An unconventional News Portal.

ಆರ್‌ಎಸ್‌ಎಸ್‌ ಅಂಗಸಂಸ್ಥೆಯಿಂದ ‘ಉತ್ತಮ ಸಂತತಿ’ ಬೆಳೆಸುವ ಯೋಜನೆ: ತಜ್ಞರು ಏನಂತಾರೆ?

ಆರ್‌ಎಸ್‌ಎಸ್‌ ಅಂಗಸಂಸ್ಥೆಯಿಂದ ‘ಉತ್ತಮ ಸಂತತಿ’ ಬೆಳೆಸುವ ಯೋಜನೆ: ತಜ್ಞರು ಏನಂತಾರೆ?

ನೀವು ಕಡಿಮೆ ಬುದ್ದಿವಂತರಾ? ನೋಡಲು ಕಪ್ಪಗಿದ್ದೀರಾ? ಆಕಾರದಲ್ಲಿ ಕುಳ್ಳಗಿದ್ದೀರಾ? ಹೇಗಿದ್ದರೂ ಇರಿ, ನಿಮ್ಮ ಮಗು ಬೆಳ್ಳಗೆ, ಉದ್ದಕ್ಕೆ, ಅತಿ ಬುದ್ದಿವಂತನಾಗಿ (ಬುದ್ದಿವಂತಳಾಗಿ) ಹುಟ್ಟಬೇಕಾ? ಹಾಗಾದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ನ ಅಂಗಸಂಸ್ಥೆಯೊಂದು ನಡೆಸುತ್ತಿರುವ ‘ಗರ್ಭ ವಿಜ್ಞಾನ ಅನುಸಂಧಾನ ಕೇಂದ್ರ’ಗಳಿಗೆ ಭೇಟಿ ನೀಡಿ ಮತ್ತು ಶುದ್ಧೀಕರಣದಲ್ಲಿ ಪಾಲ್ಗೊಳ್ಳಿ!

ಓದಲು ವಿಚಿತ್ರ ಅನ್ನಿಸುವಂತಹ, ಜೆನಟಿಕ್ಸ್ ಎಂದು ಕರೆಯುವ ವಂಶವಾಹಿನಿ ವಿಜ್ಞಾನಕ್ಕೇ ಸವಾಲು ಒಡ್ಡುವಂತಹ ಪ್ರಯೋಗವೊಂದರಲ್ಲಿ ಯಶಸ್ಸು ಕಂಡಿದ್ದೇವೆ ಎಂದು ‘ಆರೋಗ್ಯ ಭಾರತಿ’ ಎಂಬ ಸಂಘಪರಿವಾರ ಸಂಸ್ಥೆಯೊಂದು ಪ್ರಕಟಿಸಿದೆ. ಈಗಾಗಲೇ ಗುಜರಾತಿನಲ್ಲಿ ಸುಮಾರು 450 ಬೆಳ್ಳಗೆ, ಉದ್ದ ಬೆಳೆಯುವ ಮಕ್ಕಳ ಪ್ರಸೂತಿ ಮಾಡಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಇಂತಹ ಮಕ್ಕಳ ‘ಉತ್ತಮ ಸಂತಿತಿ’ಯೊಂದನ್ನು ಬೆಳೆಸಲು ‘ಆರೋಗ್ಯ ಭಾರತಿ’ ಪಣ ತೊಟ್ಟಿದೆ.

“ನಮ್ಮ ಗುರಿ ಉತ್ತಮ ಸಂತತಿ ಬೆಳೆಸುವ ಮೂಲಕ ಸಮರ್ಥ ಭಾರತವನ್ನು ನಿರ್ಮಿಸುವುದು. 2020ರ ವೇಳೆಗೆ ಅಂತಹ ಸಾವಿರ ಮಕ್ಕಳ ಪ್ರಸೂತಿಯನ್ನು ಮಾಡಿಸಲಿದ್ದೇವೆ,” ಎಂದು ಆರೋಗ್ಯ ಭಾರತಿ ಸಂಸ್ಥೆಯ ರಾಷ್ಟ್ರೀಯ ಸಂಚಾಲಕರಲ್ಲಿ ಒಬ್ಬರಾದ ಡಾ. ಕರೀಷ್ಮಾ ಮೋಹನ್‌ದಾಸ್ ನರ್ವಾನಿ ‘ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಶಕದ ಹಿಂದೆ ಗುಜರಾತಿನಲ್ಲಿ ಇಂತಹದೊಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ಮೊದಲು ಘೋಷಿಸಲಾಗಿತ್ತು. 2015ರ ವೇಳೆಗೆ ಇದನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರಲಾಯಿತು. ಈಗಾಗಲೇ ಗಜರಾತ್ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ 10 ಕಡೆ ಅನುಸಂಧಾನ ಕೇಂದ್ರಗಳನ್ನು ಈ ಸಂಸ್ಥೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿಯೂ ಕೇಂದ್ರಗಳನ್ನು ತೆರೆಯುವ ಆಲೋಚನೆ ಇದೆ. ‘ಉತ್ತಮ ಸಂತತಿ’ಯನ್ನು ಹಡೆಯುವ ಯೋಜನೆಯನ್ನು ಸಂಘಪರಿವಾರದ ಶೈಕ್ಷಣಿಕ ಅಂಗ ಸಂಸ್ಥೆ ‘ವಿದ್ಯಾ ಭಾರತಿ’ ನೆರವಿನಲ್ಲಿ ನಡೆಲಾಗುತ್ತಿದೆ.

‘ಉತ್ತಮ ಸಂತತಿ’ಗಾಗಿ:

ಬೆಳ್ಳಗಿನ, ಉದ್ದವಾಗಿ ಬೆಳೆಯುವ ಮಗು ಬೇಕು ಎಂದರೆ ‘ಆರೋಗ್ಯ ಭಾರತಿ’ ನಡೆಸುವ ಶುದ್ಧೀಕರಣದಲ್ಲಿ ಮೂರು ತಿಂಗಳುಗಳ ಕಾಲ ದಂಪತಿ ಪಾಲ್ಗೊಳ್ಳಬೇಕು. ಅದಾದ ನಂತರ ಗ್ರಹಗತಿ, ನಕ್ಷತ್ರಗಳ ಆಧಾರದ ಮೇಲೆ ದಂಪತಿ ಕೂಡಲು ಸಮಯವನ್ನು ನಿಗದಿ ಮಾಡಲಾಗುತ್ತದೆ. ಪತ್ನಿ ಗರ್ಭವತಿ ಆದ ನಂತರ ಆಹಾರ ಮತ್ತಿತರ ಪದ್ಧತಿಗಳನ್ನು ಅನುಸರಿಸಬೇಕು. ಹೀಗೆ ಮಾಡಿದರೆ ಹುಟ್ಟುವ ಮಗ ಬೆಳ್ಳಗೆ ಹುಟ್ಟತ್ತದೆ ಎನ್ನುತ್ತದೆ ‘ಗರ್ಭ ವಿಜ್ಞಾನ ಸಂಸ್ಕಾರ್’ ಯೋಜನೆ. ಈ ಯೋಜನೆ ಕೆಳಗಡೆ ಈ ಕುರಿತು ಸಂಶೋಧನೆಗಳು ನಡೆಯುತ್ತಿವೆ.

“ಬುದ್ಧಿವಂತರಲ್ಲದ, ಕಡಿಮೆ ಶೈಕ್ಷಣಿಕ ಹಿನ್ನೆಲೆಯಿಂದ ಬಂದವರೂ ಕೂಡ ಬುದ್ಧಿವಂತ ಮಕ್ಕಳನ್ನು ಪಡೆಯಬಹುದಾಗಿದೆ. ಸರಿಯಾದ ಮಾರ್ಗಸೂಚಿಗಳನ್ನು ಪಾಲಿಸಿದ್ದೇ ಆದಲ್ಲಿ, ಕಪ್ಪು ಚರ್ಮದ, ಕುಳ್ಳಗಿರುವ ಪೋಷಕರೂ ಕೂಡ ಬೆಳ್ಳಗಿನ ಮಗುವನ್ನು ಪಡೆಯಬಹುದು,” ಎಂದು ಪತ್ರಿಕೆಗೆ ಆರೋಗ್ಯ ಭಾರತಿಯ ರಾಷ್ಟ್ರೀಯ ಸಂಚಾಲಕ ಡಾ. ಹಿತೇಶ್ ಜೈನ್ ತಿಳಿಸಿದ್ದಾರೆ.

ವಿಜ್ಞಾನಕ್ಕೆ ನಿಲುಕದ್ದು:

pregnency-1

ಆದರೆ ಈ ಸಂಸ್ಥೆ ಹೇಳುವಂತೆ ತಮ್ಮಿಷ್ಟದ ಹಾಗೆ ಮಗುವನ್ನು ಗ್ರಹಗತಿಗಳ ಆಧಾರದ ಮೇಲೆ ಪಡೆಯಲು ಸಾಧ್ಯವೇ ಇಲ್ಲ ಎನ್ನುತ್ತಾರೆ ವೈದ್ಯರು. ವಂಶವಾಹಿ ವಿಚಾರದಲ್ಲಿ ಪದವಿ ಪಡೆದಿರುವ ಬೆಂಗಳೂರು ಮೂಲದ ತಜ್ಞೆ ಡಾ. ಕಾಮಿನಿ ರಾವ್, ಸಂಸ್ಥೆಯ ಸಂಶೋಧನೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ.

‘ಸಮಾಚಾರ’ದ ಜತೆ ಮಾತನಾಡಿದ ಅವರು, “ಇವೆಲ್ಲವೂ ಸಾಧ್ಯವೇ ಇಲ್ಲ. ಮೊದಲು ಅವರು ಎಂತಹ ದಂಪತಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದನ್ನು ನೋಡಬೇಕು. ಇಬ್ಬರು ಬೆಳ್ಳಗಿರುವ ದಂಪತಿಗೆ ಬೆಳ್ಳಗಿರುವ ಮಗು ಹುಟ್ಟಿದರೆ ಅದರಲ್ಲಿ ಅಚ್ಚರಿ ಪಡುವಂತದ್ದೇನು ಇಲ್ಲ. ಅದೇ ಕಪ್ಪಗಿರುವವರಿಗೆ ಬೆಳ್ಳಗಿನ ಮಗು ಹುಟ್ಟುವುದು ಸಾಧ್ಯವಿಲ್ಲ. ಮಗು ಎಂಬುದು ವಂಶವಾಹಿಯನ್ನು ಒಳಗೊಂಡಿರುವ ಪ್ರಕ್ರಿಯೆ ಹೊರತು ಅದರಲ್ಲಿ ಗ್ರಹಗತಿ, ನಕ್ಷತ್ರ ಎಂಬುದು ಬೊಗಳೆ ಅಷ್ಟೆ,” ಎಂದರು.

“ಇಬ್ಬರು ಆಫ್ರಿಕನ್ ದಂಪತಿಗೆ ಬೆಳ್ಳಗಿನ ಮಗು ಹುಟ್ಟಿಸಿ ತೋರಿಸಿದರೆ ಆಗ ನಂಬಬಹುದು,” ಎನ್ನುತ್ತಾರೆ ಆಯುರ್ವೇದ ತಜ್ಞೆ ಡಾ, ಅನಿತಾ. ಬೆಂಗಳೂರಿನಲ್ಲಿ ಶತಾಯುಷಿ ಹೆಸರಿನಲ್ಲಿ ಆಯುರ್ವೇದಿಕ್ ಕ್ಲಿನಿಕ್ ನಡೆಸುವ ಅವರೂ ಕೂಡ ‘ಆರೋಗ್ಯ ಭಾರತಿ’ ಸಂಸ್ಥೆಯ ಸಂಶೋಧನೆಯನ್ನು ಅಲ್ಲಗೆಳೆಯುತ್ತಾರೆ. “ಆಯುರ್ವೇದದಲ್ಲಿ ಆರೋಗ್ಯವಂತ ಮಗು ಪಡೆಯಲು ಹಲವು ವಿಧಾನಗಳಿವೆ. ದಿನ, ನಕ್ಷತ್ರಗಳ ಆಧಾರದ ಮೇಲೆ ದಂಪತಿ ಕೂಡಿದರೆ ಆರೋಗ್ಯವಂತ ಮಗು ಹುಟ್ಟುತ್ತದೆ ಎಂಬುದು ಥಿಯರಿ ಅಷ್ಟೆ. ವಾಸ್ತವದಲ್ಲಿ ಇದು ಸಾಧ್ಯವಾಗುವುದಿಲ್ಲ. ಆದರೆ ಗರ್ಭವತಿಯಾಗಲು, ಗರ್ಭದೊಳಗೆ ಮಗು ಆರೋಗ್ಯಪೂರ್ಣವಾಗಿ ಬೆಳೆಯಲು ಸಾಕಷ್ಟು ವಿಧಾನಗಳನ್ನು ಆಯುರ್ವೇದದಲ್ಲಿ ಪಾಲಿಸಲಾಗುತ್ತದೆ,” ಎಂದವರು ಮಾಹಿತಿ ನೀಡುತ್ತಾರೆ.

ಆಯುರ್ವೇದದಲ್ಲಿರುವ ಪುಂಸವನ ಕರ್ಮ ಎಂಬ ಪದ್ಧತಿಯನ್ನು ವಿವರಿಸುವ ಡಾ. ಅನಿತಾ, “ಗರ್ಭಕೋಶದ ಶುದ್ಧೀಕರಣಕ್ಕಾಗಿ ಕೆಲವು ವಿಧಾನಗಳನ್ನು ಆಯುರ್ವೇದದಲ್ಲಿ ಅನುಸರಿಸಲಾಗುತ್ತದೆ. ಅದರಿಂದ ಸಮಸ್ಯೆ ಇರುವವರಿಗೂ ಗರ್ಭವತಿಯಾಗುವ ಸಾಧ್ಯತೆಗಳನ್ನು ಈ ವೈದ್ಯ ಪದ್ಧತಿಯಲ್ಲಿ ನೀಡಲಾಗುತ್ತದೆ. ಗರ್ಭವತಿ ಆದ ನಂತರ ತೆಂಗಿನ ಹೊಂಬಾಳೆಯ ಹೂವಿನಿಂದ ತಯಾರಿಸಿದ ಹಾಲು ಜತೆಗೆ ಗೋಡಂಬಿ, ದ್ರಾಕ್ಷಿಯಂತವುಗಳನ್ನು, ಕೆಲವು ಕಡೆಗಳಲ್ಲಿ ಕೇಸರಿಯನ್ನು ಬೆರೆಸಿ ಕುಡಿಸುತ್ತಾರೆ. ಇದರಿಂದ ಮಗು ಆರೋಗ್ಯವಾಗಿ ಹುಟ್ಟುತ್ತದೆ. ಆದರೆ ಆರೋಗ್ಯಕ್ಕೂ ಬಣ್ಣಕ್ಕೂ ಸಂಬಂಧವಿಲ್ಲ. ಬಣ್ಣ ಎಂಬುದು ವಂಶವಾಹಿಯಾಗಿ ಬರುವಂತದ್ದು,” ಎನ್ನುತ್ತಾರೆ ಅವರು.

“ರಾಮಾಯಣ, ಮಹಾಭಾರತದ ಹೆಸರಿನಲ್ಲಿ ಜಪ ಮಾಡಿ ಮಗು ಪಡೆಯಬಹುದು ಎಂದು ವಾದಿಸುವವರು ಇದ್ದಾರೆ. ಆದರೆ ಅವೆಲ್ಲವೂ ಸಾಧ್ಯವಿಲ್ಲ ಮಾತು. ಅದಕ್ಕಿಂತ ಹೆಚ್ಚಾಗಿ ಬೆಳ್ಳಗಿರುವ ಮಗು ಎಂದು ಹೇಳುವುದೇ ದೊಡ್ಡ ತಪ್ಪು. ಬಣ್ಣಗಳ ಆಧಾರದ ಮೇಲೆ ಉತ್ತಮ ಸಂತತಿ ಎಂದು ಗುರುತಿಸುವುದು ಹೀನ ಮನಸ್ಥಿತಿ,” ಎನ್ನುತ್ತಾರೆ ಕಾಮಿನಿ ರಾವ್.

Top