An unconventional News Portal.

ನಿರಾಶ್ರಿತರ ಶಿಬಿರದಲ್ಲಿ ನಡೀತು ‘ನಿಖ್ಹಾ’; ಜಗತ್ತಿನ ಗಮನ ಸೆಳೆಯಿತು ರೋಹಿಂಗ್ಯಾ ಜೋಡಿಯ ಹೊಸ ಹೆಜ್ಜೆ

ನಿರಾಶ್ರಿತರ ಶಿಬಿರದಲ್ಲಿ ನಡೀತು ‘ನಿಖ್ಹಾ’; ಜಗತ್ತಿನ ಗಮನ ಸೆಳೆಯಿತು ರೋಹಿಂಗ್ಯಾ ಜೋಡಿಯ ಹೊಸ ಹೆಜ್ಜೆ

ಮದುವೆ ಅನ್ನೋದು ಎರಡು ಜೀವಗಳನ್ನ ಬೆಸೆಯುವ ಮಧುರ ಸಂಬಂಧ ಅಂತಾ ಸಮಾಜ ನಂಬಿದೆ. ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತಾ ನಂಬುವವರೂ ಇದ್ದಾರೆ. ಜನ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾಗ ಮದುವೆ ಅನ್ನೋ ಬಂಧನಕ್ಕೆ ಒಳಗಾಗೋದು ಸಾಮಾನ್ಯ. ಮದುವೆ ಆಗಬೇಕು ಅಂದರೆ ಉತ್ತಮ ನೌಕರಿ ಸಿಗಬೇಕು ಅಂತಾ ಕಾಯುವವರೂ ಇದ್ದಾರೆ. ಆದರೆ, ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿ ನಡೆದ ಈ ಮದುವೆ ಎಲ್ಲರಿಗೂ ಅಚ್ಚರಿ ತಂದಿದೆ. ಬದುಕಿನ ಅಸ್ತಿತ್ವವೇ ಅಲುಗಾಡುತ್ತಿರುವ ಸಮಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ ವಿಶ್ವದ ಕುತೂಹಲದ ಕೇಂದ್ರವಾಗಿದೆ.

ಸೀರೆಗಳಿಂದ ಸುತ್ತುವರಿದಿರುವ ಪುಟ್ಟ ಟೆಂಟ್. ನವಜೋಡಿಯ ಸಿಂಪಲ್ ಸಿಂಗಾರ. ಉಚಿತವಾಗಿ ಸಿಗೋ ಊಟಕ್ಕಾಗಿ ತಳ್ಳಾಡುತ್ತಿರುವ ಮಕ್ಕಳು. ಕಡುಕಷ್ಟದ ಸಮಯದಲ್ಲೂ ಅರಳಿದ ನಗು. ಇತ್ತೀಚೆಗೆ ಬಾಂಗ್ಲಾದೇಶದ ಕಾಕ್ಸ್ ಬಜಾರ್ ನಿರಾಶ್ರಿತರ ಕ್ಯಾಂಪ್ ಸಾಕ್ಷಿಯಾಗಿದ್ದ ಅಪರೂಪದ ಸಮಾರಂಭವಿದು. ಮ್ಯಾನ್ಮಾರ್ ಸೈನಿಕರಿಂದ ಜೀವ ಉಳಿಸಿಕೊಳ್ಳಲು ಬಾಂಗ್ಲಾದೇಶಕ್ಕೆ ಓಡಿಬಂದ ಸೋಫಿಕಾ ಬೇಗಂ ಹಾಗೂ ಸದ್ದಾಮ್ ಹುಸೇನ್ ಇಲ್ಲಿ ನವಜೀವನಕ್ಕೆ ಕಾಲಿಟ್ಟಿದ್ದರು. ಮುಂದಿನ ಜೀವನ ಹೇಗೆ…? ಎಲ್ಲಿ..? ಏನು..? ಎನ್ನುವ ಯಾವ ಪ್ರಶ್ನೆಗೂ ನಿಖರ ಉತ್ತರವಿಲ್ಲದ ಚಿಂತಾಜನಕ ಕಾಲದಲ್ಲಿ, ಈ ಜೋಡಿ ಮದುವೆಯಾಗಿದ್ದು ಜನರನ್ನ ಬೆರಗುಗೊಳಿಸಿದೆ. ಸದ್ದಾಮ್ ಹಾಗೂ ಸೋಫಿಕಾ ಜೀವನವನ್ನ ಸಕಾರಾತ್ಮಕವಾಗಿ ಸ್ವೀಕರಿಸಿದ್ದು, ವಿವೇಚನೆ ಸತ್ತ ಜಗತ್ತಿಗೆ ಮಾದರಿಯಾಗಿ ಕಾಣಿಸುತ್ತಿದೆ.

ಕಾಕ್ಸ್ ಬಜಾರ್‌ನ ಕುಟು ಪಲಾಂಗ್ ನಿರಾಶ್ರಿತರ ಶಿಬಿರದಲ್ಲಿ ಮದುವೆಯಾಗಿರುವ ಸೋಫಿಕಾ ಬೇಗಂ ಹಾಗೂ ಸದ್ದಾಮ್ ಹುಸೇನ್, ಮ್ಯಾನ್ಮಾರ್ನ ರಖ್ಹಿನೆ ಪ್ರಾಂತ್ಯದ ಕಾ ಮುಂಗ್ ಸೈಕ್ ಗ್ರಾಮದವರು. ವ್ಯಾಪಾರಕ್ಕೆ ಹೆಸರು ಮಾಡಿದ್ದ ಈ ಗ್ರಾಮದಲ್ಲಿ ಬರೋಬ್ಬರಿ ಒಂದು ಸಾವಿರ ಅಂಗಡಿಗಳು ಇದ್ದವು. ಹೀಗಾಗಿ ಈ ಗ್ರಾಮವನ್ನ ರೋಹಿಂಗ್ಯಾಗಳು, ಫೋರಿಯಾ ಬಜಾರ್ ಎಂದು ಕರೆಯುತ್ತಿದ್ದರು. ಯಾವಾಗ ಮ್ಯಾನ್ಮಾರ್ ಸೇನೆ ನಿರ್ದಯವಾಗಿ ರೋಹಿಂಗ್ಯಾಗಳ ಮೇಲೆ ದಾಳಿ ನಡೆಸಲು ಶುರುಮಾಡಿತೋ, ಅಂದಿನಿಂದ ಫೋರಿಯಾ ಬಜಾರ್ ಜನರ ಜೀವನ ನರಕವಾಗಲು ಆರಂಭಿಸಿತ್ತು. ಗ್ರಾಮದ ವ್ಯಾಪಾರ ವಹಿವಾಟು ಸ್ತಬ್ಧವಾಗಿತ್ತು. “ಮ್ಯಾನ್ಮಾರ್ ಸೇನೆ ನಮ್ಮ ಮನೆಗಳನ್ನ ಸುಟ್ಟು ಹಾಕಿದ್ದರಿಂದ ವಿಧಿಯಿಲ್ದೆ ಬಾಂಗ್ಲಾದೇಶಕ್ಕೆ ಓಡಿ ಬಂದೆವು,” ಅಂತಾರೆ ಫೋರಿಯಾ ಬಜಾರ್‌ನಲ್ಲಿ ವ್ಯಾಪಾರ ನಡೆಸುತ್ತಿದ್ದ ಸದ್ದಾಮ್  ಹುಸೇನ್. ಮ್ಯಾನ್ಮಾರ್‌ನಲ್ಲಿ ಇದ್ದಾಗ ಸದ್ದಾಮ್ ಹುಸೇನ್ ಹಾಗೂ ಸೋಫಿಕಾ ಬೇಗಂ ಮದುವೆ ನಿಶ್ಚಯವಾಗಿತ್ತು. ಮ್ಯಾನ್ಮಾರ್ ಸೇನೆ ನಡೆಸಿದ ದಾಳಿಯಿಂದಾಗಿ ಎರಡು ಕುಟುಂಬಗಳು ಬಾಂಗ್ಲಾದೇಶಕ್ಕೆ ವಲಸೆ ಬಂದಿದ್ದವು. ಸಾಕಷ್ಟು ಕಠಿಣ ಸಂದರ್ಭಗಳನ್ನ ಎದುರಿಸಿ ಸದ್ದಾಮ್ ಹಾಗೂ ಸೋಫಿಕಾ ಕುಟುಂಬ ಕಾಕ್ಸ್ ಬಜಾರ್ ಜಿಲ್ಲೆಯಲ್ಲಿರುವ ಕುಟುಪಲಾಂಗ್ ನಿರಾಶ್ರಿತರ ಕೇಂದ್ರಕ್ಕೆ ಬಂದು ನಿಟ್ಟುಸಿರು ಬಿಟ್ಟಿದ್ದವು. ಈ ನಡುವೆ ಸೋಫಿಕಾ ಹಾಗೂ ಸದ್ದಾಮ್ ಬೇರೆ ಬೇರೆಯಾಗಿದ್ದರು. ಕುಟುಪಲಾಂಗ್ ನಿರಾಶ್ರಿತರ ಕೇಂದ್ರದಲ್ಲಿ ಇಬ್ಬರು ಮತ್ತೆ ಒಂದಾಗಿದ್ದು ಇವರ ಅದೃಷ್ಟವೇ ಸರಿ.

ವಾಸಿಸಲು ಸ್ವಂತ ಮನೆ, ನನ್ನದು ಅಂತಾ ಹೇಳಿಕೊಳ್ಳೋಕೆ ಒಂದು ಜಾಗವೂ ಇರದ ವೇಳೆಯಲ್ಲೂ ಸದ್ದಾಮ್ ಹಾಗೂ ಸೋಫಿಕಾ ಮದುವೆ ಸಂಭ್ರಮ, ಸಡಗರದಿಂದ ನಡೆದಿದೆ. ಮದುವೆಯಲ್ಲಿ ಒಂದಿಷ್ಟು ಜನರಿಗೆ ಮಾಂಸದ ಊಟ ಹಾಕಿಸಿದೆ ಈ ಜೋಡಿ. ನಿರಾಶ್ರಿತರ ಕೇಂದ್ರದಲ್ಲಿರುವ ಮಕ್ಕಳು ಒಂದು ಹೊತ್ತಿನ ಮಾಂಸದ ಊಟಕ್ಕಾಗಿ ನೂಕಾಟ ತಳ್ಳಾಟ ನಡೆಸಿದ್ದು, ರೋಹಿಂಗ್ಯಾಗಳ ಇಂದಿನ ಸ್ಥಿತಿಯನ್ನ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದೆ. ಜೀವನ ಅನಿಶ್ಚಿತತೆಯಿಂದ ಕೂಡಿರುವ ಸಮಯದಲ್ಲಿ ದಾಂಪತ್ಯ ಜೀವನ ಆರಂಭಿಸಿರೋ ಸದ್ದಾಮ್ ಹಾಗೂ ಸೋಫಿಕಾ ಜೀನವ ಪ್ರೀತಿಯನ್ನ ಮೆಚ್ಚಲೇಬೇಕು.

2016ರ ಆಗಸ್ಟ್ ತಿಂಗಳಲ್ಲಿ ಮ್ಯಾನ್ಮಾರ್ ಮಿಲಿಟರಿ, ರೋಹಿಂಗ್ಯಾಗಳ ಮೇಲೆ ದಾಳಿ ನಡೆಸಿತ್ತು. ಭದ್ರತಾ ಪಡೆಗಳು ನಡೆಸಿದ ಹಿಂಸಾಚಾರದಲ್ಲಿ ಸಾವಿರಾರು ರೋಹಿಂಗ್ಯಾಗಳು ಪ್ರಾಣ ಕಳೆದುಕೊಂಡಿದ್ದರು. ಸಾವಿರಾರು ರೋಹಿಂಗ್ಯಾಗಳ ಮನೆಗಳನ್ನ ಮ್ಯಾನ್ಮಾರ್ ಸೇನೆ ಸುಟ್ಟು ಹಾಕಿದೆ. ಜೀವ ಉಳಿಸಿಕೊಳ್ಳಲು 6, 60, 000 ರೋಹಿಂಗ್ಯಾಗಳು ಮ್ಯಾನ್ಮಾರ್ನಿಂದ ಪಲಾಯನ ಮಾಡಿದ್ದಾರೆ. ಉಸಿರು ಉಳಿಸಿಕೊಳ್ಳಲು ಬಾಂಗ್ಲಾದೇಶಕ್ಕೆ ವಲಸೆ ಬಂದಿದ್ದಾರೆ. ಮ್ಯಾನ್ಮಾರ್ ಸೇನೆ, ಈ ಹಿಂಸಾಚಾರವನ್ನ ರೋಹಿಂಗ್ಯಾಗಳ ದಂಗೆ ನಿಯಂತ್ರಿಸಲು ನಡೆಸಿದ್ದ ಕಾರ್ಯಾಚರಣೆ ಅಂತಾ ಪ್ರತಿಪಾದಿಸುತ್ತಲೇ ಬಂದಿದೆ. ಮ್ಯಾನ್ಮಾರ್ನಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಹೋರಾಟ ನಡೆಸಿದ್ದ ಮಾನವ ಹಕ್ಕುಗಳ ಹೋರಾಟಗಾರ್ತಿ, ನೊಬೆಲ್ ಶಾಂತಿ ಪುರಸ್ಕೃತೆ ಆಂಗ್ ಸಾನ್ ಸೂಕಿ ಸಹ ರೋಹಿಂಗ್ಯಾಗಳ ಮೇಲಿನ ಹಿಂಸಾಚಾರವನ್ನ ಖಂಡಿಸಿಲ್ಲ. ಮೊನ್ನೆ ವಿಶ್ವಸಂಸ್ಥೆಯಲ್ಲಿ ಈ ಬಗ್ಗೆ ಆಂಗ್ ಸಾನ್ ಸೂಕಿ ಕನಿಷ್ಠ ಮಾತನಾಡಲು ನಿರಾಕರಿಸಿದ್ದಾರೆ ಅಂತಾ ವರದಿಯಾಗಿತ್ತು.

ಬೇರೆ ಬೇರೆಯಾಗಿ ಬಾಂಗ್ಲಾದೇಶಕ್ಕೆ ವಲಸೆ ಬಂದಿದ್ದ 23 ವರ್ಷದ ಸದ್ದಾಮ್ ಹಾಗೂ 18 ವರ್ಷದ ಶೋಫಿಕಾ ಬೇಗಂ ಸದ್ಯ ಸತಿಪತಿಗಳಾಗಿದ್ದಾರೆ. ಮ್ಯಾನ್ಮಾರ್ನಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಸದ್ದಾಮ್, ಪುನ: ತವರಿಗೆ ತೆರಳಿ ಹೊಸ ಜೀನವ ಕಟ್ಟಿಕೊಳ್ಳೋ ಕನಸು ಕಾಣುತ್ತಿದ್ದಾರೆ. ಆದ್ರೆ, ಮ್ಯಾನ್ಮಾರ್ ಸರ್ಕಾರ, ತಮಗೆ ನಾಗರಿಕತ್ವ ನೀಡುವವರೆಗೆ ನಾವು ಮ್ಯಾನ್ಮಾರ್ಗೆ ಮರಳಲ್ಲ ಅಂತಾ ಖಂಡಿತವಾಗಿ ಹೇಳ್ತಾರೆ ಸದ್ದಾಮ್. ವಿಶ್ವದಲ್ಲೇ ಅತಿ ಹೆಚ್ಚು ದೌರ್ಜನ್ಯಕ್ಕೆ ತುತ್ತಾದ ರೋಹಿಂಗ್ಯಾಗಳ ಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ. ಇಂತಹ ಸಾವಿರಾರು ಸದ್ದಾಮ್, ಸೋಫಿಕಾ ಬೇಗಂಗಳ ಬದುಕು ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಲ್ಲಿ ಕಮರುತ್ತಿವೆ.

Leave a comment

Top