An unconventional News Portal.

ಅಂತರ್ಜಾಲ ಮಾರುಕಟ್ಟೆಯಲ್ಲಿ ‘ರಿಲಯನ್ಸ್ ಜಿಯೋ’ ಸದ್ದು ಮತ್ತು ಧೀರೂಭಾಯಿ ಅಂಬಾನಿ ಬೆಳೆದು ಬಂದ ಪರಿ!

ಅಂತರ್ಜಾಲ ಮಾರುಕಟ್ಟೆಯಲ್ಲಿ ‘ರಿಲಯನ್ಸ್ ಜಿಯೋ’ ಸದ್ದು ಮತ್ತು ಧೀರೂಭಾಯಿ ಅಂಬಾನಿ ಬೆಳೆದು ಬಂದ ಪರಿ!

ರಿಲಯನ್ಸ್ ಹೊರ ತಂದಿರುವ ‘ಜಿಯೋ’ 4ಜಿ ಸಿಮ್ ದೇಶದ ಜನರನ್ನು ‘ಇಂಟರ್ನೆಟ್ ಮೋಡಿ’ಯ ಬಲೆಯಲ್ಲಿ ಕೆಡವಿದೆ.

ಜಾಗತೀಕರಣ ಜಾರಿಯಾದ 25 ವರ್ಷಗಳ ನಂತರ, ದೇಶದ ಜನರ ಅಂತರ್ಜಾಲ ಬಳಕೆಯನ್ನೇ ದಿಕ್ಕನ್ನೇ ಬದಲಿಸುವ ಸೂಚನೆ ನೀಡಿದೆ ‘ಜಿಯೋ’. ಸದ್ಯ ಸಿಮ್ ಪಡೆಯಲು ಜನ ರಿಲಾಯನ್ಸ್ ಕಾದು ಕುಳಿತಿದ್ದಾರೆ. ಇದು ಅಮೆರಿಕಾದಲ್ಲಿ ‘ಆ್ಯಪಲ್’ ಬಿಡುಗಡೆಯಾದ ದಿನಗಳನ್ನು ನೆನಪಿಸುವಂತಿದೆ.

ಒಂದೆಡೆ ರಿಲಾಯನ್ಸ್ ಜಿಯೋ ಮೋಡಿ ಮಾಡುತ್ತಿದ್ದರೆ ಅತ್ತ ಮೊಬೈಲ್ ಸೇವಾ ವಲಯ ಮತ್ತು ಗ್ರಾಹಕರಲ್ಲಿ ಆತಂಕವೂ ಮನೆ ಮಾಡಿದೆ. ಇದಕ್ಕೆ ಕಾರಣ ‘ಜಿಯೋ’ ಹೆಸರಿನಲ್ಲಿ ರಿಲಯನ್ಸ್ ಮಾಡಲು ಹೊರಟಿರುವ ಮಾರುಕಟ್ಟೆ ಏಕಸ್ವಾಮ್ಯ.

ದೇಶದಲ್ಲಿ ಇದೇ ಮೊದಲ ಬಾರಿಗೆ ಮುಖೇಶ್ ಅಂಬಾನಿ ಒಡೆನದ ರಿಲಯನ್ಸ್ ‘ಜಿಯೋ’ ಹೆಸರಿನ 4ಜಿ ಸಿಮ್ ಅಲ್ಲಲ್ಲಿ, ಸೀಮಿತ ಸಂಖ್ಯೆಯಲ್ಲಿ ಕಾರ್ಯಾರಂಭ ಮಾಡಿದೆ. ಮಾತ್ರವಲ್ಲ ಮೊದಲ 90 ದಿನ ಉಚಿತ ಇಂಟರ್ನೆಟ್ ಸೇವೆ ನೀಡುವುದಾಗಿ ಘೋಷಿಸಿದೆ. ಉಚಿತ ಕರೆಗಳನ್ನೂ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅತ್ಯಂತ ಕಡಿಮೆ ದರದಲ್ಲಿ ಇಂಟರ್ನೆಟ್ ಸೇವೆ ನೀಡುವ ಭರವಸೆಯನ್ನೂ ಅದು ನೀಡಿದೆ.

ಸದ್ಯ ತನ್ನ ಸಿಬ್ಬಂದಿಗಳಿಗಷ್ಟೇ ‘ರಿಲಯನ್ಸ್‌ ಜಿಯೋ ಇನ್ಫೋಕಾಮ್‌’ ಸೇವೆ ಲಭ್ಯವಿದ್ದು, ಸೀಮಿತ ಸಂಖ್ಯೆಯಲ್ಲಿ ಸಾಮಾನ್ಯ ಜನರಿಗೂ ಸಿಮ್ಗಳು ತಲುಪಿವೆ. ವರ್ಷದ ಅಂತ್ಯಕ್ಕೆ ದೇಶಾದ್ಯಂತ ಇದರ ಲಾಭ ಪಡೆಯಬಹುದು. ವಿಶೇಷ ಅಂದರೆ, ರಿಲಯನ್ಸ್ ಸೇವೆ ದೇಶದ 29 ರಾಜ್ಯಗಳಿಗೂ ದೊರಕಲಿದೆ. ಇದಕ್ಕಾಗಿ ಎಲ್ಲಾ ರಾಜ್ಯಗಳಲ್ಲೂ ‘ತರಂಗ’(ಸ್ಪೆಕ್ಟ್ರಂ) ಗಳನ್ನು ರಿಲಾಯನ್ಸ್ ಪಡೆದುಕೊಂಡಿದೆ. ಆರಂಭದಲ್ಲಿ 4ಜಿ ಡೇಟಾ ಸ್ಪೆಕ್ಟ್ರಂ ಮಾತ್ರ ರಿಲಯನ್ಸ್ ಕಂಪನಿಗೆ ನೀಡಲಾಗಿತ್ತು. ನಂತರ 4ಜಿ ಕರೆಗಳ ಸ್ಪೆಕ್ಟ್ರಂ ಅನ್ನು ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ಜಿಯೋ ಸಿಮ್ಮಿಗೆ ಮಾತ್ರ ಸೀಮಿತವಾಗಿಲ್ಲ. ಈಗಾಗಲೇ ಆ್ಯಪ್ ಗಳನ್ನು ಕೂಡಾ ಬಿಡುಗಡೆ ಮಾಡಿದ್ದು, ಸರಣಿ ರೂಪದಲ್ಲಿತನ್ನದೇ ಮೊಬೈಲ್ಗಳನ್ನೂ ಬಿಡುಗಡೆ ಮಾಡುತ್ತಿದೆ. “ವಾರಕ್ಕೊಂದು ಹೊಸ ಸರಣಿ ಬರುತ್ತಿದೆ. ಇದು ಎಲ್ಲಿಗೆ ಹೋಗಿ ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ,” ಎನ್ನುತ್ತಾರೆ ಶಿವಮೊಗ್ಗದಲ್ಲಿರುವ ಜಿಯೋ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು. ಇದರಿಂದ ಜಿಯೋವನ್ನು ಭಾರತದ ಆ್ಯಪಲ್ ಎಂದೇ ಬಣ್ಣಿಸಲಾಗತ್ತಿದೆ. ಜತೆಗೆ ಸ್ಪೆಕ್ಟ್ರಂ ಕೂಡಾ ಜಿಯೋ ಕೈಲಿರುವುದರಿಂದ, ಮೊಬೈಲಿನ ಎಲ್ಲಾ ಕ್ಷೇತ್ರಗಳಲ್ಲೂ ಏಕಸ್ವಾಮ್ಯ ಹೊಂದುವ ಸಾಧ್ಯತೆಗಳಿವೆ.

ಜಿಯೋ ಬೆಳವಣಿಗೆಯನ್ನು ಕಾಲವೇ ಹೇಳಬೇಕಿದೆ. ಹೀಗೊಂದು ಸಾಹಸಕ್ಕೆ ಕೈ ಹಾಕಿರುವ ರಿಲಯನ್ಸ್ ಇವತ್ತಿಗೆ ಒಡೆದ ಮನೆ. ಅನಿಲ್ ಅಂಬಾನಿ ಮತ್ತು ಮುಕೇಶ್ ಅಂಬಾನಿ, ತಂದೆ ಧೀರೂಭಾಯಿ ಅಂಬಾನಿ ಸಾವಿನ ನಂತರ, ಅವರು ಕಟ್ಟಿದ್ದ ಬೃಹತ್ ಸಾಮ್ರಾಜ್ಯವನ್ನು ಪಾಲು ಹಾಕಿಕೊಂಡಿದ್ದಾರೆ. ಧೀರೂಭಾಯಿ ಅಂಬಾನಿ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದವರು. ಅವರು ಹುಟ್ಟುಹಾಕಿದ ಉದ್ಯಮ ಸಾಮ್ರಾಜ್ಯ ಇವತ್ತು ಜಗತ್ತಿನ ಅತೀ ದೊಡ್ಡ ಶ್ರೀಮಂತ ಔದ್ಯಮಿಕ ಸಂಸ್ಥೆಗಳಾಗಿ ಬೆಳೆದು ನಿಂತಿವೆ. ಅದರದ್ದು ಮತ್ತೊಂದು ರೋಚಕ ಕತೆ.

‘ಪ್ರಧಾನಿ’ಗಳ ಮಿತ್ರ: 

ಧೀರೂಭಾಯಿ ಅಂಬಾನಿ ಹೇಗೆ ರಿಲಯನ್ಸ್ ಕಂಪೆನಿ ಕಟ್ಟಿದರು ಎಂಬ ಕುರಿತು ಸ್ಫೂರ್ತಿಯ ಕತೆಗಳನ್ನು ನೀವೆಲ್ಲಾ ಕೇಳಿರಬಹುದು. ಆದರೆ ಅದರಾಚೆಗಿನ ಅಂಬಾನಿ ಅಥವಾ ರಿಲಯನ್ಸ್ ಬೆಳೆದು ಬಂದ ಕತೆ ಇವತ್ತಿಗೂ ನಿಗೂಢವಾಗಿಯೇ ಇದೆ.

ಹೇಗೆ ಒಬ್ಬ ಸಾಮಾನ್ಯ ಮನುಷ್ಯ ರಾಜಕಾರಣಿಗಳು, ಅಧಿಕಾರಿಗಳ ಕೈ ಬೆಚ್ಚಗೆ ಮಾಡಿ ‘ರಿಲಯನ್ಸ್ ಇಂಡಸ್ಟ್ರಿಯಲ್ ಲಿಮಿಟೆಡ್’ ಎಂಬ ಉದ್ಯಮ ಸಾಮ್ರಾಜ್ಯ ಕಟ್ಟಿದರು ಎಂಬುದನ್ನು ತಮ್ಮ ಪುಸ್ತಕದಲ್ಲಿ ಬಿಚ್ಚಿಡುತ್ತಾ ಹೋಗುತ್ತಾರೆ ಪತ್ರಕರ್ತ ಹಮೀಶ್ ಮೆಕ್ಡೊನಾಲ್ಡ್. 1998ರಲ್ಲಿ ಪ್ರಕಟವಾದ ಇವರ ‘ದಿ ಪಾಲಿಸ್ಟರ್ ಪ್ರಿನ್ಸ್: ದಿ ರೈಸ್ ಆಫ್ ಧೀರೂಭಾಯಿ ಅಂಬಾನಿ’ ಪುಸ್ತಕದಲ್ಲಿ ರಿಲಯನ್ಸ್ ಬಗೆಗಿನ ಅಸಲಿ ಕತೆಗಳನ್ನು ಹೇಳುವ ಪುಸ್ತಕಗಳಲ್ಲಿ ಇದೂ ಕೂಡ ಒಂದು. ದುರಾದೃಷ್ಟವಶಾತ್ ಈ ಪುಸ್ತಕ ಭಾರತದಲ್ಲಿ ನಿಷೇಧಕ್ಕೆ ಒಳಗಾಗಿದೆ.

ಧೀರೂಭಾಯಿ ಅಂಬಾನಿ ಗುಜರಾತಿನ ಶಾಲಾ ಮಾಸ್ಟರೊಬ್ಬರ ಮಗ. ವಿದೇಶಗಳಲ್ಲಿದ್ದ ಚಿಕ್ಕ ಪುಟ್ಟ ನೌಕರಿ ಮಾಡಿಕೊಂಡಿದ್ದ ಅವರು, ಸ್ವಂತಕ್ಕೊಂದು ಉದ್ಯಮ ನಡೆಸುವ ಕನಸು ಕಟ್ಟಿಕೊಂಡು 1958ರಲ್ಲಿ ಭಾರತಕ್ಕೆ ವಾಪಾಸಾಗುತ್ತಾರೆ. ಆಗಿನ್ನೂ ಮುಖೇಶ್ ಅಂಬಾನಿ ಪುಟ್ಟ ಮಗು; ಅನಿಲ್ ಅಂಬಾನಿ ಇನ್ನೂ ಹುಟ್ಟಿರಲಿಲ್ಲ. ಸ್ವಾತಂತ್ರ್ಯ ಬಂದ ಆರಂಭದ ದಿನಗಳಲ್ಲಿ ವ್ಯಾಪಾರಿ ಗುಜರಾತಿಗರು ಮುಂಬೈ ನಗರದಲ್ಲಿ ನೆಲೆ ಕಂಡುಕೊಳ್ಳಲು ಲಕ್ಷ ಲಕ್ಷ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದರು. ಅದೇ ಹೊತ್ತಿಗೆ ಅಂಬಾನಿಯೂ, ದೇಶದ ವಾಣಿಜ್ಯ ನಗರಿಯಲ್ಲಿ ತಮ್ಮ ಸಂಬಂಧಿಯೊಬ್ಬರ ಸಹಾಯದಲ್ಲಿ ಸಣ್ಣ ಕಂಪೆನಿ ತೆರೆದರು. ಬಟ್ಟೆಗಳ ವ್ಯವಹಾರ ನಡೆಸುವ ಕಂಪೆನಿಯದು. ಮುಂದೆ ಇಬ್ಬರಲ್ಲೂ ಭಿನ್ನಾಭಿಪ್ರಾಯ ಮೂಡಿ 1967ರಲ್ಲಿ ರಿಲಯನ್ಸ್ ಕಂಪನಿಯನ್ನು ಹುಟ್ಟು ಹಾಕಿದರು. ಅದಾರಾಚೆಗೆ ಅಂಕಿ ಅಂಶಗಳ ಲೆಕ್ಕದಲ್ಲಿ ರಿಲಯನ್ಸ್ ಬೆಳವಣಿಗೆಯದ್ದೇ ದೊಡ್ಡ ಕತೆ. ಅದನ್ನು ಸದ್ಯಕ್ಕೆ ಪಕ್ಕಕ್ಕಿಟ್ಟು, ರಿಲಯನ್ಸ್ ಕಟ್ಟಲು ಅಂಬಾನಿ ಬಳಸಿದ ವ್ಯಾಪಾರಿ ಸೂತ್ರಗಳನ್ನು ಗಮನಿಸಬೇಕಿದೆ.

ಅಂಬಾನಿ ನೇರ ಹಾದಿಯಲ್ಲೇ ಉದ್ಯಮ ನಡೆಸಿದ್ದರೆ ಇವತ್ತಿಗೆ ರಿಲಯನ್ಸ್ ಎದ್ದು ನಿಲ್ಲುತ್ತಿರಲಿಲ್ಲವೇನೋ. ಅವರಿಗೆ ಯಾರ್ಯಾರನ್ನು, ಹೇಗೇಗೆ ಬಲೆಗೆ ಕೆಡವಬೇಕು ಎಂಬುದು ಗೊತ್ತಿತ್ತು. ರಾಜಕಾರಣಿಗಳು, ಅಧಿಕಾರಿಗಳನ್ನು ಸೂತ್ರದ ಗೊಂಬೆಯಂತೆ ಕುಣಿಸುತ್ತಾ ರಿಲಯನ್ಸ್ ಕಂಪೆನಿಗೆ ಅಡಿಗಲ್ಲುಗಳನ್ನು ಹಾಕಿಕೊಂಡು ಹೋದರು ಅಂಬಾನಿ.

ಇಂದಿರಾ ಗಾಂಧಿ ನಂತರ ದೇಶದಲ್ಲಿ ಅಧಿಕಾರಕ್ಕೆ ಬಂದ ಹೆಚ್ಚು ಕಡಿಮೆ ಎಲ್ಲಾ ಪ್ರಧಾನಿಗಳೊಂದಿಗೂ ಅವರ ಆಪ್ತ ಸಂಬಂಧಗಳಿತ್ತು. ಎಲ್ಲಿವರೆಗೆ ಅಂದರೆ 1977ರಲ್ಲಿ ತುರ್ತು ಪರಿಸ್ಥಿತಿ ಮುಗಿದು, ಮೊರಾರ್ಜಿ ದೇಸಾಯಿ ಅಧಿಕಾರಕ್ಕೆ ಬಂದಾಗ ಅವರೊಂದಿಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಮುಂದೆ ಇದೇ ಮೊರಾರ್ಜಿ ತಿರುಗಿ ಬಿದ್ದಾಗ, ಇಂದಿರಾ ಗಾಂಧಿ ಜೊತೆಗೆ ಸೇರಿ ಸರಕಾರವನ್ನೇ ಬೀಳಿಸಿ ಕಾಂಗ್ರೆಸನ್ನು ಅಧಿಕಾರಕ್ಕೆ ತಂದರು.

1979 ರಿಂದ 1984ರ ನಡುವಿನ ಇಂದಿರಾ ಆಳ್ವಿಕೆ, ಧೀರೂಭಾಯಿ ಅಂಬಾನಿ ಪಾಲಿನ ಸುವರ್ಣ ಯುಗವಾಗಿತ್ತು. 1984ರ ಹೊತ್ತಿಗೆ ಕಂಪೆನಿ ದೇಶದ ಪ್ರಮುಖ 5 ಕಂಪೆನಿಗಳಲ್ಲಿ ಒಂದಾಗಿತ್ತು.

ಮಾಜಿ ಪ್ರಧಾನಿ ದೇವೆಗೌಡ ಜೊತೆಗೆ ಉದ್ಯಮಿ ಧೀರೂಭಾಯಿ ಅಂಬಾನಿ

ಮಾಜಿ ಪ್ರಧಾನಿ ದೇವೆಗೌಡ ಜೊತೆಗೆ ಉದ್ಯಮಿ ಧೀರೂಭಾಯಿ ಅಂಬಾನಿ

ಸರಕಾರ ಮಟ್ಟದಲ್ಲಿ ಅವರ ಸಂಬಂಧಗಳು ಹೇಗಿದ್ದವು ಎನ್ನುವುದಕ್ಕೆ ಇದೊಂದು ಘಟನೆ ಸಾಕು. ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಪ್ರಧಾನಿಯಾದ ಸಮಯ. ಆಗ ಅವರು ಕರ್ನಾಟಕದ ಸಿಎಂ ಹುದ್ದೆಗೆ ರಾಜೀನಾಮೆ ನೀಡಲು ಬೆಂಗಳೂರಿಗೆ ಹೊರಟು ನಿಂತರು. ಆ ಸಮಯದಲ್ಲಿ ಅವರನ್ನು ಬೆಂಗಳೂರಿಗೆ ತಂದಿಳಿಸಿದ ಖಾಸಗಿ ವಿಮಾನ ಧೀರೂಭಾಯಿ ಅಂಬಾನಿ ಅವರದ್ದಾಗಿತ್ತು. ಹೀಗೆ, ಒಬ್ಬ ಉದ್ಯಮಿಯಾಗಿ ಅಂಬಾನಿಗೆ ಎಲ್ಲರನ್ನೂ ಮೆಚ್ಚಿಸುವ ಕಲೆ ಸಿದ್ದಿಸಿತ್ತು. ಯಾವ ಪತ್ರಿಕೆಗಳೂ ರಿಲಯನ್ಸ್ ವಿರುದ್ಧ ಏನ್ನನೂ ಬರೆಯುತ್ತಿರಲಿಲ್ಲ. “ಎಲ್ಲರಿಗೂ ಕಾಲಕ್ಕೆ ಕಾಲಕ್ಕೆ ಸಂದಾಯ ಮಾಡಿ ಪತ್ರಕರ್ತರನ್ನೆಲ್ಲಾ ತಮ್ಮ ಬುಟ್ಟಿಯಲ್ಲೇ ಇಟ್ಟುಕೊಂಡಿದ್ದರು,” ಎಂದು ಅಂಬಾನಿ ಕುರಿತು ಬಂದ ಪುಸ್ತಕ ದಾಖಲಿಸುತ್ತದೆ.

ಧೀರೂಭಾಯಿ ಬಗ್ಗೆ ಹೇಳುತ್ತಾ ಹೋದರೆ ಮುಗಿಯದಷ್ಟು ಕತೆಗಳಿವೆ. ಹವಾಲಾ ಹಣ ರವಾನೆ, ಅನಧಿಕೃತ ಆಮದು, ಕೊಲೆ ಬೆದರಿಕೆ, ಹೀಗೆ ಏನೆಲ್ಲಾ ಬಂದು ಹೋಗುತ್ತವೆ. ಒಟ್ಟಿನಲ್ಲಿ ತನ್ನ ಸಂಪರ್ಕ, ಪ್ರಭಾವ, ಮತ್ತು ಹಣ ಬಲ ಬಳಸಿ ಧೀರೂಭಾಯಿ ಕಾನೂನುಗಳನ್ನು ಗಾಳಿಗೆ ತೂರಿ, ಎದುರಾಳಿ ಉದ್ಯಮಿಗಳ ಕತೆ ಮುಗಿಸಿ, ನೋಡ ನೋಡುತ್ತಲೇ ವಿಶ್ವದಲ್ಲೇ ಟಾಪ್ 5 ಪಟ್ಟಿಯಲ್ಲಿರುವ ಕಂಪೆನಿಯೊಂದನ್ನು ಕಟ್ಟಿ ಬೆಳೆಸಿದರು. ಅದರ ಮುಂದುವರಿದ ಭಾಗದಂತೆ ಇದೀಗ ರಿಲಯನ್ಸ್ ಜಿಯೋ ಬರುತ್ತಿದೆ. ಅದು ಭಾರತದ ಅಂತರ್ಜಾಲ ಮಾರುಕಟ್ಟೆಯಲ್ಲಿ ಎಬ್ಬಿಸುವ ಬಿರುಗಾಳಿಯನ್ನು ಎಂಥದ್ದು ಎಂಬುದನ್ನು ಕಾದು ನೋಡಬೇಕಿದೆ.

ಚಿತ್ರ ಕೃಪೆ: ಹಿಂದೂಸ್ಥಾನ್ ಟೈಮ್ಸ್

Leave a comment

Top