An unconventional News Portal.

‘ಸುಪಾರಿ ಸಂಚಿನ ಪ್ರಕರಣ’: ಎಸ್‌ಐಟಿ ತನಿಖೆ ಹಾಗೂ ರವಿ ಬೆಳಗೆರೆ ಬಂಧನದ ಸುತ್ತ ಮಿಸ್ಸಿಂಗ್‌ ಲಿಂಕ್ಸ್‌

‘ಸುಪಾರಿ ಸಂಚಿನ ಪ್ರಕರಣ’: ಎಸ್‌ಐಟಿ ತನಿಖೆ ಹಾಗೂ ರವಿ ಬೆಳಗೆರೆ ಬಂಧನದ ಸುತ್ತ ಮಿಸ್ಸಿಂಗ್‌ ಲಿಂಕ್ಸ್‌

ಜನಪ್ರಿಯತೆಯ ಉತ್ತುಂಗವನ್ನು ಅನುಭವಿಸಿ ಪತ್ರಕರ್ತನೊಬ್ಬ ತೆರೆಮರೆಗೆ ಸರಿಯುತ್ತಿದ್ದ ಹಾದಿಯಲ್ಲಿ ಸೆರೆಮನೆ ಪಾಲಾಗಿದ್ದಾರೆ.

ಕರ್ನಾಟಕ ಕಂಡ ಅಪರೂಪದ, ವಿವಾದಿತ ಟ್ಯಾಬ್ಲಾಯ್ಡ್‌ ಪತ್ರಕರ್ತ ರವಿ ಬೆಳಗೆರೆ ಈಗ ಸಿಸಿಬಿ ಪೊಲೀಸರ ವಶದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ತಮ್ಮ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದರು, ಅದಕ್ಕಾಗಿ 15 ಸಾವಿರ ಹಣವನ್ನು ಮುಂಗಡ ನೀಡಿದ್ದರು ಎಂಬುದು ಅವರ ಮೇಲಿರುವ ಆರೋಪ. ಪ್ರಕರಣ ಈಗಾಗಲೇ ನಾನಾ ಮಜಲುಗಳಲ್ಲಿ ಸುದ್ದಿಕೇಂದ್ರವನ್ನು ಆವರಿಸಿಕೊಂಡಿದೆ.

ರಾಜ್ಯದಲ್ಲಿ ಪತ್ರಕರ್ತನೊಬ್ಬ ಇನ್ನೊಬ್ಬ ಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿದ ಮೊದಲ ಪ್ರಕರಣನಾ ಇದು? ಅಲ್ಲ ಎನ್ನುತ್ತವೆ ಲಭ್ಯ ಇರುವ ಮಾಹಿತಿ. ಅದು, 2013ನೇ ಇಸವಿ. ‘ಟಿವಿ 9 ಕರ್ನಾಟಕ’ದ ತನಿಖಾ ಪತ್ರಕರ್ತರೊಬ್ಬರು ನಕಲಿ ಪಾಸ್‌ಪೋರ್ಟ್‌ ಜಾಲದ ಬೆನ್ನಿಗೆ ಬಿದ್ದಿದ್ದರು. ಈ ಸಮಯದಲ್ಲಿ ಟಿವಿ 9 ಸಂಸ್ಥೆಯಲ್ಲಿಯೇ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಪತ್ರಕರ್ತ, ನಕಲಿ ಪಾಸ್‌ಪೋರ್ಟ್‌ ದಂದೆಕೋರನ ಜತೆ ಸೇರಿಕೊಂಡು ತನಿಖೆಗೆ ಇಳಿದ ಪತ್ರಕರ್ತನ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಗಂಭೀರ ಮಾಹಿತಿ ಹೊರಬಿದ್ದಿತ್ತು. ಆದರೆ ಪ್ರಭಾವಿಗಳ ಮಧ್ಯ ಪ್ರವೇಶದಿಂದಾಗಿ ಇದೇ ಸಿಸಿಬಿ ಪ್ರಕರಣಕ್ಕೆ ತಿಲಾಂಜಲಿ ಇಟ್ಟಿತ್ತು.

ಇದೀಗ, ನಾಲ್ಕು ವರ್ಷಗಳ ನಂತರ ರವಿ ಬೆಳಗೆರೆ ಅಂತಹದೊಂದು ಆರೋಪವನ್ನು ಹೊತ್ತು ಕಟಕಟೆಯಲ್ಲಿ ನಿಲ್ಲಬೇಕಾಗಿ ಬಂದಿದೆ. ಪ್ರಕರಣದಲ್ಲಿ ಈವರೆಗಿನ ಮಾಧ್ಯಮಗಳ ವರದಿಗಳು, ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ನಾನಾ ಸುದ್ದಿವಾಹಿನಿಗಳಲ್ಲಿ ನೀಡಿರುವ ಸುದೀರ್ಘ ಹೇಳಿಕೆಗಳು, ರವಿ ಬೆಳಗೆರೆ ಕುಟುಂಬದವರು ನೀಡಿರುವ ಪ್ರತಿಕ್ರಿಯೆಗಳು ಹಾಗೂ ಪೊಲೀಸರು ಈವರೆಗೆ ನ್ಯಾಯಾಲಯದ ಮುಂದೆ ಸಲ್ಲಿಸಿರುವ ದಾಖಲೆಗಳನ್ನು ಹಾಗೂ ‘ಆಫ್‌ ದಿ ರೆಕಾರ್ಡ್‌’ ಸಿಗುವ ಮಾಹಿತಿ ಇಟ್ಟುಕೊಂಡು ನೋಡಿದರೆ; ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ, ಬದಲಿಗೆ ಇನ್ನಷ್ಟು ಸಂಕೀರ್ಣತೆ ಕಡೆಗೆ ಎಳೆದುಕೊಂಡು ಹೋಗುತ್ತದೆ.

 

ತಿಂಗಳ ಹಿಂದೆ: 

ರವಿ ಬೆಳಗೆರೆ ಖಾಸಗಿ ಕಾರಣವೊಂದಕ್ಕೆ ತಮ್ಮ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ್ದರು ಎಂಬುದು ಪ್ರಕರಣದ ಮೂಲ ಆರೋಪ. ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ವೇಳೆಯಲ್ಲಿ.

ಗೌರಿ ಕೊಲೆಗೆ ಬಳಕೆಯಾದ ಬಂದೂಕಿನ ಬೆನ್ನತ್ತಿದ್ದ ಎಸ್‌ಐಟಿ ರಾಜ್ಯದಲ್ಲಿ ನಡೆಯುವ ಅಕ್ರಮ ಶಶಾಸ್ತ್ರ ಮಾರಾಟ ಜಾಲದ ಆಳಕ್ಕೆ ಇಳಿದಿದ್ದು ಸ್ಪಷ್ಟವಿದೆ. ಮೂಲಗಳು ಹೇಳುವ ಪ್ರಕಾರ, ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಗೌರಿ ಲಂಕೇಶ್ ಹತ್ಯೆ ಮಾಡಿದವರ ಬಗ್ಗೆ ಸುಳಿವು ಸಿಕ್ಕಿದೆಯೋ ಬಿಟ್ಟಿದೆಯೋ, ಆದರೆ ರಾಜ್ಯದ ಗನ್‌ ಕಲ್ಚರ್‌ ಬಗ್ಗೆ ತನಿಖಾ ತಂಡಕ್ಕೆ ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಮೊದಲು ವಿಜಯಪುರ ದರ್ಗಾ ಜೈಲಿನಲ್ಲಿ ನಂತರ ಅಳಂದದ ಜೈಲಿನಲ್ಲಿದ್ದ ಆರೋಪಿಗಳ ವಿಚಾರಣೆ ವೇಳೆ ಮೊದಲ ಬಾರಿಗೆ ತಾಹೀರ್ ಹೆಸರು ಎಸ್‌ಐಟಿಗೆ ಸಿಕ್ಕಿತ್ತು. ಆತನನ್ನು ವಶಕ್ಕೆ ಪಡೆದ ನಂತರ ಶಶಿಧರ್ ಮುಂಡೇವಾಡಿಯ ಬಗ್ಗೆಯೂ ಮಾಹಿತಿ ಲಭ್ಯವಾಗಿತ್ತು. ಶಶಿಧರ್‌ನನ್ನೂ ವಶಕ್ಕೆ ಪಡೆದ ಪೊಲೀಸರಿಗೆ ಹೆಚ್ಚು ಕಡಿಮೆ 20 ದಿನಗಳ ಹಿಂದೆಯೇ ರವಿ ಬೆಳಗೆರೆಯ ಸುಪಾರಿ ಹತ್ಯೆಯ ಸಂಚಿನ ಪ್ರಕರಣದ ಲೀಡ್‌ ಸಿಕ್ಕಿತ್ತು.

ಹೀಗೆ, ಮೊದಲು ಸುಳಿವು, ನಂತರ ಆರೋಪಿಗಳ ವಶಕ್ಕೆ ಪಡೆದ ಎಸ್‌ಐಟಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆಚೆಗೆ ಸಿಕ್ಕ ಮಾಹಿತಿಯನ್ನು ಸರಕಾರದ ಜತೆ ಹಂಚಿಕೊಂಡಿದೆ. ಗೃಹ ಇಲಾಖೆಯ ಉನ್ನತ ಮೂಲಗಳ ಪ್ರಕಾರ, “ಎಸ್‌ಐಟಿ ತನ್ನ ತನಿಖೆ ವೇಳೆಯಲ್ಲಿ ಸಿಕ್ಕ ಮಾಹಿತಿಯನ್ನು ಹಂಚಿಕೊಂಡಿತು. ಹತ್ಯೆ ಆಚೆಗೆ ಸಿಕ್ಕಿರುವ ಸುಪಾರಿ ಹತ್ಯೆ ಸಂಚಿನ ಆರೋಪಗಳ ಬಗ್ಗೆ ಕ್ರಮಕ್ಕೆ ಯೋಜನೆ ರೂಪಿಸಲಾಗಯಿತು.” ಅಂತಹದೊಂದು ಯೋಜನೆಯ ಭಾಗವಾಗಿಯೇ ಕಳೆದ 24 ಗಂಟೆಗಳ ಅಂತರದಲ್ಲಿ ರವಿ ಬೆಳಗೆರೆ ಸುದ್ದಿಕೇಂದ್ರಕ್ಕೆ ಬಂದಿರುವುದು.

ಪೊಲೀಸ್ ಪ್ಲಾಟ್‌: 

ಯಾವುದೇ ಪ್ರಕರಣ ಇರಲಿ, ಅಂತಿಮವಾಗಿ ತೀರ್ಪು ನೀಡುವುದು ನ್ಯಾಯಾಲಯ. ಅದಕ್ಕೆ ಬೇಕಿರುವುದು ದಾಖಲೆಗಳು, ಪೊಲೀಸರು ಸಲ್ಲಿಸುವ ಪ್ರಥಮ ಮಾಹಿತಿ ವರದಿ. ಈ ಹಿನ್ನೆಲೆಯಲ್ಲಿ, ಆರೋಪಿಗಳನ್ನು ವಶದಲ್ಲಿ ಇಟ್ಟುಕೊಂಡಿದ್ದ ಎಸ್‌ಐಟಿ ಡಿಸೆಂಬರ್ ಮೊದಲ ವಾರದಲ್ಲಿ ಹೊಸ ಯೋಜನೆಯೊಂದನ್ನು ಜಾರಿಗೆ ತರಲು ಅಣಿಯಾಯಿತು. ಅದರ ಭಾಗವಾಗಿಯೇ, ಡಿ. 3ನೇ ತಾರೀಖು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಾಯಿತು.

ತಾಹೀರ್ ಬಂಧನದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌.

ತಾಹೀರ್ ಬಂಧನದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌.

ಈ ಎಫ್‌ಐಆರ್‌ನಲ್ಲಿ, ಸಿಸಿಬಿ ಇನ್ಸ್‌ಪೆಕ್ಟರ್‌ಗೆ ಬಂದ ಮಾಹಿತಿ ಮೇಲೆ ಹುಸ್ಕೂರು ರಸ್ತೆಯಲ್ಲಿರುವ ಎಂಎಸ್‌ ತಾಜ್ ಬೋರ್ಡಿಂಗ್ ಮತ್ತು ಲಾಡ್ಜಿಂಗ್‌ನಲ್ಲಿ ತಾಹೀರ್‌ನನ್ನು ವಶಕ್ಕೆ ಪಡೆಯಲಾಯಿತು ಎಂದು ದೂರಿನ ಸಾರಾಂಶದಲ್ಲಿ ಹೇಳಲಾಗುತ್ತದೆ. ಮೊದಲೇ ಅಕ್ರಮ ವಶದಲ್ಲಿದ್ದ ತಾಹೀರ್‌ನನ್ನು ಅಧಿಕೃತವಾಗಿ ಬಂಧನದಲ್ಲಿರುವಂತೆ ತೋರಿಸಲು ನಡೆಸಿದ ದಾಖಲೆಗಳ ಸರ್ಕಸ್ ಇದು. ತಾಹೀರ್ ಬಂಧನವಾಗುತ್ತಿದ್ದಂತೆ ಮಾಧ್ಯಮಗಳಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿಯೇ ಸುಪಾರಿ ಹಂತಕನ ಬಂಧನವಾಗಿದೆ ಎಂಬ ಸುದ್ದಿ ಭಿತ್ತರವಾಯಿತು. ಅದನ್ನು ಎಸ್‌ಐಟಿ ಹೊಣೆಹೊತ್ತಿರುವ ಡಿಸಿಪಿ ಅನುಚೇತ್ ವಾಟ್ಸಾಪ್‌ ಗ್ರೂಪ್‌ನಲ್ಲಿ ಅಲ್ಲಗೆಳೆದರು. ‘ಸಮಾಚಾರ’ ಎಂಎಸ್‌ ತಾಜ್‌ ಬೋರ್ಡಿಂಗ್ ಹಾಗೂ ಲಾಡ್ಜಿಂಗ್‌ನ್ನು ಸಂಪರ್ಕಿಸಲು ಪ್ರಯತ್ನ ಪಟ್ಟಿತಾದರೂ, ಬಂಧನ ಬಗ್ಗೆ ಖಚಿತ ಮಾಹಿತಿ ಸಿಗಲಿಲ್ಲ.

ಇದಾದ ನಂತರ, ಡಿ. 8ನೇ ತಾರೀಖು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಶಶಿಧರ್, ರವಿ ಬೆಳಗೆರೆ ಹಾಗೂ ವಿಜು ಮೇಲೆ ದೂರು ದಾಖಲಾಯಿತು. ತಾಹೀರ್ ನೀಡಿದ ಮಾಹಿತಿ ಮೇರೆಗೆ ಶಶಿಧರ್‌ನನ್ನು ಡಿ. 7ರಂದು ಬಂಧಿಸಲಾಯಿತು ಎಂದು ಸಿಸಿಬಿ ಪ್ರಕಟಣೆ ತಿಳಿಸುತ್ತದೆ. ಡಿ. 8ನೇ ತಾರೀಖು ಸುಬ್ರಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಥಮ ಮಾಹಿತಿ ವರದಿಯಲ್ಲಿ ಶಶಿಧರ್ ಆರೋಪಿ ನಂ. 1 ಆದರೆ, ರವಿ ಬೆಳಗೆರೆ 2ನೇ ಆರೋಪಿಯಾಗಿದ್ದಾರೆ. ಸಾರಾಂಶ ಇಲ್ಲಿದೆ:

ಶಶಿಧರ್ ಮುಂದೇವಾಡಿ ಹಾಗೂ ರವಿ ಬೆಳಗೆರೆ ಮೇಲೆ ದಾಖಲಾದ ಪ್ರಥಮ ಮಾಹಿತಿ ವರದಿ.

ಶಶಿಧರ್ ಮುಂದೇವಾಡಿ ಹಾಗೂ ರವಿ ಬೆಳಗೆರೆ ಮೇಲೆ ದಾಖಲಾದ ಪ್ರಥಮ ಮಾಹಿತಿ ವರದಿ.

ಎಫ್‌ಐಆರ್ ದಾಖಲಾದ ನಂತರ ನ್ಯಾಯಾಲಯದ ಅನುಮತಿ ಪಡೆದು ರವಿ ಬೆಳಗೆರೆ ಕಚೇರಿಯ ಮೇಲೆ ದಾಳಿ ನಡೆಸುವ ಪೊಲೀಸರು ಶಶಾಸ್ತ್ರಗಳನ್ನೂ ಹಾಗೂ ಆಮೆ ಚಿಪ್ಪನ್ನು ವಶಕ್ಕೆ ಪಡೆಯುತ್ತಾರೆ. ಮೊದಲ ಬಾರಿಗೆ ಸುನೀಲ್ ಹೆಗ್ಗರವಳ್ಳಿ ಹೆಸರು ಕೇಳಿ ಬರುತ್ತದೆ.

“ಹದಿನೈದು ದಿನಗಳ ಹಿಂದೆ ಎಸ್‌ಐಟಿ ಅಧಿಕಾರಿಯೊಬ್ಬರು ಕರೆದು, ಸುಪಾರಿ ಪ್ರಕರಣವೊಂದು ಸಿಕ್ಕಿದೆ. ರವಿ ಬೆಳಗೆರೆ ತಮ್ಮ ಎರಡನೇ ಪತ್ನಿ ಯಶೋಮತಿ ಹತ್ಯೆಗೆ ಸುಪಾರಿ ನೀಡಿದ್ದರು ಎಂದು ಸ್ಟೋರಿ ಪ್ಲಾಂಟ್‌ ಮಾಡಿದರು. ನಮ್ಮ ಬಳಿ ಯಾವುದೇ ದಾಖಲೆ ಇಲ್ಲದೆ ಕಾರಣಕ್ಕೆ ಬರೆಯದೇ ಸುಮ್ಮನಾದೆವು. ಅಷ್ಟರೊಳಗಾಗಿ ಪೊಲೀಸರು ತಾಹೀರ್ ಮತ್ತು ಶಶಿಧರ್‌ನನ್ನು ವಶಕ್ಕೆ ಪಡೆದುಕೊಂಡಾಗಿತ್ತು,” ಎನ್ನುತ್ತಾರೆ ದಿನಪತ್ರಿಕೆಯೊಂದರ ಅಪರಾಧ ವರದಿಗಾರರು. ಇದಕ್ಕೆ ಪೂರಕವಾಗಿ, ಪ್ರಕರಣ ಬಯಲಾಗುತ್ತಿದ್ದಂತೆ ಕೆಲವು ಮಾಧ್ಯಮಗಳಲ್ಲಿ ರವಿ ಬೆಳಗೆರೆ ಪತ್ನಿ ಹತ್ಯೆಗೆ ಸುಪಾರಿ ನೀಡಲಾಗಿತ್ತು ಎಂಬ ಎಸ್‌ಐಟಿಯ ಹದಿನೈದು ದಿನಗಳ ಹಿಂದಿನ ವರ್ಶನ್‌ ಪ್ರಸಾರವಾಯಿತು ಕೂಡ.

ಯಶೋಮತಿ ಹತ್ಯಗೇ ಸುಪಾರಿ ನೀಡಲಾಗಿದೆ ಎಂದು ಟಿವಿ ವರದಿ.

ಯಶೋಮತಿ ಹತ್ಯಗೇ ಸುಪಾರಿ ನೀಡಲಾಗಿದೆ ಎಂದು ಟಿವಿ ವರದಿ.

ಮಿಸ್ಸಿಂಗ್ ಲಿಂಕ್‌: 

ಇಡೀ ಪ್ರಕರಣದಲ್ಲಿ ಈವರೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಕೆಲವು ಮಿಸ್ಸಿಂಗ್ ಲಿಂಕ್‌ಗಳು ಸಿಗುತ್ತವೆ. ಒಂದು, ರವಿ ಬೆಳಗೆರೆ ಹಾಗೂ ಸುನೀಲ್ ಹೆಗ್ಗರವಳ್ಳಿ ಸಂಬಂಧ ಹದಗೆಟ್ಟು 2 ವರ್ಷಗಳೇ ಕಳೆದಿದ್ದವು. ಬೆಳಗೆರೆ ಸುಪಾರಿ ನೀಡಿದ್ದೇ ಆಗಿದ್ದರೆ, ಇಷ್ಟು ದಿನಗಳ ಕಾಲ ಹತ್ಯೆಗೆ ಯಾಕೆ ಕಾಯಬೇಕಿತ್ತು? ಎಂಬುದು ಮೊದಲ ಪ್ರಶ್ನೆ.

ಸುನೀಲ್ ಹತ್ಯೆಗೆ ಆಗಸ್ಟ್‌ ತಿಂಗಳ ಕೊನೆಯಲ್ಲಿ ಯತ್ನ ನಡೆದಿತ್ತು ಎಂದು ಎಫ್‌ಐಆರ್‌ ಹೇಳುತ್ತದೆ. ಹೆಚ್ಚು ಕಡಿಮೆ ಇದೇ ಅವಧಿಯಲ್ಲಿ ಶಶಿಧರ್ ಮಹಾರಾಷ್ಟ್ರ ಪೊಲೀಸರಿಂದ ಅಕ್ರಮ ಶಶಾಸ್ತ್ರಗಳ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದ. ಹೀಗಿರುವಾಗ, ಆತ ಬಚಾವ್ ಆಗಿ ಬಂದಿದ್ದು ಹೇಗೆ? ಎಂಬುದು ಎರಡನೇ ಪ್ರಶ್ನೆ.

ಮೂರನೇಯದು, ಪೊಲೀಸರು ಈಗಾಗಲೇ ಹತ್ಯೆ ಯತ್ನದ ಅಡಿಯಲ್ಲಿ ರವಿ ಬೆಳಗೆರೆ ವಿರುದ್ಧ ಐಪಿಸಿ 307 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹತ್ಯೆ ನಡೆದಿಲ್ಲ; ಯತ್ನಿಸಿದ್ದಕ್ಕೆ ಇರುವ ಸಾಕ್ಷಿಗಳೇನು? ಎಂಬುದು ಇನ್ನೂ ನಿಖರವಾಗಿಲ್ಲ.

“ನಾವು ಕಾನೂನಿಗಿಂತ ದೊಡ್ಡವರಲ್ಲ. ಈಗ ಅಪ್ಪನ ವಿಚಾರದಲ್ಲಿ ಪೊಲೀಸರು ಆರೋಪ ಮಾಡುತ್ತಿದ್ದಾರೆ. ನಮಗೆ ನಂಬಿಕೆ ಇದೆ; ಅವರು ತಪ್ಪು ಮಾಡಿಲ್ಲ ಅಂತ. ಅದಕ್ಕೆ ನಮ್ಮ ಬಳಿಯೂ ಸಾಕ್ಷಿಗಳಿವೆ. ಭೀಮಾ ತೀರದ ಜತೆಗಿನ ಅವರ ಸಂಬಂಧ ಹಳೆಯದು. ಸಾಕಷ್ಟು ಜನ ಅಲ್ಲಿನ ಹುಡುಗರು ಬಂದು ನಮ್ಮ ಶಾಲೆಯಲ್ಲಿಯೇ ಕಲಿತು, ದೊಡ್ಡವರಾಗಿ ಹೋಗಿದ್ದಾರೆ. ಒಂದಷ್ಟು ಜನರಿಗೆ ನಮ್ಮ ಮನೆಯಲ್ಲಿಯೇ ಆಶ್ರಯವನ್ನೂ ನೀಡಲಾಗಿತ್ತು. ಅವರನ್ನು ಬಳಸಿಕೊಂಡು ಯಾರನ್ನಾದರೂ ಹತ್ಯೆ ಮಾಡುವುದೇ ಆಗಿದ್ದರೆ ಇಷ್ಟು ದಿನ ಕಾಯಬೇಕಿತ್ತಾ?,” ಎಂದು ಪ್ರಶ್ನಿಸುತ್ತಾರೆ ಕರ್ಣ ಬೆಳಗೆರೆ. ರವಿ ಬೆಳಗೆರೆ ಪುತ್ರ ಕರ್ಣ ಈಗ ಪ್ರಾರ್ಥನಾ ಶಾಲೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

ಸುನೀಲ್ ಹೆಗ್ಗರವಳ್ಳಿ ಮತ್ತು ರವಿ ಬೆಳಗೆರೆ ನಡುವೆ ಭಿನ್ನಾಭಿಪ್ರಾಯಗಳು ಇದ್ದಿದ್ದು ನಿಜ ಎನ್ನುವ ಕರ್ಣ, “ಇತ್ತೀಚೆಗೆ ಅಪ್ಪ ಸುನೀಲ್‌ ಕರೆದು ಜತೆಗೆ ಕೆಲಸ ಮಾಡುವಂತೆ ತಿಳಿಸಿದ್ದರು. ಹಳೆಯ ಸಿಟ್ಟುಗಳು ಅವರಲ್ಲಿ ಕಡಿಮೆಯಾಗಿತ್ತು. ಇದೀಗ ಸುನೀಲ್ ಹತ್ಯೆಗೆ ಸುಪಾರಿ ನೀಡಿದ್ದರೆ ಎಂಬ ವಿಚಾರ ನಮಗೆ ಶಾಕಿಂಗ್‌,” ಎಂದು ‘ಸಮಾಚಾರ’ಕ್ಕೆ ತಿಳಿಸಿದರು.

ಗಣೇಶನ ಮಾಡಲು ಹೋಗಿ: 

ಸದ್ಯ, ರವಿ ಬೆಳಗೆರೆ ಮೇಲೆ ಬಂದಿರುವ ಸುಪಾರಿ ಆರೋಪ, ಅದನ್ನು ರುಜುವಾತು ಪಡಿಸಲು ಪೊಲೀಸರು ಕಟ್ಟುತ್ತಿರುವ ಕತೆಗಳು ಎಲ್ಲವೂ ನ್ಯಾಯಾಲಯದ ಮುಂದೆ ಬರಲಿದೆ. ಅದಕ್ಕೆ ಒಂದಷ್ಟು ಸಮಯವೂ ಬೇಕಾಗಬಹುದು. ಆದರೆ, ಇಡೀ ಪ್ರಕರಣ ಪೊಲೀಸರಿಗೆ ತೊಡರಿಕೊಂಡಿದ್ದು ಗೌರಿ ಲಂಕೇಶ್ ಹತ್ಯೆ ತನಿಖೆ ಸಮಯದಲ್ಲಿ. ಇಷ್ಟಕ್ಕೂ ಗೌರಿ ಹತ್ಯೆ ತನಿಖೆಯ ಕತೆ ಏನಾಗಿದೆ? ಗೃಹ ಸಚಿವ ರಾಮಲಿಂಗರೆಡ್ಡಿ ಅವರ ಪ್ರಖ್ಯಾತ ಹೇಳಿಕೆ ಪ್ರಕಾರ, “ಸುಳಿವು ಸಿಕ್ಕಿದೆ, ಸಾಕ್ಷಿಗಳನ್ನು ಸಂಗ್ರಹಿಸಲಾಗುತ್ತಿದೆ.”

“ಇದು ಹೇಗೆ ಎಂದರೆ, ಗಣೇಶನನ್ನು ಮಾಡಿ ಎಂದರೆ ಅವರ ಅಪ್ಪನನ್ನು ಕೆತ್ತಿದರಂತೆ. ಇದೂ ಹಾಗೆಯೇ. ಗೌರಿ ಹತ್ಯೆ ಪ್ರಕರಣದ ತನಿಖೆ ನಡೆಸಿ ಎಂದರೆ ಸುಪಾರಿ ಸಂಚಿನ ಪ್ರಕರಣವನ್ನು ಎದುರಿಗೆ ಇಟ್ಟಿದ್ದಾರೆ ನಮ್ಮ ಪೊಲೀಸರು,” ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

“ರವಿ ಬೆಳಗೆರೆ ಪ್ರಕರಣಕ್ಕೂ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ನೇರ ಸಂಬಂಧ ಇಲ್ಲದೆ ಇರಬಹುದು. ಆದರೆ ಎರಡು ಬಂದೂಕುಗಳ ಬಗ್ಗೆ ಮಾಹಿತಿಗೆ ಈ ಪ್ರಕರಣ ನೆರವು ನೀಡುತ್ತಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಗೌರಿ ಹಂತಕರ ಬಂಧನವನ್ನು ಸಾರ್ವಜನಿಕಗೊಳಿಸದರೂ ಅಚ್ಚರಿ ಇಲ್ಲ,” ಎನ್ನುತ್ತಾರೆ ಇನ್ನೊಬ್ಬ ಅಪರಾಧ ವರದಿಗಾರರು.

ಇಲ್ಲಿ, ಒಂದು ಕಡೆ ಪೊಲೀಸರು ನೀಡುವ ವರ್ಶನ್ ಇದೆ. ಮತ್ತೊಂದು ಕಡೆ, ಅಪರಾಧಗಳ ಜಾಡು ಇದೆ. ಯಾವುದು ಸತ್ಯ? ಯಾವುದು ನಿಖರ? ಸತ್ಯ ಇವೆರಡರ ನಡುವೆ ಇದೆ. ಆದರೆ, ಆತುರದಲ್ಲಿ ತೀರ್ಪು ನೀಡಲು ಸಾಧ್ಯವಿಲ್ಲ.

Leave a comment

Top