An unconventional News Portal.

‘ರಿಪಬ್ಲಿಕ್ ಟಿವಿ= ಪ್ಯಾನಲ್ ಚರ್ಚೆ’: ಅರ್ನಾಬ್ ಹಿಂದೆ ಬಿದ್ದ ಜಾಹೀರಾತು ಕಂಪನಿಗಳು!

‘ರಿಪಬ್ಲಿಕ್ ಟಿವಿ= ಪ್ಯಾನಲ್ ಚರ್ಚೆ’: ಅರ್ನಾಬ್ ಹಿಂದೆ ಬಿದ್ದ ಜಾಹೀರಾತು ಕಂಪನಿಗಳು!

ಅರ್ನಾಬ್ ಗೋಸ್ವಾಮಿ ಯಾವತ್ತಿದ್ದರೂ ದೇಶದ ದೊಡ್ಡ ಕಾರ್ಪೊರೇಟ್ ಕಂಪನಿಗಳ ಪಾಲಿಗೆ ‘ಚಿನ್ನದ ಮೊಟ್ಟೆ’ ಎಂಬುದು ಮತ್ತೊಮ್ಮೆ ನಿಜವಾಗುವ ಎಲ್ಲಾ ಸಾಧ್ಯತೆಗಳಿವೆ. ಮೇ. 6ರಂದು ತೆರೆಗೆ ಬರಲಿದೆ ಎನ್ನಲಾದ ಅರ್ನಾಬ್ ನೇತೃತ್ವದ ‘ರಿಪಬ್ಲಿಕ್ ಟಿವಿ’ಗೆ ಈಗಾಗಲೇ ಜಾಹೀರಾತುಗಳ ಸುರಿಮಳೆ ಶುರುವಾಗಿದೆ. ವೀವೋ, ರಿಲಯನ್ಸ್ ಜಿಯೋ, ಎಸ್‌ ಬ್ಯಾಂಕ್, ಓಲಾ, ಹೈಕ್ ಸೇರಿದಂತೆ ಸುಮಾರು ಹತ್ತು ಕಂಪನಿಗಳು ‘ರಿಪಬ್ಲಿಕ್ ಟಿವಿ’ಗೆ ಜಾಹೀರಾತು ನೀಡಲು ಆರಂಭಿಕ ಹಂತದಲ್ಲಿಯೇ ಮುಂದೆ ಬಂದಿವೆ.

ಸುದ್ದಿ ಮಾಧ್ಯಮಗಳ ವಿಚಾರದಲ್ಲಿ, ಅವುಗಳು ನೀಡುವ ‘ಕಂಟೆಂಟ್’ ಎಷ್ಟು ಮುಖ್ಯವೋ, ಅವುಗಳು ಪಡೆಯುವ ಜಾಹೀರಾತು ಕೂಡ ಔದ್ಯಮಿಕ ಹಿತಾಸಕ್ತಿಗಳ ಕಾರಣಗಳಿಗಾಗಿ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ, ‘ರಿಪಬ್ಲಿಕ್ ಟಿವಿ’ ತನ್ನ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡುವುದು ನಿಚ್ಚಳವಾಗಿದೆ.

ಕೋಟಿ ಉದ್ಯಮ:

ಸುದ್ದಿ ವಾಹಿನಿಯನ್ನು ರಾಷ್ಟ್ರಮಟ್ಟದಲ್ಲಿ ಕಟ್ಟುವುದು ಭಾರಿ ಬಂಡವಾಳವನ್ನು ಬೇಡುವ ಉದ್ಯಮ. ಹೀಗಾಗಿ, ಅವುಗಳು ಜಾಹೀರಾತುದಾರರನ್ನು ನಂಬಿಕೊಳ್ಳುವುದು ಅನಿವಾರ್ಯ ಕೂಡ. ಪತ್ರಿಕೋದ್ಯಮವನ್ನೂ ಕೂಡ ಟಿಪಿಕಲ್ ಉದ್ಯಮ ಎಂದು ಪರಿಭಾವಿಸುವ ಮನಸ್ಥಿತಿ ಹೆಚ್ಚುತ್ತಿದೆ. ಹೀಗಾಗಿಯೇ ಯಾವುದೇ ಹೊಸ ಮಾಧ್ಯಮ ಹುಟ್ಟಿಕೊಂಡರೂ, ಮೊದಲ ಕೇಳುವುದು ‘ಹೇಗೆ ರಿಟರ್ನ್ಸ್ ಬರ್ತಿದ್ಯಾ?’ ಅಂತ. ಹೀಗಾಗಿ ಯಶಸ್ವಿ ಮಾಧ್ಯಮ ಅನ್ನಿಸಿಕೊಳ್ಳುವ ಮಾನದಂಡಗಳಲ್ಲಿ ಅದು ನಡೆಸುವ ವಹಿವಾಟು ಕೂಡ ಇವತ್ತು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಇದು ಅಪಾಯಕಾರಿ, ಅನಿವಾರ್ಯ ಕರ್ಮ!

ಅರ್ನಾಬ್ ಗೋಸ್ವಾಮಿ ನೇತೃತ್ವದ ಹೊಸ ಸುದ್ದಿ ವಾಹಿನಿ ‘ಕಂಟೆಂಟ್’ ವಿಚಾರದಲ್ಲಿ ಕೊಂಚ ಭಿನ್ನವಾಗಿರಲಿದೆ ಎಂದು ಹಲವು ವರದಿಗಳು ಸಾರಿ ಹೇಳುತ್ತಲೇ ಬಂದಿವೆ. ಹಿಂದೆ ‘ಟೈಮ್ಸ್ ನೌ’ ವಾಹಿನಿಯಲ್ಲಿ ‘ನ್ಯೂಸ್ ಅವರ್’ ಹೆಸರಿನಲ್ಲಿ ‘ಸೂಪರ್ ಪ್ರೈಮ್’ ನಡೆಸಿಕೊಡುತ್ತಿದ್ದವರು ಅರ್ನಾಬ್ ಗೋಸ್ವಾಮಿ. ಸಾಮಾನ್ಯವಾಗಿ ಹೆಚ್ಚು ಜನ ವೀಕ್ಷಿಸುವ ಅವಧಿಯನ್ನು ‘ಪ್ರೈಮ್ ಟೈಮ್’ ಎಂದು ಕರೆಯುತ್ತಾರೆ. ಆದರೆ, ತಮ್ಮ ‘ನ್ಯೂಸ್ ಅವರ್‌’ಗೆ ಸೂಪರ್ ಪ್ರೈಮ್ ಟೈಮ್ ಎಂದು ಕರೆದಿದ್ದರು ಅರ್ನಾಬ್.

ಇಂಗ್ಲಿಷ್ ಸುದ್ದಿ ವಾಹಿನಿಗಳಲ್ಲಿ ದಿನದ ಆಧಾರದ ಮೇಲೆ ಪ್ರತಿ 10 ಸೆಕೆಂಡ್ ಜಾಹೀರಾತಿಗೆ 3 ಸಾವಿರದವರೆಗೆ ದರವನ್ನು ನಿಗದಿ ಮಾಡಲಾಗಿದೆ. ಅರ್ನಾಬ್ ‘ನ್ಯೂಸ್ ಅವರ್‌’ ನಡುವೆ 10 ಸೆಕೆಂಡ್ ಜಾಹೀರಾತಿಗೆ 20 ರಿಂದ 30 ಸಾವಿರ ಜಾಹೀರಾತು ದರವನ್ನು ನಿಗದಿ ಮಾಡಲಾಗಿತ್ತು. ಚುನಾವಣಾ ಫಲಿತಾಂಶ ಮತ್ತಿತರ ಸ್ಫೋಟಕ ಮಾಹಿತಿ ಇರುವ ದಿನಗಳಲ್ಲಿ ಅರ್ನಾಬ್ ನಡೆಸಿಕೊಡುತ್ತಿದ್ದ ಚರ್ಚಾ ಕಾರ್ಯಕ್ರಮಗಳ ನಡುವಿನ ಜಾಹೀರಾತು ದರ 60 ಸಾವಿರ ರೂಪಾಯಿಗಳನ್ನು ತಲುಪಿತ್ತು.

ಇದೇ ಮಾದರಿಯಲ್ಲಿ ರಾತ್ರಿ 9ರಿಂದ 10 ಹಾಗೂ 10 ರಿಂದ 11ರ ನಡುವೆ ‘ರಿಪಬ್ಲಿಕ್ ಟಿವಿ’ಯಲ್ಲಿಯೂ ಅರ್ನಾಬ್ ಪ್ಯಾನಲ್ ಚರ್ಚಾ ಕಾರ್ಯಕ್ರಮ ಇರಲಿದೆ ಎಂದು ವಾಹಿನಿಯ ಮೂಲಗಳು ಹೇಳಿವೆ. “ಇದರ ಜತೆಗೆ ವಾಹಿನಿಯ ಇತರೆ ಪತ್ರಕರ್ತರೂ ಕೂಡ ಚರ್ಚಾ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಒಟ್ಟಾರೆ ವಾಹಿನಿಯ ಎಲ್ಲಾ ಕಾರ್ಯಕ್ರಮಗಳೂ ಚರ್ಚೆಯ ವೇದಿಕೆಗಳನ್ನು ನಿರ್ಮಿಸಲಿವೆ. ರಿಪಬ್ಲಿಕ್ = ಚರ್ಚೆ. ನಾವು ದೇಶದ ಪ್ಯಾನಲ್ ಚರ್ಚೆಗಳ ಅನ್ವರ್ಥನಾಮವಾಗಲಿದ್ದೇವೆ. ಭಾರತದಲ್ಲಿ ಬಾಲಿವುಡ್, ಕ್ರಿಕೆಟ್ ಮತ್ತು ಪ್ಯಾನಲ್ ಚರ್ಚೆಗಳನ್ನು ಜನ ಇಷ್ಟಪಡುತ್ತಾರೆ,” ಎನ್ನುತ್ತಾರೆ ರಿಪಬ್ಲಿಕ್ ಟಿವಿ ಸಿಇಓ ವಿವೇಕ್ ಖಾನ್‌ಚಂದಾನಿ.

 

ಜಾಹೀರಾತುದಾರರ ರಿಪಬ್ಲಿಕ್:

ರಿಪಬ್ಲಿಕ್ ಟಿವಿಯಲ್ಲಿ ಅರ್ನಾಬ್ ನಡೆಸಿಕೊಡುವ ಪ್ರೈಮ್ ಟೈಮ್ ಪ್ಯಾನಲ್ ಚರ್ಚಾ ಕಾರ್ಯಕ್ರಮವನ್ನು ವಿವೋ ಮೊಬೈಲ್ ಫೋನ್ ಸ್ಪಾನ್ಸರ್‌ ಮಾಡಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ಅರ್ನಾಬ್ ಗೋಸ್ವಾಮಿ ಮೊದಲಿದ್ದ ಜಾಹೀರಾತು ದರವನ್ನು ಪಡೆಯುವ ಅನುಮಾನವನ್ನು ಜಾಹೀರಾತು ಕ್ಷೇತ್ರದ ಪರಿಣಿತರು ವ್ಯಕ್ತಪಡಿಸುತ್ತಾರೆ. “ಆರಂಭಿಕ ಹಂತದಲ್ಲಿಯೇ ರಿಪಬ್ಲಿಕ್ ಟಿವಿ ಜಾಹೀರಾತಿನ ಪ್ರೀಮಿಯಂ ದರವನ್ನು ಪಡೆಯುವ ಬಗ್ಗೆ ಅನುಮಾನಗಳಿವೆ. ಆದರೆ ಅರ್ನಾಬ್ ದೇಶದ ಜನಪ್ರಿಯ ಟಿವಿ ಮುಖವಾಗಿರುವುದರಿಂದ ಕೆಲವು ಜಾಹೀರಾತುದಾರರು ತಮ್ಮ ನಿಷ್ಟೆಯನ್ನು ತೋರಿಸುತ್ತಿದೆ. ಆದರೆ ಮಾರುಕಟ್ಟೆಯಲ್ಲಿರುವ ಪೈಪೋಟಿಯಿಂದಾಗಿ, ವಿಶೇಷವಾಗಿ ರಿಪಬ್ಲಿಕ್ ಟಿವಿ ಜತೆಗಿದ್ದರೆ ಟೈಮ್ಸ್ ನೌ ವಿಚಾರದಲ್ಲಿ ವಿರೋಧವನ್ನು ಕಟ್ಟಿಕೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಒಂದಷ್ಟು ಸಂಘರ್ಷಗಳನ್ನು ನಿರೀಕ್ಷೆ ಮಾಡಬಹುದು,” ಎಂದು ತಜ್ಞರೊಬ್ಬರ ಹೇಳಿಕೆಯನ್ನು ‘ಬೆಸ್ಟ್‌ ಮೀಡಿಯಾ ಇನ್ಫೋ’ ದಾಖಲಿಸಿದೆ.

ಇಂತಹ ಒಳಸುಳಿಗಳ ಆಚೆಗೆ, ಅರ್ನಾಬ್ ಗೋಸ್ವಾಮಿ ಮೊದಲ ಹಂತದಲ್ಲಿಯೇ ದೇಶದ ದೊಡ್ಡ ಬ್ರಾಂಡ್‌ಗಳ ಜಾಹೀರಾತನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎನೇ ಉದ್ಯಮವಾಗಿದ್ದರೂ, ಇವತ್ತಿಗೂ ಮಾಧ್ಯಮಗಳ ಹಣೆಬರಹವನ್ನು ನಿರ್ಧರಿಸುವುದು ಅವುಗಳು ನೀಡುವ ಕಂಟೆಂಟ್ ಅಥವಾ ಸುದ್ದಿಗಳು. ಈ ವಿಚಾರದಲ್ಲಿ ‘ರಿಪಬ್ಲಿಕ್’ ಎಷ್ಟರ ಮಟ್ಟಿಗೆ ಸಮತೋಲವನ್ನು ಕಾಯ್ದುಕೊಳ್ಳಿದೆ ಎಂಬುದನ್ನು ಅನುಮಾನಗಳ ನಡುವೆಯೇ ಕಾದು ನೋಡಬೇಕಿದೆ.

Top