An unconventional News Portal.

‘ನ್ಯಾಯಾಂಗ ನೇಮಕಾತಿಯಲ್ಲಿ RSS ಹಸ್ತಕ್ಷೇಪ’: ನ್ಯಾ. ಠಾಕೂರ್ ನಿವೃತ್ತಿಯ ನಿರೀಕ್ಷೆಯಲ್ಲಿ ‘ಮೋದಿ ಸರಕಾರ’!

‘ನ್ಯಾಯಾಂಗ ನೇಮಕಾತಿಯಲ್ಲಿ RSS ಹಸ್ತಕ್ಷೇಪ’: ನ್ಯಾ. ಠಾಕೂರ್ ನಿವೃತ್ತಿಯ ನಿರೀಕ್ಷೆಯಲ್ಲಿ ‘ಮೋದಿ ಸರಕಾರ’!

“ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆ) ತೀರಥ್ ಸಿಂಗ್ ಠಾಕೂರ್ ನಿವೃತ್ತಿಗಾಗಿ ಕೇಂದ್ರ ಸರಕಾರ ಕಾಯುತ್ತಿದೆ.”

ಹೀಗಂತ ಹಿರಿಯ ವಕೀಲ ಬಿ.ಟಿ. ವೆಂಕಟೇಶ್ ಗಂಭೀರ ಆರೋಪ ಮಾಡಿದ್ದಾರೆ.

ನ್ಯಾಯಮೂರ್ತಿಗಳ ನೇಮಕದಲ್ಲಿ ವಿಳಂಬವಾಗುತ್ತಿದೆ ಎಂಬ ಸಿಜೆ ಆರೋಪಕ್ಕೆ ಸಂಬಂಧಪಟ್ಟಂತೆ ‘ಸಮಾಚಾರ’ದ ಜತೆ ಮಾತನಾಡಿದ ಅವರು ಕೇಂದ್ರ ಸರಕಾರದ ಮೇಲೆ ಈ ಆರೋಪ ಹೊರಿಸಿದ್ದಾರೆ. ಬಿ. ಟಿ. ವೆಂಕಟೇಶ್ ಕರ್ನಾಟಕದ ಹೈ ಕೋರ್ಟ್ನ ಹಿರಿಯ ವಕೀಲರು.

“ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಸುಪ್ರಿಂ ಕೋರ್ಟ್ ಸೇರಿದಂತೆ ನ್ಯಾಯಾಲಯಗಳಿಗೆ ದೇಶದ ಪುರಾತನ ಸಂಘಟನೆ ರಾಷ್ಟ್ರೀಯ ಸ್ವಯಂ ಸಂಘದ ಸೌದ್ಧಾಂತಿಕ ಹಿನ್ನಲೆಯಿಂದ ಬಂದವರನ್ನು ನ್ಯಾಯಾಧೀಶರುಗಳನ್ನಾಗಿ ನೇಮಿಸಲು ಇಚ್ಚಿಸಿರುವುದು ಇವತ್ತು ಎಲ್ಲರಿಗೂ ತಿಳಿದ ವಿಚಾರ. ಆದರೆ ಇದಕ್ಕೆ ಮುಖ್ಯ ನ್ಯಾಯಮೂರ್ತಿ (ನ್ಯಾ. ಠಾಕೂರ್) ಗಳು ಒಪ್ಪುತ್ತಿಲ್ಲ,” ಎನ್ನುತ್ತಾರೆ ವೆಂಕಟೇಶ್.

rss-bjpಈ ಕಾರಣಕ್ಕೆ ಕೊಲಿಜಿಯಂ (ನ್ಯಾಯಮೂರ್ತಿಗಳ ಹೆಸರನ್ನು ಶೀಫಾರಸ್ಸು ಮಾಡುವ ಹಿರಿಯ ನ್ಯಾಯಾಧೀಶರ ಸಮಿತಿ) ಶಿಫಾರಸ್ಸು ಮಾಡಿದ ವಕೀಲರನ್ನು ನ್ಯಾಯಾಧೀಶರಾಗಿ ಕೇಂದ್ರ ಸರಕಾರ ನೇಮಕ ಮಾಡುತ್ತಿಲ್ಲ ಎನ್ನುತ್ತಾರೆ ಅವರು. “ತೀರಥ್ ಸಿಂಗ್ ಠಾಕೂರ್ ಹುಟ್ಟು ಶ್ರೀಮಂತರು. ಅವರಿಗೆ ಹಣದ ವ್ಯಾಮೋಹ ಇಲ್ಲ. ಅವರನ್ನು ಬಗ್ಗಿಸುವುದು ಕಷ್ಟ. ಈ ಕಾರಣದಿಂದ ಅವರ ನಿವೃತ್ತಿಯನ್ನೇ ಎಲ್ಲರೂ ಕಾಯುತ್ತಿದ್ದಾರೆ,” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

“ಇವತ್ತು ದೇಶದಲ್ಲಿ ವಿರೋಧ ಪಕ್ಷವಿಲ್ಲ. ಸರಕಾರಗಳಿಗೇನಿದ್ದರೂ ನ್ಯಾಯಾಂಗವೇ ವಿರೋಧ ಪಕ್ಷವಿದ್ದಂತೆ. ಕೇಂದ್ರ ಸರಕಾರಕ್ಕೆ ಇದೇ ಟಿ. ಎಸ್. ಠಾಕೂರ್ ಮಗ್ಗಲು ಮುಳ್ಳಾಗಿದ್ದಾರೆ. ಅವರು ಹೋಗುತ್ತಿದ್ದಂತೆ ಸರಕಾರದ (ಶಾಸಕಾಂಗದ) ಹಿತಾಸಕ್ತಿಯನ್ನು ಕಾಪಾಡುವ ಹಿತಾಸಕ್ತಿಯಿಂದ ನೇಮಕಾತಿಗಳೆಲ್ಲಾ ಚಾಲ್ತಿ ಪಡೆಯುತ್ತವೆ,” ಎನ್ನುತ್ತಾರೆ ಅವರು.

Kejriwalಮುಖ್ಯವಾಹಿನಿಯ ಆರೋಪಗಳು:

ಹೀಗೆ, ನ್ಯಾಯಾಂಗದ ನೇಮಕಾತಿ ಕುರಿತು ಹೀಗೆ ಕೇಂದ್ರ ಸರಕಾರದ ವಿರುದ್ಧ ನೇರ ಆರೋಪಗಳನ್ನು ಮಾಡುತ್ತಿರುವುವರಲ್ಲಿ ವಕೀಲರಾದ ಬಿ. ಟಿ. ವೆಂಕಟೇಶ್ ಆರೋಪಗಳು ಮೊದಲೇನೂ ಅಲ್ಲ. ಈ ಹಿಂದೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡಾ ಇದೇ ರೀತಿಯ ಆರೋಪಗಳನ್ನು ಮಾಡಿದ್ದರು. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಮಾತನಾಡಿದ್ದ ಕೇಜ್ರಿವಾಲ್, “ಎನ್ಡಿಎ (NDA) ಸರಕಾರ ಕೊಲಿಜಿಯಂ ಶಿಫಾರಸ್ಸು ಮಾಡಿದ ಅರ್ಹ ನ್ಯಾಯಾಧೀಶರ ನೇಮಕದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಕಾರಣ ಆಢಳಿತರೂಢ ಬಿಜೆಪಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೊತೆ ಸಂಬಂಧ ಇರುವ ವಕೀಲರನ್ನು ಜಡ್ಜ್ ಗಳನ್ನಾಗಿಸಲು ಇಚ್ಛಿಸಿದೆ,” ಎಂದು ಹೇಳಿದ್ದರು.

ದೇಶದ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟುಗಳಲ್ಲಿ ಒಟ್ಟರೆ ಶೇ.43 ಕ್ಕೂ ಹೆಚ್ಚು ‘ನ್ಯಾಯಮೂರ್ತಿ’ ಹುದ್ದೆಗಳು ಖಾಲಿ ಇವೆ. ಕರ್ನಾಟಕವೂ ಸೇರಿದಂತೆ ಕೆಲವು ಕೋರ್ಟುಗಳಲ್ಲಿ ಈ ಪ್ರಮಾಣ ಅರ್ಧವನ್ನೂ ಮೀರಿದೆ. ಹೀಗಿದ್ದೂ ಕೇಂದ್ರ ಸರಕಾರ ನ್ಯಾಯಮೂರ್ತಿಗಳ ನೇಮಕಕ್ಕೆ ಮನಸ್ಸು ಮಾಡುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಮುಖ್ಯನ್ಯಾಯಮೂರ್ತಿಗಳೇ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದರು. ಆದರೆ ಎಮ್ಮೆ ಚರ್ಮದ  ಕೇಂದ್ರ ಸರಕಾರ ಮಾತ್ರ ಕೇಳಿಸಿಕೊಳ್ಳುತ್ತಲೇ ಇಲ್ಲ ಎಂದು ಒಂದು ವಲಯ ಪ್ರಬಲವಾಗಿ ಖಂಡಿಸಿದೆ. “ಇದರಿಂದ ಸಾರ್ವಜನಿಕರಿಗೆ ನ್ಯಾಯಧಾನದಲ್ಲಿ ವಿಳಂಬವಾಗುತ್ತಿದೆ,” ಎಂದು ಬೇಸರ ವ್ಯಕ್ತಪಡಿಸುತ್ತಿರುವ ಠಾಕೂರ್, ಒಮ್ಮೆ ತೀರಾ ನೊಂದುಕೊಂಡು ಸಭೆಯೊಂದರಲ್ಲಿ ಮಾತಿನ ಮಧ್ಯೆಯೇ ಕಣ್ಣಿರು ಸುರಿಸಿದ್ದನ್ನು ಸ್ಮರಿಸಬಹುದು.

ಭಾವಜೀವಿ ಟಿ. ಎಸ್. ಠಾಕೂರ್?:

ಸುಪ್ರಿಂ ಕೋರ್ಟಿನ 43ನೇ ಮುಖ್ಯ ನ್ಯಾಯಮೂರ್ತಿಯಾಗಿರುವ ತೀರಥ್ ಸಿಂಗ್ ಠಾಕೂರ್, ಕಾಶ್ಮೀರದ ವಕೀಲ ದೇವಿ ದಾಸ್ ಠಾಕೂರ್ ಮಗ.

ಡಿ.ಡಿ ಠಾಕೂರ್

ಡಿ.ಡಿ ಠಾಕೂರ್

ಶ್ರೀಮಂತ ವಕೀಲರಾಗಿದ್ದ ದೇವಿ ದಾಸ್, ಜಮ್ಮು ಕಾಶ್ಮೀರ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯೂ ಆಗಿದ್ದರು. ಮಾತ್ರವಲ್ಲ ನಿವೃತ್ತಿಯ ನಂತರ ರಾಜಕೀಯವನ್ನೂ ಪ್ರವೇಶಿಸಿದ ಅವರು ಜಮ್ಮು ಮತ್ತು ಕಾಶ್ಮೀರ ಸರಕಾರದಲ್ಲಿ ವಿತ್ತ ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. ಮುಂದೆ ಅಸ್ಸಾಂ ರಾಜ್ಯದ ರಾಜ್ಯಪಾಲರಾಗುವ ಯೋಗವೂ ಅವರಿಗೆ ಕೂಡಿ ಬಂದಿತ್ತು. “ದೇವಿ ದಾಸ್ ಠಾಕೂರ್ ಎಷ್ಟರ ಮಟ್ಟಿಗೆ ಶ್ರೀಮಂತ ಎಂದರೆ, 1980ರ ದಶಕದಲ್ಲಿ ದಿನಕ್ಕೆ 2 ಲಕ್ಷ ಸಂಭಾವನೆ ಪಡೆಯುತ್ತಿದ್ದರು,” ಎನ್ನುತ್ತಾರೆ ಬಿ. ಟಿ ವೆಂಕಟೇಶ್.

ದೇವಿದಾಸ್ ಠಾಕೂರ್ ತಮ್ಮ ಮಗನ ಓದಿಗಾಗಿ, ಏಷ್ಯಾದಲ್ಲೇ ಎಲ್ಲೂ ಇಲ್ಲದ ಅಮೂಲ್ಯ ಮತ್ತು ಭಾರಿ ಗ್ರಂಥಾಲಯವನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದರು.  ಹೀಗೆ ಶ್ರೀಮಂತಿಕೆ ಮತ್ತು ಅಧಿಕಾರದ ನೆರಳಲ್ಲೇ ಬೆಳೆದವರು ಟಿ.ಎಸ್.ಠಾಕೂರ್.

ಜ್ಯೂ. ಠಾಕೂರ್, ಜಮ್ಮು ಮತ್ತು ಕಾಶ್ಮೀರದ ರಂಬಾನ್’ನಲ್ಲಿ 1952, ಜನವರಿ 4ರಂದು ಹುಟ್ಟಿದವರು. ತಂದೆಯ ಮಾರ್ಗದರ್ಶನದಲ್ಲಿ ಬಾಲ್ಯದಿಂದಲೇ ಕಾನೂನುಗಳ ಅರಿವು ಪಡೆದುಕೊಳ್ಳುತ್ತಾ ಬೆಳೆದವರು. ಬಿಎಸ್ಸಿ ವ್ಯಾಸಾಂಗ ಮುಗಿಸಿ, ಎಲ್.ಎಲ್.ಬಿ ಪದವೀಧರರಾದರು. ತಂದೆಯ ಗರಡಿಯಲ್ಲೇ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟಿನಲ್ಲಿ ವಕೀಲಿಕೆ ಅಭ್ಯಾಸ ಆರಂಭಿಸಿ ಸಿವಿಲ್, ಕ್ರಿಮಿನಲ್, ಟ್ಯಾಕ್ಸ್ ಲಾ ಸೇರಿದಂತೆ ಎಲ್ಲ ಬಗೆಯ ಕೇಸುಗಳನ್ನು ನಡೆಸುವ ಚಾಣಾಕ್ಷತೆ ರೂಢಿಸಿಕೊಂಡರು. 1990ರಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ಪಡೆದ ಠಾಕೂರ್, 1994ರಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟಿನ ಹೆಚ್ಚುವರಿ ನ್ಯಾಯಾಧೀಶರಾಗಿ ಆಯ್ಕೆಯಾದರು.

ಅಲ್ಲಿಂದ ಅವರ ‘ನ್ಯಾಯಾಧೀಶ’ ಹುದ್ದೆಯ ವೃತ್ತಿಯಾತ್ರೆ ಇಂದಿನವರೆಗೂ ಸಾಗಿ ಬಂದಿದೆ. 1994ರಲ್ಲಿ ಜಮ್ಮುವಿನಿಂದ ಕರ್ನಾಟಕ ರಾಜ್ಯಕ್ಕೆ ವರ್ಗವಾಗಿ ಬಂದರು. ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಗಳಾಗಿ ಠಾಕೂರ್ 2004ರವರೆಗೆ, 10 ವರ್ಷಗಳ ಕಾಲ ಜಡ್ಜ್ ಆಗಿ ಕರ್ತವ್ಯ ನಿರ್ವಹಿಸಿದರು. ಮುಂದೆ ದೆಹಲಿ ಹೈಕೋರ್ಟಿಗೆ ವರ್ಗವಾಗಿ, ಅಲ್ಲಿಂದ ಪಂಜಾಬ್-ಹರ್ಯಾಣ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಭಡ್ತಿ ಪಡೆದರು. ನಂತರ 2009ರಲ್ಲಿ ಸುಪ್ರಿಂ ಕೋರ್ಟಿನ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದರು. 6 ವರ್ಷಗಳ ಸೇವಾ ಅನುಭವದದ ನಂತರ ಡಿಸೆಂಬರ್ 3, 2015 ರಂದು ಠಾಕೂರ್ ದೇಶದ ನ್ಯಾಯಂಗದ ಅತ್ಯುನ್ನತ ‘ಚೀಫ್ ಜಸ್ಟೀಸ್ ಆಫ್ ಇಂಡಿಯಾ’ ಹುದ್ದೆಗೇರಿದರು. 2017ರ ಜನವರಿ 4ರವರಗೆ ಅವರು ಇದೇ ಹುದ್ದೆಯಲ್ಲಿ ಇರಲಿದ್ದಾರೆ.

ಆದರೆ ಇಷ್ಟೇ ಆಗಿದ್ದರೆ ನ್ಯಾ. ಠಾಕೂರ್ ಇಂದು ಮುಖ್ಯವಾಗುತ್ತಲೇ ಇರಲಿಲ್ಲ. ಆದರೆ ಅವರ ನ್ಯಾಯಾಂಗ ಸೇವೆಯ ಕಾರಣಕ್ಕೆ, ವೃತ್ತಿ ಬದುಕಿನಾಚೆಗೂ ನೆನಪಾಗುತ್ತಾರೆ.

ನೇರ ನುಡಿಯ ಸರಳ ಜೀವಿ: 

ಠಾಕೂರ್ ಇಂದಿಗೂ ನೇರ ನಡೆ, ನುಡಿಯ ಸರಳ ಜೀವಿ. ನ್ಯಾಯದಾನದಲ್ಲಿ ಖಡಕ್; ಆದರೆ ಒಂದೊಮ್ಮೆ ಆರೋಪಿಗಳು ತಪ್ಪಾಗಿದೆ ಎಂದೊಪ್ಪಿಕೊಂಡರೆ ಕ್ಷಮೆಯನ್ನೂ ಕರುಣಿಸುತ್ತಿದ್ದರು. ಒಳ್ಳೆಯ, ಉತ್ಸಾಹಿ ವಕೀಲರನ್ನು ಹುಡುಕಿ ಬೆನ್ನು ತಟ್ಟುವುದು, ಪ್ರತಿಭಾವಂತ ಹಿರಿಯ ವಕೀಲರನ್ನು ಗುರುತಿ,ಸಿ ‘ಹಿರಿಯ ವಕೀಲ’ರ ಪಟ್ಟ ವಹಿಸಿಕೊಳ್ಳುವಂತೆ ಮನವೊಲಿಸಿ, ‘ಸೀನಿಯರ್’ ಸ್ಥಾನ ನೀಡುವ ಸ್ವಭಾವ ರೂಢಿಸಿಕೊಂಡಿದ್ದರು. ಅವರಿಗೆ ತಮ್ಮ ಸುತ್ತ ಗಿರಕಿಹೊಡೆಯುತ್ತಾ ಒಲೈಸುವವರನ್ನು ಕಂಡರೆ ಆಗುತ್ತಿರಲಿಲ್ಲವಂತೆ.

ಮಾನವೀಯ ಕಷ್ಟಗಳಿಗೆ ಸದಾ ಸ್ಪಂದಿಸುವ ಗುಣ ಅವರದ್ದು. ಎಷ್ಟೋ ಸಾರಿ ತಮ್ಮ ಕಾರಿನ ಚಾಲಕನಿಗೆ ”ನೀನು ಅಷ್ಟು ದೂರದಿಂದ ಬರಬೇಕಲ್ವಾ, ನೀನೇನೂ ಬರಬೇಡ,” ಎಂದು ತಾವೇ ಹೈಕೋರ್ಟ್‌ಗೆ ಕಾರು ಚಲಾಯಿಸಿಕೊಂಡ ಬರುತ್ತಿದ್ದರಂತೆ. ರಾಜ್ಯ ಹೈಕೋರ್ಟ್ನಲ್ಲಿದ್ದಾಗ, ವಿಮೆ ಸೇರಿದಂತೆ ಹಲವು ಕಾನೂನುಗಳಿಗೆ ಹೊಸ ವ್ಯಾಖ್ಯಾನ ಬರೆದು ನೆಚ್ಚಿನ ನ್ಯಾಯಮೂರ್ತಿಯಾಗಿದ್ದರು. ಹೀಗೆ ಅವರನ್ನು ಬಲ್ಲವರು ನೂರಾರು ಕತೆಗಳನ್ನು ಹೇಳುತ್ತಾರೆ.

ರಾಜಕೀಯಕ್ಕೆ ಬಲಿಯಾಗದ ಪ್ರಶ್ನಾತೀತ ವ್ಯಕ್ತಿ:

ನ್ಯಾಯಾಂಗದ ಬಗೆಗಿನ ಅವರ ಬದ್ಧತೆ ಪ್ರಶ್ನಾತೀತವಾದುದು. ‘ಅನ್ಯಾಯ’ವನ್ನು ಎಳ್ಳಷ್ಟೂ ಸಹಿಸುವುದಿಲ್ಲ. ತಂದೆ ರಾಜಕಾರಣದಲ್ಲಿದ್ದನ್ನು ನೋಡಿ, ಸರಕಾರದ ಒಳಮರ್ಮವೆನ್ನಲ್ಲಾ ಅರ್ಥಮಾಡಿಕೊಂಡಿದ್ದ ಠಾಕೂರ್, ರಾಜಕಾರಣವನ್ನು ಎಂದಿಗೂ ತಮ್ಮ ಹತ್ತಿರಕ್ಕೂ ಸುಳಿಯಲು ಬಿಟ್ಟವರಲ್ಲ. ಕಾನೂನು ಬಿಟ್ಟು ಒಂದಿಂಚೂ ಆಚೀಚೆ ಅಲ್ಲಾಡದ ಅವರು ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಎಂದೇ ಬಹುತೇಕರು ಹೇಳುತ್ತಾರೆ.

ಸರಕಾರದೊಡನೆ ನೇರ ಸಂಘರ್ಷಕ್ಕೆ ಇಳಿಯದೆ, ಅವಕಾಶ ಸಿಕ್ಕಾಗಲೆಲ್ಲಾ ರಾಜಕಾರಣಿಗಳ ವಿರುದ್ಧ ತಮ್ಮ ಸಿಟ್ಟನ್ನು ಹೊರಹಾಕುತ್ತಾ ಬಂದ ಇತಿಹಾಸ ಇವರದ್ದು. ಒಮ್ಮೆ ಕಾರ್ಪೊರೇಟ್ ಕಂಪನಿಯೊಂದರ ಪರ ವಾದ ಮಾಡಲು ಬಂದಿದ್ದ ಕಾಂಗ್ರೆಸ್ ನಾಯಕ, ಹಿರಿಯ ನ್ಯಾಯವಾದಿ ಸಲ್ಮಾನ್ ಖುರ್ಷಿದ್ ಅವರಿಗೆ ”ನೀವು ಕಳ್ಳರ ಗುಂಪಿನವರೇ?”ಎಂದು ನೇರವಾಗಿ ಪ್ರಶ್ನಿಸಿದ್ದರು.

ಮಹಾರಾಷ್ಟ್ರ ಸರಕಾರ ಗೋಮಾಂಸ ಮಾರಾಟವನ್ನು ನಿಷೇಧಿಸಿದ್ದಕ್ಕೆ ಬಾಂಬೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆಗ ಜೈನ್ ಸಮುದಾಯ ತೀರ್ಪು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋದಾಗ, ಆ ಅರ್ಜಿ ಠಾಕೂರ್ ಅವರ ಮುಂದೆ ಬಂದಿತ್ತು. ಆಗ ಅವರು ”ಜನರ ನಾಲಿಗೆ ಹೊರಗೆಳೆದು ಅವರು ಮಾಂಸ ತಿಂದಿದ್ದಾರೆಯೇ, ಇಲ್ಲವೇ ಎಂದು ಹೇಳಲಾಗುತ್ತದೆಯೇ?” ಎಂದಿದ್ದರಲ್ಲದೆ ”ಮಾಂಸ ತಿನ್ನುವವರ ಮನೆಯೊಳಗೆ ಏಕೆ ಇಣುಕಿ ನೋಡುತ್ತೀರಿ, ಅವರಿಗೆ ಏನು ಬೇಕು ಅದನ್ನು ಮಾಡಿಕೊಳ್ಳಲಿ. ನೀವೇಕೆ ಅವರ ಬಗ್ಗೆ ತಲೆಕೆಡಿಸಿಕೊಳ್ಳುತ್ತೀರಿ?,” ಎಂದು ಪ್ರಶ್ನಿಸಿದ್ದರು.

ಬಡತನ ರೇಖೆ ನಿಗದಿ ವಿಚಾರದಲ್ಲಿ ಹಿಂದಿನ ಯುಪಿಎ ಸರಕಾರದ ವಿರುದ್ಧ ಛಾಟಿ ಬೀಸಿದ್ದರು. ಗಂಗಾನದಿ ಶುದ್ಧೀಕರಣ ವಿಚಾರದಲ್ಲಿ ಕೇಂದ್ರದ ಎನ್‌ಡಿಎ ಸರಕಾರದ ವಿರುದ್ಧ ಕೆಂಡಕಾರಿದ್ದ ಠಾಕೂರ್, ”ನದಿಯ ನೀರಿನ ಗುಣಮಟ್ಟ ಸುಧಾರಿಸಿದೆಯೇ? ನದಿ ಶುದ್ಧೀಕರಣಕ್ಕೆ ಇನ್ನೂ ನಿಮಗೆ 200 ವರ್ಷ ಬೇಕೆ? ಅಥವಾ ಈ ವಿಷಯವನ್ನು 2018ರವೆಗೆ ಜೀವಂತ ಇಡಲು ಪ್ರಯತ್ನಿಸುತ್ತಿದ್ದೀರಾ?, ”ಎಂದು ಕುಟುಕಿದ್ದರು. ಇವೆಲ್ಲಾ ಠಾಕೂರ್ ನೇರವಂತಿಕೆಗೆ ಹಿಡಿದ ಕನ್ನಡಿ.

ದಿಲ್ಲಿಯಲ್ಲಿ ಆಪ್‌ನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ರಾಜ್ಯಪಾಲ ನಜೀಬ್ ಜುಂಗ್ ನಡುವಿನ ಕಚ್ಚಾಟ ನ್ಯಾಯಾಲಯದ ಮೆಟ್ಟಿಲೇರಿದ್ದಾಗ, ಇದೇ ಠಾಕೂರ್ ”ಜನಸಾಮಾನ್ಯರ ದೃಷ್ಟಿಯಿಂದ ಭಿನ್ನಾಭಿಪ್ರಾಯ ಮರೆತು ಉತ್ತಮ ರೀತಿಯಲ್ಲಿ ಆಡಳಿತ ನಡೆಸಿ,”ಎಂದು ಬುದ್ಧಿವಾದವನ್ನೂ ಹೇಳಿದ್ದರು.

ts-thakur

ನ್ಯಾ. ಠಾಕೂರ್.

ಸಹರಾ ಕಂಪನಿಯಿಂದ ವಂಚನೆಗೊಳಗಾಗಿರುವ 36 ಸಾವಿರಕ್ಕೂ ಅಧಿಕ ಹೂಡಿಕೆದಾರರಿಗೆ ಹೇಗಾದರೂ ನ್ಯಾಯ ದೊರಕಿಸಿಕೊಡಬೇಕೆಂದು ಯತ್ನಿಸಿದ್ದ ಠಾಕೂರ್, ಜಾಮೀನು ನೀಡಬೇಕಾದರೆ 10 ಸಾವಿರ ಕೋಟಿ ಠೇವಣಿ ಇಡಬೇಕು ಎಂದು ಷರತ್ತು ವಿಧಿಸಿದ್ದರು. ಅಷ್ಟು ಹಣ ಹೊಂದಿಸಲಾಗದೆ ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ತಿಂಗಳಾನುಗಟ್ಟಲೆ ತಿಹಾರ್ ಜೈಲಿನಲ್ಲಿ ಕಳೆಯಬೇಕಾಯಿತು. ಪಶ್ಚಿಮ ಬಂಗಾಳದಲ್ಲಿ ನಡೆದ ಶಾರದಾ ಚಿಟ್ ಫಂಡ್ ಹಗರಣವನ್ನೂ ಸಿಬಿಐಗೆ ವಹಿಸಿದ್ದರು. ಇದರಿಂದ ಅಲ್ಲಿನ ಸರಕಾರದ ಹಾಲಿ ಸಚಿವರು, ಶಾಸಕರು ಜೈಲು ಪಾಲಾಗುವಂತಾಗಿತ್ತು.

ಸದ್ಯ, ಭಾರತೀಯ ಕ್ರಿಕೆಟ್ ಮಂಡಳಿಗೆ ಗ್ರಹಚಾರ ಬಿಡಿಸುತ್ತಿದ್ದಾರೆ. ನ್ಯಾ. ಲೋಧಾ ಸಮಿತಿ ರಚಿಸಿ ಅದು ನೀಡಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸದೇ ಬಿಡುವುದಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಈ ಮೂಲಕ ಕ್ರೀಡೆಯಲ್ಲಿ ವಾಣಿಜ್ಯ ಹಿತಾಸಕ್ತಿ ಇಣುಕಬಾರದು ಎಂದು ಪಣತೊಟ್ಟಿದ್ದಾರೆ.

ಮೊನ್ನೆ ಮೊನ್ನೆ ಗೋಕರ್ಣ ದೇವಸ್ಥಾನ ಹಸ್ತಾಂತರ ವಿವಾದದಲ್ಲಿ, ಅಧಿಕಾರಿಗಳ ವಿಚಾರಣೆಗೆ ಇದ್ದ ತಡೆ ತೆರವು ಮಾಡಿದ್ದೂ ಇದೇ ಠಾಕೂರ್ ನ್ಯಾಯಪೀಠ.

ಸವಾಲುಗಳ ಬೆಟ್ಟದ ಮುಂದೆ ಕುಳಿತವರು:

ಸದ್ಯ ಅವರ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಅದರಲ್ಲಿ ಜಡ್ಜ್‌ಗಳ ನೇಮಕ ಅತಿ ಪ್ರಮುಖವಾದುದು. ಕೊಲಿಜಿಯಂ ಪದ್ಧತಿಯಲ್ಲಿ ಗಮನಾರ್ಹ ಸುಧಾರಣೆ ಮಾಡಿ, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳಲ್ಲಿ ಖಾಲಿ ಇರುವ 400ಕ್ಕೂ ಅಧಿಕ ನ್ಯಾಯಮೂರ್ತಿಗಳ ಹುದ್ದೆ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಾವಿರಾರು ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಗುರಿ ಹಾಕಿಕೊಂಡಿದ್ದವರು ಅವರು. ಆದರೆ ದುರಾದೃಷ್ಟವಶಾತ್ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ದೇಶದ ಕೋರ್ಟ್‌ಗಳಲ್ಲಿ ಕೊಳೆಯುತ್ತಿರುವ 3 ಕೋಟಿಗೂ ಹೆಚ್ಚು ಪ್ರಕರಣಗಳಿಗೆ ಮುಕ್ತಿ ನೀಡಲು ಅವರು ಹೊರಟಿದ್ದರು. ‘ನ್ಯಾಯಾಂಗದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯೋಜನೆ ಇದೆ’ ಎಂದು ಸೂಚ್ಯವಾಗಿ ಹೇಳಿದ್ದರು. ಆದರೆ ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ. ಪ್ರಾಮಾಣಿಕ ನ್ಯಾಯಾಧೀಶರಿಗೆ, ಕೇಂದ್ರ ಸರಕಾರ ಸಹಕಾರ ನೀಡದೇ ಇರುವುದು ದುರಂತವೇ ಸರಿ ಎಂಬ ಅಭಿಪ್ರಾಯ ವ್ಯಾಪಕವಾಗುತ್ತಿದೆ. ಅವು ಕೇಂದ್ರ ಸರಕಾರವನ್ನು ನಿಯಂತ್ರಿಸುತ್ತಿರುವ ಬಿಜೆಪಿ (ಹಿಂದಿನ ಜನಸಂಘ) ಎಂಬ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ ‘ಸಾಂಸ್ಕೃತಿಕ ಸಂಘಟನೆ’, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಡೆಗೆ ಆರೋಪಗಳಾಗಿ ಬದಲಾಗುತ್ತಿವೆ. ಕೇಜ್ರಿವಾಲ್ ನಂತರ ಈಗ ಕರ್ನಾಟಕದ ಮೂಲದ ವಕೀಲ ಬಿ. ಟಿ. ವೆಂಕಟೇಶ್ ಸರದಿ.

Leave a comment

Top