An unconventional News Portal.

15 ಕೋಟಿ ಸಂಬಳಕ್ಕೆ ಮುಕೇಶ್ ಅಂಬಾನಿ ತೃಪ್ತಿ: ವೇತನ ತಾರತಮ್ಯದ ಪ್ರಮಾಣ ಎಷ್ಟು?

15 ಕೋಟಿ ಸಂಬಳಕ್ಕೆ ಮುಕೇಶ್ ಅಂಬಾನಿ ತೃಪ್ತಿ: ವೇತನ ತಾರತಮ್ಯದ ಪ್ರಮಾಣ ಎಷ್ಟು?

ಕಳೆದ ಎಂಟು 8 ವರ್ಷಗಳಿಂದ ದೇಶದ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಮ್ಮ ಸಂಬಳವನ್ನು ಹೆಚ್ಚು ಮಾಡಿಕೊಂಡಿಲ್ಲ ಎಂಬ ಸುದ್ದಿ ಇದೀಗ ಹೊರಬಿದ್ದಿದೆ. ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ವರದಿಯಲ್ಲಿ ಈ ವರದಿ ಬಿಡಗಡೆಯಾಗಿದ್ದು; ಅಂಬಾನಿ ತಮ್ಮ ಸಂಬಳವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕಳೆದ ಎಂಟು ವರ್ಷಗಳಿಂದ ಮುಕೇಶ್ ಅಂಬಾನಿ ತಮ್ಮ ಸಂಸ್ಥೆ ಕಡೆಯಿಂದ ವಾರ್ಷಿಕ 15 ಕೋಟಿ ಸಂಬಳವನ್ನು ಪಡೆಯುತ್ತಿದ್ದಾರೆ. ಇದರ ಜತೆಗೆ ಅವರ ವಾರ್ಷಿಕ ಖರ್ಚಿಗಾಗಿ ಸುಮಾರು 24 ಕೋಟಿ ರೂಪಾಯಿಗಳನ್ನು ಸಂಸ್ಥೆ ಭರಿಸುತ್ತಿದೆ.

“ಅಧ್ಯಕ್ಷರಿಗೆ ಕಂಪನಿಯ ಆಡಳಿತ ಮಂಡಳಿ 38. 75 ಕೋಟಿ ವಾರ್ಷಿಕ ಸಂಬಳವನ್ನು ಬಿಡುಗಡೆ ಮಾಡಿತ್ತು. ಆದರೆ ಅವರು ಖಾಸಗಿ ಸಂಸ್ಥೆಗಳ ಆಡಳಿತ ಮಂಡಳಿಯವರು ಸಂಬಳ ಪಡೆಯುವ ವಿಚಾರದಲ್ಲಿ ಯಾವ ಮಾದರಿಯನ್ನು ಅನುಸರಿಸಬೇಕು ಎಂಬುದಕ್ಕೆ ಅವರೇ ಉದಾಹರಣೆಯಾಗಿದ್ದಾರೆ. ಹೀಗಾಗಿ 15 ಕೋಟಿ ರೂಪಾಯಿಗಳನ್ನು ಮಾತ್ರವೇ ಪಡೆದುಕೊಳ್ಳುತ್ತಿದ್ದಾರೆ,” ಎಂದು 2015-16ರ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ವರದಿ ಹೇಳಿದೆ.

ಮುಕೇಶ್ ಅಂಬಾನಿ ಸಂಬಂಧಿಗಳೂ ಆಗ ನಿಖಿಲ್ ಆರ್ ಮೇಸ್ವಾನಿ ಹಾಗೂ ಹಿತಲ್ ಆರ್ ಮೇಸ್ವಾನಿ ಕ್ರಮವಾಗಿ 14. 42 ಹಾಗೂ 14. 41 ಕೋಟಿ ವಾರ್ಷಿಕ ಸಂಬಳವನ್ನು ನೀಡಲು ಕಂಪನಿ ತೀರ್ಮಾನಿಸಿದೆ. ಕಳೆದ ಸಾಲಿನಲ್ಲಿ ಇವರಿಬ್ಬರಿಗೂ ವಾರ್ಷಿಕ 12. 03 ಕೋಟಿ ರೂಪಾಯಿ ಸಂಬಳ ನೀಡಲಾಗುತ್ತಿತ್ತು.

ನೀತಾ ಅಂಬಾನಿ ಕಂಪನಿಯ ಆಡಳಿತ ಮಂಡಳಿಯ ನಿರ್ದೇಶಕಿಯಾಗಿದ್ದು ವಾರ್ಷಿಕ 1. 20 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಇದರ ಜತೆಗೆ ಅವರ ಒಂದು ಭೇಟಿಗೆ 6 ಲಕ್ಷ ರೂಪಾಯಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ನೀಡುತ್ತಿದೆ. ನೀತಾ ಮುಕೇಶ್ ಅಂಬಾನಿ ಅವರ ಪತ್ನಿ.

ವೇತನ ತಾರತಮ್ಯ:

ಇದರ ಜತೆಗೆ ಕಾರ್ಪೊರೇಟ್ ಕಂಪನಿಗಳನ್ನು ವೇತನ ತಾರತಮ್ಯದ ವಿಚಾರಗಳು ಮುನ್ನೆಲೆ ಬಂದಿವೆ. ಖಾಸಗಿ ಕಂಪನಿಗಳಲ್ಲಿ ತಳಮ್ಟದ ನೌಕರರಿಗೂ ಹಾಗೂ ಆಡಳಿತ ಮಂಡಳಿಗಳಲ್ಲಿ ಇರುವವರಿಗೂ ಸಂಬಳ ವಿಚಾರದಲ್ಲಿ ಅಜಾಗಜಾಂತರ ವ್ಯತ್ಯಾಸಗಳಿರುವುದನ್ನು ಹಲವು ವರದಿಗಳು ಬಹಿರಂಗಪಡಿಸಿವೆ.

ಈ ಕುರಿತು ಕಳೆದ ವರ್ಷ ‘ವಿಜಯ ಕರ್ನಾಟಕ’ ಪತ್ರಿಕೆ ಪ್ರಕಟಿಸಿದ್ದ ಲೇಖನದಲ್ಲಿ ಸಾಕಷ್ಟು ಮಾಹಿತಿ ನೀಡಲಾಗಿತ್ತು.

ಮುಕೇಶ್ ಅಂಬಾನಿಯವರು ಪಡೆಯುತ್ತಿರುವ ಸಂಬಳವನ್ನು ರಿಲಯನ್ಸ್ ಕಂಪನಿಯ ಸಾಮಾನ್ಯ ಉದ್ಯೋಗಿಯ ವೇತನಕ್ಕೆ ಹೋಲಿಸಿದರೆ, ಭಾರಿ ವ್ಯತ್ಯಾಸ ಇರುವ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಮುಕೇಶ್ ಅಂಬಾನಿ ಅವರು ಸಾಮಾನ್ಯ ಉದ್ಯೋಗಿಗಿಂತ 205 ಪಟ್ಟು ಅಧಿಕ ವೇತನ ಪಡೆಯುತ್ತಿದ್ದಾರೆ ಎಂದರೆ ನೀವು ನಂಬುತ್ತೀರಾ? ಇದು ಅಕ್ಷರಶಃ ನಿಜ. 2014-15ನೇ ಸಾಲಿನಲ್ಲಿ ಮುಕೇಶ್ 15 ಕೋಟಿ ರೂ. ವಾರ್ಷಿಕ ವೇತನ ಪ್ಯಾಕೇಜ್ ಪಡೆದರೆ, ರಿಲಯನ್ಸ್‌ನ ಸಾಮಾನ್ಯ ಉದ್ಯೋಗಿ ವಾರ್ಷಿಕ ವೇತನದಲ್ಲಿ ಶೇ 3.71ರಷ್ಟು ಹೆಚ್ಚಳವಾಗಿ, 7.29 ಲಕ್ಷ ರೂ. ಪಡೆಯುತ್ತಿದ್ದಾರೆ.

ಅದಿರಲಿ. ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ, ಐಟಿಸಿ ಕಂಪನಿಯ ಕಾರ್ಯಕಾರಿ ಅಧ್ಯಕ್ಷ ವೈ.ಸಿ. ದೇವೇಶ್ವರ್ ಅವರ ವೇತನ ಐಟಿಸಿಯ ಸಾಮಾನ್ಯ ಉದ್ಯೋಗಿಗೆ ತಾಳೆ ಹಾಕಿದರೆ 439 ಪಟ್ಟು ಹೆಚ್ಚಿದೆ. ಕಳೆದ ವರ್ಷ ದೇವೇಶ್ವರ್ ವೇತನದಲ್ಲಿ ಶೇ 24ರಷ್ಟು ಏರಿಕೆ ಆಗಿ, 15 ಕೋಟಿ ರೂ.ನಷ್ಟಿದ್ದರೆ, ಸಾಮಾನ್ಯ ಉದ್ಯೋಗಿಗೆ ಶೇ 14ರಷ್ಟು ವೇತನ ಹೆಚ್ಚಳ ಆಗಿದೆ.

ಹೊಸ ಕಂಪನಿ ಕಾಯ್ದೆ ಮತ್ತು ಸೆಬಿಯ ಇತ್ತೀಚಿನ ಕಾರ್ಪೊರೇಟ್ ಆಡಳಿತ ಸಂಹಿತೆ ಕಳೆದ ಅಕ್ಟೋಬರ್‌ನಿಂದ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ನೋಂದಾಯಿತ ಕಂಪನಿಗಳು, ಇದೀಗ ನೌಕರರು ಮತ್ತು ಆಡಳಿತ ಮಂಡಳಿಯ ವೇತನ ಅನುಪಾತದ ವಿವರ ಒದಗಿಸುತ್ತಿವೆ. ಈ ವಿವರದ ಆಸಕ್ತಿದಾಯಕವಾದ ವೇತನ ಹೋಲಿಕೆಯನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು ಮೂಲದ ಮತ್ತೊಬ್ಬ ಉದ್ಯಮ ದಿಗ್ಗಜ, ವಿಪ್ರೊ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜೀಂ ಪ್ರೇಮ್‌ಜಿ ಅವರ ಸಂಬಳ ಅಲ್ಲಿನ ಸರಾಸರಿ ಉದ್ಯೋಗಿಗಿಂತ 89 ಪಟ್ಟು ಅಧಿಕ. ಅಜೀಂ ಪ್ರೇಮ್‌ಜಿ ವೇತನದಲ್ಲಿ ಕಳೆದ ವರ್ಷ ಶೇ 53ರಷ್ಟು ಕುಸಿದು, ಒಟ್ಟು 4.78 ಕೋಟಿ ರೂ.ನಷ್ಟಿತ್ತು. ಅಲ್ಲಿನ ಸಾಮಾನ್ಯ ಉದ್ಯೋಗಿಯ ವೇತನ ಹೆಚ್ಚಳ ಕೇವಲ ಶೇ 9.5ರಷ್ಟಾಗಿದೆ. ವಿಪ್ರೊ ಸಿಇಒ ಟಿ.ಕೆ. ಕುರಿಯನ್ ಅವರ ವೇತನ ಸಾಮಾನ್ಯ ನೌಕರನಿಗಿಂತ 170 ಪಟ್ಟು ಹೆಚ್ಚು. ಶೇ 39ರಷ್ಟು ವೇತನ ಹೆಚ್ಚಳ ಆಗಿತ್ತು.

ಆದರೆ, ಎಚ್‌ಡಿಎಫ್‌ಸಿ ಕಂಪನಿಯ ಅಧ್ಯಕ್ಷ ದೀಪಕ್ ಪರೇಖ್ ಅವರು ಸಾಮಾನ್ಯ ಉದ್ಯೋಗಿಗಿಂತ ಬರೀ 19 ಪಟ್ಟು ಹೆಚ್ಚಿನ ವೇತನ ಗಳಿಸುತ್ತಿದ್ದಾರಂತೆ. ಈ ಅಂಕಿಅಂಶಗಳು 2014-15ನೇ ಸಾಲಿಗೆ ಅನ್ವಯ. ಅದೇ ಎಚ್‌ಡಿಎಫ್‌ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಪುರಿ 117 ಪಟ್ಟು ಹೆಚ್ಚಿನ ಪಗಾರ ಪಡೆಯುತ್ತಿದ್ದಾರೆ. ಅವರ ವಾರ್ಷಿಕ ವೇತನ 7.4 ಕೋಟಿ ರೂ. ಆದರೆ, ವೇತನ ಹೆಚ್ಚಳ ಪ್ರಮಾಣ ಶೇ 15. ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚರ್ ಅಲ್ಲಿನ ಸಾಮಾನ್ಯ ಉದ್ಯೋಗಿಗಿಂತ 97 ಪಟ್ಟು ಜಾಸ್ತಿ ಸಂಬಳ ಸ್ವೀಕರಿಸುತ್ತಿದ್ದಾರೆ. ಎಕ್ಸಿಸ್ ಬ್ಯಾಂಕ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಶರ್ಮ 74 ಪಟ್ಟು ಹೆಚ್ಚು.

ಬೆಂಗಳೂರಿನ ಇನ್ಫೋಸಿಸ್ ಕಂಪನಿಯಲ್ಲಿ ಆಡಳಿತ ಮಂಡಳಿ ಸಿಬ್ಬಂದಿಗೆ ಕಳೆದ ವರ್ಷ ಶೇ 57.7ರಷ್ಟು ವೇತನ ಹೆಚ್ಚಳವಾದರೆ, ಸಾಮಾನ್ಯ ಉದ್ಯೋಗಿಗಳು ವೇತನದಲ್ಲಿ ಶೇ 5.2ರಷ್ಟು ಹಿನ್ನಡೆ ಅನುಭವಿಸಿದ್ದಾರೆ.

ಸಾಮಾನ್ಯ ನೌಕರರ ವೇತನ ನಿರ್ಲಕ್ಷಿಸಿ, ಉನ್ನತಾಧಿಕಾರಿಗಳಿಗೆ ಕೈತುಂಬಾ ಎಣಿಸುವ ಪ್ರವೃತ್ತಿ ಹಾಗೂ ವಿದೇಶಿ ಕಂಪನಿಗಳಿಗಿಂತ ಭಾರತೀಯ ಕಂಪನಿಗಳು ಸಿಇಒಗಳಿಗೆ ನೀಡುತ್ತಿರುವ ವಿಪರೀತ ವೇತನ ಶ್ರೇಣಿಯಲ್ಲಿ ಸಮತೋಲನ ಕಾಪಾಡುವ ಕ್ರಮವಾಗಿ ಸೆಬಿ, ಕಾರ್ಪೊರೇಟ್ ಆಡಳಿತ ಸಂಹಿತೆ ಜಾರಿಗೆ ತಂದಿದೆ.

ಯಾರ ಪಾಲೆಷ್ಟು?: 

ಇವತ್ತಿನ ಆರ್ಥಿಕತೆಯಲ್ಲಿ ಹಣ ಇದ್ದವರ ಬಳಿಯೇ ಹಣ ಹೆಚ್ಚು ಸೇರುವ ಸಾಧ್ಯತೆಗಳು ಹೆಚ್ಚಿವೆ. ಮಾನವ ಅಭಿವೃದ್ಧಿ ಸಮೀಕ್ಷೆ 2011-12ರ ಪ್ರಕಾರ, ಇಡೀ ದೇಶದ ಜನಸಂಖ್ಯೆಯನ್ನು 5 ವಿಭಾಗಗಳನ್ನಾಗಿ ಮಾಡಿದರೆ, ಅವರ ವಾರ್ಷಿಕ ಆದಾಯ ಎಷ್ಟಾಗುತ್ತದೆ ಎಂಬ ಪಟ್ಟಿಯೊಂದನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಬಡವರ ಆದಾಯಕ್ಕೂ, ಕೊನೆಯಲ್ಲಿರುವ ಶ್ರೀಮಂತರ ಆದಾಯಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಬಹುದು.

ಆದಾಯವಾರು ವರ್ಗಗಳು ವಾರ್ಷಿಕ ಆದಾಯ (ರೂ. ಗಳಲ್ಲಿ)
ಅತ್ಯಂತ ಬಡವರ್ಗ 1,000 – 33,000
ಎರಡನೇ ವರ್ಗ 33,001 – 55,640
ಮೂರನೇ ವರ್ಗ 55,641 – 88,820
ನಾಲ್ಕನೇ ವರ್ಗ 88,821 – 1,59,600
ಶ್ರೀಮಂತ ವರ್ಗ 1,59,601+

ಚಿತ್ರ: ಎನ್ ಡಿ ಟಿವಿ

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top