An unconventional News Portal.

ದೇಶದ ನಂ. 1 ಶ್ರೀಮಂತ ಬಿಚ್ಚಿಟ್ಟ ಮಾಧ್ಯಮ ವಹಿವಾಟಿನ ವಿವರ ಮತ್ತು ‘ರಿಲಯನ್ಸ್ ಜಿಯೋ’!

ದೇಶದ ನಂ. 1 ಶ್ರೀಮಂತ ಬಿಚ್ಚಿಟ್ಟ ಮಾಧ್ಯಮ ವಹಿವಾಟಿನ ವಿವರ ಮತ್ತು ‘ರಿಲಯನ್ಸ್ ಜಿಯೋ’!

ದೇಶದ ಅತಿ ದೊಡ್ಡ ಕಾರ್ಪೊರೇಟ್ ಸಂಸ್ಥೆಯ ಮಹಾತ್ವಕಾಂಕ್ಷಿ ಯೋಜನೆ, ‘ರಿಲಯನ್ಸ್ ಜಿಯೋ’ ಕುರಿತು ಅಧಿಕೃತ ಮಾಹಿತಿ ಗುರುವಾರ ಹೊರಬಿದ್ದಿದೆ.

ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಯೋಜನೆಯ ವಿವರಗಳ ಜತೆಗೆ, ಕಂಪನಿಯ ಇತರೆ ವಹಿವಾಟುಗಳ ಕುರಿತು ‘ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್’ (ಆರ್ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಮಾಹಿತಿ ನೀಡಿದ್ದಾರೆ. ಇದರಲ್ಲಿ ಅವರು ಮಾಧ್ಯಮ ಕ್ಷೇತ್ರದಲ್ಲಿ ರಿಲಯನ್ಸ್ ವಹಿವಾಟಿನ ಕುರಿತು ನೀಡಿರುವ ವಿವರಗಳ ಪಟ್ಟಿ ಇಲ್ಲಿದೆ.

ಭಾರತದಲ್ಲಿ ಸುದ್ದಿ ಮತ್ತು ಮನೋರಂಜನೆ ಎರಡೂ ಮಾಧ್ಯಮ ವಿಭಾಗಗಳಲ್ಲಿ ರಿಲಯನ್ಸ್ ದೊಡ್ಡ ಪಾಲನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಕಂಪನಿ ಇನ್ನೂ ಹೆಚ್ಚಿನ ಹೂಡಿಕೆಯನ್ನು ಈ ಕ್ಷೇತ್ರದಲ್ಲಿ ಮಾಡಲಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. “ಉದ್ಯಮ ಕ್ಷೇತ್ರದಲ್ಲಿ ರಿಲಯನ್ಸ್ ಕಂಪನಿಯ ನಾಯಕತ್ವವನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಲು ಮಾಧ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದು ಅನಿವಾರ್ಯ,” ಎಂದವರು ತಮ್ಮ ಶೇರುದಾರರಿಗೆ ವಿವರಿಸಿದರು.

ಈ ಕುರಿತು ಇನ್ನಷ್ಟು ಮಾಹಿತಿ ನೀಡಿರುವ ಅಂಬಾನಿ, “ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳ ಕ್ಷೇತ್ರದಲ್ಲಿ ಕಂಪನಿ ದಾಪುಗಾಲು ಇಡುತ್ತಿದೆ. ಸಿಎನ್ಬಿಸಿ, ಸಿಎನ್ಎನ್, ಫೋರ್ಬ್ಸ್ ಹಾಗೂ ಎ ಪ್ಲಸ್ ಇ ಕಂಪನಿಗಳ ಜತೆಗೂಡಿ, ರಿಲಯನ್ಸ್ ಸುದ್ದಿ ಹಾಗೂ ಮನೋರಂಜನೆ ವಿಭಾಗಗಳಲ್ಲಿ ವಹಿವಾಟು ನಡೆಸುತ್ತಿದೆ. ಸದ್ಯ ದೇಶದಲ್ಲಿ ಸುಮಾರು 58 ಸುದ್ದಿ ಹಾಗೂ ಮನೋರಂಜನೆ ವಾಹಿನಿಗಳನ್ನು ರಿಲಯನ್ಸ್ ಹೊಂದಿದೆ. ಇದರಲ್ಲಿ 11 ವಾಹಿನಿಗಳು ಅನಿವಾಸಿ ಭಾರತೀಯರನ್ನು ಗುರಿಯಾಗಿಸಿ ಬಿತ್ತರಗೊಳ್ಳುತ್ತಿವೆ. ಒಟ್ಟಾರೆ, ಒಂದು ತಿಂಗಳಿಗೆ 50 ಕೋಟಿ ಭಾರತೀಯರನ್ನು ರಿಲಯನ್ಸ್ ನೇತೃತ್ವದ ಟಿವಿ ವಾಹಿನಿಗಳು ತಲುಪುತ್ತಿವೆ. ಅಂದರೆ, ದೇಶದ ಪ್ರತಿ ಐದು ಜನರಲ್ಲಿ ಇಬ್ಬರು ನಮ್ಮ ವಾಹಿನಿಗಳನ್ನು ವೀಕ್ಷಿಸುತ್ತಿದ್ದಾರೆ,” ಎಂದರು.

“ನೆಟ್ವರ್ಕ್ 18 ಅಡಿಯಲ್ಲಿ ಒಟ್ಟು 21 ಸುದ್ದಿ ವಾಹಿನಿಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳು ದೇಶದ 18 ರಾಜ್ಯಗಳಲ್ಲಿ, 11 ಭಾಷೆಗಳಲ್ಲಿ ಬಿತ್ತರಗೊಳ್ಳುತ್ತಿವೆ,” ಎಂದು ಅಂಬಾನಿ ಹೇಳಿದರು.

ಎರಡು ವರ್ಷಗಳ ಹಿಂದಷ್ಟೆ, ಹೈದ್ರಾಬಾದ್ ಮೂಲದ ‘ಈ ನಾಡು’ ಸಂಸ್ಥೆಗೆ ಸೇರಿದ ‘ಈ ಟಿವಿ’ ಸಮೂಹ ವಾಹಿನಿಗಳನ್ನು ರಿಲಯನ್ಸ್ ಸಂಸ್ಥೆ ಸುಮಾರು 2053 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ಅವುಗಳಲ್ಲಿ ಮನೋರಂಜನಾ ವಾಹಿನಿಗಳನ್ನು, ಕಲರ್ಸ್ ಹೆಸರಿಗೆ ಬದಲಿಸುವ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ. ಜತೆಗೆ, ಈ ಟಿವಿ ನ್ಯೂಸ್ ಹೆಸರನ್ನು ‘ಪ್ರದೇಶ್ 18’ ಹೆಸರಿಗೆ ಬದಲಿಸಲಾಗುತ್ತಿದೆ. ಕನ್ನಡದಲ್ಲಿ ‘ಕಲರ್ಸ್ ಕನ್ನಡ’ ಜತೆಗೆ ಇತ್ತೀಚೆಗಷ್ಟೆ ‘ಕಲರ್ಸ್ ಸೂಪರ್’ ಎಂಬ ಹೊಸ ಮನೋರಂಜನಾ ವಾಹಿನಿಯನ್ನು ರಿಲಯನ್ಸ್ ಶುರುಮಾಡಿದೆ ಎಂಬುದನ್ನು ಈ ಸಮಯದಲ್ಲಿ ಗಮನಿಸಬೇಕಿದೆ.

ಇದರ ಜತೆಗೆ, ಎಂಟಿವಿ, ನಿಕ್, ವಿಎಚ್1, ಕಾಮಿಡಿ ಸೆಂಟ್ರಲ್ ಸೇರಿದಂತೆ ಹಲವು ಮನೋರಂಜನಾ ವಾಹಿನಿಗಳನ್ನು ರಿಲಯನ್ಸ್ ಹೊಂದಿದೆ. ದೇಶದಲ್ಲಿ ಮನೋರಂಜನಾ ವಾಹಿನಿಗಳ ವಿಚಾರಕ್ಕೆ ಬಂದರೆ, ರಿಲಯನ್ಸ್ ಮತ್ತು ಸ್ಟಾರ್ ಟಿವಿ ನಡುವೆ ನಂಬರ್ 1 ಎಂಬ ಪಟ್ಟಕ್ಕಾಗಿ ಸದ್ಯ ಭಾರಿ ಪೈಪೋಟಿ ನಡೆಯುತ್ತಿದೆ.

ಡಿಜಿಟಲ್ ಮಾಧ್ಯಮ: 

ದೇಶದಲ್ಲಿ ಡಿಜಿಟಲ್ ಮಾಧ್ಯಮಗಳ ಬಗ್ಗೆಯೂ ಅಂಬಾನಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. “ನೆಟ್ವರ್ಕ್ 18 ಅಡಿಯಲ್ಲಿ ವೆಬ್ ಪೋರ್ಟಲ್ಸ್ ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಸುದ್ದಿ ಮತ್ತು ವಿಶ್ಲೇಷಣೆ ವಿಭಾಗದಲ್ಲಿ ಫರ್ಸ್ಟ್ ಪೋಸ್ಟ್ ಸೇರಿದಂತೆ ಬುಕ್ ಮೈ ಶೋ, ಮನಿ ಕಂಟ್ರೋಲ್, ಯಾತ್ರಾ, ಹೋಮ್ ಶಾಪಿಂಗ್ ಮತ್ತಿತರ ವೆಬ್ ತಾಣಗಳು ಸೇರಿ ತಿಂಗಳಿಗೆ ಸುಮಾರು 2. 70 ಕೋಟಿ ಜನ ಭೇಟಿ ನೀಡುತ್ತಿದ್ದಾರೆ,” ಎಂದು ಮುಖೇಶ್ ಅಂಬಾನಿ ತಮ್ಮ ಶೇರುದಾರರಿಗೆ ಮಾಹಿತಿ ನೀಡಿದರು.

ಮಾಧ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡುವ ಮೂಲಕ ತಮ್ಮ ಉದ್ಯಮಗಳನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಲು ಅನುಕೂಲವಾಗುತ್ತದೆ ಎಂದು ಒತ್ತಿ ಹೇಳಿದ ಅವರು, ಮುಂದಿನ ದಿನಗಳಲ್ಲಿ ಭಾರತದ ಮಾಧ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಬಂಡವಾಳ ಹೂಡುವುದಾಗಿಯೂ ಘೋಷಿಸಿದರು.

ಪತ್ರಿಕೋದ್ಯಮ ಇವತ್ತು ಉದ್ಯಮವಾಗಿದೆ ಎಂದು ಹೇಳುವವರಿಗೆ ಮುಖೇಶ್ ಅಂಬಾನಿ ಅವರ ಗುರುವಾರದ ಭಾಷಣ ಇನ್ನೊಂದಿಷ್ಟು ಪೂರಕ ಅಂಶಗಳನ್ನು ಪಟ್ಟಿ ಮಾಡಿ ಕೊಟ್ಟಿದೆ.

ಮೂರು ತಿಂಗಳು ಮಾತ್ರ: 

ಇದರ ಜತೆಗೆ, ಜಿಯೋ ಹೆಸರಿನಲ್ಲಿ ‘ಡಾಟಾ ಗಿರಿ’ಯನ್ನು ಆರಂಭಿಸುವುದಾಗಿ ಅಂಬಾನಿ ಹೇಳಿದ್ದಾರೆ. ಅಷ್ಟೇನೂ ಆಕರ್ಷಕವಲ್ಲದ ಜಿಯೋ ಡಾಟಾ ಯೋಜನೆಗಳನ್ನು ಪ್ರಕಟಿಸಿದ ಅವರು, ಮುಂದಿನ ಮೂರು ತಿಂಗಳು ದೇಶದಲ್ಲಿ ಉಚಿತ ಡಾಟಾ ಹಾಗೂ ಕರೆಯನ್ನು ಜಿಯೋ ಮೂಲಕ ನೀಡುವುದಾಗಿ ತಿಳಿಸಿದರು. ಜತೆಗೆ, ಜಿಯೋ ದೇಶದ ಡಿಜಿಟಲ್ ಉದ್ಯಮದ ಸ್ವರೂಪವನ್ನೇ ಬದಲಿಸಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಜಿಯೋ ಡಾಟಾ ಮತ್ತು ಕತೆ ಪ್ಲಾನ್.

ಜಿಯೋ ಡಾಟಾ ಮತ್ತು ಕರೆ ಪ್ಲಾನ್.

 

Top