An unconventional News Portal.

ಮೋದಿ ಸಂಘ; ‘ಫೋರ್ಡ್ ಫೌಂಡೇಷನ್’ ವ್ಯವಹಾರಕ್ಕಿಲ್ಲ ಕಾನೂನಿನ ಭಂಗ: ಹಿಂಗ್ಯಾಕೆ?

ಮೋದಿ ಸಂಘ; ‘ಫೋರ್ಡ್ ಫೌಂಡೇಷನ್’ ವ್ಯವಹಾರಕ್ಕಿಲ್ಲ ಕಾನೂನಿನ ಭಂಗ: ಹಿಂಗ್ಯಾಕೆ?

ದೇಶದಲ್ಲಿ ಮೋದಿ ಸರಕಾರ ಆಡಳಿತಕ್ಕೆ ಬಂದ ಮೇಲೆ ಸರಕಾರೇತರ ಸಂಸ್ಥೆಗಳು ಕಾರ್ಯ ನಿರ್ವಹಿಸುವುದು ದುಸ್ತರವಾಗಿದೆ ಎನ್ನುವ ಅಭಿಪ್ರಾಯ ವ್ಯಾಪಕವಾಗಿದೆ. ಆದರೆ ಇಲ್ಲೊಂದು ಸಂಸ್ಥೆ ಸರಕಾರದ ಜತೆ ‘ಮ್ಯಾನೇಜ್’ ಮಾಡಿಕೊಂಡು ಆರಾಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಂದ ಹಾಗೆ, ಈ ಸಂಸ್ಥೆಯ ಹೆಸರು ‘ಫೋರ್ಡ್ ಫೌಂಡೇಷನ್’.

ಜಗತ್ತಿನ ಶ್ರೀಮಂತ ‘ಸರಕಾರೇತರ ಸಂಸ್ಥೆ’ಗಳಲ್ಲಿ ಒಂದಾದ ಫೋರ್ಡ್ ಫೌಂಡೇಷನ್ ಮೋದಿ ಸರಕಾರದ ಜತೆ ಅಲಿಖಿತ ‘ಹೊಂದಾಣಿಕೆ’ ಮಾಡಿಕೊಂಡಿದೆ. ಈ ಕಾರಣಕ್ಕೆ ಸರಕಾರದ ನಿಯಂತ್ರಣದ ನಂತರವೂ ಫೌಂಡೇಷನ್ನಿನ ಭಾರತೀಯ ವಿಭಾಗದ ಕಾರ್ಯನಿರ್ವಹಣೆಗೆ ಎಲ್ಲೂ ಧಕ್ಕೆ ಬಂದಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ‘ವಿಕಿಲೀಕ್ಸ್’ ಸೋರಿಕೆ ಮಾಡಿದ ಈ ಮೇಲ್ಗಳು ಇದಕ್ಕೆ ಸಾಕ್ಷಿಯಾಗಿವೆ ಎಂದು ‘ದಿ ವೈರ್’ ವರದಿ ಪ್ರಕಟಿಸಿದೆ.

ತೀಸ್ತಾ ಸೆತಲ್ವಾಡ್

ತೀಸ್ತಾ ಸೆತಲ್ವಾಡ್

2014ರಲ್ಲಿ ದೇಶದಲ್ಲಿ ಮೋದಿ ಅಧಿಕಾರಕ್ಕೆ ಬರುವ ಮೊದಲು ‘ಫೋರ್ಡ್ ಫೌಂಡೇಷನ್’ ತೀಸ್ತಾ ಸೆತಲ್ವಾಡ್ ಗೆ ಸೇರಿದ ಫೌಂಡೇಷನ್ನಿಗೂ ಹಣ ನೀಡುತ್ತಿತ್ತು. ಸೆತಲ್ವಾಡ್ ಫೌಂಡೇಷನಿನ ದಿನ ನಿತ್ಯದ ಖರ್ಚುಗಳಿಗೆ ಮತ್ತು ಸಂಶೋಧನೆಗೆ ಈ ಹಣ ಬಳೆಕೆಯಾಗುತ್ತಿತ್ತು. ಗೋಧ್ರಾ ಗಲಭೆಯ ನಂತರ ಸಂತ್ರಸ್ತರ ಪರವಾಗಿ ತೀಸ್ತಾ ಸೆತಲ್ವಾಡ್ ಸಂಸ್ಥೆ ಅಂದು ಗುಜರಾತ್ ಆಡಳಿತ ನಡೆಸುತ್ತಿದ್ದ ಮೋದಿ ಸರಕಾರದ ವಿರುದ್ಧ ಕಾನೂನು ಸಮರ ಶುರುಮಾಡಿತ್ತು. ಇದರಿಂದ ಮೋದಿ ಅವಧಿಯಲ್ಲಿ ಸಹಜವಾಗಿಯೇ ‘ಫೋರ್ಡ್ ಫೌಂಡೇಷನ್’ ಕಷ್ಟದ ದಿನಗಳನ್ನು ಕಾಣಲಿದೆ ಎಂದು ಊಹಿಸಲಾಗಿತ್ತು.

ಆದರೆ ಆಗಿದ್ದೇ ಬೇರೆ. ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ಮೊದಲು ಸ್ವಯಂ ಸೇವಾ ಸಂಸ್ಥೆಗಳಿಗೆ ಮೂಗುದಾರ ತೊಡಿಸಿದರು. 13,000 ಎನ್ಜಿಒಗಳು ಕೇಳುವವರೂ ಗತಿ ಇಲ್ಲದೇ ಬಾಗಿಲೆಳೆದುಕೊಂಡು ಹೋದವು. ವಿದೇಶಿ ಫೋರ್ಡ್ ಫೌಂಡೇಷನಿಗೂ ದೇಶ ಬಿಟ್ಟು ತೆರಳುವಂತೆ ಹೇಳಲಾಗಿತ್ತು. ಸೆತಲ್ವಾಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಫೋರ್ಡ್ ಫೌಂಡೇಷನ್’ನ್ನೂ ವಾಚ್ ಲಿಸ್ಟ್’ನಲ್ಲಿ ಇಡಲಾಗಿತ್ತು. ಹೀಗಿದ್ದೂ ತಳಮಟ್ಟದಲ್ಲಿ ದೊಡ್ಡ ಬದಲಾವಣೆಯನ್ನೇನು ಆಗಲೇ ಇಲ್ಲ. ತನ್ನ ನೀತಿ ಕಾರ್ಯವಿಧಾನಗಳನ್ನು ಬದಲಾಯಿಸಿಕೊಂಡು ಫೋರ್ಡ್ ಫೌಂಡೇಷನ್ ಮಾತ್ರ ಭಾರತದಲ್ಲಿ ಉಳಿಯುವ ಪಣ ತೊಟ್ಟಿತು. ಮಾತ್ರವಲ್ಲ ಇವತ್ತಿಗೂ ಗಟ್ಟಿಯಾಗಿ ನೆಲೆಯೂರಿದೆ.

‘ವಿಕಿಲೀಕ್ಸ್’ ಬಿಡುಗಡೆ ಮಾಡಿದ ಈ-ಮೇಲ್ಗಳಲ್ಲಿ ಈ ಎಲ್ಲಾ ವಿಚಾರಗಳೂ ವ್ಯಕ್ತವಾಗಿವೆ.  ಮುಖ್ಯವಾಗಿ ಸಂಸ್ಥೆ ಹಂತಹಂತವಾಗಿ ಮೋದಿಯೆಡೆಗೆ ವಾಲಿದ್ದನ್ನು ಇ- ಮೇಲ್ಗಳು ಬಹಿರಂಗಪಡಿಸಿವೆ. ಮೋದಿ ಅಧಿಕಾರಕ್ಕೆ ಬಂದ ಅವಧಿಯಿಂದ ತಾವು ಯಾರ ಜತೆ ಸಂಬಂಧ ಹೊಂದಿರಬೇಕು ಎಂಬುದನ್ನು ಸಂಸ್ಥೆ ಪುನರ್ ವಿಮರ್ಶೆ ಮಾಡಿಕೊಂಡಿತ್ತು. ಒಟ್ಟಾರೆ ತಮ್ಮ ರಣತಂತ್ರಗಳನ್ನೇ ಬದಲಾಯಿಸಿಕೊಂಡತ್ತು. ಇವೆಲ್ಲಾ’ಈ ಮೇಲ್’ಗಳಲ್ಲಿ ಯಥಾವತ್ತು ದಾಖಲಾಗಿವೆ.

ಮುಖ್ಯವಾಗಿ 2015ರ ಮೇನಿಂದ ಜೂನ್ ವರೆಗಿನ ಅವಧಿಯಲ್ಲಿ ಫೋರ್ಡ್ ಫೌಂಡೇಷನ್ನಿನ ಒಳಗೆ ಮಿಂಚಿನ ಬೆಳವಣಿಗೆಗಳು ನಡೆದಿವೆ. ಫೌಂಡೇಷನಿನ ಭಾರತ ಮತ್ತು ವಿದೇಶಿ ಮುಖ್ಯಸ್ಥರು ಅಧಿಕಾರಿಗಳಲ್ಲದೆ, ಸಂಸ್ಥೆಯ ಟ್ರಸ್ಟಿಗಳಾದ ಇನ್ಫೋಸಿಸ್ ನಾರಾಯಣ ಮೂರ್ತಿಯಂತವರೂ ಅಖಾಡಕ್ಕ ಇಳಿದಿದ್ದರು. ಇದು ಸಂಸ್ಥೆಯನ್ನು ಗಂಡಾಂತರದಿಂದ ತಪ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು.

ಏಪ್ರಿಲ್ 2015:

ತನ್ನ ಮೇಲೆ ಸರಕಾರ ನಿಗಾ ಇಟ್ಟಿದೆ ಎಂಬ ವಿಚಾರ ಆರು ತಿಂಗಳ ನಂತರ ಏಪ್ರಿಲ್ 2015ರಲ್ಲಿ ಫೋರ್ ಫೌಂಡೇಷನ್ ಗಮನಕ್ಕೆ ಬಂದಿತ್ತು. ಇದಕ್ಕೆ ಸೆತಲ್ವಾಡ್ ಜೊತೆಗಿದ್ದ ಸಂಪರ್ಕ ಕಾರಣವಾಗಿತ್ತು. ಹೀಗಾಗಿ ಫೌಂಡೇಷನ್ ಹಣಿಯಲು ಕಾನೂನುಗಳನ್ನು ಉಲ್ಲಂಘನೆ ಮಾಡಿರುವ ಪ್ರಕರಣಗಳು ಇವೆಯೋ ಎಂದು ಗಮನ ಹರಿಸುವಂತೆ ವಿದೇಶಾಂಗ ಇಲಾಖೆಗೆ ಸೂಚಿಸಲಾಗಿತ್ತು. ಫೌಂಡೇಷನ್ ಸರಕಾರದ ‘ವಾಚ್ ಲಿಸ್ಟ್’ನಲ್ಲಿ ಸೇರಿಕೊಂಡಿದೆ ಎಂಬ ವಿಚಾರ ಪತ್ರಕರ್ತರೊಬ್ಬರ ಮೂಲಕ ತಿಳಿದು ಬಂದಿತ್ತು. ಅಲ್ಲಿಂದ ನಂತರ ಏನೆಲ್ಲಾ ನಡೆಯಿತು ಎಂಬುದು, ಹೊಸ ಕತೆಯ ಅಂತರಾಳವನ್ನು ತೆರೆದಿಡುತ್ತದೆ.

ವಿಚಾರ ತಿಳಿಯುತ್ತಿದ್ದಂತೆ ಏಕಾಏಕಿ ಕಾರ್ಯೋನ್ಮುಖವಾದ ಫೋರ್ಡ್ ತಂಡ, ತಾನು ಬೇರೆ ಸಂಸ್ಥೆಗಳಿಗೆ ನೀಡಿದ ಅನುದಾನಗಳ ಮಾಹಿತಿಯನ್ನೆಲ್ಲಾ ಮುಚ್ಚಿಟ್ಟಿತು. ಅದೇ ಸಂದರ್ಭಕ್ಕೆ ವಕೀಲರನ್ನ ಸಂಪರ್ಕಿಸುವ, ಅಂತರಾಷ್ಟ್ರೀಯ ಮಾಧ್ಯಮಗಳಿಗೆ ಸುದ್ದಿ ನೀಡಿ ಅಭಿಪ್ರಾಯ ರೂಪಿಸುವ ಕೆಲಸಗಳಿಗೆ ಫೋರ್ಡ್ ಫೌಂಡೇಷನ್ನಿನ ಹಿರಿಯರು ಇಳಿದು ಬಿಟ್ಟರು. ಪ್ರಧಾನಿ ನರೇಂದ್ರ ಮೋದಿಯ ಖುದ್ದು ಭೇಟಿಗಾಗಿ ಯೋಜನೆ ಹಾಕಿಕೊಳ್ಳಲಾಯಿತು. ಆದರೆ ಅದು ಸಾಧ್ಯವಾಗಲಿಲ್ಲ.

ಹೀಗಿದ್ದೂ, ಪ್ರಯತ್ನ ಫೋರ್ಡ್ ಪ್ರಯತ್ನ ಬಿಡಲಿಲ್ಲ. ಸಂಸ್ಥೆಯ ಅಧ್ಯಕ್ಷ ಡ್ಯಾರನ್ ವಾಕರ್ ಮತ್ತು ಹಿರಿಯ ಅಧಿಕಾರಿಗಳು ನಾರಾಯಣ ಮೂರ್ತಿಯನ್ನು ಕಟ್ಟಿಕೊಂಡು, ಹಣಕಾಸು ಸಚಿವ ಅರುಣ್ ಜೇಟ್ಲಿ, ಮೋದಿಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಬಂದರು.

ಮೋದಿಗೆ ಆಟ, ಫೌಂಡೇಷನ್ನಿಗೆ ಪ್ರಾಣ ಸಂಕಟ:

ನಾರಾಯಣ್ ಮೂರ್ತಿ

ನಾರಾಯಣ್ ಮೂರ್ತಿ

ತೀಸ್ತಾ ಸೆತಲ್ವಾಡ್ ಫೌಂಡೇಷನ್ನಿಗೆ ಅನುದಾನ ನೀಡಿದ್ದೇ ಫೋರ್ಡ್ ಫೌಂಡೇಷನ್ ಮೇಲೆ ಪ್ರಧಾನಿ ನರೇಂದ್ರ ಮೋದಿ ಸಿಟ್ಟಾಗಲು ಕಾರಣ ಎನ್ನುವ ಅಂಶಗಳು ಫೋರ್ಡ್ ಸಭೆಯಲ್ಲಿ ವ್ಯಕ್ತವಾಗುತ್ತಿದ್ದವು.  ಆದರೆ ಯಾವಾಗ ಗುಜರಾತ್ ಪೊಲೀಸರು ತೀಸ್ತಾ ಸೆತಲ್ವಾಡಿಗೆ ನೀಡಿದ ಅನುದಾನ ಮಾಹಿತಿ ಕೇಳಿದರೋ ಎಚ್ಚರಿಕೆಯ ಕರೆಗಂಟೆ ಬಾರಿಸಿದಂತಾಯಿತು. ಪೊಲೀಸರು ಏನಾದರೂ ತಪ್ಪು ಹುಡುಕಲೇಬೇಕೆಂದು ಈ ವಿಚಾರಕ್ಕೆ ಕೈ ಹಾಕಿದ್ದು ಗುಪ್ತವಾಗಿಯೇನೂ ಉಳಿದಿರಲಿಲ್ಲ.

ಆದರೆ ಕಾನೂನು ಉಲ್ಲಂಘನೆಗೆ ದೃಢವಾದ ಸಾಕ್ಷ್ಯಗಳಿಲ್ಲ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಹೀಗಾಗಿ ‘ಗ್ರೀನ್ ಪೀಸ್’ ಸಂಸ್ಥೆಯ ಬ್ಯಾಂಕ್ ಅಕೌಂಟ್ಗಳನ್ನು ಸ್ಥಗಿತಗೊಳಿಸಿ ಲೈಸನ್ಸ್ ರದ್ದು ಮಾಡಿದ ಹಾದಿಯಲ್ಲೇ, ಫೋರ್ಡಿಗೂ ನಿಯಂತ್ರಣ ಹೇರುವ ನಿರ್ಧಾರಕ್ಕೆ ಬರಲಾಗಿತ್ತು.

ಆದರೆ ಇದೆಲ್ಲಾ ಆಗುವ ಹೊತ್ತಿಗೆ ಸಂಸ್ಥೆಯ ಅಧ್ಯಕ್ಷರು ನಾರಾಯಣ ಮೂರ್ತಿ ಜತೆ ಮಂತ್ರಿಗಳನ್ನು ಭೇಟಿ ಆಗಿದ್ದು ಸಹಾಯಕ್ಕೆ ಬಂದಿತ್ತು. ಪ್ರಧಾನ ಮಂತ್ರಿಗಳ ಕಾರ್ಯದರ್ಶಿ ಫೋರ್ಡ್ ಭಾರದತದಲ್ಲಿ ಕಾರ್ಯ ನಿರ್ವಹಿಸಬೇಕು ಎಂಬ ಅಭಿಪ್ರಾಯಕ್ಕೆ ಬಂದಿದ್ದರು.

ಹೊಂದಾಣಿಕೆ ಆರಂಭ:

ಈ ಹಂತದಲ್ಲಿ ಸರಕಾರದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಸಂಸ್ಥೆಯ ಹಿರಿಯ ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಬಂದಿತ್ತು. ಈಗ ಸೋರಿಕೆಯಾದ ಮೇಲ್ಗಳಲ್ಲಿ ಈ ಮಾಹಿತಿಗಳಿವೆ.

ಅಧಿಕಾರಿಗಳು ಚರ್ಚಿಸಿ, ಮೊದಲಿಗೆ ಸೆತಲ್ವಾಡ್ ಪ್ರಕರಣದಲ್ಲಿ ಸರಕಾರದ ಕ್ಷಮೆ ಕೇಳುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದರು. ಎರಡನೆಯದ್ದಾಗಿ ‘ವಿಶೇಷ ಸಂಸ್ಥೆ’ ಸ್ಥಾನಮಾನ ಬಿಟ್ಟು ಇತರ ಸಂಸ್ಥೆಗಳಂತೆಯೇ ಭಾರತದ ಕಾನೂನಿ (FEMA Act) ನಡಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ಎಂದು ನಿರ್ಧರಿಸಲಾಯಿತು. ಹೀಗೆ ಮಾಡಿದಾಗ ಫೋರ್ಡ್ ಬಗ್ಗಿದಂತೆ ಭಾಸವಾಗುತ್ತದೆ. ಆಗ ಸರಕಾರಕ್ಕೆ ನಾವು ಏನೋ ಗೆದ್ದಿದ್ದೇವೆ ಎಂಬ ಭಾವನೆ ಬರುತ್ತದೆ ಎಂಬುದು ಈ ತೀರ್ಮಾನದ ಹಿಂದಿದ್ದ ಕಾರಣವಾಗಿತ್ತು. ಕೊನೆಯದಾಗಿ, ಇನ್ನು ಮುಂದೆ ಕಾನೂನು ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡುವುದು ಸೂಕ್ತ ಎಂಬ ಒಮ್ಮತದ ತೀರ್ಮಾನಕ್ಕೆ ಬರಲಾಯಿತು.

ಈ ಎಲ್ಲಾ ನಿರ್ಧಾರಗಳನ್ನು ಪಾಲಿಸಿದ ನಂತರ ಇದೀಗ ಫೋರ್ಡ್ ಆರಾಮದ ದಿನಗಳಿಗೆ ಮರಳಿದೆ. ಕಳೆದ ಮಾರ್ಚಿನಲ್ಲಿ ನ್ಯೂಕ್ಲಿಯರ್ ಡೀಲಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ರಾಜಧಾನಿ ವಾಷಿಂಗ್ಟನ್ನಿಗೆ ಪ್ರಯಾಣ ಬೆಳೆಸುವ ಮೊದಲು ಎಲ್ಲವೂ ಸುಖಾಂತ್ಯವಾಗಿದೆ. ವಿದೇಶಾಂಗ ಇಲಾಖೆ ಜನರಿಂದ ಫಂಡ್ ಪಡೆದುಕೊಳ್ಳಲು ಪಡೆಯಬೇಕಾದ ಒಪ್ಪಿಗೆ ನಿಯಮದಿಂದ ಫೋರ್ಡ್’ಗೆ ವಿನಾಯಿತಿಯನ್ನೂ ನೀಡಿದೆ. ಇದರಿಂದ ಸಂಸ್ಥೆ ಯಾರಿಂದಲಾದರೂ ಸುಲಭವಾಗಿ ಫಂಡ್ ಪಡೆದುಕೊಳ್ಳಬಹುದಾಗಿದೆ.

ಹೀಗೆ ಸರಕಾರದ ಜೊತೆ ಹೊಂದಾಣಿಕೆ ಮಾಡಿಕೊಂಡು ಬಹುರಾಷ್ಟ್ರೀಯ ಸರಕಾರೇತರ ಸಂಸ್ಥೆಯೊಂದು ವಿವಾದಕ್ಕೆ ಎಡೆಮಾಡಿಕೊಳ್ಳದಂತೆ ತನ್ನ ಕಾರ್ಯಾಚರಣೆಯನ್ನು ದೇಶದಲ್ಲಿ ಮುಂದುವರಿಸಿದೆ. ಇದು ಕಳೆದ ಎರಡೂವರೆ ವರ್ಷಗಳ ಅವಧಿಗಳ ಪ್ರಧಾನಿ ಮೋದಿ ಸರಕಾರದ ನೆರಳಿನಲ್ಲಿ ನಡೆದ ಹಲವು ‘ಹೈ ಡ್ರಾಮ’ಗಳಿಗೆ ಸಾಕ್ಷಿಯೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಮಾಹಿತಿ ಕೃಪೆ: ದಿ ವೈರ್.

Leave a comment

Top