An unconventional News Portal.

ದೇವದಾಸಿಯರ ನಾಡಿನಲ್ಲಿ (ರಿಕ್ಯಾಪ್)- ಭಾಗ 1: ‘ಮುತ್ತು’ ಕಟ್ಟಿದ ಕತೆಗಿದು ಮುನ್ನುಡಿ…!

ದೇವದಾಸಿಯರ ನಾಡಿನಲ್ಲಿ (ರಿಕ್ಯಾಪ್)- ಭಾಗ 1: ‘ಮುತ್ತು’ ಕಟ್ಟಿದ ಕತೆಗಿದು ಮುನ್ನುಡಿ…!

ಎಲ್ಲವೂ ಅರ್ಥವಾದಂತಾಗಿ ಏನೂ ಅರ್ಥವಾಗದ ನಿಗೂಢ ಲೋಕ ‘ದೇವದಾಸಿ’ಯರದು. ಸಾಂಸ್ಕೃತಿಕ ದಾಸ್ಯಕ್ಕೆ ಈಡಾದ ಈ ಹೆಣ್ಣು ಮಕ್ಕಳನ್ನು ದೇವದಾಸಿಯರು ಎಂದು ಕರೆಯುವ ಬಗ್ಗೆನೇ ತಕರಾರುಗಳಿವೆ. ದೇವರ ಹೆಸರಿನಲ್ಲಿ ‘ಮುತ್ತು ಕಟ್ಟಿಸಿಕೊಂಡವರ’ ಸಾಮಾನ್ಯ ಜೀವನದ ಕುರಿತು ಇದ್ದ ಆಸಕ್ತಿ ಕಳೆದುಕೊಳ್ಳಲು ಅವತ್ತೊಂದು ನಾಲ್ಕು ದಿನ ಉತ್ತರ ಕರ್ನಾಟಕದ ಕಡೆ ಪಯಣ ಬೆಳೆಸಿಯಾಗಿತ್ತು. ಅಲ್ಲಿ ಸಿಕ್ಕ ವಿವರಗಳನ್ನು ಹಂಚಿಕೊಳ್ಳುವ ಸರಣಿಗೆ ಇದು ಮುನ್ನುಡಿ ಅಂದುಕೊಳ್ಳಬಹುದು…

ಭಾಗ-1:

“ಹೊಸ ಬಟ್ಟೆ ತರ್ತಾರಾ..ಸ್ನಾನ ಮಾಡಿಸ್ತಾರಾ..ದೇವರ ಎದ್ರಿಗೆ ನಾಲ್ಕು ಮೂಲೆಗೂ ತುಂಬಿದ ಬಿಂದಿಗೆ ಇಟ್ಟು ಮಧ್ಯದಲ್ಲಿ ಕೂರಿಸ್ತಾರಾ..ಕುತ್ತಿಗೆಗೆ ಪೂಜಾರಿ ಕರಿಮಣಿ ಕಟ್ತಾನ… ದೀಪ ಕಂಡು ಊಟ ಮಾಡ್ಬೇಕು, ಸತ್ರೆ ಕೆಟ್ರೆ ಸ್ನಾನ ಮಾಡಿ ಊಟ ಮಾಡ್ಬೇಕು… ಪೂಜಾರಿಗಳು, ಪರಸ್ಥಳದವ್ರು ಬಂದ್ರೆ ಊಟ ಹಾಕ್ಬೇಕು ಅಂತ ಕಂಡಿಷನ್ನು ಹಾಕ್ತಾರ.. ಇಷ್ಟ ನೋಡ್ರಿ ಮುತ್ತು ಕಟ್ಟೋದ ಅಂದ್ರ,” ಆಕೆ ಅತ್ಯಂತ ಸಹಜವಾಗಿ, ಸರಳವಾಗಿ ತನ್ನ ಬಾಳಲ್ಲಿ 40 ವರ್ಷಗಳ ಹಿಂದೆ ನಡೆದ ಘಟನೆಯನ್ನು ವಿವರಿಸುತ್ತಿದ್ದರು.

ದುರ್ಗಮ್ಮನ ದೇವಸ್ಥಾನದ ಮುಂದೆ ಮಹದೇವಕ್ಕ ಮತ್ತಿತರರು.

ದುರ್ಗಮ್ಮನ ದೇವಸ್ಥಾನದ ಮುಂದೆ ಮಹದೇವಕ್ಕ ಮತ್ತಿತರರು.

ಅದು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಸಮೀಪದ ಯಡ್ರಮ್ಮನಹಳ್ಳಿ ಗ್ರಾಮ. ಹಾಗೊಂದು ಮುಂಜಾನೆ ಮಗನ ಹೆಗಲಿಗೆ ಟೊಮೊಟೊ ಬುಟ್ಟಿ, ಕೈಗೊಂದು ತಕ್ಕಡಿ ಕೊಟ್ಟು “ಕೆ.ಜಿ ಗೆ ಹತ್ತು ರೂಪಾಯಂಗ ಮಾರ್ಬೇಕು ನೋಡ್,” ಎಂದು ತಾಕೀತು ಮಾಡಿ ದುರ್ಗಮ್ಮನ ದೇವಸ್ಥಾನದ ಅಂಗಳಕ್ಕೆ ಕಾಲಿಟ್ಟವರ ಹೆಸರು ಮಹದೇವಕ್ಕ. ಊರ ಬಾಗಿಲಿನವರೆಗೂ ಟಾರು ರಸ್ತೆ ಬಂದಿದೆಯಾದರೂ, ಮಹದೇವಕ್ಕನಂತಹ ಹತ್ತಾರು ದೇವದಾಸಿ ಮಹಿಳೆಯರು ಬದುಕುವ ಪುಟ್ಟ ಮನೆಗಳ ಬಾಗಿಲ ಮುಂದೆ ಗರಿಕೆ ಹುಲ್ಲು ಬೆಳೆದು ನಿಂತಿದೆ. ಮನೆಯ ಬಚ್ಚಲಿನಿಂದ ಹರಿದು ಬರುವ ನೀರು ಮುಂಬಾಗಿಲ ಮೆಟ್ಟಿಲುಗಳನ್ನು ಹಾದು ತೆಂಗಿನ ಮರಕ್ಕೆ ತೇವ ನೀಡುತ್ತಿದೆ. ಇನ್ನು ಒಳಮನೆಯಲ್ಲಿ ನಾಲ್ಕು ಜನ ಕಾಲು ಚಾಚಿ ಕೂರಲೂ ಸಾಧ್ಯವಿಲ್ಲ. ಪ್ರತಿ ಮನೆಯ ಅಂತರಂಗದಲ್ಲಿ ಹೊಗೆಯ ರಂಗು ಮತ್ತು ಕಂಕಳಲ್ಲಿ ಪುಟ್ಟ ಕೂಸುಗಳನ್ನು ಕಟ್ಟಿಕೊಂಡ ಎಳೆಯ ವಯಸ್ಸಿನ ಹೆಣ್ಣುಮಕ್ಕಳು.

ಹಾಗೆ ಮಹದೇವಕ್ಕ ದೇವಸ್ಥಾನಕ್ಕೆ ಆವರಣಕ್ಕೆ ಕಾಲಿಡುವ ಹೊತ್ತಿಗೆ ಹತ್ತಾರು ಮಹಿಳೆಯರು ಬಂದು ವೃತ್ತಾಕಾರದಲ್ಲಿ ಕುಳಿತಾಗಿತ್ತು. ಅದಕ್ಕೂ ಮುನ್ನ ಊರ ಗುಡಿಗೆ ನಮಸ್ಕರಿಸಿ, ಹಣೆಯ ತುಂಬ ಕುಂಕುಮ ಮುಡಿದು, ಬಾಳಿನ ಕತೆಯನ್ನು ಮೆಲ್ಲನೆ ಶುರುಮಾಡಿದರು. ಧ್ವನಿ ರೂಪದಲ್ಲಿ ಹೊರಬೀಳುತ್ತಿದ್ದ ಆ ಮಾಹಿತಿ ಅವರೆಲ್ಲರ ಬದುಕಿನ ಇತಿಹಾಸದ ಪುಟಗಳ ಚಿತ್ರಣವೂ ಹೌದು ಎಂಬುದು ಅವರ ಮುಖಭಾವದಲ್ಲಿ ಬದಲಾಗುತ್ತಿದ್ದ ಭಾವಗಳ ತಾಕಲಾಟ ಸಾರಿ ಹೇಳುತ್ತಿತ್ತು. ಅವರನ್ನು ‘ದೇವದಾಸಿ’ ಎಂಬುದೂ ಸೇರಿದಂತೆ ಹತ್ತು ಹಲವು ಹೆಸರುಗಳಲ್ಲಿ ಗುರುತಿಸಲಾಗುತ್ತಿದೆ. ಇತ್ತ ಸಮಾಜದ ಟ್ಯಾಬೂ, ಅತ್ತ ಸರಕಾರದ ದೇವದಾಸಿ ನಿಷೇಧ ಕಾನೂನಿನ ನಡುವೆಯೇ ಸಹಜ ಬದುಕು ನಡೆಸುತ್ತಿರುವ ಅವರದ್ದು ‘ತೆರೆದುಕೊಳ್ಳದ’ ಪ್ರಪಂಚ. ಅದನ್ನು ಅವರ ಮಾತುಗಳಲ್ಲೇ ಅರ್ಥಮಾಡಿಕೊಳ್ಳಬೇಕು.

“ನಾವು ಬಿಡ್ರಿ ಸ್ವಾಮಿ, ನಿತ್ಯ ಮುತ್ತೈದೇರು. ಮುತ್ತು ಕಟ್ಟಿದ ಮೇಲೆ ತುಂಬಿದ ತೊಡೆಯ ಮಂದಿ ಬಂದ್ರೂ ನಾವ್ ನೋಡಾಂಗಿಲ್ರಿ. ನಮಗೆ ಯಾರು ಪಸಂದ ಅಗ್ತಾರೋ ಅಂತೊರ ಜತೆ ಕೂಡ್ತೀವಿ. ಮೂದೇವಿಗಳು ಇರೊಗಂಟ ಇದ್ದು ಹೋಗ್ತಾರ್ರೀ. ಆಮೇಲೆ ನಾವಾಯ್ತು, ನಮ್ಗೆ ಹುಟ್ಟಿದ ಮಕ್ಕಳಾಯ್ತು. ಹೋಗ್ಬೇಡಿ ಅಂತ ಹೇಳೋಕೆ ಅವನೇನು ತಾಳಿ ಕಟ್ದೋನಾ ನಮ್ಗೆ?.” ಇದು ಪ್ರತಿ ದೇವದಾಸಿ ಹೆಣ್ಣುಮಗಳ ಬದುಕಿನ ಒನ್ ಲೈನ್ ಸ್ಟೋರಿ. ರಾಜ್ಯದ ಕನಿಷ್ಟ ಹತ್ತು ಜಿಲ್ಲೆಗಳಲ್ಲಿ ಈ ದೇವದಾಸಿ ಪದ್ದತಿ ಜೀವಂತವಾಗಿದೆ. ಉತ್ತಮ ಸಮಾಜಕ್ಕಾಗಿ ಹಂಬಲಿಸುವ ಸುದ್ದಿ ವಾಹಿನಿಗಳ ಪಾಲಿಗೆ ಅವರು ‘ನಿಗೂಢ ಕ್ಯಾಮೆರಾ’ಗೆ ಸೆರೆ ಸಿಕ್ಕ ವೇಶ್ಯೆಯರು. ಹಲವರ ಪಾಲಿಗೆ ಅವರು ಹೀನ ಸಂಪ್ರದಾಯಕ್ಕೆ ಬಲಿಯಾದ ಅಬಲೆಯರು. ಸರಕಾರದ ಪಾಲಿಗೆ ಯೋಜನೆಗಳ ಹಣದ ಮೂಲಕ ಮುನ್ನಲೆಗೆ ತರಬೇಕಾದ ಪ್ರಜೆಗಳು. ಬಹುಶಃ ಇವೆಲ್ಲವನ್ನೂ ಮೀರಿದ ದೇವದಾಸಿಯರ ಬದುಕು ಪರಿಚಯವಾಗಬೇಕು ಎಂದರೆ ಅದಕ್ಕೆ ಬೇರೆಯದೇ ತರಹದ ವಿಶ್ವಾಸವೊಂದು ಅವರ ಜತೆ ಬೆಳೆಯಬೇಕು. ಅದಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ಪಟ್ಟ ಪ್ರಯತ್ನ ಕೊನೆಗೂ ಫಲಕೊಟ್ಟಿತ್ತು. ಹಾಗಾಗಿ ಅವರ ಬದುಕನ್ನು ಯಾವ ಚೌಕಟ್ಟುಗಳ ಮಾನದಂಡವೂ ಇಲ್ಲದೆ ಅರ್ಥಮಾಡಿಕೊಳ್ಳುವ ಅವಕಾಶ ಒದಗಿ ಬಂದಿತ್ತು.

ಯಡ್ರಮ್ಮನಹಳ್ಳಿಯ ವಿಚಾರಕ್ಕೆ ಬರುವುದಾದರೆ ಅಲ್ಲೀಗ ಬದಲಾವಣೆಯ ಗಾಳಿ ಬೀಸುತ್ತಿದೆ. ಹಳೆಯ ದೇವದಾಸಿ ಪದ್ದತಿ ಯಥಾವತ್ತಾಗಿ ಮುಂದುವರೆಯುತ್ತಿಲ್ಲ; ಅದಕ್ಕೆ ಕಾರಣವೂ ಇದೆ. ತೊಂಬತ್ತರ ದಶಕದ ಹೊತ್ತಿಗೆ ಸರಕಾರ ದೇವದಾಸಿ ಪದ್ದತಿಯ ನಿರ್ಮೂಲನೆ ಕುರಿತು ಮಂಡಿಸಿದ ಕಾನೂನು ಇಲ್ಲಿನ ಜನರಲ್ಲಿ ಕೊಂಚ ಭಯ ಹುಟ್ಟಿಸಿದೆ. ಜೊತೆಗೆ ಸರ್ಕಾರೇತರ ಸಂಘ ಸಂಸ್ಥೆಗಳು ‘ದಾಸ್ಯ’ದ ನೆರಳಿಂದ ಈ ಹೆಣ್ಣುಮಕ್ಕಳನ್ನು ಹೊರ ತರುವ ಕೆಲಸ ಮಾಡುತ್ತಿವೆ. ಇದರ ಪರಿಣಾಮ ಎಳೆ ವಯಸ್ಸಿನ ಹೆಣ್ಣು ಮಕ್ಕಳು ಅಕ್ಷರ ಕಲಿಯಲು ಆರಂಭಿಸಿದ್ದಾರೆ. ಹರೆಯ ಕಾಲಿಡುವ ಮುನ್ನವೇ ಮುತ್ತು ಕಟ್ಟಿಸಿಕೊಳ್ಳಬೇಕಿದ್ದವರಿಗೂ ಮದುವೆ ಯೋಗ ಬಂದಿದೆ. ಬಹುಶಃ ತಲೆಮಾರಿಂದ ತಲೆಮಾರಿಗೆ ದೇವದಾಸಿಯರಾಗುವುದಕ್ಕಾಗಿಯೇ ಹುಟ್ಟುತ್ತಿದ್ದ ಮನೆಯ ಹೆಣ್ಣು ಮಕ್ಕಳಲ್ಲೂ ಕೂಡ ಮೂಢನಂಬಿಕೆ ಮತ್ತು ದಾಸ್ಯದ ಕುರುಹುಗಳು ಅಳಿಸಿ ಹೋಗುತ್ತಿವೆ. ಇದು ಬದಲಾವಣೆಯ ಒಂದು ಮುಖ ಅಷ್ಟೆ.

ಆದರೆ ಇನ್ನೊಂದೆಡೆ, ಹೊಸ ತಲೆಮಾರಿನ ಹೆಣ್ಣು ಮಕ್ಕಳಿಗೆ ಗುಪ್ತ್ ಗುಪ್ತ್ ಆಗಿ ಮುತ್ತು ಕಟ್ಟಿಸಲಾಗುತ್ತಿದೆ. ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ ಎಂದು ಬಿಂಬಿತವಾಗುವ ವಾತಾವರಣದ ಒಳಗೆಲ್ಲೊ ಇಂತಹ ಒಂದೆರಡು ಘಟನೆಗಳು ನಡೆದು ಹೋಗಿರುತ್ತವೆ. ಇದಕ್ಕೆ ಹಳೆಯ ಜಾತಿ ಮೌಲ್ಯಗಳು ಸೃಷ್ಠಿಸಿದ ಪರಿಸರ ಎಷ್ಟು ಕಾರಣವೋ, ಸಮುದಾಯದ ಒಳಗೆ ಇನ್ನೂ ಬೇರು ಬಿಟ್ಟಿರುವ ಅಭದ್ರತೆ ಮತ್ತು ಶಿಕ್ಷಣದ ಕೊರತೆಯೂ ಅಷ್ಟೆ ಕಾರಣ.

ಪಯಣದಲ್ಲಿ ಸಿಕ್ಕ ದೇವದಾಸಿ ಹೆಣ್ಣು ಮಕ್ಕಳದ್ದು ವಿಭಿನ್ನ ಕತೆಗಳಿವೆ. ಹಳೆಯ ಪದ್ದತಿ ವಿರುದ್ಧ ಸಿಡಿದೆದ್ದು, ಸಾಮಾನ್ಯ ಬದುಕು ಕಟ್ಟಿಕೊಂಡ ಹೆಣ್ಣುಮಕ್ಕಳಿಗಿಂತ ವೇಶ್ಯಾವಾಟಿಕೆಯನ್ನೇ ‘ವೃತ್ತಿ’ಯಾಗಿ ಆಯ್ದುಕೊಂಡ ಒಂದು ಕಾಲದ ದೇವದಾಸಿ ಮಹಿಳೆಯರ ಚಿತ್ರಣವಿದೆ. ಒಂದೆಡೆ ಊರು, ಮನೆ, ಕೇರಿಗಳಲ್ಲಿ ತಣ್ಣಗೆ ದಂಧೆ ನಡೆಸುವವರ ಜೊತೆಯಲ್ಲೇ ಸಾಂಗ್ಲಿ, ಪುಣೆ, ಬಾಂಬೆಯಂತಹ ನಗರಗಳಿಗೆ ‘ವಲಸೆ’ ಹೋಗಿ ಶೋಕಿ ಜೀವನಕ್ಕೆ ಮರುಳಾದವರ ವಿವರಗಳೂ ಇವೆ. ಒಂದು ಕೋನದಲ್ಲಿ ‘ಇಷ್ಟೆ’ ಅಂತ ಅನ್ನಿಸುವ ಇವರ ಬದುಕು ಮತ್ತೊಂದು ಕಡೆಯಿಂದ ಸಂಕೀರ್ಣ ಅಂತ ಅನ್ನಿಸುತ್ತದೆ. ಅದಕ್ಕಾಗಿಯೇ ಹೇಳಿದ್ದು ಎಲ್ಲವೂ ಅರ್ಥವಾದಂತಾಗಿ ಏನೂ ಅರ್ಥವಾಗದ ನಿಗೂಢ ಲೋಕ ‘ದೇವದಾಸಿ’ಯರದು ಅಂತ…

(ನಾಳೆಗೆ)

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top