An unconventional News Portal.

ಆರ್‌ಬಿಐ ಪಂಚ್: 195 ದಿನಗಳಲ್ಲಿ ದಿವಾಳಿ ಎದ್ದವರ ಹೊಸ ಪಟ್ಟಿಯನ್ನು ನಿರೀಕ್ಷಿಸಿ…

ಆರ್‌ಬಿಐ ಪಂಚ್: 195 ದಿನಗಳಲ್ಲಿ ದಿವಾಳಿ ಎದ್ದವರ ಹೊಸ ಪಟ್ಟಿಯನ್ನು ನಿರೀಕ್ಷಿಸಿ…

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ಗಳು ನೀಡಿರುವ ಬೃಹತ್ ಸಾಲಗಳ ಮರುಪಾವತಿಗೆ ಸಂಬಂಧಪಟ್ಟ ಹಾಗೆ ಕಠಿಣ ಕ್ರಮಗಳನ್ನು ಮಂಗಳವಾರ ರಾತ್ರಿ ಘೋಷಿಸಿದೆ.

ಈ ಸಂಬಂಧ, ಜಾರಿಯಲ್ಲಿದ್ದ ಸಾಲ ಮರುಪಾವತಿ ಯೋಜನೆಗಳನ್ನು ರದ್ದುಗೊಳಿಸಲಾಗಿದೆ. ಅಷ್ಟೆ ಅಲ್ಲ, ಸಾಲ ಮರುಪಾವತಿ ಮಾಡದ ಖಾತೆಗಳನ್ನು ಸುಸ್ಥಿತಿಗೆ ತರಲು 180 ದಿನಗಳ ಗಡುವು ನೀಡಿದೆ. ಈ ಹಿನ್ನೆಲೆಯಲ್ಲಿ, ಹಲವು ದಿನಗಳಿಂದ ಕೆಟ್ಟ ಸಾಲದ ಸುಳಿಯನ್ನು ಸಿಲುಕಿರುವ ದೇಶದ ಆರ್ಥಿಕತೆಯಲ್ಲಿ ಹೊಸ ಸಂಚಲನ ಮೂಡಿದೆ.

ಕೇಂದ್ರ ಸರಕಾರ ಆರ್‌ಬಿಐ ಕ್ರಮವನ್ನು ಸ್ವಾಗತಿಸಿದ್ದು, ಸಾಲಗಾರರಿಗೆ ಇದು ‘ವೇಕ್ ಅಪ್ ಕಾಲ್’ ಎಂದು ಹೇಳಿದೆ.

“ಆರ್‌ಬಿಐ ಹೊಸ ನಿಯಮಗಳು ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಿದೆ. ಕೆಲವೊಂದು ವಿಚಾರಗಳನ್ನು ಎಳೆಯುವುದರಲ್ಲಿ ಅರ್ಥವಿಲ್ಲ. ಸರಕಾರ ಬ್ಯಾಂಕಿಂಗ್ ಕ್ಷೇತ್ರವನ್ನು ಸ್ವಚ್ಚಗೊಳಿಸಲು ಬದ್ಧವಾಗಿದೆ,” ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್ ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದಾರೆ.

ಏನಿವು ಹೊಸ ನಿಯಮಗಳು?:

ಆರ್‌ಬಿಐ ಹೊಸ ನಿಯಮಗಳ ಪ್ರಕಾರ, ದಿವಾಳಿತನ ಘೋಷಣೆ ಪ್ರಕ್ರಿಯೆ 2 ಸಾವಿರ ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಸಾಲ ಪಡೆದುಕೊಂಡ ಖಾತೆಗಳ ಮೇಲೆ ಆರಂಭವಾಗಲಿದೆ. ಅದಕ್ಕಾಗಿ 180 ದಿನಗಳ ಕಾಲಾವಕಾಶವನ್ನು ಬ್ಯಾಂಕ್‌ಗಳಿಗೆ ನೀಡಲಾಗಿದೆ. ಒಂದು ವೇಳೆ ಬ್ಯಾಂಕ್‌ಗಳು ನಿಯಮಗಳನ್ನು ಜಾರಿಗೆ ತರಲು ವಿಫಲವಾದಲ್ಲಿ ದಂಡವನ್ನು ಕಟ್ಟಬೇಕಾಗುತ್ತದೆ ಎಂದು ಆರ್‌ಬಿಐ ಹೇಳಿದೆ.

ಸಾಲ ಮರುಪಾವತಿ ಸಂಬಂಧಪಟ್ಟ ಹಾಗೆ ಹಲವು ಯೋಜನೆಗಳನ್ನು ಆರ್‌ಬಿಐ ಒಂದೇ ಏಟಿಗೆ ಮುಗಿಸಿ ಹಾಕಿದೆ. ‘ಕಾರ್ಪೊರೇಟ್ ಸಾಲ ಮರುಪಾವತಿ ಯೋಜನೆ’, ‘ದೂರಗಾಮಿ ಸಾಲ ಮರುಪಾವತಿ ಯೋಜನೆ’ ಸೇರಿದಂತೆ ಬೃಹತ್ ಸಾಲ ವಾಪಾಸಾತಿಗಾಗಿ ಯೋಜನೆಗಳು ಜಾರಿಯಲ್ಲಿದ್ದವು. ಆದರೆ, ಹೊಸ ನಿಯಮಗಳನ್ನು ರೂಪಿಸಿರುವ ಆರ್‌ಬಿಐ, ಚಾಲನೆಯಲ್ಲಿದ್ದ ಯೋಜನೆಗಳನ್ನು ಹಿಂದಕ್ಕೆ ಪಡೆದಿದೆ. ಇದರ ಜತೆಗೆ ಸಾಲ ಮರುಪಾವತಿಗೆ ಕಾಲಮಿತಿಯನ್ನೂ ನಿಗದಿ ಮಾಡಿದೆ.

ಕಳೆದ ವರ್ಷ, ಬ್ಯಾಂಕ್‌ಗಳು ನೀಡುವ ಬೃಹತ್ ಸಾಲ ಮರುಪಾವತಿಗೆ ಸಂಬಂಧಪಟ್ಟ ಹಾಗೆ ಆರ್‌ಬಿಐಗೆ ಹೆಚ್ಚಿನ ಅಧಿಕಾರವನ್ನು ಸರಕಾರ ನೀಡಿತ್ತು.

ಈ ನಿಟ್ಟಿನಲ್ಲಿ ಹೊಸ ನಿಯಮಗವಳೊಂದಿಗೆ ಅಖಾಡಕ್ಕೆ ಇಳಿದಿರುವ ಆರ್‌ಬಿಐ, 5 ಸಾವಿರ ಕೋಟಿಗೂ ಹೆಚ್ಚು ಸಾಲ ಪಡೆದವರ ಬಗ್ಗೆ ಪ್ರತಿ ವಾರ ವರದಿ ನೀಡುವಂತೆ ಬ್ಯಾಂಕ್‌ಗಳಿಗೆ ಸೂಚಿಸಿದೆ. ಒಂದು ವೇಳೆ, ಸಾಲ ಮರುಪಾವತಿ ಮಾಡಲು ಸಾಧ್ಯವಾಗದಿದ್ದ ಸಮಯದಲ್ಲಿ 180 ದಿನಗಳ ಒಳಗಾಗಿ ಮರುಪಾವತಿಗೆ ಯೋಜನೆ ರೂಪಿಸಬೇಕಿದೆ. ಅದೂ ಸಾಧ್ಯವಾಗದಿದ್ದರೆ ಮುಂದಿನ 15 ದಿನಗಳ ಒಳಗಾಗಿ ಅಂತಹ ಖಾತೆದಾರರನ್ನು ದಿವಾಳಿ ಎಂದು ಘೋಷಿಸಬೇಕಿದೆ. ಈ ಹಿನ್ನೆಲೆಯಲ್ಲಿ ಮುಂದಿನ 195 ದಿನಗಳಲ್ಲಿ ಭಾರತದಲ್ಲಿ ಇನ್ನಷ್ಟು ಮಂದಿ ಅಧಿಕೃತವಾಗಿ ದಿವಾಳಿ ಎಳುವುದು ಖಾತ್ರಿಯಾಗಿದೆ.

ಕಳೆದ ವರ್ಷದ ಸೆಪ್ಟೆಂಬರ್ ಹೊತ್ತಿಗೆ ಖಾಸಗಿ ಬ್ಯಾಂಕ್‌ಗಳು ನೀಡಿದ ‘ಕೆಟ್ಟ ಸಾಲ’ದ ಮೊತ್ತ 7,33,974 ಕೋಟಿಯಷ್ಟಿತ್ತು. ಸರಕಾರಿ ಬ್ಯಾಂಕ್‌ಗಳಲ್ಲಿ ಈ ಪ್ರಮಾಣ 1,02,808 ಕೋಟಿಯಷ್ಟಿತ್ತು.

Leave a comment

Top