರವತ್ತರ ಆಸುಪಾಸಿನ ಹಿರಿಯ ಜೀವವೊಂದು ಬಂದು ಮಾತಿಗೆ ಕುಳಿತರು. ಸುಕ್ಕುಗಟ್ಟಿದ ಚರ್ಮ, ಪೀಚಲು ಕೈಕಾಲುಗಳು ಖಾಯಿಲೆ ಹಿಡಿದ ಅವರ ದೇಹ ಸ್ಥಿತಿಯನ್ನು ಬಿಂಬಿಸುತ್ತಿದ್ದವು. ಕೊನೆಗೆ ಒಲ್ಲದ ಮನಸ್ಸಿಂದನೇ ಅವರ ಮನೆಗೆ ಕರೆದೊಯ್ದು ಜಗಲಿಯಲ್ಲಿ ಕೂರಿಸಿದರು. ಕಣ್ಣು ಕಾಣದ ಹುಡುಗಿಯೊಬ್ಬಳು ಬೆಳ್ಳುಳ್ಳಿ ಬಿಡಿಸುತ್ತ ವ್ಯಂಗ್ಯ ಮಿಶ್ರಿತ ದನಿಯಲ್ಲಿ “ಇಲ್ಲೆಲ್ಲ ದಂಧೆ ನಡೆಯಂಗಿಲ್ರಿ, ಮದೋಳ್ದಾಗ ಐತಿ,” ಎಂದು ಕೆಲಸ ಮುಂದುವರೆಸಿದರು. ಮನೆಯ ಅಷ್ಟೂ ಹೆಣ್ಣು ಮಕ್ಕಳ ಮಾತಿನಲ್ಲಿ ಅತೀ ಬುದ್ದಿವಂತಿಕೆ ಪ್ರದರ್ಶಿಸಿದ ತೃಪ್ತಿ ಪ್ರತಿಫಲಿಸುತ್ತಿತ್ತು.
ಇದೇ ಊರಿನಲ್ಲಿ ಸಾಲು ಸಾಲು ಏಡ್ಸ್ ಪೀಡಿತರು ಸಾವನ್ನಪ್ಪಿದ್ದಾರೆ. ಈಗಲೂ ಕೆಲವರು ಖಾಯಿಲೆಯನ್ನು ಅಪ್ಪಿಕೊಂಡೆ ಬದುಕುತ್ತಿದ್ದಾರೆ. ಆದರೆ ಒಂದು ರೀತಿಯ ಮುಗುಮ್ಮತೆ ಇಡೀ ಬೀದಿಯಲ್ಲಿ ವ್ಯಕ್ತವಾಗುತ್ತದೆ. ಬಹುತೇಕ ಮನೆಯ ಬಾಗಿಲುಗಳಿಗೆ ಪರದೆ ಅಡ್ಡ ಬಿದ್ದಿರುತ್ತದೆ. ವಯಸ್ಸಾದ ಜೀವವೊಂದು ಅದರ ಕಾವಲಿಗೆ ಕುಳಿತಿರುತ್ತದೆ. ಬೀದಿಯ ಕೊನೆಯಲ್ಲಿ ಕಿರಾಣಿ ಅಂಗಡಿಯೊಂದನ್ನು ಹುಡುಗಿಯೊಬ್ಬಳು ನೋಡಿಕೊಳ್ಳುತ್ತಾಳೆ.
ಇದರ ಇನ್ನೊಂದು ಮಗ್ಗುಲಿನಲ್ಲಿ ಅಂಗನವಾಡಿಯಿಂದ ಹಿಡಿದು ಹೈಸ್ಕೂಲಿನವರೆಗೆ ಸೌಕರ್ಯವಿದೆ. ದೇವದಾಸಿ ಮನೆಯ ಗಂಡು ಮಕ್ಕಳೂ ಕಾಲೇಜು ಸೇರಿದ್ದಾರೆ. ಆದರೆ ಹೆಣ್ಣು ಮಕ್ಕಳ ವಿಚಾರದಲ್ಲಿ ಹೀಗಾಗುತ್ತಿಲ್ಲ ಎಂಬುದು ಸ್ಥಳೀಯರ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಬಹಿರಂಗವಾಗಿ ಮಾತನಾಡದ ಮನಸ್ಥಿತಿಯ ಬಗ್ಗೆ ಹಲವರಿಗೆ ಅನುಭವಗಳಾಗಿವೆ.
ಶೈಲಜಾ ಹಿರೇಮಠ್.

ಶೈಲಜಾ ಹಿರೇಮಠ್.

ಹಂಪಿ ಕನ್ನಡ ವಿವಿಯ ಅಧ್ಯಯನ ವಿಭಾಗದ ಪ್ರಾಧ್ಯಪಕಿ ಡಾ. ಶೈಲಜಾ ಹಿರೇಮಠ್ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ದೇವದಾಸಿ ಮಹಿಳೆಯರ ಬದುಕು ಮತ್ತು ಅವರ ಕಲಾ ಪ್ರಕಾರಗಳ ಕುರಿತು ಸಂಶೋಧನೆ ಮಾಡಿದ್ದಾರೆ. ಈ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮಾಹಿತಿ ಸಂಗ್ರಹಣೆ ಸಲುವಾಗಿ ದೇವದಾಸಿಯರ ನಿಗೂಢ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ಇವತ್ತಿಗೂ ಸಮುದಾಯವನ್ನು ಅರ್ಥ ಮಾಡಿಕೊಳ್ಳಲು ಹೆಣಗುತ್ತಿದ್ದಾರೆ. “ಮೊದಲು ಅಧ್ಯಯನದ ಭಾಗವಾಗಿ ದೇವದಾಸಿ ಹೆಣ್ಣು ಮಕ್ಕಳನ್ನು ಭೇಟಿ ಮಾಡಿದಾಗ ಅವರ ಕಡೆಯಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿರಲಿಲ್ಲ. ಆದರೆ ನಿರಂತರ ಭೇಟಿಯ ನಂತರ ನಿಧಾನಕ್ಕೆ ತೆರೆದುಕೊಳ್ಳಲು ಶುರು ಮಾಡಿದರು. ಕೆಲವು ಸಂದರ್ಶನಗಳಲ್ಲಿ ದೇವದಾಸಿ ಹೆಣ್ಣು ಮಕ್ಕಳು ಗೋಡೆಗೆ ತಲೆ ಚಚ್ಚಿಕೊಂಡು ಅತ್ತ ದೃಶ್ಯ ಇನ್ನೂ ಕಣ್ಣ ಮುಂದಿದೆ. ಸರಕಾರ ದೇವದಾಸಿ ನಿಷೇಧದ ಬಗ್ಗೆ ಗಂಭೀರವಾಗಿದೆ ಅಂತ ಅನ್ನಿಸುವುದಿಲ್ಲ. ಎಂಬತ್ತರ ಸುಮಾರಿಗೆ ‘ನಿಷೇಧ ಕಾನೂನು’ ರೂಪುಗೊಂಡಿತು. ದೇವದಾಸಿ ನಿಷೇಧ ಕಾನೂನಿನ ಜೊತೆಗೆ ಸರಿಯಾದ ಪರ‍್ಯಾಯ ರೂಪಿಸಬೇಕಿತ್ತು. ಕಾನೂನು ರೂಪುಗೊಳ್ಳುತ್ತಿದ್ದಂತೆ ದೇವದಾಸಿ ಸಮುದಾಯದಲ್ಲಿ ಒಂದು ಭಯ ಆವರಿಸಿತು. ಹಾಗಾಗಿ ಆ ಸಮಯದಲ್ಲಿ ನಡೆದ ಸಮೀಕ್ಷೆಯಲ್ಲಿ ಬಹುಪಾಲು ಹೆಣ್ಣು ಮಕ್ಕಳು ಹೊರಗೇ ಉಳಿದರು. ಭೂಮಿ ಅಥವಾ ಮಾಸಾಶನದಂತಹ ಪರ‍್ಯಾಯಗಳು ವೈಜ್ಞಾನಿಕ ಅಂತ ಅನ್ನಿಸುತ್ತಿಲ್ಲ,” ಎನ್ನುತ್ತಾರೆ ಶೈಲಜಾ ಹಿರೇಮಠ್.

ಜೊತೆಗೆ ದೇವದಾಸಿ ಸಮುದಾಯದಲ್ಲಿ ಬಂದ ಬದಲಾವಣೆಯನ್ನೂ ಅವರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಉತ್ತರ ಕರ್ನಾಟಕ ಜಿಲ್ಲೆಗಳಿಂದ ಸಾಂಗ್ಲಿ, ಪೂನಾಗೆ ‘ವಲಸೆ’ ಹೋದ ಹೆಣ್ಣು ಮಕ್ಕಳ ಮಾತುಗಳನ್ನು ಅವರು ದಾಖಲಿಸಿದ್ದಾರೆ. ಮೈ ಜುಮ್ಮೆನ್ನಿಸುವ ಅನುಭವಗಳು ಅವರಿಗೂ ಎದುರಾಗಿವೆ; “ಲೈಂಗಿಕ ವೃತ್ತಿಗೆ ಇಳಿದ ದೇವದಾಸಿ ಹೆಣ್ಣು ಮಕ್ಕಳಲ್ಲಿ ವೃತ್ತಿಪರತೆ ಎದ್ದು ಕಾಣುತ್ತದೆ. ಸಂದರ್ಶನಕ್ಕೆ ಅಂತ ಎದುರಿಗೆ ಕುಳಿತವರನ್ನು ‘ಮಿಸ್ ಲೀಡ್’ ಮಾಡುವುದರಲ್ಲಿ ಅವರು ಪಳಗಿದ್ದಾರೆ. ಹಲವು ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದೇನೆ. ಆದರೆ ಅಲ್ಲಿನ ಹೆಣ್ಣು ಮಕ್ಕಳು ಸುಳ್ಳು ಹೇಳಿ ನನ್ನ ಹಾದಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಜೊತೆಗೆ ಅದನ್ನು ‘ಎಂಜಾಯ್’ ಮಾಡುವಂತೆ ಕಾಣಿಸುತ್ತಿದ್ದರು. ಅವರು ಹೀಗಾಗುವುದಕ್ಕೆ ಕಾರಣವಾದ ಪರಿಸ್ಥಿತಿ ಏನಿರಬಹುದು ಎಂದು ಹಲವು ಬಾರಿ ಆಲೋಚಿಸಿದ್ದೇನೆ,” ಎಂಬ ಅವರ ಮಾತುಗಳು ಜಮಖಂಡಿಯ ಪರಿಸ್ಥಿತಿಯಲ್ಲಿ ವಾಸ್ತವಕ್ಕೆ ಹತ್ತಿರ ಎನ್ನಿಸುತ್ತಿದ್ದವು.

ಇವೆಲ್ಲವನ್ನೂ ಬದಿಗಿಟ್ಟು ನೋಡಿದರೆ ನಮ್ಮ ವ್ಯವಸ್ಥೆಯ ಲೋಪಗಳು ಇಲ್ಲೂ ಇರುವುದು ಸಹಜವಾಗಿಯೇ ಕಾಣುತ್ತದೆ. ಅಷ್ಟೆ ಆಗಿದ್ದರೆ ಆತಂಕಗಳಿರಲಿಲ್ಲ. ಒಂದು ಅನಿಷ್ಟ ಸಂಪ್ರದಾಯವನ್ನು ಒಂದೇ ಏಟಿಗೆ ನಿಲ್ಲಿಸಿ ಬಿಡಲು ಸಾಧ್ಯವಾಗಲಿಲ್ಲ ಎಂದು ಭಾವಿಸಿಕೊಂಡು ಸುಮ್ಮನಿದ್ದು ಬಿಡಬಹುದಿತ್ತು. ಆದರೆ, ಹೀಗೊಂದು ಸಂಪ್ರದಾಯ ಇವತ್ತು ತನ್ನದೇ ಮಾರುಕಟ್ಟೆ, ಜಾಲವನ್ನು ಸೃಷ್ಟಿಸಿಕೊಂಡಿದೆ. ಸಾಮಾಜಿಕವಾಗಿ ಕಡೆಗಣನೆಗೆ ಒಳಗಾಗಬೇಕಾದ ಆಚರಣೆಯೇ ವೇಶ್ಯಾವಾಟಿಕೆ ಎಂಬ ಪುರಾತನ ವೃತ್ತಿಗೆ ಸುಲಭವಾಗಿ ಅನುವು ಮಾಡಿಕೊಡುತ್ತಿದೆ. ಬಹುಶಃ ಮುಂದೊಂದು ದಿನ ದೇವದಾಸಿ ಆಚರಣೆ ವಿರುದ್ಧ ಹೋರಾಟದ ಜಾಗದಲ್ಲಿ ಬೇರೆಯದೇ ಭಿತ್ತಿಪತ್ರಗಳನ್ನು ಹಿಡಿದುಕೊಳ್ಳಬೇಕಾದ ಅನಿವಾರ್ಯತೆ ಬೀಳಬಹುದು. ಹೀಗಾಗಿ ಕೊಂಚ ಎಚ್ಚರಿಕೆ ವಹಿಸಬೇಕಿದೆ.

ಇವತ್ತು ನಮ್ಮದೇ ಸೈದ್ಧಾಂತಿಕ ಚರ್ಚೆಯಲ್ಲಿ ನಾವುಗಳು ಮುಳುಗೇಳುತ್ತಿರುವ ಸಮಯದಲ್ಲಿ, ನಮ್ಮದೇ ಸಾಮಾಜಿಕ ವ್ಯವಸ್ಥೆಯೊಂದರ ಭಾಗ ಒಳಗಿಂದೊಳಗೇ ಕೊಳೆಯತೊಡಗಿದೆ. ಇದನ್ನು ಗಂಭೀರವಾಗಿ ಸ್ವೀಕರಿಸುವ ಮನಸ್ಸು ಸಂಬಂಧಪಟ್ಟವರಿಗೆ ಇರಬೇಕಿದೆ, ಅಷ್ಟೆ.

(ಮುಗಿಯಿತು). 

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top