An unconventional News Portal.

ಚಂದ್ರನ ಮೇಲೊಂದು ‘ರೋವರ್’ ರೇಸ್; ‘ಇಸ್ರೋ’ ಸಹಾಯದಿಂದ ಬೆಂಗಳೂರು ಟೀಮ್ ಗೆಲ್ಲುತ್ತಾ 204 ಕೋಟಿ?

ಚಂದ್ರನ ಮೇಲೊಂದು ‘ರೋವರ್’ ರೇಸ್; ‘ಇಸ್ರೋ’ ಸಹಾಯದಿಂದ ಬೆಂಗಳೂರು ಟೀಮ್ ಗೆಲ್ಲುತ್ತಾ 204 ಕೋಟಿ?

(ಬೆಂಗಳೂರಿನ ‘ಟೀಮ್ಇಂಡಸ್’ ಸಂಸ್ಥೆಯ ‘ಈಕಾ’ ರೋವರ್ ಹೀಗಿರಲಿದೆ)

ಗೂಗಲ್ ಪ್ರಾಯೋಜಕತ್ವದ ಸ್ಪರ್ಧೆಯೊಂದು ಚಂದ್ರನ ಮೇಲ್ಮೈ ಮೇಲೆ ಆಯೋಜನೆಯಾಗಿದೆ. ಇದರ ಹೆಸರು ‘ಲೂನಾರ್ ಎಕ್ಸ್’. ಇದು ಅಂತಿಂಥ ಆಟವಲ್ಲ. ಇಲ್ಲಿ ಗೆದ್ದವರು ಬರೋಬ್ಬರಿ 204 ಕೋಟಿ ರೂಪಾಯಿ ಜೇಬಿಗಿಳಿಸಲಿದ್ದಾರೆ. ವಿಶ್ವ ಹಿಂದೆಂದೂ ಕಂಡಿರದ ವಿಜ್ಞಾನದ ಬೃಹತ್ ಸ್ಪರ್ಧೆಯಿದು. ನೀವು ‘ಲೂನಾರ್ ಎಕ್ಸ್’ ಪ್ರಶಸ್ತಿ ಪಡೆಯಬೇಕಾ? ಮಾಡಬೇಕಾಗಿದ್ದು ಇಷ್ಟೆ. ರೋವರ್ ಒಂದನ್ನು ಚಂದ್ರನ ಮೇಲೆ ಇಳಿಸಿ, 500 ಮೀಟರ್ ಚಲಿಸುವಂತೆ ಮಾಡಬೇಕು. ನಂತರ ಅಲ್ಲಿಂದ ಎಚ್.ಡಿ ಕ್ವಾಲಿಟಿಯ ಚಿತ್ರಗಳನ್ನ ಭೂಮಿಗೆ ರವಾನಿಸಬೇಕು. ರವಾನಿಸಿದರೆ ನೀವು ಸ್ಪರ್ಧೆ ಗೆದ್ದಂತೆ. ಇದೀಗ ಈ ಬೃಹತ್ ಪ್ರಶಸ್ತಿ ಮೊತ್ತ ಬಾಚಿಕೊಳ್ಳಲು ಜಗತ್ತಿನ ಹಲವಾರು ಸಂಸ್ಥೆಗಳು ಆಟದ ಮೈದಾನಕ್ಕಿಳಿದಿವೆ. ಇದರಲ್ಲಿ ಬೆಂಗಳೂರಿನ ಸಂಸ್ಥೆಯೂ ಇದೆ; ಹೆಸರು ‘ಟೀಮ್ ಇಂಡಸ್’.

ಈ ಸ್ಪರ್ಧೆಯ ಜತೆಗೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ ಹೊಸ ಇತಿಹಾಸ ನಿರ್ಮಿಸಲೂ ಸಜ್ಜಾಗಿದೆ. ಅದೇನೆಂದರೆ ಸ್ಪರ್ಧೆಯಲ್ಲಿ ಭಾಗವಹಿಸಲು ಹೋಗಲಿರುವ ಎರಡು ರೋವರುಗಳನ್ನು ಏಕಕಾಲಕ್ಕೆ ಚಂದ್ರನ ಮೇಲೆ ಇಳಿಸಲು ‘ಇಸ್ರೋ’  ಹೊರಟಿದೆ. ಒಂದೊಮ್ಮೆ ಇದು ಯಶಸ್ವಿಯಾಗಿದ್ದೇ ಆದಲ್ಲಿ ಈ ಸಾಧನೆ ಮಾಡಿದ ಜಗತ್ತಿನ ಮೊದಲ ಬಾಹ್ಯಾಕಾಶ ಸಂಸ್ಥೆ ಎಂಬ ಹಿರಿಮೆಗೆ ಇಸ್ರೋ ಪಾತ್ರವಾಗಲಿದೆ. ಖಾಸಗಿ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಸ್ಪರ್ಧೆಯಲ್ಲಿರುವ ಬೆಂಗಳೂರಿನ ‘ಟೀಮ್ಇಂಡಸ್’ ಮತ್ತು ಜಪಾನಿನ ‘ಹಕುಟೋ’ ತಂಡಗಳ ರೋವರುಗಳನ್ನು ಇದಕ್ಕಾಗಿ ಇಸ್ರೋ ಆಯ್ಕೆ ಮಾಡಿಕೊಂಡಿದೆ. ಎರಡೂ ರೋವರುಗಳನ್ನು ಚಂದ್ರನ ಮೇಲ್ಮೈ ಮೇಲೆ ಇಳಿಸುವ ಹೊಣೆ ಈಗ ಇಸ್ರೋ ಮೇಲಿದೆ.

ಸ್ಪರ್ಧೆಯಲ್ಲಿ ‘ಹಕುಟೋ’ ಮತ್ತು ‘ಟೀಮ್ ಇಂಡಸ್’ ಪ್ರತಿಸ್ಪರ್ಧಿ ಕಂಪೆನಿಗಳಾಗಿದ್ದರೂ, ಎರಡೂ ಸಂಸ್ಥೆಗಳ ರೋವರುಗಳು ಏಕಕಾಲಕ್ಕೆ ಚಂದ್ರನ ಮೇಲೆ ಇಳಿಯಲಿವೆ. ‘ಟೀಮ್ಇಂಡಸ್’ನ ‘ಈಕ’ ಮತ್ತು ‘ಹಕುಟೋ’ ಸಂಸ್ಥೆಯ ‘ಮೂನ್ ರ್ಯಾಕರ್’ ರೋವರನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಉಡಾವಣಾ ವಾಹಕ ಪಿಎಸ್ಎಲ್’ವಿ ಹೊತ್ತೊಯ್ಯಲಿದೆ.

ಆರಂಭದಲ್ಲಿ ‘ಹಕುಟೋ’ ಎರಡು ರೋವರುಗಳನ್ನು ಅಂತರಿಕ್ಷಕ್ಕೆ ಕಳುಹಿಸಲು ಸಜ್ಜಾಗಿತ್ತು. ಆದರೆ ಅಂತಿಮವಾಗಿ ಒಂದೇ ರೋವರನ್ನು ಚಂದ್ರನ ಮೇಲೆ ಇಳಿಸಲಿದೆ. ಹಕುಟೋ ತಂಡಕ್ಕೆ ಜಪಾನಿನ ಬಾಹ್ಯಾಕಾಶ ಸಂಸ್ಥೆ ‘ಝಕ್ಸಾ’ ಕೈ ಜೋಡಿಸಿದೆ. ಇದೇ ರೋವರಿನಲ್ಲಿ ಚಂದ್ರನ ಮೇಲೆ ವಿಕಿರಣಗಳ ಅಧ್ಯಯನವನ್ನೂ ಅದು ನಡೆಸಲಿದೆ.

ಹಕುಟೋ’ ಸಂಸ್ಥೆಯ ‘ಮೂನ್ ರ್ಯಾಕರ್’ ರೋವರ್ ಮಾದರಿ

ಹಕುಟೋ’ ಸಂಸ್ಥೆಯ ‘ಮೂನ್ ರ್ಯಾಕರ್’ ರೋವರ್ ಮಾದರಿ

ರೋವರ್ ಇಳಿಯುವುದು ಹೀಗೆ:

ಪಿಎಸ್ಎಲ್’ವಿ ವಾಹಕ ಭೂಮಿಯಿಂದ 70,000 ಕಿಲೋಮೀಟರ್ ಎತ್ತರದಲ್ಲಿ ಎರಡೂ ರೋವರುಗಳನ್ನು ಕಳಚಿಕೊಳ್ಳಲಿದೆ. ಅಲ್ಲಿಂದ ಈ ಬಾಹ್ಯಾಕಾಶ ನೌಕೆಗಳು ಚಂದ್ರನತ್ತ ತಮ್ಮ ಪಯಣ ಮುಂದುವರಿಸಲಿದೆ. ಒಮ್ಮೆ ಇವುಗಳು ಚಂದ್ರನ ಸಮೀಪಕಕೆ ಹೋಗಿ, ಗುರುತ್ವಾಕರ್ಷಣಾ ಶಕ್ತಿಗೆ ಒಳಪಡುತ್ತಿದ್ದಂತೆ ನೇರವಾಗಿ ಮೇಲ್ಮೈಯತ್ತ ಮುಂದುವರಿಯಲಿವೆ. ಈ ಹಂತದಲ್ಲಿ ತನನ ವೇಗ ಕಡಿಮೆ ಮಾಡಿಕೊಂಡು, ನಿಧಾನಕ್ಕೆ ಚಂದ್ರನ ಮೇಲ್ಮೈ ಮೇಲೆ ಇಳಿಯಲಿವೆ. ಈ ಪ್ರಕ್ರಿಯೆಗೆ ಸುಮಾರು 15 ದಿನ ತಗುಲಬಹುದು ಎಂದು ಅಂದಾಜಿಲಾಗಿದೆ.

ಇಂಧನ ಸೇರಿ ಪಿಎಸ್ಎಲ್’ವಿ ವಾಹಕದ ಒಟ್ಟು ತೂಕ 600 ಕೆ.ಜಿ ಇರಲಿದೆ. ಇದರಲ್ಲಿ ಇಂಧನದ ಪಾಲು 425 ಕೆ.ಜಿ. ಇನ್ನು ‘ಈಕ’ ಮತ್ತು ‘ಮೂನ್ ರ್ಯಾಕರ್’ ಕ್ರಮವಾಗಿ 10 ಮತ್ತು 4 ಕೆಜಿ ಇರಲಿವೆ. ಈ ರೋವರುಗಳು ಚಂದ್ರನ ಮೇಲೆ ಇಳಿಯುತ್ತಿದ್ದಂತೆ ಇದರಲ್ಲಿರುವ ಕಂಪ್ಯೂಟರ್ ವ್ಯವಸ್ಥೆಗಳು ತೆರೆದುಕೊಳ್ಳಲಿದ್ದು ಕಾರ್ಯಾಚರಣೆ ಆರಂಭಿಸಲಿವೆ.

‘ಈಕಾ’ ಯೋಜನೆ ಇದು:

ಬೆಂಗಳೂರು ಸಂಸ್ಥೆಯ ‘ಈಕಾ’ರೋವರಿನ ಕ್ಯಾಮೆರಾಗಳನ್ನು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ ‘ಸಿನೆಸ’ ರೂಪಿಸಿದೆ. ಈ ಹಿಂದೆ ಇಸ್ರೋ ಜತೆಗೂ ‘ಸಿನೆಸ’ ಕೈ ಜೋಡಿಸಿತ್ತು. ಆದರೆ ಭಾರತದ ಖಾಸಗಿ ಸಂಸ್ಥೆ ಜತೆ ಇದೇ ಮೊದಲ ಬಾರಿಗೆ ಕೈ ಜೋಡಿಸಿದೆ.

ಲ್ಯಾಂಡರ್ ಮಾದರಿಯ ಜತೆ ‘ಟೀಮ್ ಇಂಡಸ್’ ಸದಸ್ಯ ನಿರಂಜನ್ ಮಲ್ಲಿಕ್

ಲ್ಯಾಂಡರ್ ಮಾದರಿಯ ಜತೆ ‘ಟೀಮ್ ಇಂಡಸ್’ ಸದಸ್ಯ ನಿರಂಜನ್ ಮಲ್ಲಿಕ್

‘ಈಕಾ’ ಚಂದ್ರನ ಮೇಲೆ ‘ಮೇರ್ ಇಂಬ್ರಿಯಂ’ ಎಂಬ ಜಾಗಲ್ಲಿ ಇಳಿಯಲಿದೆ. ಸ್ಪರ್ಧೆಯ ನಿಯಮದಂತೆ ಒಂದು ಸ್ಥಳದಲ್ಲಿ ಇಳಿದು, ನಂತರ ಸ್ವಲ್ಪ ದೂರ ಚಲಿಸಬೇಕಾಗಿರುವುದರಿಂದ, ರೋವರ್ ಭೂಮಿಯ ಜತೆ ನಿರಂತರ ಸಂಪರ್ಕದಲ್ಲಿರಲಿದೆ. ಮಾತ್ರವಲ್ಲ ಅಲ್ಲಿಂದ ಚಿತ್ರಗಳನ್ನೂ ರವಾನಿಸಲಿದೆ.

ಮೊದಲಿಗೆ ರೋವರ್ ಚಿತ್ರಗಳನ್ನು ಭೂಮಿಯ ಸುತ್ತ ಸುತ್ತುವ ಬಾಹ್ಯಾಕಾಶ ನೌಕೆಗೆ ಕಳುಹಿಸಲಿದೆ. ಅಲ್ಲಿಂದ ಅದು ಭೂಮಿಗೆ ರವಾನೆಯಾಗಲಿದೆ. ಇನ್ನು ‘ಹಕುಟೋ’ ಯಾವ ಮಾದರಿಯಲ್ಲಿ ಚಿತ್ರಗಳನ್ನು ರವಾನಿಸಲಿದೆ ಎಂಬುದು ತಿಳಿದು ಬಂದಿಲ್ಲ.

ಗೂಗಲ್ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡುತ್ತಿದ್ದು, ‘ಮೈಲ್ ಸ್ಟೋನ್’ ವಿಭಾಗದಲ್ಲಿ ರೋವರುಗಳು ಒಂದಷ್ಟು ಕೆಲಸ ಮಾಡಬೇಕಾಗುತ್ತದೆ. ಇನ್ನು ‘ಹೆರಿಟೇಜ್’ ವಿಭಾಗದಲ್ಲಿ ಚಂದ್ರನ ಮೇಲ್ಮೈ ತಲುಪಿ ಐತಿಹಾಸಿಕ ಸ್ಥಳಗಳ ಚಿತ್ರಗಳನ್ನು ರವಾನಿಸಿದರೂ ಪ್ರಶಸ್ತಿ ಗೆಲ್ಲಬಹುದು.

ಸಪರ್ಧೆಯಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಲು ಡಿಸೆಂಬರ್ 31, 2016ರ ಕೊನೆಯ ದಿನವಾಗಿದ್ದು, ಈಗಾಗಲೇ ಐದು ಸಂಸ್ಥೆಗಳು ಹಸರು ನೋಂದಾಯಿಸಿವೆ. ಇಸ್ರೇಲಿನ ‘ಸ್ಪೇಸ್ ಐಎಲ್’, ಅಮೆರಿಕಾದ ‘ಮೂನ್ ಎಕ್ಸ್ ಪ್ರೆಸ್’, ಒಕ್ಕೂಟ ದೇಶಗಳ ‘ಸೈನರ್ಜಿ ಮೂನ್’ ಇನ್ನುಳಿದ ಮೂರು ಸಂಸ್ಥೆಗಳಾಗಿವೆ. ಅಂದಾಜಿನ ಪ್ರಕಾರ ಇಸ್ರೋ 2017ರ ಡಿಸೆಂಬರ್ ಅಂತ್ಯದಲ್ಲಿ, ಇಲ್ಲವೇ 2018ರ ಜನವರಿ ಆರಂಭದಲ್ಲಿ ರೋವರುಗಳ ಉಡಾವಣೆ ನಡೆಸಲಿದೆ.

ಕೃಪೆ: ದಿ ವೈರ್

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top