An unconventional News Portal.

ದೇವದಾಸಿಯರ ನಾಡಿನಲ್ಲಿ- ಭಾಗ 4: ಆಚರಣೆಯೇ ಬಂಡವಾಳವಾದ ಬಗೆ…

ದೇವದಾಸಿಯರ ನಾಡಿನಲ್ಲಿ- ಭಾಗ 4: ಆಚರಣೆಯೇ ಬಂಡವಾಳವಾದ ಬಗೆ…

ದೇವದಾಸಿ ಪದ್ದತಿಯ ಇತಿಹಾಸವನ್ನು ಕೆದುಕುವ ಅಗತ್ಯ ಇವತ್ತಿಲ್ಲ. ಅಂತಹದೊಂದು ಆಚರಣೆಯನ್ನೇ ಬಂಡವಾಳ ಮಾಡಿಕೊಂಡ ವರ್ಗವೊಂದು ಬೆಳೆದು ನಿಂತಿರುವುದು ಹೊಸ ಬೆಳವಣಿಗೆ. ಅದನ್ನು ಒಡೆದು ಹೊಸ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭಕ್ಕೆ ಸಾಧ್ಯವಾಗಲಾರದು…

ಭಾಗ-4: 

ಜನನಿಭಿಡ ರಸ್ತೆ; ಪಕ್ಕದಲ್ಲೇ ಹಾದು ಹೋಗುವ ಗಲ್ಲಿ. ಸೀದಾ ಒಳಹೊಕ್ಕರೆ ಸಾಲು ಸಾಲು ಮನೆಗಳು. ಬೀದಿಯ ಕೊನೆಯಲ್ಲಿ ಪುಟ್ಟ ಕಿರಾಣಿ ಅಂಗಡಿ. ಊರಿಗೆ ಹೊಸಬರಾದರೆ ಕೊಂಚ ಅನುಮಾನದಿಂದ ನೋಡುವ ಹೆಂಗಸರ ದಂಡು. ಜಮಖಂಡಿಯ ಅಂಬೇಡ್ಕರ್ ವೃತ್ತದ ಹತ್ತಿರವಿರುವ ರುದ್ರಸ್ವಾಮಿ ಪೇಟೆಯಲ್ಲಿ ಕಾಗೆ ಕಲ್ಲವ್ವ ಎಂಬ ಮಹಿಳೆಯ ಹೆಜ್ಜೆಗಳನ್ನು ಹಿಂಬಾಲಿಸುತ್ತಿದ್ದ ಹೊತ್ತಿಗೆ ದೇವದಾಸಿಯರ ಲೋಕದ ಅಂತರಂಗ ಸುಮಾರಾಗೇ ಅರ್ಥವಾಗಿತ್ತು. ಇದಕ್ಕೂ ಮುಂಚೆ ಸುತ್ತಿದ ಹಳ್ಳಿಗಳ, ತಾಲೂಕು ಕೇಂದ್ರಗಳ ದೇವದಾಸಿ ಮಹಿಳೆಯರ ವಾಸಸ್ಥಾನಗಳು ಮತ್ತು ಕೆಲವು ಅಪರಿಚಿತ ಮುಖಗಳು ಬಿಚ್ಚಿಟ್ಟ ಸಂಗತಿಗಳು; ಇವತ್ತು ಅನಿಷ್ಟ ಸಂಪ್ರದಾಯವೊಂದು ಆಚರಣೆ, ಮೂಢನಂಬಿಕೆ ಎಂಬ ತರ್ಕಗಳನ್ನು ಮೀರಿ ಹೇಗೆ ಬೆಳೆದಿದೆ ಎಂಬುದನ್ನು ಅರ್ಥಪಡಿಸಿತ್ತು. ಅದರಲ್ಲೂ ಮುಧೋಳದ ಬಸ್ ನಿಲ್ದಾಣ ಪಕ್ಕದ ಗಲ್ಲಿಯಲ್ಲಿ ಸಿಕ್ಕ ಹೇಮಾ ಮಾತುಗಳಲ್ಲಿ ಇವತ್ತಿನ ದೇವದಾಸಿಯರ ನೈಜ ಪರಿಸ್ಥಿತಿ ವ್ಯಕ್ತವಾಗಿತ್ತು.

ಅವತ್ತು ಮಾತುಕತೆ ಮುಗಿಸಿ ಹೊರಬಂದಾಗ ಇಳೀ ಸಂಜೆ ಹೊತ್ತು. ಇನ್ನೂ ಹದಿನೈದು-ಹದಿನಾರು ವರ್ಷದ ಹುಡುಗಿಯೊಬ್ಬಳು ಅಂಗಡಿಯ ಮುಂದೆ ಮುಳುಗುತ್ತಿದ್ದ ಸೂರ್ಯನನ್ನೇ ನೋಡುತ್ತ ನಿಂತಿದ್ದಳು. ಆಲ್ಲಿಗೆ ವ್ಯಕ್ತಿಯೊಬ್ಬನ ಆಗಮನವಾಯಿತು. ಅದೇ ಹೊತ್ತಿಗೆ ಕರೆದಂತೆ ಅಂಗಡಿಯ ಬದಿಗಿದ್ದ ಮನೆಯಿಂದ ನಾಲ್ಕಾರು ಮಹಿಳೆಯರು ಹೊರಬಂದರು. ಎಲ್ಲರೂ ಚೆಂದದ ಉಡುಗೆ, ಮೇಕಪ್ ಮಾಡಿಕೊಂಡ ಬಗೆ ಗಮನಸೆಳೆಯುವಂತಿತ್ತು. ಹೊರಗೆ ನಿಂತ ಹುಡುಗಿ ವಿಚಾರದಲ್ಲಿ ಅವರ ನಡುವೆ ಮಾತುಕತೆ ಶುರುವಾಯಿತು. ಅದರ ಪ್ರಕಾರ ಹುಡುಗಿ ಮಾತು ಕೊಟ್ಟಿದ್ದಳು. ಇವಳನ್ನು ನಂಬಿಕೊಂಡು ಐಬಿಯಲ್ಲಿ ಉಳಿದುಕೊಂಡವರ ಜತೆ ವ್ಯವಹಾರ ಕುದುರಿತ್ತು. ಆದರೆ ಇದೀಗ ಬರಲ್ಲ ಅಂದುಬಿಟ್ಟರೆ ನಿಮ್ಮನ್ನು ಕರೆದುಕೊಂಡು ಹೋಗಿಯೂ ಪ್ರಯೋಜನವಿಲ್ಲ ಎಂದು ಧಮಕಿ ಹಾಕುವ ದನಿಯಲ್ಲಿ ಆತ ಮಹಿಳೆಯರ ಮುಂದೆ ಕೂಗಾಡುತ್ತಿದ್ದ. ಸುತ್ತ ಮುತ್ತಲಿನ ಮನೆಯ ಹೆಣ್ಣುಮಕ್ಕಳು ನಡೆಯುತ್ತಿದ್ದ ಘಟನೆಗೆ ತಣ್ಣನೆಯ ಪ್ರತಿಕ್ರಿಯೆ ನೀಡುತ್ತ ಕುಳಿತಿದ್ದರು. ಕೊನೆಗೆ ಹುಡುಗಿ ಒಲ್ಲದ ಮನಸ್ಸಿಂದ ಅವರ ಜತೆ ಹೆಜ್ಜೆ ಹಾಕಿದಳು. ಮುಖ್ಯ ರಸ್ತೆಯಲ್ಲಿ ನಿಂತಿದ್ದ ಬಿಳಿ ಓಮ್ನಿ ಹತ್ತಿ ಐಬಿ ಮಾರ್ಗದಲ್ಲಿ ಮರೆಯಾದರು.

ಕಣ್ಣೆದುರಿಗೇ ನಡೆದ ಈ ಘಟನೆಯ ನಂತರ ದೇವದಾಸಿಯರ ಪರಿಸ್ಥಿತಿ ಹೇಗೆ ಬದಲಾಗಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಸಿಕ್ಕಿತ್ತು. ಆತ ಸ್ಥಳೀಯ ಮಟ್ಟದ ರಾಜಕಾರಣಿ. ಮುಂದಿನ ಬಾರಿ ಅಲ್ಲಿನ ತಾಲೂಕು ಪಂಚಾಯ್ತಿ ಚುನಾವಣೆಗೆ ನಿಲ್ಲುವುದು ಖಾತ್ರಿಯಾಗಿದೆ ಎಂಬ ಮಾಹಿತಿಯನ್ನು ಗಲ್ಲಿ ಹುಡುಗರು ನೀಡಿದರು. ಅದಾದ ಮಾರನೇ ದಿನ, ಮುಧೋಳದಿಂದ 17 ಕಿ. ಮೀ ದೂರದಲ್ಲಿರುವ ಜಮಖಂಡಿಯಲ್ಲಿ, ಕಾಗೆ ಕಲ್ಲವ್ವ ಎಂಬ ದೇವದಾಸಿ ಮಹಿಳೆಯ ಜತೆ ಹೆಜ್ಜೆ ಹಾಕುವ ಹೊತ್ತಿಗೂ ಆಕೆಯ ಸುತ್ತಮುತ್ತ ಇಂತವರದ್ದೇ ಒಂದು ತಂಡ ಇರುವುದು ಅನುಭವಕ್ಕ ಬಂದಿತು.

ಜಮಖಂಡಿ ನಗರದ ದೇವದಾಸಿ ಮಹಿಳೆಯರು ವಾಸಿಸುವ ಗಲ್ಲಿಯಲ್ಲಿ...

ಜಮಖಂಡಿ ನಗರದ ದೇವದಾಸಿ ಮಹಿಳೆಯರು ವಾಸಿಸುವ ಗಲ್ಲಿಯಲ್ಲಿ…

ದೇವದಾಸಿ ಎಂಬ ಹಳೆಯ ಅನಿಷ್ಟ ಪದ್ಧತಿ ಕೂಡ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಕೆಲವು ಕಡೆಗಳಲ್ಲಿ ಪೂರ್ಣ ಪ್ರಮಾಣದ ದಂಧೆಯ ಸ್ವರೂಪ ಪಡೆದುಕೊಂಡಿದೆ. ಅದರಲ್ಲೂ ತಾಲೂಕು ಕೇಂದ್ರಗಳಲ್ಲಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸ್ಥಳೀಯ ರಾಜಕಾರಣಿಗಳು, ಅಧಿಕಾರಿಗಳ ಪಾಲುದಾರಿಕೆಯಿಂದಾಗಿ ಇನ್ನಷ್ಟು ಬಲಿತು ನಿಂತಿದೆ. ಕೆಲವು ಕಡೆಗಳಲ್ಲಿ ದೇವದಾಸಿ ಕಲ್ಯಾಣದ ಹೆಸರಿನಲ್ಲಿ ಹುಟ್ಟಿಕೊಂಡವರು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಅದೇ ವೇಳೆ ಸಂಪ್ರದಾಯದ ಸೆರಗಿನ ಮರೆಯಲ್ಲಿ ವೇಶ್ಯಾವಾಟಿಕೆಯನ್ನೂ ನಡೆಸುತ್ತಿದ್ದಾರೆ. ಇದೇ ಹೆಣ್ಣು ಮಕ್ಕಳನ್ನು ಪೂನಾ, ಬಾಂಬೆ, ದಿಲ್ಲಿ ಹಾಗೂ ಬೆಂಗಳೂರಿಗೂ ಕಳುಹಿಸಿ ಕೈತುಂಬ ಕಾಸು ಸಂಪಾದಿಸುವ ಹೊಸ ದಂಧೆ ಸೃಷ್ಟಿಸಿಕೊಂಡಿದ್ದಾರೆ.

ಹೀಗೆ, ಒಂದು ಕಡೆ ಹಳೆಯ ಸಂಪ್ರದಾಯ ಮೀರುವ ಅಗತ್ಯಗಳ ನಡುವೆಯೇ ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿರುವ ವೇಶ್ಯಾವಾಟಿಕೆ ದಂಧೆಯ ನಡುವೆ ಸಮುದಾಯದ ಹೆಣ್ಣು ಮಕ್ಕಳು ಸಿಲುಕಿದ್ದಾರೆ. ಹಾಗಂದರೆ ಸಂಪೂರ್ಣ ಸತ್ಯ ಅಂತಾಗುವುದಿಲ್ಲ. ಬಹುತೇಕರು ಸ್ವ ಇಚ್ಚೆಯಿಂದ ವಲಸೆ ಪ್ರಕ್ರಿಯೆಗೆ ಒಳಗಾಗುತ್ತಿದ್ದಾರೆ. ಎಲ್ಲಾ ಕಡೆಯೂ ಅತೀವ ಬಡತನವೇ ಇದಕ್ಕೆ ಕಾರಣ ಅನ್ನಲೂ ಸಾಧ್ಯವಿಲ್ಲ. ಒಂದು ಹಂತಕ್ಕೆ ಬೆಳೆದ ನಂತರ ಹೊಸ ಹೊಸ ಲಾಲಸೆಗಳನ್ನು ಪೂರೈಸಿಕೊಳ್ಳಲು ಅಪಾರ ಪ್ರಮಾಣದ ಹಣವನ್ನು ತೊಡಗಿಸುತ್ತಿರುವ ದೇವದಾಸಿ ಕುಟುಂಬಗಳೂ ಇವೆ. ಇದೊಂದು ರೀತಿಯ ಸಂಕೀರ್ಣ ಪರಿಸ್ಥಿತಿ. ಇದರಿಂದ ಹೊರಬರಲು ಇನ್ನೂ ಹಳೆಯ ದೇವದಾಸಿ ನಿಷೇಧ ಕಾಯ್ದೆಯಿಂದಾಗಲೀ, ಪುನರ್ ವಸತಿ ಯೋಜನೆಗಳಿಂದಾಗಲೀ ಸಾಧ್ಯವಿಲ್ಲ. ಯಾಕೆಂದರೆ ಅವುಗಳ ಅವ್ಯವಸ್ಥೆಗಳದ್ದೇ ದೊಡ್ಡ ಪಟ್ಟಿ ಇದೆ…

(ನಾಳೆಗೆ)

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top