An unconventional News Portal.

‘ಪಾಪರ್ ಆದ’ ಕಾರ್ಪೊರೇಟ್ ಕುಳಗಳು: ಆರ್‌ಬಿಐ ಎರಡನೇ ಪಟ್ಟಿಯಲ್ಲಿ ವಿಡಿಯೋಕಾನ್ ಮತ್ತಿತರರು

‘ಪಾಪರ್ ಆದ’ ಕಾರ್ಪೊರೇಟ್ ಕುಳಗಳು: ಆರ್‌ಬಿಐ ಎರಡನೇ ಪಟ್ಟಿಯಲ್ಲಿ ವಿಡಿಯೋಕಾನ್ ಮತ್ತಿತರರು

ಸಾಲ ಪಡೆದು, ಮರುಪಾವತಿ ಮಾಡಲಾಗದ ಸುಸ್ಥಿದಾರರ ಹೊಸ ಪಟ್ಟಿಯೊಂದನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬಿಡುಗಡೆ ಮಾಡಿದೆ.

ವಿಡಿಯೋಕಾನ್, ಜೆಪಿ ಅಸೋಸಿಯೇಟ್ಸ್, ಐವಿಆರ್‌ಸಿಎಲ್, ವಿಸಾ ಸ್ಟೀಲ್ಸ್ ಮತ್ತಿತರ ಕಂಪನಿಗಳ ಹೆಸರುಗಳಿರುವ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ‘ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯುನಲ್’ಗೆ ಕಳುಹಿಸಿಕೊಟ್ಟಿದೆ ಎಂದು ‘ಮನಿ ಕಂಟ್ರೋಲ್’ ಜಾಲತಾಣ ವರದಿ ಮಾಡಿದೆ.

ಉತ್ತಮ್ ಗಾಲ್ವ, ಕ್ಯಾಸ್ಟೆಕ್ಸ್, ಜೇಸ್ವಾಲ್ ನಿಕೋ, ರುಚಿ ಸೋಯಾ, ನಾಗಾರ್ಜುನ ಆಯಿಲ್ ಅಂಡ್ ಆರ್ಚಿಡ್ ಕೆಮಿಕಲ್ಸ್, ಈಸ್ಟ್ ಕೋಸ್ಟ್ ಎನರ್ಜಿ, ಎಸ್‌ಇಎಲ್ ಮ್ಯಾನುಫ್ಯಾಕ್ಟರಿಂಗ್, ಸೋಮಾ ಎಂಟರ್‌ಪ್ರೈಸಸ್, ಏಷಿಯನ್ ಕಲರ್, ಇಸ್ಪಾಟ್ ಕೋಟೆಡ್ ಮತ್ತು ಯೂನಿಟಿ ಇನ್ಫ್ರಾಪ್ರಾಜೆಕ್ಟ್ ಕಂಪನಿಗಳ ಹೆಸರುಗಳೂ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿವೆ.

ಸದ್ಯ ಸುಸ್ಥಿದಾರರಾಗಿರುವ ಕಂಪನಿಗಳಲ್ಲಿ ಬಹುತೇಕ ಕಂಪನಿಗಳು ನಿರ್ಮಾಣ ಮತ್ತು ಇಂಧನ ಕ್ಷೇತ್ರಗಳಿವೆ ಸೇರಿವೆ. ಸುಮಾರು ೩೫- ೪೦ ಕಂಪನಿಗಳು ಸಾಲ ಮರುಪಾವತಿ ಮಾಡುವಲ್ಲಿ ಸೋತಿವೆ. ಇದರಲ್ಲಿ ೨೫-೨೬ ಕಂಪನಿಗಳು ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಪಡೆದವಾಗಿವೆ ಎಂಬುದು ವಿಶೇಷ.

ಆರ್‌ಬಿಐ ಪಟ್ಟಿ ಬಿಡುಗಡೆ ಮಾಡುತ್ತಲೇ ಶೇರು ಮಾರುಕಟ್ಟೆಯಲ್ಲಿ ಸದರಿ ಕಂಪನಿಗಳ ಶೇರು ಮೌಲ್ಯ ಪತನಗೊಳ್ಳಲು ಆರಂಭವಾಗಿವೆ. ವಿಡಿಯೋಕಾನ್ ಇಂಡಸ್ಟ್ರೀಸ್ ಶೇರುಗಳ ಮೌಲ್ಯ ಶೇ. ೩ರಷ್ಟು ಕುಸಿದಿದೆ. ಉತ್ತಮ್ ಗಾಲ್ವ ಶೇರುಗಳ ಮೌಲ್ಯದಲ್ಲಿ ಶೇ.೦.೫೬ರಷ್ಟು ಇಳಿಕೆ ಕಂಡು ಬಂದಿದೆ.

ಜೂನ್ ತಿಂಗಳಿನಲ್ಲಿ ರಿಸರ್ವ್ ಬ್ಯಾಂಕ್ ೧೨ ಕಂಪನಿಗಳ ಬ್ಯಾಂಕಿಂಗ್ ವಹಿವಾಟಿನ ವಿರುದ್ಧ ಕಾನೂನು ಕ್ರಮಕ್ಕೆ ಟ್ರಿಬ್ಯುನಲ್‌ಗೆ ವರ್ಗಾವಣೆ ಮಾಡಿತ್ತು. ಪ್ರತಿ ಕಂಪನಿಯೂ ತಲಾ ೫ ಸಾವಿರ ಕೋಟಿ ಸಾಲವನ್ನು ಉಳಿಸಿಕೊಂಡಿದ್ದವು. ಇದನ್ನು ‘ಕೆಟ್ಟ ಸಾಲ’ ಎಂದು ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿತ್ತು.

ಏನಿದು ಎನ್‌ಸಿಎಲ್‌ಎಟಿ?:

ನ್ಯಾಷನಲ್ ಕಂಪನಿ ಲಾ ಅಪೇಲೇಟ್ ಟ್ರಿಬ್ಯುನಲ್ ಎಂಬುದು ಅರೆ ನ್ಯಾಯಿಕ ಸಂಸ್ಥೆಯಾಗಿ ಕೆಲಸ ಮಾಡುತ್ತದೆ. ಜೂನ್ ೨೦೧೬ರಲ್ಲಿ ರಚನೆಗೊಂಡ ಇದರ ಅಧೀನದಲ್ಲಿ ಒಟ್ಟು ೧೧ ಪೀಠಗಳು ಕೆಲಸ ಆರಂಭಿಸಿವೆ. ಬೆಂಗಳೂರಿನಲ್ಲಿಯೂ ಇದರ ಒಂದು ಪೀಠ ಕಂಪನಿ ವ್ಯಾಜ್ಯಗಳ ಪರಿಹಾರದಲ್ಲಿ ತೊಡಗಿದೆ. ನಿವೃತ್ತ ನ್ಯಾಯಾಧೀಶರನ್ನು ಪೀಠಗಳಿಗೆ ನೇಮಕ ಮಾಡಲಾಗಿದೆ.

ಸಾಲ ಮರುಪಾವತಿ ಮಾಡದ ಕಂಪನಿಗಳು, ರೋಗಗ್ರಸ್ಥ ಕಂಪನಿಗಳ ವ್ಯಾಜ್ಯಗಳನ್ನು ಇಲ್ಲಿ ಪರಿಹರಿಸುವ ಹೊಣೆಗಾರಿಕೆ ನೀಡಲಾಗಿದೆ. ಇದೀಗ ಆರ್‌ಬಿಐ ಸುಸ್ಥಿದಾರರಾದ ಕಂಪನಿಗಳ ಪಟ್ಟಿಯನ್ನು ಎನ್‌ಸಿಎಲ್‌ಎಟಿಗೆ ಪರಿಶೀಲನೆಗೆ ಕಳುಹಿಸಿದೆ. ಕಂಪನಿಗಳು ಸಾಲ ಉಳಿಸಿಕೊಂಡ ಕುರಿತು ಇಲ್ಲಿ ವಿವರಣೆ ನೀಡಬೇಕಿದೆ. ಇಲ್ಲಿ ನೀಡುವ ತೀರ್ಪನ್ನು ಅದರಿ ಕಂಪನಿಗಳು ಮೇಲ್ಮನವಿ ಸಲ್ಲಿಸುವ ಅವಕಾಶವೂ ಇದೆ.

 

ಸದ್ಯ ಭಾರತೀಯ ಬ್ಯಾಂಕ್‌ಗಳು ನೀಡಿದ ಹಿಂತುರಿಗಿ ಬಾರದ ಸಾಲದ ಮೊತ್ತಲೇ ೮ ಲಕ್ಷ ಕೋಟಿ ದಾಟುತ್ತಿದೆ. ಇದರಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದ ಪಡೆದ ಸಾಲ ಮೊತ್ತ ೬ ಲಕ್ಷ ಕೋಟಿ ಮೀರುತ್ತದೆ ಎಂಬ ಅಂದಾಜಿದೆ. ಹೀಗಾಗಿ, ಹಣಕಾಸು ವ್ಯವಸ್ಥೆಯಲ್ಲಿ ಸಾಲ ನೀಡುವ ಪ್ರಕ್ರಿಯೆ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಆರ್‌ಬಿಐ ಈ ಹಿಂದೆ ಆರೋಪಿಸಿತ್ತು.

Top