An unconventional News Portal.

ಕಪ್ಪು ಸಮುದ್ರದಲ್ಲಿ ರಷ್ಯಾ ವಿಮಾನ ಪತನ: ಕ್ರಿಸ್ಮಸ್ ಆಚರಣೆಗೆ ಹೊರಟವರ 92 ಜನ ದುರಂತ ಅಂತ್ಯ

ಕಪ್ಪು ಸಮುದ್ರದಲ್ಲಿ ರಷ್ಯಾ ವಿಮಾನ ಪತನ: ಕ್ರಿಸ್ಮಸ್ ಆಚರಣೆಗೆ ಹೊರಟವರ 92 ಜನ ದುರಂತ ಅಂತ್ಯ

ಎಲ್ಲವೂ ಅಂದುಕೊಂಡಂತೆ ನಡೆದು ಹೋಗಿದ್ದರೆ, ಇಷ್ಟೊತ್ತಿಗೆ 8 ಮಂದಿ ವಿಮಾನ ಸಿಬ್ಬಂದಿಗಳೂ ಸೇರಿದಂತೆ 84 ಪ್ರಯಾಣಿಕರು ರಷ್ಯಾದಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿರುತ್ತಿದ್ದರು; ಆದರೆ ವಿಧಿಯಾಟ ಬೇರೆಯದೇ ಇತ್ತು.

ಸದ್ಯ ಈವರೆಗಿನ ಪ್ರಾಥಮಿಕ ಮಾಹಿತಿ ಪ್ರಕಾರ, ಶನಿವಾರ ಸೋಚಿ ವಿಮಾನ ನಿಲ್ದಾಣದಿಂದ ಹೊರಟಿದ್ದ ಟ್ವಿಪಲೇವ್ ನಾಗರೀಕ ವಿಮಾನ ಕಪ್ಪು ಸಮುದ್ರದಲ್ಲಿ ಪತನವಾಗಿದೆ. ಅದರಲ್ಲಿದ್ದ ಎಲ್ಲಾ 92 ಜನ ಸಾವನ್ನಪ್ಪಿದ್ದಾರೆ. ವಿಮಾನ ಪತನದ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನಿಖೆಗೆ ಆದೇಶಿದ್ದಾರೆ.

ದುರಂತ ಅಂತ್ಯ ಕಂಡಿರುವ ವಿಮಾನದಲ್ಲಿ ‘ಅಲೆಗ್ಝಾಂಡರ್ ಎನ್ಸೇಂಬಲ್’ ಎಂದು ಕರೆಯುವ ರಷ್ಯಾ ಮಿಲಿಟರಿಯ ತುಕಡಿಯೊಂದರ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಸೇನೆಯ ಪ್ರಕಟಣೆ ಹೇಳಿದೆ. ಅವರೆಲ್ಲರೂ, ಸಿರಿಯಾದ ಲಟಾಕಿಯಾದಿಂದ ರಷ್ಯಾ ರಾಜಧಾನಿ ಮಾಸ್ಕೋದ ಸೇನಾ ನೆಲೆಗೆ ಹಿಂತಿರುಗುತ್ತಿದ್ದರು. ಅಲ್ಲಿ ಅವರಿಗಾಗಿ ಕ್ರಿಸ್ಮಸ್ ಆಚರಣೆಗೆ ಸಿದ್ಧತೆಗಳನ್ನು ಮಾಡಲಾಗಿತ್ತು. ತುಕಡಿಯ ಮುಖ್ಯಸ್ಥ ಸೇರಿದಂತೆ ಒಟ್ಟು 65 ಸೈನಿಕರು ವಿಮಾನದಲ್ಲಿದ್ದರು.

ಅವರ ಜತೆಗೆ, ಒನ್ ರಷ್ಯಾ, ಎನ್ಟಿವಿ, ಜ್ವೇಝ್ಡಾ ಟಿವಿಯ ಪತ್ರಕರ್ತರೂ ವಿಮಾನದಲ್ಲಿ ಮರಳಿ ತವರಿಗೆ ಪ್ರಯಾಣಿಸುತ್ತಿದ್ದರು. ಈ ಮೂರೂ ವಾಹಿನಿಗಳು ರಷ್ಯಾ ಸೇನೆಯ ಅಧಿಕೃತ ಟಿವಿ ವಾಹಿನಿಗಳಾಗಿವೆ. ಇವರ ಜತೆಗೆ, ರಷ್ಯಾದ ಐದನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದುಕೊಂಡಿರುವ, ಮಾನವ ಹಕ್ಕು ಹೋರಾಟಗಾರ್ತಿ ಎಲಿಝೆವೆಟಾ ಗ್ಲಿಂಕಾ ಕೂಡ ವಿಮಾನದಲ್ಲಿದ್ದರು ಎಂದು ಪ್ರಕಟಣೆ ತಿಳಿಸಿದೆ. ಗ್ಲಿಂಕಾ ಅವರನ್ನು ‘ಡಾಕ್ಟರ್ ಲಿಸಾ’ ಎಂದು ಅಡ್ಡ ಹೆಸರಿನಿಂದ ಗುರುತಿಸಲಾಗುತ್ತಿತ್ತು.

ರಷ್ಯಾ ಮಾನವ ಹಕ್ಕು ಹೋರಾಟಗಾರ್ತಿ ಡಾ. ಲಿಸಾ.

ರಷ್ಯಾ ಮಾನವ ಹಕ್ಕು ಹೋರಾಟಗಾರ್ತಿ ಡಾ. ಲಿಸಾ.

ಮಕ್ಕಳ ರಕ್ಷಣೆ, ಕ್ಯಾನ್ಸರ್ ರೋಗಿಗಳಿಗೆ ನೆರವು ಮತ್ತು ನಿರಾಶ್ರಿತರ ಬದುಕನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಡಾಕ್ಟರ್ ಲಿಸಾ ಪಾತ್ರ ಪ್ರಶಂಸೆಗೆ ಕಾರಣವಾಗಿತ್ತು. ಯುದ್ಧ ಪೀಡಿತ ಉಕ್ರೇನ್ ಹಾಗೂ ಸಿರಿಯಾದಲ್ಲಿ ಮಾನವ ಹಕ್ಕುಗಳಿಗಾಗಿ ಅವರು ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೆ ಸಿರಿಯಾದಿಂದ ಮಕ್ಕಳನ್ನು ಮಾಸ್ಕೋಗೆ ಕರೆತಂದು ದೊಡ್ಡ ಮಟ್ಟದ ಸಂಚಲನ ಸೃಷ್ಟಿದ್ದರು. ಆಕೆ ಕೂಡ ದುರಂತ ಅಂತ್ಯ ಕಂಡ ವಿಮಾನದಲ್ಲಿ ತವರಿಗೆ ಮರಳುತ್ತಿದ್ದರು.

ಸಿರಿಯಾದ ಸೋಚಿ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಂಡು ಮಾಸ್ಕೋಗೆ ಹೊರಟಿದ್ದ ವಿಮಾನ ಕಪ್ಪು ಸಮುದ್ರ ಪ್ರವೇಶಿಸುತ್ತಿದ್ದಂತೆ ಪರಿವೀಕ್ಷಣೆಯಿಂದ ನಾಪತ್ತೆಯಾಗಿತ್ತು. ಇದೀಗ ಸೋಚಿಯಿಂದ ತಪಾಸಣೆಗೆ ಹೊರಟಿರುವ ಹೆಲಿಕಾಪ್ಟರ್ಗಳು ವಿಮಾನ ಪತನಗೊಂಡ ಜಾಗವನ್ನು ಗುರುತಿಸಿವೆ. ಜತೆಗೆ, ವಿಮಾನದಲ್ಲಿದ್ದ ಎಲ್ಲಾ 92 ಜನ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ. ಈಗಾಗಲೇ ರಷ್ಯಾದಲ್ಲಿ ಒಂದು ದಿನ ಶೋಕಾಚರಣೆಯನ್ನು ಘೋಷಿಲಾಗಿದೆ.

ಸಿರಿಯಾದಲ್ಲಿ ‘ಐಸಿಲ್’ ವಿರುದ್ಧ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಗೆ ರಷ್ಯಾ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತಿದೆ. ಇದಕ್ಕೆ ಕತಾರ್ ಮತ್ತು ಅಮೆರಿಕಾ ವಿರೋಧವನ್ನು ವ್ಯಕ್ತಪಡಿಸಿವೆ. ಈ ಹಿಂದೆ ಟರ್ಕಿಯನ್ನು ಹಾದು ಹೋಗುತ್ತಿದ್ದ ರಷ್ಯಾ ಮಿಲಿಟರಿ ವಿಮಾನವೊಂದನ್ನು ಹೊಡೆದುರುಳಿಸಲಾಗಿತ್ತು. ಈ ಸಮಯದಲ್ಲಿ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿ ವಿಶ್ವಸಂಸ್ಥೆಯ ಮಧ್ಯಪ್ರವೇಶವೂ ಆಗಿತ್ತು. ಇದೀಗ ಅದೇ ಸಿರಿಯಾದ ಯುದ್ಧ ಭೂಮಿಯಿಂದ ಮರಳುತ್ತಿದ್ದ ರಷ್ಯಾ ಸೈನಿಕರು, ಪತ್ರಕರ್ತರು ಮತ್ತು ಸರಕಾರೇತರ ಸಂಸ್ಥೆಯ ಕಾರ್ಯಕರ್ತರನ್ನು ಒಳಗೊಂಡ ವಿಮಾನ ಪತನವಾಗಿದೆ.

ಈವರೆಗಿನ ಮಾಹಿತಿ ಪ್ರಕಾರ, ಇದೊಂದು ಸಾಮಾನ್ಯ ವಿಮಾನ ಪತನ ಪ್ರಕರಣವಾಗಿ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವುದು ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಮತ್ತದು ಸಿರಿಯಾದಲ್ಲಿ ನಡೆಯುತ್ತಿರುವ ಐಸಿಎಲ್ ವಿರುದ್ಧದ ನಿರ್ಣಾಯಕ ಯುದ್ಧದ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಣೆಗಳು ಶುರುವಾಗಿವೆ.

Leave a comment

Top