An unconventional News Portal.

ನರಕದಲ್ಲಿ ಸ್ವರ್ಗ ತೋರಿಸಿದ ರೆಡ್ಡಿ ಕುಟುಂಬ: ‘ಪಾದ ಪೂಜೆ’ಗೆ ವಾಹಿನಿಗಳು ತೆಗೆದುಕೊಂಡ ಪ್ಯಾಕೇಜ್ ಎಷ್ಟು?

ನರಕದಲ್ಲಿ ಸ್ವರ್ಗ ತೋರಿಸಿದ ರೆಡ್ಡಿ ಕುಟುಂಬ: ‘ಪಾದ ಪೂಜೆ’ಗೆ ವಾಹಿನಿಗಳು ತೆಗೆದುಕೊಂಡ ಪ್ಯಾಕೇಜ್ ಎಷ್ಟು?

“ಇಲ್ಲಿ ಏನೇನಿದೆ ಎಂದು ನೀವು ನೋಡಬಹುದು. ಮದ್ದೂರು ವಡೆ ಇದೆ. ಪಕ್ಕದಲ್ಲಿ ಚಿರೋಟಿ ಇದೆ. ಪಾಯಸ ಇದೆ. ಬೆಳಗ್ಗೆ 10. 30ರಿಂದಲೇ ಶುರುವಾಗಿದೆ. ಹಪ್ಪಳ, ಸಂಡಿಗೆ, ಐದಾರು ಬಗೆಯ ಸಿಹಿ ತಿಂಡಿಗಳು, ಲಾಡು ಎಲ್ಲಾ ಇದೆ. ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಬಗೆಬಗೆಯ ತಿಂಡಿ ತಿನಿಸುಗಳಿವೆ. ಬಂದಿರುವ ಎಲ್ಲರಿಗೂ ಊಟ ನೀಡಲು ಬೋಂಡ ಕರಿಯುತ್ತಿದ್ದಾರೆ…”

ಹೀಗೆ ಬುಧವಾರ ಬೆಳಗ್ಗೆಯಿಂದ ಕನ್ನಡದ ಸುದ್ದಿ ವಾಹಿನಿಗಳಲ್ಲಿ ನಿರಂತರವಾಗಿ ಮೂಡಿ ಬರುತ್ತಿರುವ ಲೈವ್ ಕಮೆಂಟರಿಗೆ ನಾಡು ಸಾಕ್ಷಿಯಾಗಿದೆ. ಗಣಿ ಧಣಿ, ಮಾಜಿ ಸಚಿವ, ಕಬ್ಬಿಣ ಅದಿರಿನ ಕಳ್ಳತನ ಮತ್ತು ಸಾಗಣೆ ಪ್ರಕರಣಗಳ ಆರೋಪಿ ಗಾಲಿ ಜನಾರ್ಧನ ರೆಡ್ಡಿ ಅವರ ಮಗಳು ಬ್ರಹ್ಮಣಿ ಮದುವೆ ಕಾರ್ಯಕ್ರಮದ ನಿರಂತರ ನೇರಪ್ರಸಾರ ಮತ್ತು ಕವರೇಜ್ ರೇಜಿಗೆ ಹುಟ್ಟಿಸುವಂತಿದೆ. ಅದಕ್ಕಿಂತಲೂ ಹೆಚ್ಚಾಗಿ, ಹಣ ಮತ್ತು ಐಭೋಗದ ಅಸಹ್ಯಕರ ಪ್ರದರ್ಶನವನ್ನು ಜನರಿಗೆ ತೋರಿಸುವ ಪರಿಪಾಠವನ್ನು ಸುದ್ದಿ ವಾಹಿನಿಗಳು ರೆಡ್ಡಿ ಮಗಳ ಮದುವೆ ಸಮಾರಂಭದ ನೆಪದಲ್ಲಿ ಮುಂದುವರಿಸಿವೆ.

ಮದುವೆ ಎಂಬುದು ಸಾಂಕೇತಿಕ. ಪ್ರಾಯಕ್ಕೆ ಬಂದ ಗಂಡು ಮತ್ತು ಹೆಣ್ಣು ಒಟ್ಟಾಗಿ ಬದುಕಲು ಸಮಾಜ ಶಾಸ್ತ್ರ ಬದ್ಧ ಒಪ್ಪಿಗೆ ನೀಡುವ ಈ ಪ್ರಕ್ರಿಯೆ ಬಳ್ಳಾರಿ ಮೂಲದ ರೆಡ್ಡಿ ಕುಟುಂಬಕ್ಕೆ ಮರುಜನ್ಮ ನೀಡಬಹುದು ಎಂಬ ನಂಬಿಕೆ ಇದ್ದಂತಿದೆ. ಅದಕ್ಕಾಗಿಯೇ ಒಂದು ವರ್ಷದ ಸಿದ್ಧತೆ ನಂತರ, ಇದೀಗ ಬೆಂಗಳೂರಿನ ಅರಮನೆ ಮೈದಾನಲ್ಲಿ ಅದ್ದೂರಿ ಮದುವೆಯನ್ನು ಕುಟುಂಬ ಆಯೋಜನೆ ಮಾಡಿದೆ. ರೆಡ್ಡಿ ತಮ್ಮ ಮಗಳ ಮದುವೆ ಅಹ್ವಾನ ಪತ್ರಿಕೆಯನ್ನು ಟಿವಿ ವಾಹಿನಿಗಳಿಗೆ ಹಾಗೂ ಪತ್ರಿಕಾ ಕಚೇರಿಗಳಿಗೆ ಖುದ್ದಾಗಿ ಹೋಗಿ ತಲುಪಿಸಿ ಬಂದರು. ಅವರ ‘ಬನ್ನಿ ಬನ್ನಿ’ ಎಂಬ ವಿಡಿಯೋ ಹಾಡಿನ ಇನ್ವಿಟೇಷನ್ ಸಾಕಷ್ಟು ಸದ್ದು ಮಾಡಿತ್ತು. ಇದಾದ ನಂತರ, ಹಲವರು ಇಂತಹದೊಂದು ಅದ್ದೂರಿ ಮದುವೆಗೆ ವಿರೋಧವನ್ನೂ ವ್ಯಕ್ತಪಡಿಸಿದರು.

“ಕರ್ನಾಟಕದಲ್ಲಿ ನಡೆದ ಗಣಿ ಹಗರಣ ಒಂದು ಅಂದಾಜಿನ ಪ್ರಕಾರ ಸುಮಾರು 64 ಸಾವಿರ ಕೋಟಿ ರೂಪಾಯಿಗಳ ಅವ್ಯವಹಾರ. ಇದರಲ್ಲಿ ಸಿಂಹ ಪಾಲು ರೆಡ್ಡಿ ಕುಟುಂಬದವರದ್ದು. ಏನಿಲ್ಲ ಅಂದರೂ, ಸುಮಾರು 30 ಸಾವಿರ ಕೋಟಿ ರೂಪಾಯಿ ಮೌಲ್ಯದ ಕಬ್ಬಿಣ ಅದಿರನ್ನು ಈ ಕುಟುಂಬ ಕದ್ದು ಸಾಗಣೆ ಮಾಡಿದೆ ಎಂಬ ಆರೋಪವನ್ನು ಎದುರಿಸುತ್ತಿದೆ. ಇಂತವರು ತಮ್ಮ ಮಗಳ ಮದುವೆಗಾಗಿ 500 ಕೋಟಿ ರೂಪಾಯಿಯನ್ನು ಖರ್ಚು ಮಾಡುತ್ತಿದ್ದಾರೆ ಎಂದರೆ ಏನರ್ಥ?,” ಎಂದು ಪ್ರಶ್ನಿಸುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

ಕೆಲವು ದಿನಗಳ ಹಿಂದಷ್ಟೆ ಬಳ್ಳಾರಿ ಗಣಿ ಹಗರಣಗಳನ್ನು ಸುಪ್ರಿಂ ಕೋರ್ಟ್ ವರೆಗೆ ಕೊಂಡೊಯ್ದಿದ್ದ ಎಸ್. ಆರ್. ಹಿರೇಮಠ್, ರೆಡ್ಡಿ ಮಗಳ ಮದುವೆ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಅಕ್ರಮ ಹಣದ ದುಂದುವೆಚ್ಚ ಇದು ಎಂದು ಅವರು ಖಂಡಿಸಿದ್ದರು.

“ಅಲ್ಲೀವರೆಗೂ ವಾಹಿನಿಗಳು ರೆಡ್ಡಿ ಮಗಳ ಮದುವೆ ಕುರಿತು ‘ನೆಗೆಟಿವ್’ ಆಗಿದ್ದ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದವು. ಆದರೆ, ಕಳೆದ ಮೂರು ದಿನಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದೆ. ಎಲ್ಲರೂ ಮದುವೆಯನ್ನು ಸಂಭ್ರಮಿಸಿಲು ಶುರುಮಾಡಿದ್ದಾರೆ,” ಎನ್ನುತ್ತಾರೆ ಸುದ್ದಿವಾಹಿನಿಯ ವರದಿಗಾರ್ತಿಯೊಬ್ಬರು.

ಇದಕ್ಕಾಗಿ ವಾಹಿನಿಗಳು ‘ಪ್ಯಾಕೇಜ್’ ತೆಗೆದುಕೊಂಡಿದ್ದಾರೆ ಎಂಬ ಅನುಮಾನ ಅವರಿಗಿದೆ. “ನನಗಿರುವ ಮಾಹಿತಿ ಪ್ರಕಾರ ಎಲ್ಲಿಯೂ ಪೇಮೆಂಟ್ ಅಧಿಕೃತವಾಗಿ ಆಗಿಲ್ಲ. ಮೂರು ವಾಹಿನಿಗಳನ್ನು ಹೊರತುಪಡಿಸಿದರೆ, ಉಳಿದ ವಾಹಿನಿಗಳಿಗೆ ಪರೋಕ್ಷವಾಗಿ ಹಣ ಹೋಗಿದೆ. ಹೀಗಾಗಿ, ಸ್ಲಾಟ್ ಲೆಕ್ಕದಲ್ಲಿ ಮದುವೆಯನ್ನು ನೇರ ಪ್ರಸಾರ ಮಾಡುತ್ತಿದ್ದಾರೆ,” ಎಂದವರು ‘ಸಮಾಚಾರ’ದ ಜತೆ ಮಾಹಿತಿ ಹಂಚಿಕೊಳ್ಳುತ್ತಾರೆ.

ಟಿವಿ9, ಬಿಟಿವಿ, ಈ- ಟಿವಿ ನ್ಯೂಸ್ ಕನ್ನಡ, ಪ್ರಜಾಟಿವಿ, ಪಬ್ಲಿಕ್ ಟಿವಿ, ರಾಜ್ ನ್ಯೂಸ್ ಕನ್ನಡ, ಸುವರ್ಣ ನ್ಯೂಸ್ಗಳು ಮದುವೆ ಕಾರ್ಯಕ್ರಮವನ್ನು ಬೆಳಗ್ಗೆಯಿಂದಲೇ ನೇರ ಪ್ರಸಾರ ಮಾಡುತ್ತಿವೆ. ರೆಡ್ಡಿ ಮಾಲೀಕತ್ವದ ಜನಶ್ರೀ ವಾಹಿನಿ ಇತರೆ ಸುದ್ದಿಗಳ ನಡುವೆ ‘ಬ್ರಹ್ಮಣಿ ಕಲ್ಯಾಣ’ವನ್ನು ತೋರಿಸುತ್ತಿದೆ. ಉಳಿದಂತೆ ಹೊಸ ವಾಹಿನಿ ‘ಸುದ್ದಿ ಟಿವಿ’ ಮಾತ್ರ ರೆಡ್ಡಿ ಮಗಳ ಮದುವೆ ವಿಚಾರದಲ್ಲಿ ವಸ್ತುನಿಷ್ಟ ವರದಿಗಳನ್ನು ಪ್ರಸಾರ ಮಾಡುತ್ತಿದೆ.

ಸುದ್ದಿ ಟಿವಿ ಸ್ಕ್ರೀನ್ ಗ್ರಾಬ್.

ಸುದ್ದಿ ಟಿವಿ ಸ್ಕ್ರೀನ್ ಗ್ರಾಬ್.

“ಕನಿಷ್ಟ ಮಾನ ಮರ್ಯಾದೆ ಇದ್ದವರು ಇಂತಹ ಕೆಲಸವನ್ನು ಮಾಡುತ್ತಿರಲಿಲ್ಲ. ಇಷ್ಟು ದಿನ ಜೈಲಲ್ಲಿ ಇದ್ದು ಬಂದವರು ಕನಿಷ್ಟ ಸಾಮಾಜಿಕ ಅಭಿಪ್ರಾಯವನ್ನು ಗಮನಿಸಬೇಕಿತ್ತು. ಅದಕ್ಕಿಂತ ಹೆಚ್ಚಾಗಿ ಈ ಮದುವೆಯಲ್ಲಿ ಪಾಲ್ಗೊಂಡ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಸೆಲೆಬ್ರಿಟಿಗಳಿಗೆ ನೈತಿಕತೆ ಇರಬೇಕಿತ್ತು. ಇಡೀ ದೇಶ ನೋಟಿನ ವಿಚಾರದಲ್ಲಿ ನರಕವಾಗಿರುವ ಸಮಯದಲ್ಲಿ ಮದುವೆಯಿಂದ ದೂರ ಉಳಿಯಬೇಕಿತ್ತು. ಈ ಮೂಲಕ ರೆಡ್ಡಿ ಕುಟುಂಬಕ್ಕೆ ನೈತಿಕ ಸಂದೇಶವನ್ನು ಕಳುಹಿಸಬೇಕಿತ್ತು,” ಎನ್ನುತ್ತಾರೆ ಹಿರಿಯ ಪತ್ರಕರ್ತ ಟಿ. ಕೆ. ತ್ಯಾಗರಾಜ್.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬ್ರಹ್ಮಣಿ ಮದುವೆಯಲ್ಲಿ ರಾಜಕಾರಣಿಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಜಿ. ಪರಮೇಶ್ವರ್, ಡಿ. ಕೆ. ಶಿವಕುಮಾರ್, ರಾಜ್ಯಪಾಲ ವಾಜೂಬಾಯಿ ವಾಲಾ, ಚಿತ್ರ ರಂಗದ ಪುನೀತ್ ರಾಜಕುಮಾರ್, ಮಾಲಾಶ್ರೀ, ಸಾಯಿಕುಮಾರ್, ರವಿಚಂದ್ರನ್, ಅಂಬರೀಶ್ ಮತ್ತಿತರು ಪಾಲ್ಗೊಂಡಿದ್ದಾರೆ.

“ನಮ್ಮ ಸುದ್ದಿ ವಾಹಿನಿಗಳು ಎಷ್ಟು ಜನಪರವಾಗಿ ಯೋಚಿಸುತ್ತವೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಜನ ಬ್ಯಾಂಕಿನ ಮುಂದೆ ಕ್ಯೂ ನಿಂತಿರುವ ಸುದ್ದಿಗಿಂತ ಮದುವೆ ಸುದ್ದಿ ಅವುಗಳಿಗೆ ಪ್ರಮುಖವಾಗಿ ಕಂಡಿದೆ ಎಂಬುದೇ ಅಸಹ್ಯಕರ,” ಎನ್ನುತ್ತಾರೆ ತ್ಯಾಗರಾಜ್.

ಮದುವೆ ವಿಚಾರದಲ್ಲಿ ಸುದ್ದಿ ವಾಹಿನಿಗಳು ಸಾಕಷ್ಟು ಸಿದ್ಧತೆ ಮಾಡಿಕೊಂಡಿವೆ ಎಂಬುದು ಅವರ ಭಾಷೆಯಲ್ಲಿ ಎದ್ದು ಕಾಣಿಸುತ್ತಿದೆ. ಬ್ರಹ್ಮಣಿ ಮದುವೆಯಾಗುತ್ತಿರುವ ಕುಟುಂಬ ಯಾವುದು, ಅವರು ಇವರಿಗಿಂತ ಎಷ್ಟು ಶ್ರೀಮಂತರು ಹೀಗೆ ಸಾಕಷ್ಟು ವಿಚಾರಗಳನ್ನು ತನಿಖೆ ಮಾಡಿ ವರದಿಗಳನ್ನು ಜನರ ಮುಂದಿಡುತ್ತಿವೆ. ಈ ಮೂಲಕ ರಾಜ್ಯದಲ್ಲಿ ವಸ್ತುನಿಷ್ಠ ಪತ್ರಿಕೋದ್ಯಮಕ್ಕೆ ಹೊಸ ಮೆರಗನ್ನು ಅವು ದಯಪಾಲಿಸಿವೆ. ಇವೆಲ್ಲವೂ ‘ಪ್ಯಾಕೇಜ್’ ಕೃಪೆಯಿಂದ ವಾಹಿನಿಗಳು ಮಾಡುತ್ತಿರುವ ‘ಪಾದಪೂಜೆ’ ಎಂದು ಮಾಧ್ಯಮದ ಅಂತರಂಗದಲ್ಲಿಯೇ ಗುಸುಗುಸು ಕೇಳಿ ಬರುತ್ತಿದೆ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top